ಅಟ್ಲಾಸನ ಉಪಾಯವೇನೆಂದು ಹರ್ಕ್ಯುಲಸ್ ಊಹಿಸಿದ. ಅದಕ್ಕೊಂದು ಪ್ರತಿ ತಂತ್ರ ಹೂಡಿ, “ಹಾಗೆಯೇ ಆಗಲಿ. ಆದರೆ ನೇರವಾಗಿ ಹೊತ್ತುಕೊಂಡು ನನ್ನ ಹೆಗಲು ತರಚುತ್ತಿದೆ. ಈ ಸಿಂಹದ ಚರ್ಮದಿಂದ ಸಿಂಬಿ ಮಾಡಿಕೊಂಡು ಮತ್ತೆ ಹೊತ್ತುಕೊಳ್ಳುತ್ತೇನೆ. ಅಲ್ಲಿಯವರೆಗೆ ಸ್ವಲ್ಪ ಹಿಡಿದುಕೊಂಡಿರು” ಅಂದ ಹರ್ಕ್ಯುಲಸ್.
ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ
ದಾನವ ಕುಲಕ್ಕೆ ಸೇರಿದ ಅಟ್ಲಾಸ್ ಟೈಟನ್, ಲಾಗಾಯ್ತಿನಿಂದ ಸ್ವರ್ಗಲೋಕವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿದ್ದ. ಅವನಿಗೆ ಈ ಕೆಲಸದಿಂದ ವಿರಾಮ ಬೇಕಿತ್ತು. ಯಾರದ್ದಾದರೂ ಹೆಗಲಿಗೆ ಈ ಭಾರವನ್ನು ವರ್ಗಾಯಿಸಿ ತಾನು ಮುಕ್ತನಾಗಬೇಕೆಂದು ಕಾಯುತ್ತಿದ್ದ.
ಅದೇ ವೇಳೆಗೆ ಯೂರಿಸ್ತ್ಯೂಸನ ಸವಾಲಿನಂತೆ ಚಿನ್ನದ ಹಣ್ಣುಗಳನ್ನು ತರಲು ಹರ್ಕ್ಯುಲಸ್ ಹೆಸ್ಪಿರೈಡರ ತೋಟಕ್ಕೆ ಹೊರಟಿದ್ದ. ಪ್ರೊಮಿಥ್ಯೂಸನು ಈ ಕೆಲಸವನ್ನು ಅಟ್ಲಾಸನಿಂದ ಮಾಡಿಸು ಎಂದು ಸೂಚನೆ ನೀಡಿದ್ದರಿಂದ, ಆತ ಅವನ ಬಳಿ ಮಾತಿಗೆ ತೊಡಗಿದ.
ಅದೂ ಇದೂ ಮಾತು ಮುಗಿದ ಮೇಲೆ ಹರ್ಕ್ಯುಲಸ್, “ಅಯ್ಯಾ ಅಟ್ಲಾಸ್, ನಿನ್ನಿಂದ ನನಗೊಂದು ಸಹಾಐವಾಗಬೇಕಲ್ಲ!” ಎಂದ. ನನ್ನ ಹೆಗಲ ಮೇಲಿನ ಸ್ವರ್ಗವನ್ನು ಹೊರುವುದಾದರೆ ಯಾವ ಸಹಾಯವನ್ನಾದರೂ ಮಾಡಲು ಸಿದ್ಧ ಎಂದ ಅಟ್ಲಾಸ್. ಹರ್ಕ್ಯುಲಸ್, “ನನಗೆ ಹೆಸ್ಪಿರೈಡರ ತೋಟದ ಚಿನ್ನದ ಹಣ್ಣುಗಳು ಬೇಕು” ಅಂದ.
“ಹಾಗಾದರೆ ನೀನು ಈ ಸ್ವರ್ಗವನ್ನು ಹೊತ್ತುಕೊಂಡಿರು, ನಾನು ಹೋಗಿ ತರುತ್ತೇನೆ. ಆದರೆ ಅದಕ್ಕಿಂತ ಮೊದಲು ಆ ಮರಕ್ಕೆ ಸುತ್ತಿಕೊಂಡಿರುವ ಹಾವನ್ನು ಸಾಯಿಸು” ಅಂದ ಅಟ್ಲಾಸ್.
ಅದರಂತೆ ಹರ್ಕ್ಯುಲಸ್ ನಿಂತಲ್ಲಿಂದಲೇ ಬಾಣ ಬಿಟ್ಟು ಹಾವನ್ನು ಹೊಡೆದು ಸಾಯಿಸಿದ. ಹೆಗಲ ಭಾರವನ್ನು ಅವನಿಗೆ ವರ್ಗಾಯಿಸಿದ ಅಟ್ಲಾಸ್, ಮರದ ಬಳಿ ಹೋಗಿ, ಅಲ್ಲಿ ಕಾವಲಿಗಿದ್ದವರನ್ನು ವಿಶ್ವಾಸದಿಂದ ಮಾತಾಡಿಸಿ, ಅವರಿಗೆ ತಿಳಿಯದಂತೆ ಮೂರು ಚಿನ್ನದ ಹಣ್ಣೂಗಳನ್ನು ಕಿತ್ತು ತಂದ. ಆದರೆ ಮತ್ತೆ ಸ್ವರ್ಗಲೋಕವನ್ನು ಹೆಗಲ ಮೇಲೆ ಹೊರುವುದು ಅವನಿಗೆ ಪ್ರಿಯವಾಗಿಯೇನೂ ಕಾಣಲಿಲ್ಲ. ಅದನ್ನು ಶಾಶ್ವತವಾಗಿ ಹರ್ಕ್ಯುಲಸನಿಗೆ ವರ್ಗಾಯಿಸುವ ಆಲೋಚನೆ ಮಾಡಿದ. “ನೀನು ಇನ್ನೂ ಸ್ವಲ್ಪ ಹೊತ್ತು ಹಾಗೇ ಇರು. ನಾನು ಈ ಹಣ್ಣುಗಳನ್ನು ಯೂರಿಸ್ಯೂಸನಿಗೆ ತಲುಪಿಸಿಬರುತ್ತೇನೆ” ಅಂದ ಅಟ್ಲಾಸ್.
ಅವನ ಉಪಾಯವೇನೆಂದು ಹರ್ಕ್ಯುಲಸ್ ಊಹಿಸಿದ. ಅದಕ್ಕೊಂದು ಪ್ರತಿ ತಂತ್ರ ಹೂಡಿ, “ಹಾಗೆಯೇ ಆಗಲಿ. ಆದರೆ ನೇರವಾಗಿ ಹೊತ್ತುಕೊಂಡು ನನ್ನ ಹೆಗಲು ತರಚುತ್ತಿದೆ. ಈ ಸಿಂಹದ ಚರ್ಮದಿಂದ ಸಿಂಬಿ ಮಾಡಿಕೊಂಡು ಮತ್ತೆ ಹೊತ್ತುಕೊಳ್ಳುತ್ತೇನೆ. ಅಲ್ಲಿಯವರೆಗೆ ಸ್ವಲ್ಪ ಹಿಡಿದುಕೊಂಡಿರು” ಅಂದ ಹರ್ಕ್ಯುಲಸ್.
ಭೋಳೆ ಸ್ವಭಾವದ ಅಟ್ಲಾಸ್ ಅದಕ್ಕೊಪ್ಪಿ ಸ್ವರ್ಗವನ್ನು ಹೆಗಲ ಮೇಲೆ ಹೊತ್ತುಕೊಂಡ. “ಬೇಗನೇ ಸುತ್ತಿಕೋ” ಎಂದು ಹರ್ಕ್ಯುಲಸನಿಗೆ ಹೇಳಿದ. ಹರ್ಕ್ಯುಲಸ್ ನಗುತ್ತಾ, “ಅಯ್ಯಾ ಅಟ್ಲಾಸ್! ನಿನ್ನ ಉಪಕಾರಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಿನಗೆ ನಮಸ್ಕಾರ” ಎಂದು ಹೇಳಿ ಅಲ್ಲಿಂದ ಹೊರಟುಹೋದ!
ಅಂದಹಾಗೆ, ಇದು ಹರ್ಕ್ಯುಲಸನ ಹನ್ನೊಂದನೇ ಸಾಹಸ. ಈತನ ಒಟ್ಟು ಹನ್ನೆರಡು ಸಾಹಸಗಳು ಗ್ರೀಕ್ ಪುರಾಣದಲ್ಲಿವೆ. ತನಗೆ ವಹಿಸಲ್ಪಟ್ಟಿದ್ದ ಸಾಹಸ ಕಾರ್ಯಗಳೆಲ್ಲವನ್ನೂ ಹರ್ಕ್ಯುಲಸ್ ಲೀಲಾಜಾಲವಾಗಿ ಮಾಡಿಮುಗಿಸುತ್ತಿದ್ದ. ಈ ಕಥನದ ಹಿನ್ನೆಲೆಯಲ್ಲಿಯೇ ಕಠಿಣತರ – ಚಾಕಚಕ್ಯತೆಯ ಕೆಲಸಗಳಿಗೆ ‘ಹರ್ಕ್ಯೂಲಿಯನ್ ಟಾಸ್ಕ್’ ಎಂದು ಹೆಸರಾಗಿರುವುದು.