। ಓ.ಎಲ್.ನಾಗಭೂಷಣ ಸ್ವಾಮಿ
ಆರುವನೊಲ್ಲೆನೆಂದು ಅರಣ್ಯವ ಹೊಗುವದು
ಕಾರ್ಯವಲ್ಲ ದುರುಳತನ
ಊರೊಳಗಿದ್ದಡೆ ನರರ ಹಂಗು
ಅರಣ್ಯದಲ್ಲಿದ್ದಡೆ ತರುಗಳ ಹಂಗು
ಬಂದ ಪದಾರ್ಥವ ಲಿಂಗಾರ್ಪಿತವ ಮಾಡಿ ಕೊಂಬ ಶರಣನೆ ಜಾಣ
ಸಕಳೇಶ್ವರದೇವಾ [೯.೩೮೪]
[ಆರುವನೊಲ್ಲೆನೆಂದು-ಯಾರನ್ನೂ ಒಲ್ಲೆ ಎಂದು; ತರು-ಮರ, ಗಿಡ]
ನನಗೆ ಯಾರೂ ಬೇಡವೆಂದು ಕಾಡಿಗೆ ಹೋಗಿ ವಾಸ ಮಾಡುವುದು ಸೂಕ್ತವಾದ ಕಾರ್ಯವಲ್ಲ, ದುರುಳತನ. ಊರಿನೊಳಗಿದ್ದರೆ ಜೊತೆಯ ಮನುಷ್ಯರ ಹಂಗು ಇರುತ್ತದೆ, ಕಾಡಿಗೆ ಹೋದರೆ ಬದುಕಲು ಗಿಡ ಮರಗಳ ಹಂಗಿಗೆ ಒಳಗಾಗಬೇಕಾಗುತ್ತದೆ. ತನಗೆ ದೊರೆತದ್ದನ್ನು ಲಿಂಗಕ್ಕೆ ಅರ್ಪಣೆ ಮಾಡಿ ಆನಂತರ ತನಗಾಗಿ ಕೊಳ್ಳುವ ಶರಣನ ಬದುಕೇ ಜಾಣತನದ ಬದುಕು.
ಜಂಜಡದ ಬದುಕು ಬೇಡವೆಂದು ಒಂದಲ್ಲ ಒಂದು ಸಲ ಎಲ್ಲರಿಗೂ ಅನಿಸುವುದುಂಟು. ಹಾಗೆಂದು ಯಾರೂ ಬೇಡವೆಂದು ಕಾಡಿಗೆ ಹೋಗಿ ಒಂಟಿಯಾಗಿ ಇರುವುದು ಸೂಕ್ತವಾದ ಕಾರ್ಯವಲ್ಲ, ದುರುಳುತನ ಎನ್ನುತ್ತದೆ ಈ ವಚನ. ಮನುಷ್ಯರ ಹಂಗು ಬೇಡವೆಂದರೆ ಕಾಡಿನಲ್ಲಿ ಗಿಡಮರಗಳ ಹಂಗಿಗೆ ಒಳಗಾಗುವುದು ಒಳ್ಳೆಯದೋ? ಕಾಡಿನಲ್ಲೇ ಇರಲಿ, ಊರಲ್ಲೇ ಇರಲಿ ಮನುಷ್ಯ ಸಂಬಂಧ, ಜೀವ ಸಂಬಂಧಗಳು ಇರದೆ ಬದುಕಲು ಆಗದು. ತನ್ನ ಪಾಲಿಗೆ ಬಂದದ್ದನ್ನು ಜೊತೆಯವರಿಗೆ, ಅಂದರೆ ತಾನಲ್ಲದ ಸೃಷ್ಟಿಗೆ, ಲಿಂಗಕ್ಕೆ ಅರ್ಪಣೆ ಮಾಡಿ ಆನಂತರ ತನಗಾಗಿ ಕೊಳ್ಳುವ, ಸ್ವೀಕರಿಸುವ ಶರಣರ ಬದುಕು ಜಾಣತನದ್ದು. ಹಂಚಿಕೊಳ್ಳುವುದು, ಜವಾಬ್ದಾರಿಯುತವಾಗಿ ಬದುಕುವುದು ಮನುಷ್ಯರ ಪಾಲಿಗೆ ಬಂದದ್ದು. ಅದನ್ನು ಹಾಗೆಯೇ ಸೂಕ್ತವಾಗಿ ಬದುಕಬೇಕು ಅನ್ನುವ ಪಾಠ ಇಲ್ಲಿದೆ.
ಸಕಲೇಶ ಮಾದರಸ
ಸಕಳೇಶ ಮಾದರಸರ ೧೩೫ ವಚನಗಳು ಪ್ರಕಟವಾಗಿವೆ. ಸಕಳೇಶ್ವರ ಎಂಬುದು ವಚನಾಂಕಿತ. ಇವರನ್ನು ಕುರಿತು ಅನೇಕ ಮಧ್ಯಕಾಲೀನ ಕೃತಿಗಳು ಉಲ್ಲೇಖ ಮಾಡುತ್ತವೆ. ಸಂಗೀತಜ್ಞ, ವೀಣಾದಿ ವಾದ್ಯಗಳ ಕಲಾವಿದ.

