ಝೆನ್ ಮಾಸ್ಟರ್ ನ ಆಶ್ರಮದಲ್ಲಿ ಝೆನ್ ಅಭ್ಯಾಸ ಮಾಡುತ್ತಿದ್ದ ಒಬ್ಬ ಯುವ ಸನ್ಯಾಸಿ ತನ್ನ ಕಲಿಕೆಯ ಅವಧಿ ಮುಗಿಯುತ್ತಿದ್ದಂತೆಯೇ ದೇಶಾಂತರ ಹೊರಟು ಬಿಟ್ಟ. ಸುತ್ತಾಟದಲ್ಲಿ ತಾನು ಕಂಡದ್ದನ್ನ ಮತ್ತು ತನ್ನ ಅಧ್ಯಾತ್ಮ ಕಲಿಕೆಯ ಪ್ರಗತಿಯನ್ನು ಪತ್ರದ ಮೂಲಕ ಮಾಸ್ಟರ್ ಗೆ ತಿಳಿಸಬೇಕೆಂದು ಬಯಸಿದ.
ಆಶ್ರಮ ಬಿಟ್ಟು ಒಂದು ತಿಂಗಳಾದ ಮೇಲೆ ಮಾಸ್ಟರ್ ಗೆ ಮೊದಲ ಪತ್ರ ಬರೆದ “ಮಾಸ್ಟರ್, ನನ್ನ ಪ್ರಜ್ಞೆ ವಿಸ್ತಾರಗೊಳ್ಳುತ್ತಿದೆ, ಬ್ರಹ್ಮಾಂಡದೊಂದಿಗೆ ಒಂದಾಗುತ್ತಿರುವ ಹಾಗೆ ಅನುಭವವಾಗುತ್ತಿದೆ”
ಪತ್ರ ಓದುತ್ತಿದ್ದಂತೆಯೇ ಮಾಸ್ಟರ್, ಪತ್ರ ಬಿಸಾಕಿ ಬಿಟ್ಟ.
ಎರಡನ್ ತಿಂಗಳ ಪತ್ರದಲ್ಲಿ ಶಿಷ್ಯ ಹೀಗೆ ಬರೆದಿದ್ದ, “ ಸಮಸ್ತ ಚರಾಚರಗಳಲ್ಲಿ ಹುದುಗಿರುವ ದೈವಿಕತೆಯನ್ನು ನಾನು ಕಂಡುಕೊಂಡೆ”
ಪತ್ರ ಓದಿ ಮಾಸ್ಟರ್ ಗೆ ತೀವ್ರ ಹತಾಶೆಯಾಯಿತು.
ಒಂದು ತಿಂಗಳ ನಂತರ ಮತ್ತೆ ಪತ್ರ ಬಂತು
“ ಪ್ರಕೃತಿಯ ರಹಸ್ಯ ನನ್ನ ದಿವ್ಯ ದೃಷ್ಟಿಗೆ ಗೋಚರವಾಯಿತು”
ಪತ್ರ ಓದಿ ಮಾಸ್ಟರ್, ಆಕಳಿಸಿದ.
ಎರಡು ತಿಂಗಳ ನಂತರ ಬಂದ ಪತ್ರದಲ್ಲಿ ಹೀಗೆ ಬರೆದಿತ್ತು “ ಯಾರೂ ಹುಟ್ಟಿಲ್ಲ, ಯಾರೂ ಬದುಕುತ್ತಿಲ್ಲ, ಯಾರೂ ಸಾಯುವುದೂ ಇಲ್ಲ, ಏಕೆಂದರೆ ಆತ್ಮ ಒಂದು ಭ್ರಮೆ”
ಮಾಸ್ಟರ್ ಗೆ ಎಷ್ಟು ನಿರಾಶೆಯಾಯಿತೆಂದರೆ ಛೇ ಎನ್ನುತ್ತ ಗಾಳಿಯಲ್ಲಿ ತನ್ನ ಕೈ ತೂರಿದ.
ಹೀಗೇ ಒಂದು ವರ್ಷ ಕಳೆಯಿತು, ಶಿಷ್ಯನಿಂದ ಪತ್ರಗಳು ಬರುತ್ತಲೇ ಇದ್ದವು. ಮಾಸ್ಟರ್ ಗೆ ಸಮಾಧಾನವಾಗಲಿಲ್ಲ, ಶಿಷ್ಯನ ಕರ್ತವ್ಯಗಳನ್ನು ನೆನಪಿಸುತ್ತ, ಅವನ ಅಧ್ಯಾತ್ಮದ ಹಾದಿಯಲ್ಲಿನ ಸಮಸ್ಯೆಗಳನ್ನು ವಿವರಿಸಿ ಪತ್ರ ಬರೆದ.
ಶಿಷ್ಯ ತಿರುಗಿ ಉತ್ತರ ಬರೆದ “ ನಿಮ್ಮ ತಿಳುವಳಿಕೆ ಯಾರಿಗೆ ಬೇಕು?”
ಈ ಉತ್ತರ ಓದುತ್ತಿದ್ದಂತೆಯೇ, ಮಾಸ್ಟರ್ ಮುಖದಲ್ಲಿ ತೃಪ್ತಿ ಕಾಣಿಸಿಕೊಂಡಿತು.
“ ಓಹ್! ಕೊನೆಗೂ ತಿಳಿದುಕೊಂಡುಬಿಟ್ಟ”
ತುಂಬಾ ಮನಮುಟ್ಟುವ ಕನ್ನಡದ್ದೆ ಎನಿಸುವ ಕತೆಗಳು.ನನಗೊಂದು ಪುಸ್ತಕ ಸಿಗಬಹುದೆ.google pay ಮೂಲಕ ಹಣ ಪಾವತಿಸುವೆ.ನನ್ನ ಮೊ.ನಂ9341732990 ದಯವಿಟ್ಟು Whatsapp ಮೂಲಕ ತಿಳಿಸಿ.
Namaste. Khandita.