ವಚನ ವೈವಿಧ್ಯ#39: ಕತ್ತರಿಸುವ ಕತ್ತಿಗೆ ಪ್ರಾಣದ ಅರಿವು ಇದೆಯೇ: ಮೋಳಿಗೆ ಮಾರಯ್ಯ

 ನೊಂದವರ ನೋವ ನೋಯದವರೆತ್ತ ಬಲ್ಲರು ಎಂದು ಅಕ್ಕ ಮಹಾದೇವಿ ಕೇಳಿದ ಪ್ರಶ್ನೆಯ ವಿಸ್ತರಣೆಯಂತೆಯೇ ಈ ವಚನ ಕಾಣುತ್ತದೆ । ಓ.ಎಲ್.ನಾಗಭೂಷಣ ಸ್ವಾಮಿ

ಅರಿವ ಕತ್ತಿ ಹರಣದ ಇರಿವ ಬಲ್ಲುದೆ
ಬಿರುನುಡಿಯ ನುಡಿವವ
ಮಾನ್ಯರ ಮಾನದ ಮನ್ನಣೆಯ ಬಲ್ಲನೆ
ಹೆತ್ತವರಿಗೆ ಕೂಸು ಹುಚ್ಚಾದರೆ
ಅದರರ್ತಿ ಹೆತ್ತವರಿಗಲ್ಲದೆ ಮಿಕ್ಕಾದವರಿಗುಂಟೆ
ನಿಃಕಳಂಕ ಮಲ್ಲಿಕಾರ್ಜುನಾ [೮.೧೪೭೫]

[ಅರಿವ-ಕತ್ತರಿಸುವ, ಅಱಿವ-ತಿಳಿಯುವ; ಹರಣ-ಪ್ರಾಣ; ಅದರರ್ತಿ-ಅದರ ಪ್ರೀತಿ]

ಕತ್ತರಿಸುವ ಕತ್ತಿಗೆ ತನ್ನೆದುರಿಗೆ ಇರುವುದು ಪ್ರಾಣವೆಂದು ಗೊತ್ತೇ? ಬಿರು ನುಡಿಯನ್ನು ಆಡುವವರಿಗೆ ಆ ಮಾತಿಗೆ ಗುರಿಯಾಗುವವರ ಮಾನದ ಮನ್ನಣೆಯ ಅರಿವು ಇರುತ್ತದೆಯೇ? ಕೂಸಿನ ಬಗ್ಗೆ ಹೆತ್ತವರಿಗೆ ಹುಚ್ಚು ಅನಿಸುವಷ್ಟು ಪ್ರೀತಿ ಇರಬಹುದು. ಆದರೆ ಅದು ಹೆತ್ತವರಲ್ಲಿ ಮಾತ್ರವೇ ಇರುತ್ತದೆಯೇ ಹೊರತು ಬೇರೆಯವರಲ್ಲಿ ಇರದು.

ನೊಂದವರ ನೋವ ನೋಯದವರೆತ್ತ ಬಲ್ಲರು ಎಂದು ಅಕ್ಕ ಮಹಾದೇವಿ ಕೇಳಿದ ಪ್ರಶ್ನೆಯ ವಿಸ್ತರಣೆಯಂತೆಯೇ ಈ ವಚನ ಕಾಣುತ್ತದೆ.  ನೋಯಿಸುವವರಿಗೆ ನೋವು ಅರಿವಾಗದು ಅನ್ನುವುದು ಎಲ್ಲರೂ ಬಲ್ಲ, ಆದರೆ ಮರೆತುಬಿಡುವ ಸತ್ಯ. ಅಕ್ಕನ ವಚನದ ಕೊನೆಯಲ್ಲಿ ಬರುವ ʻಚೆನ್ನಮಲ್ಲಿಕಾರ್ಜುನನು ಇರಿದ ಅಲುಗು ಒಡಲಲ್ಲಿ ಮುರಿದು ಹೊರಳುವ ನನ್ನ ಅಳಲು ನಿಮಗೇನು ಗೊತ್ತು ಎಂಬ ಪ್ರಶ್ನೆ ಬರುತ್ತದೆ. ತನ್ನ ಪ್ರೀತಿ ತನಗೆ ಮಾತ್ರ ಗೊತ್ತು, ಮಿಕ್ಕವರಿಗೆ ಅದು ಹುಚ್ಚು ಅನಿಸೀತು; ನನ್ನನ್ನು ಕಂಡು ಬಿರು ನುಡಿಯನ್ನು ಆಡುವವರಿಗೆ ನನ್ನ ಮಾನದ ಅರಿವು ಇರಲಾರದು, ಹೀಗೆಲ್ಲ ಈ ವಚನದ ಮಾತುಗಳನ್ನು ನೋಡಿದರೆ ಯಾವುದನ್ನು ಆಧ್ಯಾತ್ಮಿಕ ಸಾಧನೆ ಅನ್ನುತ್ತಾರೋ ಅದು ಹೂವಿನ ಹಾಸುಗೆಯಲ್ಲ ತನ್ನನ್ನು ತಾನು ಕಳೆದುಕೊಳ್ಳುವ, ಕಳೆದುಕೊಳ್ಳುತ್ತ ನೋಯುವ, ಅಪಮಾನವನ್ನೂ ಎದುರಿಸುವ, ಇಷ್ಟೆಲ್ಲ ಆದರೂ ಹಟ ಬಿಡದ ಛಲ ಅನ್ನುವುದು ಹೊಳೆಯುತ್ತದೆ.


ಮೋಳಿಗೆ ಮಾರಯ್ಯ

ಮೋಳಿಗೆ ಎಂದರೆ ಕಟ್ಟಿಗೆಯ ಹೊರೆ ಎಂಬ ವಿವರಣೆ ದೊರೆಯುತ್ತದೆ. ೮೨೦ ವಚನಗಳು ದೊರೆತಿವೆ. ವಚನಾಂಕಿತ- ನಿಃಕಳಂಕ ಮಲ್ಲಿಕಾರ್ಜುನ. ಮಾರಯ್ಯನವರು ಕಲ್ಯಾಣಕ್ಕೆ ವಲಸೆ ಬಂದ ಕಾಶ್ಮೀರ ಪ್ರಾಂತದ ಅರಸರೆಂಬ ಐತಿಹ್ಯವಿದೆ. ಅವರ ಹೆಸರು, ಮತ್ತು ಅರಸುತನ ಕುರಿತ ಶಾಸನಾಧಾರಗಳು ಇದ್ದಂತಿಲ್ಲ. ಕನ್ನಡದ ವಾಕ್ಯ ರಚನೆಯ ವಿಶಿಷ್ಟ ಬಳಕೆಯನ್ನು ಇವರ ವಚನಗಳಲ್ಲಿ ಕಾಣಬಹುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.