ಶಿಬಿ ಚಕ್ರವರ್ತಿಯ ಕಥೆಯು ತ್ಯಾಗ ಮತ್ತು ನ್ಯಾಯಪರಿಪಾಲನೆಯ ಉತ್ಕೃಷ್ಟ ಉದಾಹರಣೆಯಾಗಿ ನೆನೆಯಲ್ಪಡುತ್ತದೆ.
ಪ್ರಪ್ರಾಚೀನ ಕಾಲದಲ್ಲಿ ಶಿಬಿ ಎಂಬ ಹೆಸರಿನ ಚಕ್ರವರ್ತಿಯು ದಾನ ಧರ್ಮಗಳನ್ನು ಮಾಡುತ್ತಾ ತನ್ನ ರಾಜ್ಯವನ್ನು ಆಳುತ್ತಿದ್ದನು. ಅವನು ತ್ಯಾಗಕ್ಕೆ ಪ್ರಸಿದ್ಧನಾಗಿದ್ದನು. ಅವನು ಯಾರೇ ಏನೇ ಕೇಳಿ ಬಂದರೂ ಇಲ್ಲ ಎಂದು ಹೇಳುತ್ತಿರಲಿಲ್ಲ. ಇವನ ಪ್ರಸಿದ್ಧಿಯು ಎಲ್ಲೆಡೆ ಹರಡಿ ಕೊನೆಗೆ ದೇವತೆಗಳನ್ನು ತಲುಪಿತು. ಇವನ ತ್ಯಾಗಬುದ್ಧಿಯ ತೀವ್ರತೆಯನ್ನು ಪರೀಕ್ಷಿಸಬೇಕೆಂದು ಇಂದ್ರ ಮತ್ತು ಯಮಧರ್ಮರು ಆಲೋಚಿಸಿ ಒಂದು ತಂತ್ರವನ್ನು ಹೂಡಿದರು. ಯಮಧರ್ಮನು ಗಿಡುಗನ ಅವತಾರವಾಗಿಯೂ ಇಂಧ್ರನು ಪಾರಿವಾಳವಾಗಿಯೂ ಅವತಾರವೆತ್ತಿ ಶಿಬಿ ಚಕ್ರವರ್ತಿಯ ರಾಜ್ಯದೊಳಗೆ ಪ್ರವೇಶಿಸಿದರು.
ಒಂದು ದಿನ ಶಿಬಿ ಚಕ್ರವರ್ತಿಯು ರಾಜಸಭೆಯಲ್ಲಿದ್ದಾಗ ಭಯಭೀತವಾಗಿದ್ದ ಒಂದು ಪಾರಿವಾಳವು ಶಿಬಿ ಚಕ್ರ ವರ್ತಿಯ ಸಿಂಹಾಸನದ ಬಳಿ ಬಂದು ಕುಳಿತುಕೊಂಡಿತು. “ಮಹಾಪ್ರಭೂ! ನನ್ನನ್ನು ಕಾಪಾಡಿ!! ಗಿಡುಗವು ನನ್ನನ್ನು ಹಿಡಿದು ತಿನ್ನಲೆಂದು ಅಟ್ಟಿಸಿಕೊಂಡು ಬರುತ್ತಿದೆ. ನಾನು ಪ್ರಾಣಭಯದಿಂದ ತತ್ತರಿಸಿ ಹೋಗಿದ್ದೇನೆ. ದಯಾಮಯರಾದ ತಾವು ನನಗೆ ಆಶ್ರಯ ನೀಡಿ ಕಾಪಾಡಬೇಕು” ಎಂದು ಮೊರೆಯಿಟ್ಟಿತು.
ಶಿಬಿ ಚಕ್ರವರ್ತಿಯು ಕನಿಕರದಿಂದ ಆ ಪಕ್ಷಿಯನ್ನು ಎತ್ತಿಕೊಂಡು ತನ್ನ ತೊಡೆಯ ಮೇಲೆ ಇರಿಸಿಕೊಂಡು ಅದರ ತಲೆಯನ್ನು ನೇವರಿಸತೊಡಗಿದನು. ಪಾರಿವಾಳವು ಶಿಬಿ ಚಕ್ರವರ್ತಿಯ ಔದಾರ್ಯವನ್ನು ಮೆಚ್ಚಿ ಆತನ ತೊಡೆಯ ಮೇಲೆ ನಿರ್ಭಯದಿಂದ ಕುಳಿತುಕೊಂಡಿತು. ಅಷ್ಟರಲ್ಲಿ ಗಿಡುಗವು ತನ್ನ ಆಹಾರವನ್ನು ಹುಡುಕುತ್ತಾ ರಾಜಸಭೆಯೊಳಗೆ ಪ್ರವೇಶಿಸಿತು.
ಗಿಡುಗವು ತನ್ನ ಆಹಾರವಾಗಬೇಕಿರುವ ಪಾರಿವಾಳವು ಶಿಬಿ ಚಕ್ರವರ್ತಿಯ ತೊಡೆಯ ಮೇಲೆ ಕುಳಿತಿರುವುದನ್ನು ಕಂಡಿತು. ಅದು ಚಕ್ರವರ್ತಿಯ ಬಳಿ ಬಂದು “ಮಹಾಪ್ರಭೂ, ನಾನು ನನ್ನ ಆಹಾರಕ್ಕಾಗಿ ಈ ಪಾರಿವಾಳವನ್ನು ಅಟ್ಟಿಸಿಕೊಂಡು ಇಲ್ಲಿಯವರೆಗೂ ಬಂದಿದ್ದೇನೆ. ಹಸಿವಿನಿಂದ ವಿಪರೀತ ಬಳಲಿದ್ದೇನೆ. ನಿಮ್ಮ ತೊಡೆಯ ಮೇಲೆ ಕುಳಿತಿರುವ ಪಕ್ಷಿಯು ನನ್ನ ಆಹಾರವಾಗಿದೆ. ಅದನ್ನು ದಯವಿಟ್ಟು ನನಗೆ ಕೊಟ್ಟು ನನ್ನನ್ನು ಹಸಿವಿನ ಸಂಕಟದಿಂದ ಮುಕ್ತಗೊಳಿಸಿರಿ” ಎಂದು ಪ್ರಾರ್ಥಿಸಿತು.
ಆಗ ಶಿಬಿ ಚಕ್ರವರ್ತಿಯು ನಾನು ಈ ಪಕ್ಷಿಗೆ ಅಭಯವನ್ನಿತ್ತಿದ್ದೇನೆ. ಏನೇ ಆದರೂ ಸರಿ, ಅದನ್ನು ನಿನಗೆ ಬಿಟ್ಟು ಕೊಡಲಾಗದು ಅಂದುಬಿಟ್ಟನು. ಆಗ ಗಿಡುಗವು, “ಚಕ್ರವರ್ತಿಯೇ, ನೀನು ಧರ್ಮಾಚರಣೆಗೆ ಮತ್ತು ತ್ಯಾಗಕ್ಕೆ ಪ್ರಸಿದ್ಧನಾಗಿರುವೆ. ನಿನ್ನ ಬಳಿಗೆ ಹಸಿದು ಬಂದಿರುವವರಿಗೆ ನ್ಯಾಯವಾಗಿ ಸಿಗಬೇಕಾದ ಆಹಾರವು ಸಿಗದಂತೆ ಮಾಡುವುದು ನ್ಯಾಯವೇ?” ಎಂದು ಪ್ರಶ್ನಿಸಿತು.
ಶಿಬಿ ಚಕ್ರವರ್ತಿಯು ಒಂದೆರಡು ನಿಮಿಷ ಆಲೋಚಿಸಿದನು. ಪಾರಿವಾಳಕ್ಕೆ ಅಭಯವನ್ನಿತ್ತು ಆಶ್ರಯ ನೀಡಿದ ಬಳಿಕ ಅದನ್ನು ಶತ್ರುವಿನ ಕೈಗೊಪ್ಪಿಸುವುದು ನೀತಿ ಬಾಹಿರವಾಗಿದೆ. ಆದರೆ ಹಸಿದು ಬಂದಿರುವ ಪಕ್ಷಿಯ ಆಹಾರವನ್ನು ತಪ್ಪಿಸಿದಂತೆಯೂ ಆಗಿದೆ. ಈಗೇನು ಮಾಡಲಿ? ಎನ್ನುವ ಉಭಯ ಸಂಕಟದಲ್ಲಿ ಸಿಲುಕಿದನು. ಸಾಕಷ್ಟು ಯೋಚಿಸಿದ ನಂತರ ಗಿಡುಗನನ್ನು ಕುರಿತು, “ನಿನ್ನ ಹಸಿವನ್ನು ಹಿಂಗಿಸಲು ಪಾರಿವಾಳದ ತೂಕದಷ್ಟೇ ಮಾಂಸವನ್ನು ನನ್ನ ದೇಹದಿಂದ ತೆಗೆದು ನಿನಗೆ ಒಪ್ಪಿಸುವೆ. ನಿನ್ನ ಹಸಿವೂ ಇಂಗುವುದು, ನನ್ನಲ್ಲಿ ಅಭಯ ಕೋರಿ ಬಂದ ಪಾರಿವಾಳವೂ ಉಳಿಯುವುದು” ಎಂದನು. ಇದಕ್ಕೆ ಗಿಡುಗವು ಒಪ್ಪಿ ಕೊಂಡಿತು.
ರಾಜಸಭೆಯು ಈ ಅನಿರೀಕ್ಷಿತ ಘಟನೆಯನ್ನು ಕಾತರದಿಂದ ವೀಕ್ಷಿಸುತ್ತಿತ್ತು. ಚಕ್ರವರ್ತಿಯು ಒಂದು ಖಡ್ಗವನ್ನು ಮತ್ತು ಒಂದು ತಕ್ಕಡಿಯನ್ನು ತರಲು ಸೇವಕರಿಗೆ ಆಜ್ಞಾಪಿಸಿದನು. ತಕ್ಕಡಿಯ ಒಂದು ತಟ್ಟೆಯಲ್ಲಿ ಪಾರಿವಾಳವನ್ನು ಇಟ್ಟು, ತನ್ನ ಎಡ ತೋಳನ್ನು ತುಂಡರಿಸಿ ತಕ್ಕಡಿಯಲ್ಲಿ ಹಾಕಿದನು. ಆದರೆ ಪಾರಿವಾಳವಿದ್ದ ತಕ್ಕಡಿ ಮೇಲೇಳಲಿಲ್ಲ. ಶಿಬಿಯು ತನ್ನ ಬಲ ತೊಡೆಯ ಮಾಂಸವನ್ನು ಕತ್ತರಿಸಿ ಹಾಕಿದನು ಆಗಲೂ ತಕ್ಕಡಿ ಮೇಲೇಳಲಿಲ್ಲ. ನಂತರ ತನ್ನ ಎಡ ತೊಡೆಯನ್ನೂ ಕತ್ತರಿಸಿ ಹಾಕಿದನು. ಏನು ಹಾಕಿದರೂ ಎಷ್ಟು ಹಾಕಿದರೂ ತಕ್ಕಡಿ ಮೇಲೇರಲಿಲ್ಲ.
ಅಗ ಶಿಬಿ ಚಕ್ರವರ್ತಿಯು ತನ್ನ ಶಿರವನ್ನೇ ಕತ್ತರಿಸಿ ತಕ್ಕಡಿಯಲ್ಲಿಡಲು ನಿರ್ಧರಿಸಿದನು. ಆಗ “ನಿಲ್ಲು ಶಿಬಿ!!” ಎಂಬ ಉದ್ಗಾರ ಕೇಳಿಸಿತು. ಮಿಂಚು ಹೊಳೆದು ಗಿಡುಗನು ಯಮಧರ್ಮನಾಗಿಯೂ, ಪಾರಿವಾಳವು ಇಂದ್ರನಾಗಿಯೂ ಪ್ರತ್ಯಕ್ಷರಾದರು.
ಶಿಬಿ ಚಕ್ರವರ್ತಿಯು ಆಶ್ಚರ್ಯದಿಂದ ನೋಡುತ್ತಿರುವಾಗಲೇ ಅವನು ಕತ್ತರಿಸಿಟ್ಟ ದೇಹದ ಭಾಗಗಳೆಲ್ಲ ಅವನನ್ನು ಕೂಡಿಕೊಂಡವು. ಯಮ, ಇಂದ್ರು “ಚಕ್ರವರ್ತಿ! ನಿನ್ನ ತ್ಯಾಗಬುದ್ಧಿಯನ್ನು ಪರೀಕ್ಷಿಸಲೆಂದು ಈ ನಾಟಕ ಹೂಡಿದೆವು. ನಿಜಕ್ಕೂ ನೀನು ಮಹಾತ್ಮನಿದ್ದೀಯ. ನಿನಗೆ ಮಂಗಳವಾಗಲಿ. ನಿನ್ನ ನ್ಯಾಯ ಪರಿಪಾಲನೆಯು ಎಲ್ಲೆಡೆ ಹರಡಲಿ” ಎಂದು ಆಶೀರ್ವದಿಸಿ ಅಂತರ್ಧಾನರಾದರು.