ವಚನ ವೈವಿಧ್ಯ#36 : ಸಿಡಿಲು ಬಡಿದ ಬಾವಿಗೆ ಮೆಟ್ಟಿಲು ಯಾಕೆ-ಮುಕ್ತಾಯಕ್ಕ

ಮುಕ್ತಾಯಕ್ಕನವರ ಈ ವಚನವೂ ಅರಿವಿನ, ಅನುಭವದ ಪೂರಾ ವ್ಯಕ್ತಿಗತ ಲಕ್ಷಣವನ್ನೇ ಪ್ರತಿಪಾದಿಸುತ್ತಿದೆ । ಓ.ಎಲ್.ನಾಗಭೂಷಣ ಸ್ವಾಮಿ

ಸಿಡಿಲುಹೊಯ್ದ ಬಾವಿಗೆ ಸೋಪಾನವೇಕೆ
ನೆರೆಯರಿದ ಬಳಿಕ ಮತ್ತೆ ಮತಿ ಹುಟ್ಟಲುಂಟೆ
ಸೊಡರುಳ್ಳ ಮನೆಗೆ ಮತ್ತೆ ತಮಂಧವೆಂಬುದೇನೊ
ತನ್ನಲ್ಲಿ ತಾನು ತದ್ಗತವಾದ ಬಳಿಕ
ಬೊಮ್ಮ ಪರಬೊಮ್ಮನಾದೆನೆಂಬುದಿಲ್ಲ ನೋಡಾ
ಎನ್ನ ಅಜಗಣ್ಣತಂದೆಗೆ [೫.೧೧೩೦]

[ನೆರೆಯಱಿದ ಬಳಿಕ-ಚೆನ್ನಾಗಿ, ಪೂರ್ತಿಯಾಗಿ ಅರಿತ ಬಳಿಕ; ಮತಿ-ಚಿಂತನೆ, ವಿಶ್ಲೇಷಣೆ; ಸೊಡರುಳ್ಳ-ದೀಪವಿರುವ; ತಮಂಥ-ಕತ್ತಲು; ತದ್ಗತ-ಅದರ ಒಳಗಾಗು; ಬೊಮ್ಮ-ಬ್ರಹ್ಮ; ಪರಬೊಮ್ಮ-ಪರಬ್ರಹ್ಮ]

ಸಿಡಿಲು ಬಡಿದ ಬಾವಿಗೆ ಮೆಟ್ಟಿಲು ಯಾಕೆ? ಚೆನ್ನಾಗಿ ತಿಳಿದಾದ ಮೇಲೆ ಮತ್ತೆ ಚಿಂತನೆ, ವಿಶ್ಲೇಷಣೆ ಯಾಕೆ? ದೀಪವಿರುವ ಮನೆಯಲ್ಲಿ ಕತ್ತಲು ಇರಲು ಸಾಧ್ಯವೇ? ತನ್ನೊಳಗೆ ತಾನು ಆದಮೇಲೆ ತಾನೇ ಬ್ರಹ್ಮ, ಪರಬ್ರಹ್ಮ ಎಂದೆಲ್ಲೆ ಹೇಳಿಕೊಳ್ಳುವುದಿಲ್ಲ. ನನ್ನ ಅಜಗಣ್ಣ ಹಾಗಿದ್ದ.

ಬಾವಿ ಅನ್ನುವುದಿದ್ದರೆ, ಕೆಳಗಿನ ನೀರಿಗೆ ಇಳಿಯಲು ಮೆಟ್ಟಿಲ ದಾರಿ ಬೇಕು. ಸಿಡಿಲು ಬಡಿದು ಬಾವಿಯೇ ಇಲ್ಲವಾದರೆ ಮೆಟ್ಟಿಲು ಯಾಕೆ? ಅನುಭವ ಆಗುವವರೆಗೆ, ಅರಿವು ಮೂಡುವವರೆಗೆ ಚಿಂತನೆ, ವಿಶ್ಲೇಷಣೆ, ಮತಿ ಬೇಕು. ಅನುಭವಪಡೆದಮೇಲೆ, ಅರಿವು ಮೂಡಿದ ಮೇಲೆ ಅದರ ಅಗತ್ಯವೇನು? ನಾನು ಏನು ಎಂಬ ತಿಳಿವು ತನ್ನೊಳಗೇ ಮೂಡಿದ ಮೇಲೆ, ತಾನು ಅದರೊಳಗೆ (ತದ್ಗತ) ಆದಮೇಲೆ ಇನ್ನು ಯಾಕೆ ನಾನೇ ಬ್ರಹ್ಮ, ಪರಬ್ರಹ್ಮ ಅಂದುಕೊಳ್ಳಬೇಕು. ನನ್ನ ಅಜಗಣ್ಣ ತಂದೆ ಹಾಗಿದ್ದ.

ಮುಕ್ತಾಯಕ್ಕನವರ ಈ ವಚನವೂ ಅರಿವಿನ, ಅನುಭವದ ಪೂರಾ ವ್ಯಕ್ತಿಗತ ಲಕ್ಷಣವನ್ನೇ ಪ್ರತಿಪಾದಿಸುತ್ತಿದೆ. ಮಾತು ಅನ್ನುವುದು ಅನುಭವಕ್ಕೆ ಕೊಡುವ ಹೆಸರು, ಅದು ಮಾತೇ ಹೊರತು ಅನುಭವವಲ್ಲ ಅನ್ನುವುದನ್ನು ಮರೆತುಬಿಡುತ್ತೇವೆ. ಬೇರೆ ಬೇರೆ ಮಾತಿನಲ್ಲಿ ವರ್ಣಿಸುತ್ತ ಅನುಭದಿಂದ ದೂರವಾಗುತ್ತೇವೆ. ವಿವರಿಸುವ ಚಟವೇಕೆ ಎಂದು ಮುಕ್ತಾಯಕ್ಕ ಕೇಳುತ್ತಿರುವಂತಿದೆ


ಮುಕ್ತಾಯಕ್ಕ

ಲಕ್ಕುಂಡಿ ಎಂಬ ಊರಿನ ವಚನಕಾರ್ತಿ. ಅಜಗಣ್ಣನ ತಂಗಿ. ಮುಕ್ತಾಯಕ್ಕ ರಚಿಸಿರುವ ೩೭ ವಚನಗಳು ದೊರೆತಿವೆ. ಶೂನ್ಯ ಸಂಪಾದನೆಗಳಲ್ಲಿ ಅಲ್ಲಮ ಮತ್ತು ಮುಕ್ತಾಯಕ್ಕನ ಸಂವಾದ ಆರಂಭದಲ್ಲೇ ಬರುತ್ತದೆ ಈಕೆ ತನ್ನಣ್ಣ ಅಜಗಣ್ಣನನ್ನೇ ಗುರುವೆಂದು ನಂಬಿ ಸಾಧನೆ ಮಾಡಿದ ಹೆಣ್ಣುಮಗಳು. ಅನುಭಾವವು ಮಾತಿನಲ್ಲಿ ಹೇಳುವಂಥದಲ್ಲ, ಅದು ಶುದ್ಧಾಂಗವಾಗಿ ವೈಯಕ್ತಿಕ ಎಂಬುದು ಆಕೆಯ ನಿಲುವು. ಅಲ್ಲಮನಷ್ಟೇ ಪ್ರಖರವಾಗಿ ವಿಷಯ ಮಂಡನೆ ಮಾಡಿರುವುದನ್ನು ಈಕೆಯ ವಚನಗಳಲ್ಲಿ ಕಾಣುತ್ತೇವೆ. ಅನುಭಾವವೂ ಜ್ಞಾನದ ಮಾರ್ಗ ಎಂದು ಅಲ್ಲಮ ಈಕೆಯ ಮನ ಒಲಿಸುತ್ತಾನೆ. ಈ ಮನವೊಲಿಸುವಿಕೆ ಇರದಿದ್ದರೆ ಶೂನ್ಯಸಂಪಾದನೆಗೆ ತಳಹದಿಯೇ ಇರುತ್ತಿರಲಿಲ್ಲ. ಅನುಭಾವವನ್ನು ಕುರಿತು ಮಾತಾಡುವ ಅಗತ್ಯವನ್ನು ಅಲ್ಲಮನ ವಚನಗಳಲ್ಲಿ ಕಂಡರೆ ಮಾತಿಗೆ ಒಗ್ಗದ ತೀವ್ರಾನುಭವ ಮುಕ್ತಾಯಕ್ಕನವರ ರಚನೆಗಳಲ್ಲಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.