ಜೀವನಶೈಲಿಯಾದ ಮತಪಂಥಗಳು…

ಮೂಲಧರ್ಮದಿಂದ ಕವಲೊಡೆದ ಕೆಲವು ಮತಪಂಥಗಳು ಕಾಲಕ್ರಮದಲ್ಲಿ ಒಂದು ಧರ್ಮಕ್ಕಿಂತ ಹೆಚ್ಚು ಜೀವನಶೈಲಿಯಾಗಿ ರೂಪುಗೊಂಡಿವೆ. ಮತ್ತಿವು ತಾವು ಕವಲಾಗಿ ಬಂದ ಧರ್ಮಗಳನ್ನು ಸಹನೀಯವೂ ಸುಂದರವೂ ವಿಶಾಲವೂ ಆಗಿಸುತ್ತ ಬಂದಿವೆ. ಬಾವುಲ್, ಸೂಫೀ, ಝೆನ್, ತಾವೋ, ಹಸೀದ್ ಮೊದಲಾದವುಗಳು ಇದಕ್ಕೆ ಸದ್ಯದ ಉದಾಹರಣೆಗಳು..

ಸೂಫಿ

ರ್ಮ ಎಂದರೆ ಶಾಶ್ವತತೆಯನ್ನು ಸಮಯದೊಳಕ್ಕೆ ಅನುವಾದಿಸುವುದು ಅನ್ನುತ್ತಾರೆ ಓಶೋ. ನಿತ್ಯಸತ್ಯವಾದ, ಬದಲಾಗದ ಸಂಗತಿಯೊಂದು ಕಾಲದ ಹರಿವಿನ ಜೊತೆ ವಿಸ್ತಾರಗೊಳ್ಳುತ್ತ, ಇಲ್ಲವೇ ವಿಘಟನೆಗೊಳ್ಳುತ್ತ ಸಾಗುವ ಪ್ರಕ್ರಿಯೆಯನ್ನು ನಾವು ಧರ್ಮವೆಂದು ಕರೆಯುತ್ತೇವೆ. ಒಂದಷ್ಟು ಚಿಂತನೆಗಳು, ವಿಧಿವಿಧಾನಗಳು, ನಂಬಿಕೆಗಳು ಒಗ್ಗೂಡಿ ಒಂದು ಧರ್ಮವನ್ನು ರೂಪಿಸುತ್ತವೆ. ಈ ಧರ್ಮಗಳು ತನ್ನೊಳಗಿನ ಚಿಂತನ ಮಂಥನದಲ್ಲಿ, ಬಂಡಾಯದಲ್ಲಿ, ವಿದ್ರೋಹದಲ್ಲಿಯೂ ಮತ್ತಷ್ಟು ಕವಲುಗಳಿಗೆ ಅವಕಾಶ ಮಾಡಿಕೊಡುತ್ತವೆ.
ಹಾಗೆ ಕವಲೊಡೆದ ಕೆಲವು ಮತಪಂಥಗಳು ಕಾಲಕ್ರಮದಲ್ಲಿ ಒಂದು ಧರ್ಮಕ್ಕಿಂತ ಹೆಚ್ಚು ಜೀವನಶೈಲಿಯಾಗಿ ರೂಪುಗೊಂಡಿವೆ. ಅವುಗಳಲ್ಲಿ ಕೆಲವನ್ನು ಪರಿಚಯಿಸುವ ಚಿಕ್ಕ ಯತ್ನವನ್ನಿಲ್ಲಿ ಮಾಡಲಾಗಿದೆ.

ಬಾವುಲ್: ಪ್ರೇಮ ಪಥಿಕರು
ಭಾರತ ಮೂಲದ ಬಾವುಲ್‌ ಪಂಥ, ಹಿಂದೂ – ವೈಷ್ಣವ ಮತದ ಕವಲು. ಬಾವುಲ್‌ಗಳು ಅಪ್ಪಟ ಮಣ್ಣಿನ ಮಕ್ಕಳು. ದೇಸೀತನ ಇವರಲ್ಲಿ ನೂರಕ್ಕೆ ನೂರು ಮೇಳೈಸಿರುತ್ತದೆ. ಅವರ ನಡೆ ನುಡಿಗಳೆಲ್ಲವೂ ಅತ್ಯಂತ ಪ್ರಾಮಾಣಿಕ, ನೇರ ಮತ್ತು ಅಷ್ಟೇ ನಿಷ್ಟುರ. ಭಾರತದ ಪೂರ್ವ ಭಾಗದ ರಾಜ್ಯಗಳಲ್ಲಿ , ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಇವರು ಹೆಚ್ಚಾಗಿ ಕಂಡುಬರುತ್ತ್ತಾರೆ. ಸದಾ ಕಾಲವೂ ಭಕ್ತಿ ಸಂಗೀತದ ಪರಾಕಾಷ್ಠೆಯಲ್ಲಿ ಉನ್ಮತ್ತರಾಗಿರುವ ಈ ಪಂಗಡಕ್ಕೆ `ಬಾವುಲ್’ ಎಂಬ ಹೆಸರು ಬಂದಿರುವುದೂ ಈ ಕಾರಣದಿಂದಲೇ. ಇದು ಸಂಸ್ಕೃತದ `ವಾತುಲ’ ಪದದ ಅಪಭ್ರಂಶ. ಇದರರ್ಥ `ಗಾಳಿಯಿಂದ ಬಾಧೆಗೊಳಗಾದವನು’ ಎಂದು. ಅಕ್ಷರಶಃ `ಹುಚ್ಚ’ ಎಂದು! ಹಿಂದೂಸ್ಥಾನಿ ಭಾಷೆಯಲ್ಲಿ `ಬಾವುಲ್’ ಅಂದರೆ `ಉನ್ಮತ್ತ’. ಬಾವುಲರು ಸದಾ ಪ್ರೇಮೋನ್ಮಾದ ಮತ್ತರು.
ಬಾವುಲ್‌ಗಳಿಗೆ ಗೊತ್ತಿರುವುದು ಪ್ರೇಮವಷ್ಟೆ. ಇವರ ಉಪಾಸನೆಯ ಮಾರ್ಗವೂ ಪ್ರೇಮವೇ. ಇವರ ಬೋಧನೆ, ಕಲಿಕೆ ಎಲ್ಲವೂ ಪ್ರೇಮದ ಸುತ್ತಮುತ್ತಲೇ ಇರುತ್ತವೆ. ಭಗವತ್ಪ್ರೇಮ, ಮನುಷ್ಯರ ನಡುವಿನ ಪ್ರೇಮಗಳಿಂದ ಮಾತ್ರ ಮುಕ್ತಿ ಸಾಧ್ಯ ಎನ್ನುವುದು ಇವರ ಮೂಲ ಮಂತ್ರ.
ಹದಿನಾಲ್ಕನೇ ಶತಮಾನದಿಂದೀಚೆಗೆ ದೊಡ್ಡ ಸಂಖ್ಯೆಯಲ್ಲಿ ಬೆಳೆದುಕೊಂಡ ಈ ಪಂಗಡ, ಆ ಕಾಲಘಟ್ಟದಲ್ಲಿ ವಿಷಮ ಪರಿಸ್ಥಿತಿ ತಲುಪಿದ್ದ ಜಾತೀಯ ತಾರತಮ್ಯಕ್ಕೆ ಮದ್ದಾಗಿ ಪರಿಣಮಿಸಿತು. ಭಕ್ತಿಪ್ರೇಮದ ಹೆಸರಲ್ಲಿ ಜನರನ್ನು ವರ್ಣಭೇದದ ಮಡಿವಂತಿಕೆಯಿಂದ ಹೊರಗೆಳೆಯಿತು. ಗೊಡ್ಡು ಆಚಾರಗಳನ್ನು ಹಾಡಿನಲ್ಲೇ ಹೀಗಳೆಯುತ್ತ ದೊಡ್ಡ ಕ್ರಾಂತಿಯನ್ನೆ ಉಂಟುಮಾಡಿತ್ತು.
ಬಾವುಲರು ಪ್ರತ್ಯೇಕ ದೈವವನ್ನು ಪೂಜಿಸುವುದಿಲ್ಲ. ಪ್ರತಿಯೊಬ್ಬ ಮನುಷ್ಯನೊಳಗಿನ ಅಸೀಮ ಸಾಮರ್ಥ್ಯವನ್ನು `ಆಧಾರ ಮಾನುಷ್’ ಎಂದು ಕರೆದು, ಅದನು ಆರಾಧಿಸುತ್ತಾರೆ. ಬಾವುಲ್ ಸಂಗೀತ ಹಾಗೂ ನೃತ್ಯಗಳು ಇಂದು ಸಾಂಸ್ಕೃತಿಕ ಸ್ವರೂಪ ಪಡೆದು ದೇಶ ವಿದೇಶಗಳಲ್ಲಿ ಮನ್ನಣೆ ಪಡೆದಿದೆ.

ಸೂಫೀ: ಭಗವಂತನ ಪ್ರಿಯತಮರು
ಇಸ್ಲಾಮ್ ಕವಲಾದ ಸೂಫಿ ಪರಂಪರೆ ಪ್ರೇಮದ ಹಾದಿಯ ಅಧ್ಯಾತ್ಮಾನುಭೂತಿಯನ್ನು ಮುಖ್ಯ ಕೇಂದ್ರವಾಗಿಟ್ಟುಕೊಂಡು ಬೆಳೆದದ್ದು. ಯಾರು ಪ್ರೇಮದಲ್ಲಿ ಮತ್ತನಾಗಿರುತ್ತಾನೋ ಅವನೇ ಸೂಫಿ. ದ್ವೇಷವಿಲ್ಲದ, ಹೇರಿಕೆಯಿಲ್ಲದ, ಭಯವಿಲ್ಲದ, ಭಗವಂತನ ಸಂಗಾತವನ್ನೆ ನಿತ್ಯ ಧ್ಯಾನಿಸುವ ಪಂಥವಿದು.
ಎದೆಯಲ್ಲಿ ಪ್ರೇಮ, ಅದನ್ನು ಅಭಿವ್ಯಕ್ತಿಸುವ ಕಾವ್ಯಗಳನ್ನು ಬರೆಯದ ಯಾರೊಬ್ಬರೂ ಈ ಪರಂಪರೆಯಲ್ಲಿ ಕಾಣಸಿಗುವುದಿಲ್ಲ! ಅಷ್ಟರಮಟ್ಟಿಗೆ ಸೂಫಿಗಳ ಅಧ್ಯಾತ್ಮ ಪ್ರೇಮ ಮತ್ತು ಕಾವ್ಯಗಳೊಂದಿಗೆ ಹೆಣೆದುಕೊಂಡಿದೆ. ಸೂಫಿ ಸಂತರ ಈ ರಚನೆಗಳು ಮೇಲ್ನೋಟಕ್ಕೆ ಅದ್ಭುತ ಪ್ರೇಮ ಕಾವ್ಯಗಳಂತೆ ಕಾಣುತ್ತ ಪ್ರಿಯತಮರ ಪ್ರಲಾಪಗಳಂತೆ ತೋರುತ್ತವೆ. ಆದರೆ ಅವುಗಳ ಒಳಹೂರಣ ದಿವ್ಯಜ್ಞಾನವನ್ನೆ ಹೊತ್ತುಕೊಂಡಿದೆ. ಮೇಲುಮೇಲಿನ ಆಸ್ವಾದನೆಗೆ ತೆರೆದುಕೊಳ್ಳುವವರಿಗೂ ಸೂಫೀಕೃತಿಗಳಲ್ಲಿ ಅದ್ವಿತೀಯ ಆನಂದ ಲಭಿಸುವುದೇನೋ ಸರಿಯೇ. ಒಳಹೊಕ್ಕು ನೋಡುವವರು ಮಾತ್ರ ಅನರ್ಘ್ಯ ರತ್ನಗಳನ್ನೆ ಹೊಂದುತ್ತಾರೆ.
ಸೂಫಿಗಳ ಭಕ್ತಿ ಮಾರ್ಗ ಸಖ್ಯ ಭಾವ ಅಥವಾ ಮಧುರ ಭಕ್ತಿಯದ್ದು. ಭಗವಂತನನ್ನು ಅವರು ತಮ್ಮ `ಸಖ’ನೆಂದು ಅಥವಾ `ಪ್ರೇಮಿ’ಯೆಂದು ಭಾವಿಸುತ್ತಾ ತಮ್ಮನ್ನು ತಾವು ಆತನ `ಪ್ರಿಯತಮೆ’ ಎಂದು ಭಾವಿಸಿಕೊಳ್ಳುತ್ತಾರೆ. ಆ ಮೂಲಕವೇ ಆರಾಧಿಸುತ್ತಾರೆ.

ಝೆನ್: ಧ್ಯಾನವೇ ಧರ್ಮ 
ಬೌದ್ಧ ಧರ್ಮವನ್ನು ಪೂರ್ವ ದಿಕ್ಕಿನ ದೇಶಗಳಲ್ಲಿ ಪ್ರಚುರಪಡಿಸಿದ ಬೋಧಿಧರ್ಮ `ಝೆನ್’ ಪಂಥದ ಉದಯಕ್ಕೆ ಕಾರಣನಾದ. ಸಂಸ್ಕೃತದ `ಧ್ಯಾನ’ ಚೀನಾದಲ್ಲಿ ಚಾನ್ ಆಗಿ ಪರಿಚಿತಗೊಂಡಿತು. ಕೊರಿಯಾದಲ್ಲಿ ಸಿಯೋನ್ ಆಗಿದ್ದು ಮುಂದೆ ಜಪಾನಿನಲ್ಲಿ ಝೆನ್ ಎಂದು ಪ್ರಚುರಗೊಂಡಿತು. ಮುಂದೆ ಝೆನ್ ಜಪಾನಿನಲ್ಲಿ ತಳವೂರಿ, ಮುಂದೆ ಅಲ್ಲಿಂದಲೇ ಜಗತ್ತಿಗೆ ತೆರೆದುಕೊಂಡಿತು.
ವಾಸ್ತವದಲ್ಲಿ ಝೆನ್ ಅಂದರೆ ಧ್ಯಾನ – ಅಷ್ಟೇ. ಅದರ ಹೊರತಾಗಿ ಮತ್ತೇನೂ ಅಲ್ಲ. ದೇವತೆಗಳ ಆರಾಧನೆಯಲ್ಲ, ಪೂಜೆಯೂ ಈ ಪಂಥದಲ್ಲಿಲ್ಲ. ಯಾವುದು ಏನೂ ಅಲ್ಲವೋ ಅದೇ ಧ್ಯಾನ ಎಂದಾದರೆ, ಏನೂ ಅಲ್ಲದಿರುವುದನ್ನೇ `ಝೆನ್’ ಎನ್ನಲೂಬಹುದು. ನಿರ್ವಚನೆಗೆ ಒಳಪಡಿಸಲೇಬೇಕು ಎಂದಾದರೆ, ಝೆನ್ ಅನ್ನು `ಅರಿವು’ ಎನ್ನಬಹುದು. ಮತ್ತು ಇಲ್ಲಿ ಅರಿವ ಕೊಡುವ – ಕೊಳ್ಳುವ ಸಂಗತಿಯಲ್ಲ. ಅದು ಪರಿಮಳದಂತೆ ತನ್ನಿಂತಾನೆ ಹೊಮ್ಮುವಂಥದು. ಪರಿಮಳವನ್ನು ಹರಡಲು ಗಾಳಿಯೊಂದು ಮಾಧ್ಯಮ. ಹಾಗೆಯೇ ಝೆನ್ ಅರಿವನ್ನು ಹರಡಲು ಕಥೆಗಳು ಮಾಧ್ಯಮವಾಗಿ ಬಳಕೆಯಾಗಿವೆ.
ಝೆನ್ ಪರಂಪರೆಯಲ್ಲಿ ಗುರು-ಶಿಷ್ಯರ ಸಂಬಂಧ ಮಹತ್ವದ್ದು. ಆದರೆ ಇಲ್ಲಿ ಗುರು ಹೇಳಿದ್ದನ್ನೆಲ್ಲ ಕುರುಡಾಗಿ ನಂಬಿ ತಲೆಯಾಡಿಸುವ ಪದ್ಧತಿ ಇಲ್ಲ. ಗುರು ಏನು ಹೇಳುತ್ತಾನೋ ಅದು ಶಿಷ್ಯನಿಗೆ ವೇದ್ಯವಾಗಬೇಕು. ಇಲ್ಲಿ ಗುರು ಶಿಷ್ಯನನ್ನು ಅನುಮಾನಿಸುವ ಹಾಗೆ; ಪ್ರಶ್ನಿಸಿ, ಒರೆ ಹಚ್ಚಿ ನೋಡುವ ಹಾಗೆಯೇ ಶಿಷ್ಯನೂ ಗುರುವನ್ನು ಪರೀಕ್ಷಿಸುತ್ತಾನೆ. ಈತ ಯೋಗ್ಯನೇ ಎಂದು ಖಾತ್ರಿಪಡಿಸಿಕೊಳ್ಳುತ್ತಾನೆ.
ಗುರು – ಶಿಷ್ಯರ ನಡುವಿನ ಈ ಪರೀಕ್ಷೆಗಳೆಲ್ಲವೂ ಸಂಭಾಷಣೆಯ ರೂಪದಲ್ಲಿ ಇರುತ್ತವೆ, ಅಥವಾ ಆಂಗಿಕ ಅಭಿನಯಗಳ ರೂಪದಲ್ಲಿ. ಕೆಲವೊಮ್ಮೆ ಇವೇನೂ ಇಲ್ಲದೆ ಕ್ಷಣಿಕ ಪ್ರತಿಕ್ರಿಯೆಯ ಮೂಲಕವೂ ಈ ಇಬ್ಬರ ನಡುವೆ ಸಂವಹನ ನಡೆಯುತ್ತದೆ. ಹಾಗೆ ನಡೆದ ಸಂವಹನಗಳೇ ಝೆನ್ ಕತೆಗಳಾಗಿ ಮುಂದಿನ ಝೆನ್ ಪರಂಪರೆಯ ಅನುಯಾಯಿಗಳಿಗೆ ಪಾಠ ರೂಪದಲ್ಲಿ ಒದಗಿ ಬಂದಿವೆ.

ಹಸೀದ್: ಕಾರುಣ್ಯದ ಕವಲು
ಹಸೀದಿಸಮ್, ಯಹೂದ್ಯ ಪಂಥ ಜುದಾಯಿಸಮ್ಮಿನ ಕವಲು. ಹಸೀದ್ ಅಂದರೆ ಹೀಬ್ರೂ ಭಾಷೆಯಲ್ಲಿ ಕಾರುಣ್ಯ ಪ್ರೇಮಭರಿತರು ಎಂದರ್ಥ. ಯಹೂದಿ ಪಂಥದಲ್ಲಿನ ಕಟುವಾದ ಆಚರಣೆಗಳು, ಶಿಕ್ಷೆಗಳು, ನಂಬಿಕೆಗಳೆಲ್ಲದರಿಂದ ಹೊರಬಂದು ಶುದ್ಧ ಪ್ರೇಮ ಕಾರುಣ್ಯಗಳೇ ತುಂಬಿರುವ ಪಂಥವೊಂದನ್ನು ಸಂತ ಬಾಲ್ ಶೇಮ್ ಟೋ ಸ್ಥಾಪಿಸಿದರು. ಇದು ತೀರಾ ಇತ್ತೀಚೆಗೆ, ೧೮ನೇ ಶತಮಾನದಲ್ಲಿ ಟಿಸಿಲೊಡೆದ ಕವಲು. ಆಸಕ್ತಿಕರ ವಿಷಯವೆಂದರೆ ಯಾವುದೋ ಒಂದು ನಿರ್ವಚನೆಯಲ್ಲಿ ಹಸೀದಿಸಮ್ ಅನ್ನು ವಿವರಿಸಲಾಗದು. ಏಕೆಂದರೆ ಹಸೀದಿಸಮ್ ಒಂದು ನಿರ್ದಿಷ್ಟ ಆಚರಣೆಯನ್ನು ಅನುಸರಿಸುವ ಸಮುದಾಯವಲ್ಲ. ಜಗತ್ತಿನಲ್ಲಿ ನೂರಾರು ಬಗೆಯ ಆಚರನೆ – ಚಿಂತನೆಗಳುಳ್ಳ ಹಸೀದರು ಇದ್ದಾರೆ; ಹಸೀದ ಗುಂಪುಗಳೂ ಇವೆ. ಇವರು ಒಬ್ಬರೊಬ್ಬರ ಅಭಿಪ್ರಾಯಗಳ ವಿನಿಮಯ ಮಾಡಿಕೊಳ್ಳುತ್ತಾರೆ.
ಮೇಲೆ ಹೇಳಿದ ಉಳಿದೆಲ್ಲ ಕವಲು ಪಂಥಗಳು ಈಗ ಜೀವನಶೈಲಿಯ ಮಾನ್ಯತೆ ಪಡೆದಿದ್ದರೆ, ಹಸೀದಿಸಮ್ ಜುದಾಯಿಸಮ್ಮಿನ ಬಂಡಾಯ ಪಂಥವೆಂಬ ಗುರುತಿಟ್ಟುಕೊಂಡೂ ಶುರುವಿನಿಂದಲೂ ಜೀವನಶೈಲಿಯಾಗಿಯೇ ಅನುಸರಿಸಲ್ಪಡುತ್ತಿದೆ.

ದಾವ್: ಬಂಡಾಯ ಮತ್ತು ಶರಣಾಗತಿ
ಚೀನಾದಲ್ಲಿ ಪ್ರಚಲಿತವಿದ್ದ ಕನ್‌ಫ್ಯೂಷಿಯಸ್ ಧರ್ಮದ ಸಂಕುಚಿತತೆಯಿಂದ ಹೊರತಾಗಲು ಹುಟ್ಟಿಕೊಂಡಿದ್ದು ತಾವೋ (ದಾವ್). ತಾವೋ – ಅದೊಂದು ಪಂಥವಲ್ಲ. ಅದೊಂದು ಧರ್ಮವೂ ಅಲ್ಲ, ಆಚರಣೆಯೂ ಅಲ್ಲ. `ದಾವ್’ ಅಂದರೆ `ದಾರಿ’ ಎಂದು.
ಚೀನಾದಲ್ಲಿ ಆಗಿಹೋದ ದಾರ್ಶನಿಕ ಲಾವೋತ್ಸು ದಾವ್’ನ ಸೃಷ್ಟಿಕರ್ತ. ಅವನ ಚಿಂತನೆಗಳನ್ನು ಅನುಸರಿಸಿ ನಡೆವವರ ಸಂಖ್ಯೆ ಅದೆಷ್ಟು ಹೆಚ್ಚಾಯಿತೆಂದರೆ, ತಾವೋ ಒಂದು ಸಂಸ್ಥೆಯಲ್ಲ, ಅದೊಂದು ಧರ್ಮವಲ್ಲ ಎಂದು ಅವನು ಹೇಳಿದ್ದರೂ `ದಾವ್ ಪಂಥೀಯರು’ ಹುಟ್ಟಿಕೊಂಡರು. ಮುಂದೆ ಚೀನಾದ ಸಾಂಸ್ಕೃತಿಕ ಹರಿವಿಗೆ ದಾವ್ ಗಣನೀಯ ಕೊಡುಗೆಯನ್ನೆ ನೀಡಿತು.

ದಾವ್ ಕೂಡಾ ತಾನೊಂದು ಧರ್ಮವಲ್ಲ ಎಂದು ಹೇಳಿಕೊಳ್ಳುತ್ತದೆ. ಅದು ಏನನ್ನೂ ಬೋಧಿಸುವುದಿಲ್ಲ. ಅದನ್ನು ಅರ್ಥ ಮಾಡಿಕೊಂಡವರು ಏನನ್ನೂ ಹೇಳುವುದೂ ಇಲ್ಲ. ಅದರ ಚಿಂತನೆಗಳನ್ನು ಅಳವಡಿಸಿಕೊಂಡಲ್ಲಿ, ದಾವ್ ಸಾಧ್ಯವಿರುವ ಅತಿ ದೊಡ್ಡ ಬಂಡಾಯ. ದಾವ್ ಸಾಧ್ಯವಿರುವ ಅತ್ಯುನ್ನತ ಶರಣಾಗತಿ. 

Leave a Reply