13ನೇ ಶತಮಾನದ ಅವಧಿಯಲ್ಲಿ ಸೂಫಿ ಚಿಂತನೆಯ ಪ್ರಭಾವಕ್ಕೆ ಒಳಗಾಗಿದ್ದ ಹಿಂದೂ – ಮುಸ್ಲಿಮರಿಬ್ಬರೂ ಭಕ್ತಿ ಚಳವಳಿಯ ಬಳ್ಳಿಯನ್ನು ಎಲ್ಲೆಡೆ ಹಬ್ಬಿಸಿದರು. ಈ ಬಳ್ಳಿಗೆ ಆಸರೆಯಾಗಿ ನಿಂತಿದ್ದು, ರಾಮನಾಮವೆಂಬ ವಿಶಾಲ ವೃಕ್ಷ. ಈ ವಿಶಾಲ ವೃಕ್ಷದ ಮೇಲೆ ಹಲವಾರು ಕೋಗಿಲೆಗಳು ವಾಲ್ಮೀಕಿಯಂತೆ ‘ರಾಮ ರಾಮ’ ಎಂದು ಮಧುರ ದನಿಯಲ್ಲಿ ಉಲಿದವು… | ಚೇತನಾ ತೀರ್ಥಹಳ್ಳಿ
ಸೂಫಿಸಂ, ಧಾರ್ಮಿಕ ಚೌಕಟ್ಟುಗಳನ್ನು ಮೀರಿ ಇತರ ಧರ್ಮಗಳೊಡನೆ ಸೌಹಾರ್ದ ಸಾಧಿಸುವ ಪ್ರೇಮ ಪಥ. ಎಲ್ಲವನ್ನೂ ತನ್ನದಾಗಿಸಿಕೊಳ್ಳುವುದು ಮತ್ತು ತಾನು ಎಲ್ಲದರೊಳಗೆ ಒಂದಾಗುವುದು ಇದರ ರೀತಿ. ಇದು ಭಾರತದಲ್ಲಿ ತನ್ನ ಪ್ರೇಮದ ತತ್ವಶಾಸ್ತ್ರವನ್ನು ಹರಡಲು ರಾಮನಾಮವನ್ನು ಮಾಧ್ಯಮವಾಗಿ ಬಳಸಿಕೊಂಡಿತು. ಉತ್ತರ ಭಾರತದಲ್ಲಂತೂ ಅದು ಭಿನ್ನ ಧರ್ಮಗಳ ನಡುವಿನ ಕೊಂಡಿಯಾಗಿ ಮಾತ್ರವಲ್ಲದೆ, ಸಾಂಸ್ಕೃತಿಕ – ರಾಜಕೀಯ ಬೆಸುಗೆಯ ಕೊಂಡಿಯಾಗಿಯೂ ಮುಖ್ಯ ಪಾತ್ರ ವಹಿಸಿತು. ಈ ಮೂಲಕ ಉತ್ತರ ಭಾರತದ ಭಕ್ತಿ ಚಳವಳಿಯು ದಕ್ಷಿಣಕ್ಕಿಂತ ಭಿನ್ನವಾಗಿ ರೂಪುಗೊಳ್ಳಲು ಕಾರಣವಾಯ್ತು. ಈ ಪ್ರಕ್ರಿಯೆ ಮೊದಲಾಗಿದ್ದು 13ನೇ ಶತಮಾನದಲ್ಲಿ. ಈ ಅವಧಿಯಲ್ಲಿ ಸೂಫಿ ಚಿಂತನೆಯ ಪ್ರಭಾವಕ್ಕೆ ಒಳಗಾಗಿದ್ದ ಹಿಂದೂ – ಮುಸ್ಲಿಮರಿಬ್ಬರೂ ಭಕ್ತಿ ಚಳವಳಿಯ ಬಳ್ಳಿಯನ್ನು ಎಲ್ಲೆಡೆ ಹಬ್ಬಿಸಿದರು. ಈ ಬಳ್ಳಿಗೆ ಆಸರೆಯಾಗಿ ನಿಂತಿದ್ದು, ರಾಮನಾಮವೆಂಬ ವಿಶಾಲ ವೃಕ್ಷ. ಈ ವಿಶಾಲ ವೃಕ್ಷದ ಮೇಲೆ ಹಲವಾರು ಕೋಗಿಲೆಗಳು ವಾಲ್ಮೀಕಿಯಂತೆ ‘ರಾಮ ರಾಮ’ ಎಂದು ಮಧುರ ದನಿಯಲ್ಲಿ ಉಲಿದವು.
ಸೂಫಿ ಚಿಂತನೆಯು ಶ್ರೀರಾಮನನ್ನು ಭಗವಂತನ ಪ್ರವಾದಿಗಳಲ್ಲಿ ಒಬ್ಬನನ್ನಾಗಿ ನೋಡುತ್ತದೆ. ಅದರ ಪಾಲಿಗೆ ರಾಮ, ಆರ್ಯಾವರ್ತದ ಆಧ್ಯಾತ್ಮಿಕ ನಾಯಕ. ರಾಮಾಯಣವನ್ನು ಅದು ಒಬ್ಬ ವ್ಯಕ್ತಿಯ ಕತೆಯಾಗಿ ಅಲ್ಲದೆ, ಆತ್ಮದ ಪಯಣವನ್ನಾಗಿ ಬಿಂಬಿಸುತ್ತದೆ. ಇದನ್ನು ನಾವು ರಾಮಾಯಣದ ಪರ್ಷಿಯನ್ ಅನುವಾದಗಳಲ್ಲಿ ನೋಡಬಹುದು. ವಾಸ್ತವದಲ್ಲಿ ಇವು ಅನುವಾದಗಳಲ್ಲ, ಸೂಫಿ ಚಿಂತನೆಯ ಅಚ್ಚಿನಲ್ಲಿ ಮಾಡಿದ ರಾಮಾಯಣದ ಪುನಾರಚನೆ. ಉರ್ದು ಮತ್ತು ಪರ್ಷಿಯನ್ ಭಾಷೆಗಳಲ್ಲಿ ಇಂಥ ಕೃತಿಗಳು ಇಪ್ಪತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿವೆ. ಇವಲ್ಲದೆ, ರಾಮನ ಆದರ್ಶ ಮತ್ತು ರಾಮಾಯಣದ ಎಳೆಯನ್ನು ಹೊಂದಿದ ಸ್ವತಂತ್ರ ಕೃತಿಗಳೂ ಸಾಕಷ್ಟಿವೆ.
ಸೂಫಿ ಚಿಂತನೆಯಿಂದ ಪ್ರಭಾವಿತನಾಗಿದ್ದ ಸಾಮ್ರಾಟ ಅಕ್ಬರ್, ತನ್ನ ಆಸ್ಥಾನ ವಿದ್ವಾಂಸ ಅಬ್ದುಲ್ ಖಾದಿರ್ ಬದಾಯುನಿಗೆ ರಾಮಾಯಣವನ್ನು ಪರ್ಷಿಯನ್ ಭಾಷೆಗೆ ಅನುವಾದಿಸುವಂತೆ ಸೂಚನೆ ನೀಡಿದ್ದ. ಆದರೆ ಬದಾಯುನಿ ಅದನ್ನು ಕೇವಲ ಭಾಷಾಂತರಕ್ಕೆ ಸೀಮಿತಗೊಳಿಸದೆ, ಸೂಫಿ ತತ್ವವನ್ನು ಆಧರಿಸಿ ಪುನರ್‌ಸೃಷ್ಟಿ ಮಾಡಿದ. ಶ್ರೀರಾಮನ ಅಯೋಧ್ಯಾ ತ್ಯಾಗ ಮತ್ತು ವನವಾಸಗಳನ್ನು, ಆತ್ಮವು ಭೌತಿಕ ಪ್ರಪಂಚದ ವ್ಯಾಮೋಹದಿಂದ ದೂರ ಸರಿದು ಆಧ್ಯಾತ್ಮಿಕ ಪಥದತ್ತ ಸಾಗುವ ಸಂಕೇತವಾಗಿ ಬಿಂಬಿಸಿದ. ರಾಮನನ್ನು ಸತ್ಯದ ಸಂಕೇತವಾಗಿಯೂ ರಾವಣನನ್ನು ಅಜ್ಞಾನ ಮತ್ತು ಭ್ರಾಂತಿಯ ಸಂಕೇತವಾಗಿಯೂ ಸೀತಾನ್ವೇಷಣೆಯನ್ನು ದೈವಿಕ ಪ್ರಜ್ಞೆಯನ್ನು ಹೊಂದುವ ದಾರಿಯ ಹುಡುಕಾಟದ ಸಂಕೇತವಾಗಿಯೂ ಚಿತ್ರಿಸಿದ.
ನಂತರದಲ್ಲಿ ಜಹಾಂಗೀರನ ಸೂಚನೆಯಂತೆ ಕವಿ ಮಸೀಹಿ ಪಾಣಿಪತಿ (ಮುಲ್ಲಾ ಶೇಖ್ ಸಾದುಲ್ಲಾ) ದಾಸ್ತಾನ್ ಇ ರಾಮ್ ಔರ್ ಸೀತಾ ಹೆಸರಿನಲ್ಲಿ ರಾಮಾಯಣವನ್ನು ಅನುವಾದಿಸಿದ. ಸೂಫಿ ಚಿಂತನೆಯಿಂದ ಪ್ರಭಾವಿತನಾಗಿದ್ದ ಪಾಣಿಪತಿ, “ಹಿಂದೂಸ್ತಾನದ ಧೂಳಿನ ಕಣಕಣದಲ್ಲೂ ಪ್ರೇಮ ಬೆರೆತಿದೆ. ಅದೇ ಪ್ರೇಮದ ಪ್ರೇರಣೆಯಿಂದ ನಾನು ರಾಮ ಸೀತೆಯರ ಕಥೆಯನ್ನು ಬರೆಯುವ ಪ್ರಯತ್ನ ಮಾಡಿದ್ದೇನೆ” ಎಂದು ಹೇಳಿಕೊಂಡಿದ್ದ.
ಪರ್ಷಿಯನ್ ಮತ್ತು ಉರ್ದು ಭಾಷೆಗಳಲ್ಲಿ ವಿದ್ವಾಂಸರು ಮಾಡಿದ ರಾಮಾಯಣ ಕೃತಿಯ ಅನುವಾದ ಮತ್ತು ವ್ಯಾಖ್ಯಾನಗಳ ಸೊಬಗು ಒಂದು ಬಗೆಯಾದರೆ, ಸೂಫಿ ತತ್ವದರ್ಶಿಗಳು ರಾಮ ಮತ್ತು ರಾಮಾಯಣಗಳನ್ನು ತಮ್ಮ ಗ್ರಹಿಕೆಯ ಅರಿವಿನ ಮೂಲಕ ಕಾಣಿಸಿದ ಸೊಬಗು ಮತ್ತೊಂದು ಬಗೆ. ಅದೇನಿದ್ದರೂ, ಇವರೆಲ್ಲರ ಎಲ್ಲ ಬಗೆಯ ಕೃತಿಗಳ ಸಾರ ಮಾತ್ರ ಒಂದೇ – ಪ್ರೇಮ ಮತ್ತು ಮೋಕ್ಷ. ಸೂಫಿ ತತ್ವದರ್ಶಿಗಳ ಪಾಲಿಗೆ ರಾಮ ಅಂದರೆ ರಾಜನಲ್ಲ, ಕೇವಲ ದೇವರೂ ಅಲ್ಲ. ರಾಮನೆಂದರೆ ಪ್ರೇಮದ ಮಧು ತುಂಬಿದ ಪರಿಪೂರ್ಣ ಪಾತ್ರೆ. ರಾಮನಾಮ ಬರಿಯ ಹೆಸರಲ್ಲ, ಮುಕ್ತಿ ಪಥದ ದಿಕ್ಸೂಚಿ.
ಶ್ರೀರಾಮನ ಭಕ್ತರಾಗಿದ್ದ ಕಬೀರರು, ವಿನಮ್ರತೆಯಿಂದ ತಮ್ಮನ್ನು ತಾವು ರಾಮನ ನಾಯಿ (ಕಬೀರ ಕುತ್ತಾ ರಾಮ್ ಕಾ, ಮುತಿಯಾ ಮೇರಾ ನಾಮ್) ಎಂದು ಕರೆದುಕೊಂಡಿದ್ದರು. ಶ್ರೀರಾಮನನ್ನು ದೇಶ – ಕಾಲ – ಧರ್ಮಗಳ ಎಲ್ಲೆ ಮೀರಿ ಕೊಂಡೊಯ್ದ ಇವರು, ದೋಹೆಯೊಂದರ ಮೂಲಕ ನಾಲ್ಕು ಬಗೆಯ ರಾಮನನ್ನು ನಮ್ಮ ಮುಂದಿಟ್ಟರು.
ಏಕ ರಾಮ ದಶರಥ ಕಾ ಬೇಟಾ, ಏಕ ರಾಮ ಘಟ ಘಟ ಮೇ ಬೈಠಾ
ಏಕ ರಾಮ ಕಾ ಸಕಲ ಪಸಾರಾ, ಏಕ ರಾಮ ಹೈ ಸಬಸೇ ನ್ಯಾರಾ
– ಒಬ್ಬ ದಶರಥನ ಮಗನಾದ ರಾಮ (ಅವತಾರ ಪುರುಷ), ಮತ್ತೊಬ್ಬ ಪ್ರತಿಯೊಂದು ಜೀವಿಯ ಒಳಗಿರುವ ರಾಮ (ಅಂತರಾತ್ಮ), ಮೂರನೆಯವನು ಜಗತ್ತಿನ ಕಣಕಣದಲ್ಲೂ ವಾಸಿಸುವ ಸರ್ವಾಂತರ್ಯಾಮಿ ರಾಮ (ಪರಮಾತ್ಮ), ಕೊನೆಯದಾಗಿ ಎಲ್ಲವನ್ನೂ ಮೀರಿದ, ಯಾವುದಕ್ಕೂ ಸೀಮಿತವಲ್ಲದ ಮತ್ತು ಯಾವ ಗುರುತಿಗೂ ನಿಲುಕದ ಪರಬ್ರಹ್ಮ ರಾಮ.
ಶ್ರೀರಾಮನ ಆದರ್ಶಗಳಿಂದ ಪ್ರಭಾವಿತರಾಗಿದ್ದ ಕೆಲವು ಕವಿಗಳು ನೇರವಾಗಿ ರಾಮಕತೆ ಬರೆಯದಿದ್ದರೂ ತಮ್ಮ ಕೃತಿಗಳಲ್ಲಿ ಅದರ ಛಾಪು ಬಿಂಬಿಸಿದ್ದಾರೆ. ಹದಿನೈದನೇ ಶತಮಾನದಲ್ಲಿ ಆಗಿಹೋದ ಚಿಸ್ತಿ ಸಂಪ್ರದಾಯದ ಸೂಫಿ ವಿದ್ವಾಂಸ ಮಲಿಕ್ ಮೊಹಮ್ಮದ್ ಜಾಯಸಿ, ತನ್ನ ಪದ್ಮಾವತ್ ಕೃತಿಯಲ್ಲಿ ಹಲವೆಡೆ ರಾಮ – ಸೀತೆಯರ ಪ್ರೇಮ ವಿರಹಗಳನ್ನೂ, ಹನುಮಂತನ ಸಾಗರೋಲ್ಲಂಘನ ಮತ್ತು ಲಂಕಾದಹನವನ್ನೂ ತನ್ನ ಕತೆಗೆ ಹೊಂದಿಸಿಕೊಂಡು ಪುನಾರಚಿಸಿದ್ದಾನೆ. ಅದೇ ರೀತಿ ಹದಿನೇಳನೆ ಶತಮಾನದ ಸೂಫಿ ಕವಿ ಬಿದಿಲ್ ದೆಹ್ಲವಿ ತನ್ನ ಇರ್ಫಾನ್ ಕೃತಿಯಲ್ಲಿ ರಾಮನನ್ನು, ‘ಜಗತ್ತಿನ ಸಮಸ್ತ ಜೀವಿಗಳ ಅಂತರಂಗದಲ್ಲಿ ಬೆಳಗುತ್ತಿರುವ ದೀಪ’ ಎಂದು ಬಣ್ಣಿಸಿದ್ದಾನೆ, ಅವನನ್ನು ‘ಹಾದಿ ಎ ಹಕ್’ (ಸತ್ಯದ ಮಾರ್ಗದರ್ಶಕ) ಎಂದು ಕರೆದು ಗೌರವ ತೋರಿದ್ದಾನೆ.
ಅದೇ ರೀತಿ ಸೂಫಿ ಪ್ರೇಮಪಥದಲ್ಲಿ ತಮ್ಮ ಚಿಂತನೆಯ ದಾರಿ ಕಂಡುಕೊಂಡಿದ್ದ 19ನೇ ಶತಮಾನದ ಕವಿ ಅಲ್ಲಮ ಇಕ್ಬಾಲ್, ತಮ್ಮ ‘ರಾಮ್’ ಕವಿತೆಯಲ್ಲಿ ಶ್ರೀರಾಮನನ್ನು ‘ಇಮಾಮ್ ಎ ಹಿಂದ್’ (ಭಾರತದ ಆಧ್ಯಾತ್ಮಿಕ ನಾಯಕ) ಎಂದು ಕರೆದಿದ್ದಾರೆ. ‘ಹೈ ರಾಮ್ ಕೆ ವಜೂದ್ ಪೆ ಹಿಂದೂಸ್ತಾನ್ ಕೋ ನಾಝ್’ ಎಂದು ಬಣ್ಣಿಸುವ ಇಕ್ಬಾಲ್, ರಾಮನನ್ನು ಭಾರತದ ಹೆಮ್ಮೆಯಾಗಿ, ಇಡಿಯ ದೇಶದ ಆದರ್ಶವಾಗಿ ಪ್ರಸ್ತುತಪಡಿಸಿದ್ದಾರೆ.
ಕೃಪೆ: ಬೋಧಿವೃಕ್ಷ; ವಿಜಯ ಕರ್ನಾಟಕ

