ಚೇಳು, ವಿಷ, ಬೆಂಕಿಗಳನ್ನು ಬಯಕೆ, ಇಂದ್ರಿಯ ಸುಖದ ವಿಷಯ, ಜ್ಞಾನವೆಂಬ ಬೆಂಕಿ ಅಂತೆಲ್ಲ ವಿವರಿಸುವವರು ಇದ್ದಾರೆ. ಅಂಥ ವಿವರಣೆ ಇಲ್ಲದೆಯೂ ಅನುಭವ ಮತ್ತು ತಿಳಿವಳಿಕೆಗಳ ದ್ವಂದ್ವವನ್ನು ಈ ವಚನ ಹೇಳುತ್ತಿರುವುದು ಸ್ಪಷ್ಟವಾಗಿದೆ...। ಓ.ಎಲ್.ನಾಗಭೂಷಣ ಸ್ವಾಮಿ
ಇನ್ನೇವೆ
ನಾ ತಂದ ಬೆಂಕಿಯಲ್ಲಿ
ಸರ್ವಾಂಗವಿಷದ ಚೇಳು ಬಿದ್ದು ಬೇವುತ್ತಿದೆ
ಹಿಡಿದು ತೆಗೆದೆಹೆನೆಂದಡೆ
ಉರಿ ತಾಗಿದ ಚೇಳು ಎನ್ನ ಹೊಯ್ದಿತ್ತು
ಸತ್ತಿತ್ತೆಂಬ ನೋವು ಬಿಡದು
ಎನಗೆ ವಿಷ ತಾಗಿತ್ತೆಂಬ ಆಸೆ ಬಿಡದು
ಬಿಟ್ಟಡೆ ಸಮಯಕ್ಕೆ ದೂರ
ಹಿಡಿದಡೆ ಜ್ಞಾನಕ್ಕೆ ದೂರ
ಉಭಯದ ಬೇನೆಯಲ್ಲಿ ಬೇವುದು ಸದಾಶಿವಮೂರ್ತಿಲಿಂಗಕ್ಕೆ ದೂರ [೫.೪೭೩]
[ಇನ್ನೇವೆ-ಇನ್ನೇನು ಮಾಡಲಿ/ಸಹಿಸಲಾರೆ; ಬೇವುತ್ತಿದೆ-ಬೇಯುತ್ತಿದೆ; ತೆಗೆದೆಹೆನೆಂದಡೆ-ತೆಗೆಯುತ್ತೇನೆಂದರೆ; ಹೊಯ್ದಿತ್ತು-ಬಡಿದಿತ್ತು/ಕುಟುಕಿತ್ತು; ಬಿಟ್ಟಡೆ-ಬಿಟ್ಟರೆ; ಸಮಯಕ್ಕೆ-ಧರ್ಮಕ್ಕೆ; ಉಭಯದ-ಎರಡು ಬಗೆಯ]
ಏನು ಮಾಡಲಿ? ಸಹಿಸಲಾರೆ. ಮೈಯೆಲ್ಲ ವಿಷತುಂಬಿರುವ ಚೇಳು ಬೆಂಕಿಯಲ್ಲಿ ಬಿದ್ದು ಬೇಯುತ್ತಿದೆ. ಅದನ್ನು ಹಿಡಿದು ಹೊರಗೆ ತೆಗೆಯೋಣವೆಂದರೆ ಅದಕ್ಕೆ ಉರಿ ತಾಗಿತ್ತು, ನನ್ನ ಕುಟುಕಿತು. ಚೇಳು ಸಾಯುತ್ತದೆಯಲ್ಲಾ ಅನ್ನುವ ನೋವು ಬಿಡುತ್ತಿಲ್ಲ. ನನಗೆ ವಿಷ ಸಾಕಿತ್ತು ಅನ್ನುವ ಆಸೆ [?] ಬಿಡುವುದಿಲ್ಲ. ಚೇಳನ್ನು ಸಾಯಲು ಬಿಟ್ಟರೆ ಧರ್ಮಕ್ಕೆ ದೂರವಾಗುತ್ತೇನೆ, ಹಿಡಿದರೆ ಚೇಳು ಕೆಟ್ಟದ್ದು ಎಂಬ ಜ್ಞಾನಕ್ಕೆ ದೂರವಾಗುತ್ತೇನೆ. ಈ ಎರಡು ಬಗೆಯ ನೋವಿಗೆ ಒಳಗಾಗುವುದೆಂದರೆ ಸದಾಶಿವಮೂರ್ತಿಲಿಂಗಕ್ಕೆ ದೂರ.
ಬೆಂಕಿಯಲ್ಲಿ ಬಿದ್ದು ಸುಟ್ಟು ಹೋಗುತ್ತಿರುವ ಚೇಳನ್ನು ನೋಡಿದರೆ ಕಾಪಾಡಬೇಕು ಅನ್ನಿಸುತ್ತದೆ. ಅದು ಮೈಯೆಲ್ಲಾ ವಿಷವಾಗಿರುವ ಚೇಳು. ಅದರ ಮೈಗೆ ಉರಿ ಹತ್ತಿರುವುದರಿಂದ ಹಿಡಿಯಲು ಚಾಚಿದ ನನ್ನ ಕೈಯನ್ನೇ ಕಚ್ಚುತ್ತದೆ. ಅಯ್ಯೋ, ಚೇಳು ಸಾಯುವುದಲ್ಲಾ ಅನ್ನುವ ಭಯವೂ ಇದೆ, ಚೇಳು ಕುಟುಕಿ ನನಗೆ ವಿಷವೇರಿದರೆ ಹೇಗೆ ಅನ್ನುವ ಆಸೆಯೂ ಬಿಡದು [ಈ ಸಾಲು ವಿವರಣೆಗೆ ಕಷ್ಟ ಅನಿಸುತ್ತದೆ] ಚೇಳನ್ನು ಸಾಯಲು ಬಿಡುವುದು ಧರ್ಮಕ್ಕೆ/ದಯೆಗೆ ದೂರ, ಅದನ್ನು ಹಿಡಿಯುವುದು ʻಚೇಳು ಕೆಟ್ಟದ್ದುʼ ಎಂಬ ಜ್ಞಾನಕ್ಕೆ ದೂರ. ಈ ಎರಡರ ದ್ವಂದ್ವದಲ್ಲಿ ನಾನು ಬೇಯುತ್ತಿರುವವರೆಗೆ ಸದಾಶಿವಮೂರ್ತಿಲಿಂಗಕ್ಕೆ ದೂರವಾಗಿಯೇ ಇರುತ್ತೇನೆ.
ಚೇಳು, ವಿಷ, ಬೆಂಕಿಗಳನ್ನು ಬಯಕೆ, ಇಂದ್ರಿಯ ಸುಖದ ವಿಷಯ, ಜ್ಞಾನವೆಂಬ ಬೆಂಕಿ ಅಂತೆಲ್ಲ ವಿವರಿಸುವವರು ಇದ್ದಾರೆ. ಅಂಥ ವಿವರಣೆ ಇಲ್ಲದೆಯೂ ಅನುಭವ ಮತ್ತು ತಿಳಿವಳಿಕೆಗಳ ದ್ವಂದ್ವವನ್ನು ಈ ವಚನ ಹೇಳುತ್ತಿರುವುದು ಸ್ಪಷ್ಟವಾಗಿದೆ. ನಿರಾಸಕ್ತಿಯೋ ವಿಷಯ ಸುಖದ ಮಗ್ನತೆಯೊ, ಕೆಡುಕೇ ಆದರೂ ಆ ಜೀವವನ್ನು ಕಾಪಾಡುವ ದಯೆ ಎಂಬ ಧರ್ಮ ಪಾಲಿಸಲೋ ಚೇಳಿನ ವಿಷದ ಉರಿಯಿಂದ ದೂರವಿರಬೇಕೆಂಬ ತಿಳಿವಳಿಕೆಯನ್ನು ಪಾಲಿಸಲೋ? ಇಂಥ ದ್ವಂದ್ವದಲ್ಲಿ ಬೇಯುತ್ತ ಇರುವವರೆಗೆ ನಾನು ಸದಾಶಿವಮೂರ್ತಿಲಿಂಗಕ್ಕೆ ದೂರ. ಈ ವಚನವು ದೂರವೆಂಬ ಮಾತಿಗೆ ಹೊಮ್ಮಿಸುವ ಅರ್ಥಗಳನ್ನು, ಬೇಯುತ್ತಿರುವುದು ಚೇಳು ಮಾತ್ರವಲ್ಲ ನಿರ್ಣಯಿಸಲಾಗದ ತಾನು ಕೂಡಾ ಸಂದೇಹದ ಉರಿಗೆ ಸಿಲುಕಿದವನು ಅನ್ನುವುದನ್ನು, ಎರಡು ಸಂಗತಿಗಳ ನಡುವೆ ಸೂಕ್ತವಾದುದನ್ನು ಆಯ್ಕೆ ಮಾಡಲು ಆಗದೆ, ʻನಿರ್ಣಯವನರಿಯದ ಮನವೇ ದುಗುಡವನಾಹಾರಗೊಂಡೆಯಲ್ಲಾʼ ಎಂದು ಅಲ್ಲಮ ವಚನ ಹೇಳುವ ಸ್ಥಿತಿಯ ವರ್ಣನೆ ಇಲ್ಲಿರುವುದನ್ನು ಗಮನಿಸಿದರೆ ಈ ವಚನ ಅದ್ಭುತ ಅನಿಸುತ್ತದೆ.
ಅರಿವಿನ ಮಾರಿತಂದೆ
ಬದುಕಿನ ವಿವರಗಳು ತಿಳಿದಿಲ್ಲ. ಸದಾಶಿವಮೂರ್ತಿ ಲಿಂಗ ಎಂಬ ಅಂಕಿತದ ೩೦೯ ವಚನಗಳು ದೊರೆತಿವೆ.

