ತಳವಿಲ್ಲದ ಕೊಳವಾಗಬೇಕು… : ಝೆನ್ ತಿಳಿವು

ಈ ತಳವಿಲ್ಲದ ನಿಗೂಢ ಕೊಳದಾಚೆ ತುದಿಯಲ್ಲಿ ಸತ್ಯ ದರ್ಶನವಾಗುವುದು. ಅದರ ಹಾದಿಗುಂಟದ ನಡಿಗೆಯ ಅನುಭವ ಅತ್ಯಂತ ರಹಸ್ಯ. ಈ ಕೊಳದಲ್ಲಿ ನೀರು ಇರುವಂತೆ ತೋರುವುದಷ್ಟೆ. ಆದರೆ ವಾಸ್ತವದಲ್ಲಿ ಇರದು ~ ಅಲಾವಿಕಾ

tao2

ತಳವಿಲ್ಲದಾಳಕ್ಕೆ ಒಂದು ಕಲ್ಲು,
ಕಂಪನಕ್ಕೆ ಕಾಯೋದು ಎಂಥ ಮರುಳು!

ಝೆನ್ ತಳವಿಲ್ಲದ ಕೊಳದ ಬಗ್ಗೆ ಹೇಳುತ್ತೆ. ಎಲ್ಲ ಕೊಳದ ಕೊಳ, ತಳವಿಲ್ಲದಾಳದ ಕೊಳ; ಎಲ್ಲ ರಹಸ್ಯಗಳ ಹೆಬ್ಬಾಗಿಲು ತಾನು ಎಂದು ಹೇಳಿಕೊಳ್ಳುತ್ತೆ ಝೆನ್.

ತಳವಿಲ್ಲದಾಳ… ಬಹುಶಃ ಅದರ ಆಚೆ ತುದಿ ಮುಕ್ತವಾಗಿಯೇ ಇದೆಯೇನೋ. ಅದಂತೂ ಸಧ್ಯಕ್ಕೆ ಕಾಣುತ್ತಿಲ್ಲ. ಯಾವುದು ತಳವುಳ್ಳದ್ದಾಗಿರುತ್ತದೆಯೋ ಅಲ್ಲಿ ಗಾಳಿಯನ್ನೋ ನೀರನ್ನೋ ತುಂಬಿಸಬಹುದು. ಹಾಗೆ ತುಂಬಿಕೊಂಡಿರುವ ವಸ್ತುವಿಗೆ ಕಲ್ಲನ್ನೋ ಮತ್ತೇನನ್ನೋ ಒಗೆದರೆ ಅಲ್ಲಿ ಕಂಪನಗಳು ಏಳುವವು. ಅದು ಸಹಜ. ಎಲ್ಲಿ ತಳವೇ ಇಲ್ಲವೋ ಅಂತಹ ವಸ್ತು ಹೇಗೆ ತಾನೆ ಏನನ್ನಾದರೂ ಹಿಡಿದಿಟ್ಟುಕೊಳ್ಳಲು ಸಾಧ್ಯ? ಆ ವಸ್ತುವಿನ ಮೂಲಕ ಹಾದು ಹೋಗಬಹುದು ಅಷ್ಟೆ. ಅಲ್ಲಿ ನೀರಾಗಲೀ ಗಾಳಿಯಾಗಲೀ ಇರಲಾಗದು. ಅಂತಲ್ಲಿಗೆ ಕಲ್ಲು ಬೀಸಿದರೆ ಯಾವ ಕಂಪನವೂ ಸಾಧ್ಯವಾಗದು.

ಈ ತಳವಿಲ್ಲದ ನಿಗೂಢ ಕೊಳದಾಚೆ ತುದಿಯಲ್ಲಿ ಸತ್ಯ ದರ್ಶನವಾಗುವುದು. ಅದರ ಹಾದಿಗುಂಟದ ನಡಿಗೆಯ ಅನುಭವ ಅತ್ಯಂತ ರಹಸ್ಯ. ಈ ಕೊಳದಲ್ಲಿ ನೀರು ಇರುವಂತೆ ತೋರುವುದಷ್ಟೆ. ಆದರೆ ವಾಸ್ತವದಲ್ಲಿ ಇರದು.

ನಮ್ಮ ಈ ದೇಹವೂ ಹಾಗೇನೆ. ನಮ್ಮ ಆತ್ಮವು ಈ ದೇಹದ ಮೂಲಕ ಹಾದು ಹೋಗುತ್ತದೆಯಷ್ಟೆ. ಯಾವ ದೇಹವೂ ಆತ್ಮವನ್ನು ಹಿಡಿದಿಡಲಾಗದು. ಹೀಗಿರುವಾಗ ಕಲ್ಲೇಟಿನಂಥ ಕಷ್ಟಗಳಿಗೆ ಕನಲುವುದು ಏಕೆ? ಹೇಗೆ? ಏಕೆಂದರೆ ತಳವಿಲ್ಲದ ಕೊಳದಲ್ಲಿ ನೀರನ್ನು ಭ್ರಮಿಸಿದಂತೆ ನಾವು ದೇಹಕ್ಕೆ ಅಂಟಿಕೊಂಡ ಆತ್ಮವನ್ನು ಭ್ರಮಿಸುತ್ತೇವೆ. ಹೊರಗಿನ ವಸ್ತುಗಳ ನೆವ ಮಾಡಿಕೊಂಡು ನಮ್ಮ ಭ್ರಮೆಗಳಿಗೆ ನಾವೆ ಅದರುತ್ತೇವೆ.

ಅದಕ್ಕೇ ಖಾಲಿಯಾಗಬೇಕು. ಖಾಲಿಯಾಗಬೇಕೆಂದರೆ, ನಮ್ಮ ಅಹಂಕಾರವೆಂಬ ತಳವನ್ನು ಕಿತ್ತೊಗೆಯಬೇಕು. ಆಗ ಮಾತ್ರವೇ ಅಲ್ಲಿ ಆತ್ಮದ ಪಯಣ ರಹಸ್ಯಾನುಭವಗಳನ್ನು ಪಡೆಯುತ್ತ ಸಾಗುವುದು, ಸತ್ಯ ದರ್ಶನವಾಗುವುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.