ಝೂಸಿಯಾನ ಬೇಸರಕ್ಕೆ ಕಾರಣವೇನು? : ಸೂಫಿ ಕಥೆ

ಸೂಫೀ ಅನುಭಾವಿ ಝೂಸಿಯಾ ಸಾವಿನ ಹಾಸಿಗೆಯಲ್ಲಿದ್ದ. ಒಂದು ಮುಂಜಾನೆ ಆತ ಭಗವಂತನನ್ನು ಪ್ರಾರ್ಥಿಸತೊಡಗಿದ. ಅವನ ಕಣ್ಣುಗಳಲ್ಲಿ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಆತ ಕಂಪಿಸುತ್ತಿದ್ದ.
ಈ ದೃಶ್ಯವನ್ನು ನೋಡಿದ ಶಿಷ್ಯನೊಬ್ಬ ಪ್ರಶ್ನೆ ಮಾಡಿದ.
“ ಯಾಕೆ? ಏನಾಯ್ತು ? ಯಾಕಿಷ್ಟು ತೀವ್ರವಾಗಿ ಕಂಪಿಸುತ್ತಿದ್ದೀರಿ?”

ಝೂಸಿಯಾ ಉತ್ತರಿಸಿದ.
“ ನನ್ನ ಈ ಪರಿಸ್ಥಿತಿಗೆ ಕಾರಣವಿದೆ, ನಾನು ಸಾವಿಗೆ ಹತ್ತಿರವಾಗಿದ್ದೇನೆ. ಇನ್ನೇನು ಕೆಲವೇ ಕೆಲವು ಕ್ಷಣಗಳಲ್ಲಿ ನಾನು ಸಾಯಬಹುದು. ನಾನು ಸತ್ತು, ಭಗವಂತನ ಮುಂದೆ ಹೋಗಿ ನಿಂತಾಗ ಅವ, “ ಯಾಕೆ ಝೂಸಿಯಾ, ನೀನು ಮೋಸೆಸ್ ಹಾಗೆ ಬದುಕಲಿಲ್ಲ ?” ಅಂತ ಪ್ರಶ್ನೆ ಕೇಳಿದರೆ, ನನ್ನ ಹತ್ತಿರ ಉತ್ತರವಿದೆ.
“ ಭಗವಂತಾ, ನೀನು ನನಗೆ ಮೋಸೆಸ್ ನ ಗುಣ ವಿಶೇಷಣಗಳನ್ನು ನನಗೆ ದಯಪಾಲಿಸಲಿಲ್ಲ” ಎಂದು ಉತ್ತರಿಸುತ್ತೇನೆ.

ಅಕಸ್ಮಾತ್ ಭಗವಂತ “ ಯಾಕೆ ನೀನು ಅಕೀಬಾನ ಥರ ಬಾಳಲಿಲ್ಲ ?” ಎಂದರೆ ಅದಕ್ಕೂ ನನ್ನ ಹತ್ತಿರ ಉತ್ತರವಿದೆ. ಭಗವಂತ ನನಗೆ ಅಕೀಬಾನ ಸ್ವಭಾವಗಳನ್ನೂ ದಯಪಾಲಿಸಿಲ್ಲ.

ಆದರೆ ಅವನೇನಾದರೂ ನನಗೆ “ ಝೂಸಿಯಾ, ಯಾಕೆ ನೀನು ಝೂಸಿಯಾನ ಹಾಗೆ ಬದುಕಲಿಲ್ಲ” ಎಂದು ಕೇಳಿದರೆ, ಏನು ಉತ್ತರ ಕೊಡಲಿ? ಅದಕ್ಕೇ ನನ್ನ ಕಣ್ಣಲ್ಲಿ ನೀರು, ಅದಕ್ಕೇ ನಾನು ನಡಗುತ್ತಿದ್ದೇನೆ. ನನ್ನ ಜೀವನವಿಡೀ ನಾನು ಮೋಸೆಸ್ ಥರ, ಅಕೀಬಾ ಥರ ಬದುಕಲು ಪ್ರಯತ್ನ ಮಾಡಿದೆ. ಆದರೆ ಭಗವಂತ ನನ್ನನ್ನು ಝೂಸಿಯಾ ಥರ ಬಾಳಲು ಹುಟ್ಟಿಸಿದ್ದಾನೆ, ಝೂಸಿಯಾನ ಎಲ್ಲ ಗುಣ ವಿಶೇಷಣಗಳನ್ನೂ ದಯಪಾಲಿಸಿ ಆಶೀರ್ವದಿಸಿದ್ದಾನೆ ಎನ್ನುವುದು ಮರೆತೇ ಹೋಗಿತ್ತು. ಹೇಗೆ ಅವನ ಮುಂದೆ ಹೋಗಿ ನಿಲ್ಲಲಿ? ಹೇಗೆ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಲಿ? ಭಯವಾಗುತ್ತಿದೆ ನನಗೆ.

ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

Leave a Reply