ಮಿಸ್ ಮಾಡಿಕೊಳ್ಳುವುದು ಎಂದರೇನು?

ಸಾರ್ತ್ರೆ ಪ್ರಕಾರ, ನಾವು ಯಾರನ್ನಾದರೂ ಪ್ರೀತಿಸುವಾಗ, ನಾವು ನಮ್ಮ ಜಗತ್ತನ್ನು ಅವರ ಸುತ್ತ ಕಟ್ಟಿಕೊಳ್ಳುತ್ತೇವೆ. ನಾವು ಜಗತ್ತನ್ನು ಅವರ ಜೊತೆಗೆ ಕೂಡಿ ಅನುಭವಿಸುತ್ತೇವೆ. ಈ ಕಾರಣವಾಗಿ ಅವರು ನಮ್ಮನ್ನು ಬಿಟ್ಟು ಹೋದಾಗ, ಅವರು ನಮ್ಮ ಜೊತೆ ಇಲ್ಲದಿರುವಾಗ ನಮ್ಮ ಜಗತ್ತು ಬದಲಾಗಿ ಬಿಡುತ್ತದೆ… ~ ಚಿದಂಬರ ನರೇಂದ್ರ

ಯಾರನ್ನಾದರೂ ಮಿಸ್ ಮಾಡಿಕೊಳ್ಳುವುದು ಎಂದರೇನು? ಯಾರೋ ಒಬ್ಬರು ಇಲ್ಲ, ಅಥವಾ ಏನೋ ಒಂದು ಇಲ್ಲ ಎನ್ನುವುದನ್ನ ಫೀಲ್ ಮಾಡಿಕೊಳ್ಳುವುದು ಎಂದರೇನು?

ಈ ಕುರಿತಾಗಿಯೇ ಜಾನ್ ಪಾಲ್ ಸಾರ್ತ್ರೆ ತಮ್ಮ ಪುಸ್ತಕ Being & Nothingness ಲ್ಲಿ ಚರ್ಚೆ ಮಾಡುತ್ತಾರೆ.

ಸಾರ್ತ್ರೆ ಒಂದು ಕತೆ ಹಂಚಿಕೊಳ್ಳುತ್ತಾರೆ. ಒಂದು ದಿನ ಅವರು ತಮ್ಮ ಗೆಳೆಯ ಪಿಯರ್ರೆ ನ ಭೇಟಿಯಾಗಲಿಕ್ಕೆ ಒಂದು ಕೆಫೆಗೆ ಹೋಗುತ್ತಾರೆ. ಆದರೆ ಗೆಳೆಯ ಪಿಯರ್ರೆ ಅಲ್ಲಿರುವುದಿಲ್ಲ. ಆಗ ಸಾರ್ತ್ರೆ, ಗೆಳೆಯ ಪಿಯರ್ರೆ ಯ ಗೈರು ಹಾಜರಿಯನ್ನು ಅನುಭವಿಸುತ್ತಾರೆ.

ಥಟ್ಟನೇ ಅಲ್ಲಿದ್ದ ಜನರ ಚೆಹರೆಗಳೆಲ್ಲ ತಾವು ಪಿಯರ್ರೆ ಅಲ್ಲ ( being – not  Pierre ) ಎನ್ನುವುಂತೆ ಮಾರ್ಪಾಡುಗೊಳ್ಳುತ್ತವೆ. ಆ ಇಡೀ ಕೋಣೆ ಪಿಯರ್ರೆ ಅಲ್ಲಿ ಇಲ್ಲದತನ ದಿಂದ ( Pierre’s not being there ness) ತುಂಬಿಕೊಳ್ಳುತ್ತದೆ. ಸಾರ್ತ್ರೆ ಏನು ಹೇಳಲಿಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದಕ್ಕೆ ನಾವೆಲ್ಲ ಕೂಡ ರಿಲೇಟ್ ಆಗಬಹುದು. ನೀವು ಯಾವತ್ತಾದರೂ ಒಂದು ಕಿಚನ್ ನ, ನಿಮ್ಮ ಗೆಳೆಯ/ಗೆಳತಿ, ಕುಟುಂಬದ ವ್ಯಕ್ತಿ ಅಥವಾ ಯಾರಾದರೂ ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ಬಿಟ್ಟು ಹೋದಮೇಲೆ ಪ್ರವೇಶ ಮಾಡಿದರೆ, ನಿಮಗೆ ಗೊತ್ತಾಗುತ್ತದೆ ಒಂದು ಗೈರುಹಾಜರಿಯನ್ನು ಅನುಭವಿಸುವುದು ಏಂದರೆ ಏನು ಎನ್ನುವುದು. ಅದೇ ಕಿಚನ್, ಅಲ್ಲಿ ಯಾವ ಬದಲಾವಣೆಯಾಗಿಲ್ಲ, ಅಲ್ಲಿರುವ ಖುರ್ಚಿಗಳು ಕೂಡ ಅವೇ, ಅದೇ ಡೈನಿಂಗ್ ಟೇಬಲ್, ಅದೇ ಅಡುಗೆ ಮನೆಯ ಸಾಮಾನುಗಳು. ಆದರೆ ಆ ಕಿಚನ್ ಏನೋ ಕಳೆದುಕೊಂಡಂತೆ ಇದೆ. ನೀವು ನಿಮ್ಮ ನಿತ್ಯದ ಖುರ್ಚಿಯ ಮೇಲೆ ಕುಳಿತುಕೊಳ್ಳುತ್ತೀರಿ, ಆದರೆ ಆ ಮೌನದಲ್ಲಿ ಏನೋ ಬದಲಾವಣೆ ಇದೆ. ಅದು ಅಲ್ಲಿ ಯಾರೋ ಒಬ್ಬರು ಇರದ ಕಾರಣ ಆವರಿಸಿಕೊಂಡಿರುವ ವಿಶಿಷ್ಟ ಮೌನ.

ಸಾರ್ತ್ರೆಯ ಪ್ರಕಾರ ಇದು human conditioning ನ ಕುರಿತಾದ ಮಹತ್ವದ ಸಂಗತಿಯೊಂದನ್ನು ಅನಾವರಣಗೊಳಿಸುತ್ತದೆ. ಏಕೆಂದರೆ ಮನುಷ್ಯ ಮಾತ್ರ ಇರದ ಸಂಗತಿಯೊಂದರ ಸುತ್ತ ಅನುಭವ ಲೋಕವೊಂದನ್ನು ಸೃಷ್ಟಿ ಮಾಡಿಕೊಳ್ಳಬಲ್ಲ. ಟೇಬಲ್ ಗೆ ಗೈರು ಹಾಜರಿಯ ಅನುಭವವಾಗುವುದಿಲ್ಲ. ಆ ಕೆಫೆಯಲ್ಲಿರುವ ಕ್ಯಾಮೆರಾ, ಅಲ್ಲಿರುವ ಟೇಬಲ್, ಖುರ್ಚಿ, ಮತ್ತು ಜನರನ್ನು ನೋಡಬಲ್ಲದು ಆದರೆ ಅದಕ್ಕೆ ಪಿಯರ್ರೆ ಆಕಾರದ ಇಲ್ಲದಿರುವಿಕೆಯನ್ನ ನೋಡುವುದು ಸಾಧ್ಯವಾಗುವುದಿಲ್ಲ. ಮನುಷ್ಯನಿಗೆ ಮಾತ್ರ, ಅಲ್ಲಿನ solid, full, positive ವಾಸ್ತವವನ್ನು ಅನುಭವಿಸುತ್ತಲೇ, ಅದನ್ನು negative ನ ಸುತ್ತ ಕಟ್ಟಿಕೊಳ್ಳುವುದು ಸಾಧ್ಯ, nothingness ನ ಸುತ್ತ.

ಈ ಕಾರಣದಿಂದಲೇ ಯಾರನ್ನಾದರೂ ಮಿಸ್ ಮಾಡಿಕೊಳ್ಳುವುದು ನಮ್ಮನ್ನು ಹರ್ಟ್ ಮಾಡುತ್ತದೆ ಅದು ಘಾಸಿ ಮಾಡುವ ರೀತಿಯಲ್ಲಿ. ಏಕೆಂದರೆ ಸಾರ್ತ್ರೆ ಪ್ರಕಾರ, ನಾವು ಯಾರನ್ನಾದರೂ ಪ್ರೀತಿಸುವಾಗ, ನಾವು ನಮ್ಮ ಜಗತ್ತನ್ನು ಅವರ ಸುತ್ತ ಕಟ್ಟಿಕೊಳ್ಳುತ್ತೇವೆ. ನಾವು ಜಗತ್ತನ್ನು ಅವರ ಜೊತೆಗೆ ಕೂಡಿ ಅನುಭವಿಸುತ್ತೇವೆ. ಈ ಕಾರಣವಾಗಿ ಅವರು ನಮ್ಮನ್ನು ಬಿಟ್ಟು ಹೋದಾಗ, ಅವರು ನಮ್ಮ ಜೊತೆ ಇಲ್ಲದಿರುವಾಗ ನಮ್ಮ ಜಗತ್ತು ಬದಲಾಗಿ ಬಿಡುತ್ತದೆ.

****************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.