ವಚನ ವೈವಿಧ್ಯ#38: ಸಂದೇಹವನ್ನು ಬಿಡುವುದು ಮುಖ್ಯ: ಡಕ್ಕೆಯ ಬೊಮ್ಮಣ್ಣ

ಈ ವಚನವು ಶುದ್ಧಿಯನ್ನು ಕುರಿತು ಹೊಸ ಬಗೆಯ ಚಿಂತನೆಯನ್ನು ನುಡಿಯುತ್ತಿದೆ… । ಓ.ಎಲ್.ನಾಗಭೂಷಣ ಸ್ವಾಮಿ

ಹಲವು ಸಂಸರ್ಗದಿಂದ ಬಂದ ಜಲ
ನಿಲವಾಗಿ ಒಂದು ಠಾವಿನಲ್ಲಿ ನದಿ ನಾಮವಾಯಿತ್ತು
ನಾನಾಭಾವಂಗಳಲ್ಲಿ ನೊಂದು ಬಂದ ಜೀವ
ಒಂದು ನೆಲೆಯಲ್ಲಿ ನಿಂದು
ಸಂದೇಹವ ಬಿಡಲಾಗಿ ಪರಮನಾಯಿತ್ತು
ಪ್ರಕಾಶವ ಕಂಡು ಕಾಲಾಂತಕ ಭೀಮೇಶ್ವರಲಿಂಗವೆಂಬ ನಾಮವಾಯಿತ್ತು

[ಸಂಸರ್ಗ-ಸಂಪರ್ಕ, ಕೂಟ; ಪರಮ-ಶ್ರೇಷ್ಠ, ಪರಮಾತ್ಮ]

ಯಾವ ಯಾವುದೋ ಸಂಪರ್ಕವನ್ನು ಪಡೆದ ನೀರು ಒಂದು ನಿಲುವಿನಲ್ಲಿ, ಒಂದು ಸ್ಥಾನದಲ್ಲಿ ಹರಿಯುತ್ತ ನದಿಯೆಂಬ ಹೆಸರನ್ನು ಪಡೆಯಿತು. ಅನೇಕ ಬಗೆಯ ಬಾವಗಳಲ್ಲಿ ನೊಂದು, ನರಳಿ ಬಂದ ಜೀವವು ಒಂದು ನೆಲೆಯನ್ನು ಕಂಡು, ಸಂದೇಹವನ್ನೆಲ್ಲ ಕಳೆದುಕೊಂಡಾಗ ಅದೇ ಶ್ರೇಷ್ಠವಾಯಿತು, ಪರಿಪೂರ್ಣವಾಯಿತು, ದೇವರೇ ಆಯಿತು. ಈ ಬೆಳಕೇ ಕಾಲಂತಕ ಭೀಮೇಶ್ವರಲಿಂಗ.

ಈ ವಚನವು ಶುದ್ಧಿಯನ್ನು ಕುರಿತು ಹೊಸ ಬಗೆಯ ಚಿಂತನೆಯನ್ನು ನುಡಿಯುತ್ತಿದೆ. ಎಲ್ಲೆಲ್ಲೋ ಬಿದ್ದು ಏನೇನನ್ನೋ ಮುಟ್ಟಿ ಹರಿದು ಬರುವ ಬಗೆಬಗೆಯ ನೀರು ಒಂದು ಪಾತ್ರದಲ್ಲಿ ಹರಿಯುತ್ತಾ ನದಿಯೆಂಬ ಹೆಸರನ್ನು ಪಡೆಯುತ್ತದೆ. ಜೀವಜಲವಾಗುತ್ತದೆ, ಶುದ್ಧವಾಗುತ್ತದೆ. ಹಾಗೆಯೇ ಅನೇಕ ಬಗೆಯ ಭಾವಗಳನ್ನು ಅನುಭವಿಸಿ,ನೊಂದು, ನರಳಿದ ಜೀವ ಈ ಎಲ್ಲ ಸಂಕಟಗಳ ಕಾರಣದಿಂದಲೇ ಶುದ್ಧವಾಗುತ್ತದೆ. ಭಾವ ಪ್ರವಾಹವೇ ಜೀವ ಜಲ ಪ್ರವಾಹವಾಗುತ್ತದೆ. ಸಂದೇಹವೇ ಎಲ್ಲ ಬಗೆಯ ನೋವು ನರಳಾಟಕ್ಕೆ ಕಾರಣವಿರಬಹುದೇ? ಹಾಗಾದರೆ ಸಂದೇಹವಿರದ ಜೀವವೇ ಪರಮ, ಶ್ರೇಷ್ಠ, ದೇವ ಸಮಾನ. ಅದು ಬೆಳಕು. ಅಷ್ಟೇ ಅಲ್ಲ ಕಾಲಾಂತಕ,ಕಾಲವನ್ನು ಇಲ್ಲವಾಗಿಸುವ ಭೀಮೇಶ್ವರ ಲಿಂಗವಾಗುವ ಅರ್ಹತೆ, ಯೋಗ್ಯತೆ ಎಲ್ಲ ಜೀವಕ್ಕೂ ಇದೆ ಎಂದು ಈ ವಚನ ಹೇಳುವಂತಿದೆ.


ಡಕ್ಕೆಯ ಬೊಮ್ಮಣ್ಣ

ಕಲಾವಿದ; ಡಕ್ಕೆಯ ಬೊಮ್ಮಣ್ಣನು ಮೂಲತಃ ಡಕ್ಕೆಯನ್ನು ಬಾರಿಸುತ್ತ ಮೊರದಲ್ಲಿ ಮಾರಿಯನ್ನಿಟ್ಟು ಕುಣಿಸುತ್ತಿದ್ದವನು. ಹೆಸರಿಸಲಾಗಿದೆ. ಬಸವಾದಿ ಶಿವಶರಣರ ಸಂಪರ್ಕಕ್ಕೆ ಬರುವ ಮುನ್ನ , ಡೊಳ್ಳು ಬಾರಿಸುತ್ತ , ಉಡಿಯಲ್ಲಿ ತಡಿಯಲ್ಲಿ ಸೊಪ್ಪನ್ನು ಕಟ್ಟಿಕೊಂಡು, ಬಾಳು ಬಟ್ಟಲನ್ನು ಕೈಯಲ್ಲಿ ಹಿಡಿದುಕೊಂಡು, ಬಳೆಯನ್ನು ಕೈಗೆ ತೊಟ್ಟುಕೊಂಡು, ಮಾರಿಯನ್ನು ಮೊರದಲ್ಲಿ ಹಾಕಿಕೊಂಡು ಭಕ್ತರ ಮನೆಮನೆಯ ಮುಂದೆ ನಿಂತು ಬೇಡುವುದು ಇವನ ಕಾಯಕವಾಗಿದ್ದಿರಬಹುದು. ಈತನ ೮೯ ವಚನಗಳು ದೊರೆತಿವೆ. ಡಕ್ಕೆಯ ಮಾರಣ್ಣ ಎಂದು ಕೂಡ ಇವನನ್ನು ಕೆಲವು ಎಡೆಗಳಲ್ಲಿ ವರ್ಣಿಸಲಾಗಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.