ಗಂಡುಗಳ ಅಧ್ಯಾತ್ಮ ಚಿಂತನೆ ಹೆಣ್ಣುಗಳಿಗೂ (ಮೆತ್ತೆಲ್ಲ ಲಿಂಗಿಗಳಿಗೂ) ಸಮನಾಗಿ ಅನ್ವಯವಾಗುವುದೇ?
~ ಚೇತನಾ ತೀರ್ಥಹಳ್ಳಿ
ಈವರೆಗಿನ ಇತಿಹಾಸವನ್ನು ಗಂಡಸರೇ ಬರೆದರು (ಅಥವಾ ಅವರು ಬರೆದ ಇತಿಹಾಸಕ್ಕೆ ಮಾತ್ರ ಮನ್ನಣೆ ಕೊಟ್ಟು ಉಳಿಸಿಕೊಳ್ಳಲಾಯ್ತು). ಈ ಇತಿಹಾಸ ಅಪೂರ್ಣ, ಕೊರತೆಗಳಿಂದ ತುಂಬಿರುವಂಥದ್ದು ಮತ್ತು ಬಹುತೇಕ ಅಪ್ರಾಮಾಣಿಕ. ಹಾಗೇ, ಈವರೆಗೆ ಮನ್ನಣೆ ಪಡೆದ ಫಿಲಾಸಫಿಯನ್ನು ಬರೆದವರೂ (ರೂಪಿಸಿದವರೂ) ಗಂಡಸರೇ. ಅವು ಒಟ್ಟು ಮನುಷ್ಯಕುಲಕ್ಕೆ ಸಮನಾಗಿ ಸಲ್ಲುತ್ತದೆ ಎಂದು ನಂಬುವುದು ಹೇಗೆ?
ಅದೇ ರೀತಿ, ಈವರೆಗಿನ ಆಧ್ಯಾತ್ಮಿಕ ಚರ್ಚೆಗಳು ಕೂಡಾ ಗಂಡಸರ ನಡುವೆ ನಡೆದಂಥವು ಮತ್ತು ಗಂಡಸರ ಜಗತ್ತಿಗೆ ತಕ್ಕಂತೆ ನಡೆದಂಥವು. ಆತ್ಮಕ್ಕೆ ಭೇದವಿಲ್ಲವಾಗಿ ಆಧ್ಯಾತ್ಮಿಕ ಸಾಧನೆಯ ದಾರಿಯಲ್ಲೂ ಗಂಡು ಹೆಣ್ಣೆಂಬ ಭೇದವಿಲ್ಲ ಅನ್ನುವ ಮಾತು ಒಪ್ಪಲು ನನಗೆ ಸ್ವಲ್ಪ ಕಷ್ಟವಾಗುತ್ತೆ. ಯಾಕೆಂದರೆ, ಆತ್ಮ ಯಾವ ದೇಹವನ್ನು ಹೊತ್ತಿರುತ್ತೋ ಆ ದೇಹ, ಆತ್ಮ ಅರಿವು ಹೊಂದಲು ಮುಖ್ಯ ಪರಿಕರವಾಗಿ ಬಳಕೆಯಾಗುತ್ತೆ. ಒಳಗಿರುವುದು ನೀರೇ ಆದರೂ ಲೋಹದ ಬಟ್ಟಲಿನಲ್ಲಿಟ್ಟ ನೀರಿನ ಗುಣ ಮತ್ತು ಮಣ್ಣಿನ ಬಟ್ಟಲಿನಲ್ಲಿಟ್ಟ ನೀರಿನ ಗುಣ ಹೇಗೆ ಬೇರೆಯಾಗುವುದೋ ಹಾಗೇ ಆತ್ಮ ದೇಹಕ್ಕೆ ಅಂಟಿಕೊಂಡಿರದಿದ್ದರೂ ದೇಹದ ಗುಣಗಳು ಆತ್ಮಕ್ಕೆ ಅಂಟಿಕೊಂಡಿರುತ್ತದೆ. ಈ ಅಂಟಿನ ನಂಟು ಕಡಿಯುವುದು, ಅರಿವು ಮೂಡಿದ ಮೇಲಷ್ಟೇ.
ಆದ್ದರಿಂದ, ಅರಿವು ಮೂಡುವವರೆಗೆ ಗಂಡು ಮತ್ತು ಹೆಣ್ಣಿನ ಸಾಧನೆಯ ಹಾದಿಗಳು ಒಂದೇ ಆಗಿರಬೇಕಿಲ್ಲ. ಗಂಡು ಮತ್ತು ಹೆಣ್ಣು ಮತ್ತು ಎಲ್ಲ ಬಗೆಯ ಲಿಂಗಿಗಳ ತಾತ್ವಿಕತೆಯೂ ಒಂದೇ ಆಗಿರಬೇಕಿಲ್ಲ. ಎಲ್ಲ ಲಿಂಗಿಗಳ ಆಧ್ಯಾತ್ಮಿಕ ಸಾಧನೆಯ ದಾರಿಯೂ ಒಂದೇ ಆಗಿರಬೇಕಿಲ್ಲ. ಏಕೆಂದರೆ ಆ ಎಲ್ಲ ಲಿಂಗಿಗಳ ಮನೋ – ದೈಹಿಕ ಕಾರ್ಯಾಚರಣೆಗಳು, ದೈಹಿಕ ಸಂರಚನೆಯ ಜೊತೆಗೆ ಸಾಮಾಜಿಕ ಪರಿಸರದಿಂದಲೂ ರೂಪುಗೊಂಡಿರುತ್ತವೆ. ಎಂಥದೇ ಅತ್ಯುನ್ನತ ಆಧ್ಯಾತ್ಮಿಕ ಗುರುವೂ ತನ್ನ ಸಾಧನೆಗೆ ತನ್ನ ದೇಹವನ್ನು ಅವಲಂಬಿಸುವುದರಿಂದ, ಅವನು ಅದಕ್ಕೆ ತಕ್ಕಂತ ದಾರಿಗಳನ್ನೇ ರೂಪಿಸಿರುತ್ತಾನೆ. ಆದ್ದರಿಂದಲೇ ಅಧ್ಯಾತ್ಮಕ್ಕೆ ಬ್ರಹ್ಮಚರ್ಯ ಬಹಳ ಮುಖ್ಯವಾಗಿರೋದು. ಗಂಡು ಸಾಧಕರಿಗೆ ಗಂಡು ದೇಹಗಳ ಬಗೆ ಚೆನ್ನಾಗಿ ಗೊತ್ತು. ಜೀವವಿಜ್ಞಾನ ಹೇಳುವಂತೆ ಗಂಡಸರಿಗೆ ಲೈಂಗಿಕ ಕಾಮನೆಯನ್ನು ಹತ್ತಿಕ್ಕುವುದು ಬಹಳ ಕಷ್ಟದ ಕೆಲಸ. ಈ ಕಾಮನೆಗಳು ಅವರನ್ನು ಅಧ್ಯಾತ್ಮದಿಂದ ವಿಮುಖವಾಗಿಸುವವು. ಆದ್ದರಿಂದಲೇ ಅವರಿಗೆ ಬ್ರಹ್ಮಚರ್ಯ ಅನಿವಾರ್ಯ.
ಆದರೆ ಹೆಣ್ಣುಗಳಿಗೆ? ತೀರಾ ಅಪರೂಪದ ಅಪವಾದಗಳನ್ನು ಹೊರತುಪಡಿಸಿ, ಜೀವವಿಜ್ಞಾನವೂ ಹೆಣ್ಣುಗಳಿಗೆ ಈ ವಿಷಯದಲ್ಲಿ ಪೂರ್ಣ ಅಂಕ ನೀಡಿದೆ. ಇದೇನೂ ನಮ್ಮ ಹೆಚ್ಚುಗಾರಿಕೆಯಲ್ಲ. ನಮ್ಮ ದೇಹ ರೂಪುಗೊಂಡಿರುವುದೇ ಹೀಗೆ. ಆದ್ದರಿಂದ ಹೆಣ್ಣುಗಳ ಆಧ್ಯಾತ್ಮಿಕ ಸಾಧನೆಗೆ ಬ್ರಹ್ಮಚರ್ಯ ಅನಿವಾರ್ಯವಲ್ಲ. ಕ್ರಿಯೆ ನಡೆಸುತ್ತಲೂ ಅದರ ಕಾಮನೆಯಿಂದ ಹೊರಗುಳಿಯಬಲ್ಲ, ಸಂಸಾರದ ಜವಾಬ್ದಾರಿ ನಿಭಾಯಿಸುತ್ತಲೂ ಸಾಧನೆ ನಡೆಸಬಲ್ಲ ಸಾಮರ್ಥ್ಯ ಹೆಣ್ಣುಗಳಿಗೆ ಪ್ರಕೃತಿಸಹಜವಾಗಿ ದಕ್ಕಿದೆ. ಆದ್ದರಿಂದ, ನಾವು ಸಂಸಾರದಲ್ಲಿದ್ದುಕೊಂಡೇ ಸಾಧನೆ ಮಾಡಬಲ್ಲೆವು.
~
ಗೌತಮ ಬುದ್ಧನಿಗೆ ಹೆಣ್ಣುಮಕ್ಕಳನ್ನು ಸಂಘಕ್ಕೆ ಸೇರಿಸಿಕೊಳ್ಳಲಾಗಲೀ ಬಿಕ್ಖುಣಿ ಸಂಘ ಸ್ಥಾಪಿಸಲಿಕ್ಕಾಗಲೀ ಒಪ್ಪಿಗೆ ಇರಲಿಲ್ಲ. ಅವನ ಈ ನಿರಾಕರಣೆಯಿಂದ ಕುತೂಹಲಗೊಂಡ ಆನಂದ, “ಹಾಗಾದರೆ ಹೆಣ್ಣುಗಳು ಜ್ಞಾನೋದಯ ಹೊಂದಲಾರರೇ?” ಎಂದು ಕೇಳಿದಾಗ ಬುದ್ಧ “ಖಂಡಿತಾ ಪಡೆಯಬಲ್ಲರು” ಎಂದು ಖಚಿತವಾಗಿ ಉತ್ತರಿಸಿದ್ದ (ವಿನಯ ಪಿಟಕ, ಬಿಕ್ಖುಣಿ ಖಂಡಕ). ಹಾಗಾದರೆ ಮೊದಲ ಸಲ ಪ್ರಜಾಪತಿ ಗೋತಮಿಯು ಬಿಕ್ಖುಣಿ ಸಂಘದ ಸ್ಥಾಪನೆಯ ಪ್ರಸ್ತಾಪ ಮುಂದಿಟ್ಟಾಗ ಬುದ್ಧ ಬೇಡವೆಂದಿದ್ದು ಯಾಕೆ?
ಸಾಧನೆಯ ದಾರಿ ಗಂಡು – ಹೆಣ್ಣುಗಳಿಬ್ಬರಿಗೂ ಒಂದೇ ಆಗಿರಬೇಕಿಲ್ಲ / ಆಗಿರುವುದಿಲ್ಲ ಎಂಬ ಅರಿವು ಬುದ್ಧನಿಗೆ ಇದ್ದಿರಬೇಕು – ಇದನ್ನು ಬಿಟ್ಟು ಇನ್ಯಾವ ಕಾರಣವೂ ನನಗೆ ಸಮಾಧಾನ ಕೊಡುವುದಿಲ್ಲ.
ಈವರೆಗಿನ ಕೆಲವು ವಿವರಣೆಗಳು, ಬುದ್ಧನಿಗೆ ಬಿಕ್ಖುಗಳು ಬಿಕ್ಖುಣಿಯರ ಆಕರ್ಷಣೆಗೆ ಒಳಗಾಗಿ ಚಂಚಲಗೊಳ್ಳಬಹುದೆಂಬ ಯೋಚನೆ ಇತ್ತು; ಜನಸಾಮಾನ್ಯರ ಅಸಮ್ಮತಿಯ ಹಿಂಜರಿಕೆಯಿತ್ತು / ಹೆಣ್ಣುಗಳ ರಕ್ಷಣೆಯ ಕುರಿತು ಭಯವಿತ್ತು ಎಂದೆಲ್ಲ ಹೇಳುತ್ತವೆ. ಈ ವಾದಗಳು ಬುದ್ಧನ ಘನತೆಗೆ ಕುಂದು ತರುವಂಥವು.
ಮೊದಲನೆಯದಾಗಿ, ಬುದ್ಧ ಬಿಕ್ಖುಗಳನ್ನು ಬಲವಂತವಾಗಿ ಕೂಡಿಟ್ಟುಕೊಂಡಿರಲಿಲ್ಲ. ಯಾರು ಧಮ್ಮ ಬಯಸಿ ಬಂದರೋ ಅವರನ್ನಷ್ಟೆ ಇರಿಸಿಕೊಳ್ಳುತ್ತಿದ್ದ. ಅವನು ಪ್ರಚಾರ ಮಾಡುತ್ತಿದ್ದುದು ಸಂಘದ ವ್ಯವಸ್ಥೆಯುಳ್ಳ ಆಚರಣೆಯ ಧರ್ಮವಲ್ಲ, ಅವನು ಪ್ರಚಾರ ಮಾಡುತ್ತಿದ್ದು ಜೀವನದ ಮಹತ್ತರ ಅರಿವು ನೀಡುವ ಧಮ್ಮವನ್ನು. ಯಾರು ಅದರಿಂದ ಪ್ರಭಾವಿತರಾಗಿ ದೀಕ್ಷೆ ಪಡೆಯುತ್ತಾರೋ ಅವರಿಗಾಗಿ ಕೆಲವು ನಿಯಮಗಳನ್ನು ಮಾಡಿದನೇ ಹೊರತು, ನಿಯಮಗಳನ್ನು ಅನುಸರಿಸುವ ಮೂಲಕ ಧಮ್ಮಕ್ಕೆ ಪ್ರವೇಶ ಕಲ್ಪಿಸುವ ಕೆಲಸ ಅವನು ಮಾಡಿರಲಿಲ್ಲ. ಆದ್ದರಿಂದ, ಯಾರಾದರೂ ಚಂಚಲಗೊಂಡು ಸನ್ಯಾಸ ಬಿಟ್ಟು ಮರಳಿ ಸಂಸಾರಕ್ಕೆ ಹೋಗುತ್ತೇನೆಂದರೆ ಬುದ್ಧ ಅವರನ್ನು ‘ಇನ್ನೂ ಮಾಗದವರು’ ಎಂದು ಕಳಿಸುವಷ್ಟು ಪ್ರಬುದ್ಧನಾಗಿದ್ದನೇ ಹೊರತು, ಅವರ ಮೇಲೆ ಶಿಸ್ತಿನ ಕ್ರಮ ಕೈಗೊಂಡು ಸಂಘದಲ್ಲೇ ಉಳಿಸಿಕೊಳ್ಳುವ ಕರ್ಮಠನಾಗಿರಲಿಲ್ಲ. ಜೊತೆಗೆ, ಕೇವಲ ತನ್ನ ಗಂಡು ಅನುಯಾಯಿಗಳು ಚಂಚಲರಾಗುತ್ತಾರೆಂದು ಹೆಣ್ಣು ಅನುಯಾಯಿಗಳನ್ನು ದೂರತಳ್ಳುವ ಪಕ್ಷಪಾತಿಯೂ ಅವನಾಗಿರಲಿಲ್ಲ.
ಎರಡನೆಯದಾಗಿ, ಬುದ್ಧ ಸಮಾಜದ ಜನಸಾಮಾನ್ಯರ ಪೂರ್ವಾಗ್ರಹಗಳನ್ನು, ಸಿದ್ಧಮಾದರಿಯ ನಿರೀಕ್ಷೆಗಳನ್ನು ಎಂದೋ ಮುರಿದಿದ್ದ. ಯಾರನ್ನು ಸಮಾಜ ಕೆಳಜಾತಿಯವರು ಅನ್ನುತ್ತಾರೋ ಅವರ ಹೆಗಲ ಮೇಲೆ ಕೈಹಾಕಿದ್ದ. ಯಾರನ್ನು ಕುಲಟೆಯರು ಎಂದು ದೂಷಿಸಿ ದೂರವಿರಿಸಿತ್ತೋ ಆ ವೇಶ್ಯೆಯರಿಗೂ ಧಮ್ಮ ಬೋಧನೆ ಮಾಡಿ ಅವರಿಂದ ಸಂಘಕ್ಕಾಗಿ ದಾನ ಸ್ವೀಕರಿಸಿದ್ದ. ಇಂತಹ ಬುದ್ಧನಿಗೆ ಹೆಣ್ಣುಗಳಿಗೆ ಬಿಕ್ಖುಣಿ ದೀಕ್ಷೆ ಕೊಟ್ಟರೆ ಜನಸಾಮಾನ್ಯರು ಅಸಮಾಧಾನ ತೋರುತ್ತಾರೆಂಬ ಯೋಚನೆ ಇದ್ದಿರಲು ಹೇಗೆ ಸಾಧ್ಯ!?
ಮೂರನೆಯದಾಗಿ, ಬುದ್ಧನ ಕಾಳಜಿ ಸಂಘವೆಂಬ ಬಾವಿಗೆ ಸೀಮಿತವಾಗಿರಲಿಲ್ಲ. ಅವನ ಸಹಾನುಭೂತಿ ಇಡಿಯ ಜನಸಾಗರದ ಮೇಲಿತ್ತು. ಅಂಠವನಿಗೆ ದುರ್ಬಲ ಗಂಡುಗಳಿದ್ದರೆ ಹೆಣ್ಣುಗಳು ಸಂಘದಲ್ಲಿ ಮಾತ್ರವಲ್ಲ, ಇಡಿಯ ಭೂಮಿಯಲ್ಲಿ ಎಲ್ಲೇ ಇದ್ದರೂ ಅಸುರಕ್ಷಿತರೇ ಅನ್ನುವ ಅರಿವು ಇದ್ದಿರಲಾರದೇ? ಹೆಣ್ಣುಗಳ ಮೇಲೆ ಎಲ್ಲೋ ಅನ್ಯಾಯ ನಡೆದರೆ ನನಗೆ ಸಂಬಂಧಪಡುವುದಿಲ್ಲ, ಸಂಘದಲ್ಲಿ ಮಾತ್ರ ನಡೆಯಕೂಡದು ಎಂದು ಅವನು ಆಲೋಚಿಸಿದ್ದಿರಲು ಸಾದ್ಯವೇ?
ಖಂಡಿತಾ ಇಲ್ಲ!
ಆದ್ದರಿಂದ ಬುದ್ಧ ಬಿಕ್ಖುಣಿ ಸಂಘದ ಸ್ಥಾಪನೆ ನಿರಾಕರಿಸಿದ್ದು ಈ ಯಾವ ಕ್ಷುಲ್ಲಕ ಕಾರಣಗಳಿಂದಲೂ ಅಲ್ಲವೆಂದು ಧಾರಾಳವಾಗಿ ಹೇಳಬಹುದು. ಹಾಗಾದರೆ ಏನು ಕಾರಣ? ಮೇಲೆ ಊಹಿಸಿದಂತೆ, ಹೆಣ್ಣುಗಳ ಆಧ್ಯಾತ್ಮಿಕ ಸಾಧನೆಯ ದಾರಿ ಗಂಡುಗಳ ದಾರಿಯಂತೆಯೇ ಇರಬೇಕಿಲ್ಲ ಅನ್ನುವ ಅರಿವು.
ಆದರೆ ಕೊನೆಗೂ ಬುದ್ಧ ತನ್ನ ಚಿಕ್ಕಮ್ಮ ಪ್ರಜಾಪತಿ ಗೋತಮಿಯ ಹಂಬಲಕ್ಕೆ ತಲೆ ಬಾಗಬೇಕಾಯ್ತು. ಅವನ ಸಾಧನೆಯ ಸಲಕರಣೆಯಾಗಿದ್ದ ದೇಹಕ್ಕೆ ಅವನ ಚಿಕ್ಕಮ್ಮನ ಪೋಷಣೆಯ ಋಣವಿತ್ತು. ಅದಕ್ಕಾಗಿ ಬುದ್ಧ ಬಿಕ್ಖುಣೀ ಸಂಘದ ಸ್ಥಾಪನೆಗೆ ಸಮ್ಮತಿ ಸೂಚಿಸಿದ.
~
ಕೇವಲ ಸನ್ಯಾಸವೊಂದೇ ಅಲ್ಲ, ಆಧ್ಯಾತ್ಮಿಕತೆಯ ಎಲ್ಲ ಬೋಧನೆಗಳೂ ಗಂಡು ಜಗತ್ತಿನ ಅನುಕೂಲಕ್ಕೆ ತಕ್ಕಂತೇ ಇವೆ. ಒಂದೊಂದನ್ನೇ ಸೀಳಿ ನೋಡಿದರೆ ಅವು ಗೋಚರಿಸುತ್ತವೆ. ಹೆಣ್ಣಿಗೆ, ಅವಳ ಸಹಜತೆಯೇ ಅಧ್ಯಾತ್ಮದ ದಾರಿ. ಎಲ್ಲಕ್ಕೂ ಅಂಟಿಕೊಂಡಂತೆ ತೋರುವ ನಾವು ಕ್ಷಣಮಾತ್ರದಲ್ಲಿ ಎಲ್ಲ ಗಂಟುಗಳಿಂದಲೂ ಬಿಡಿಸಿಕೊಳ್ಳಬಲ್ಲೆವು. ನಮ್ಮ ನಂಟುಗಳು ಲೋಕದ ವ್ಯವಸ್ಥೆಯನ್ನು ಕಾಪಾಡಲಿಕ್ಕಾಗಿಯೇ ಹೊರತು ಸಾಮ್ರಾಜ್ಯ ಆಳಲಿಕ್ಕಲ್ಲ. ಹೆಣ್ಣುಗಳು ಲೌಕಿಕರಾಗಿ ತೋರುತ್ತಾರೆಂದರೆ, ಅವರು ಲೋಕನಿಯಮಗಳನ್ನು ಉಳಿಸುವ ಜವಾಬ್ದಾರಿ ಹೊತ್ತಿದ್ದಾರೆಂದೇ ಅರ್ಥ ಹೊರತು, ಅವರು ಅನಾಧ್ಯಾತ್ಮಿಕರೆಂದಲ್ಲ. ಅವರು ಐಹಿಕರೆಂದಲ್ಲ. ಅವರು ಮೋಕ್ಷವನ್ನಾಗಲೀ ಜ್ಞಾನೋದಯವನ್ನಾಗಲೀ ಹೊಂದಲು ಅನರ್ಹರು ಎಂದಲ್ಲ.
ಆದ್ದರಿಂದ, ನಮಗೆ (ಹೆಣ್ಣುಗಳಿಗೆ ಮತ್ತೆಲ್ಲ ಬಗೆಯ ಲಿಂಗಿಗಳಿಗೆ) ನಿಮ್ಮ (ಗಂಡಸರ) ಧರ್ಮ, ನಿಯಮ, ಸ್ಮೃತಿ, ಸಾಧನೆಯ ದಾರಿ ಮತ್ತು ಚಿಂತನೆಗಳು ಪೂರ್ತಿಯಾಗಿ ಅನ್ವಯವಾಗೋದಿಲ್ಲ.

