ಹೊರ ಹೊಮ್ಮು : ತಾವೋ ಧ್ಯಾನ ~ 6

ಬೀಜವೊಂದು ಮೊಳಕೆಯೊಡೆದಾಗ ಅದು ತನ್ನೊಳಗೆ ತನ್ನ ಬೆಳವಣಿಗೆಯ ನೀಲಿ ನಕ್ಷೆಯನ್ನು ಹೊತ್ತುಕೊಂಡೇ ಹೊರಹೊಮ್ಮಿರುತ್ತದೆ, ಮುಂದೆ ಬೆಳೆದು ಮಹಾವೃಕ್ಷವಾಗುವ ಸುಳುಹುಗಳ ಸಹಿತ… ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao6

ರಾತ್ರಿಯಿಡೀ ಗುಡುಗು, ಮಳೆ
ಚಿಪ್ಪೊಡೆಯಿತು ಮಿಂಚಿನಂತೆ
ಸ್ವಭಾವ ಮತ್ತು ಕಾಲ, ಎಲ್ಲವೂ
ಆ ಮೊದಲ ಘಳಿಗೆಯಲ್ಲಿಯೇ ಸ್ಪಷ್ಟ

ಸದಾ ಕಾಲ ಪ್ರಶಾಂತತೆಯಲ್ಲಿರುವುದು ಸಾಧ್ಯವಿಲ್ಲದ ಮಾತು. ಚಳಿಗಾಲದ ಬಿರುಗಾಳಿ ಕೆಲವು ಜೀವಗಳನ್ನು ನಾಶಮಾಡುವುದು ಹೌದಾದರೂ, ಕೆಲವು ಜೀವಗಳ ಹೊಸ ಬದುಕಿಗೆ ದಾರಿ ಮಾಡಿಕೊಡುತ್ತವೆ ಕೂಡ. ಕೆಲವು ಜೀವಗಳು ಕಳಚಿಕೊಂಡು ಗಾಳಿಯಲ್ಲಿ ತೂರಿಕೊಳ್ಳುವುದು ಸಹ ತುಂಬ ಸಹಜ. ಹೊಸ ಜೀವಗಳು ಹೊರಹೊಮ್ಮಲು ಮತ್ತು ಅವುಗಳ ಜೀವನ ಚಕ್ರವನ್ನು ಪೂರ್ತಿ ಬಾಳಲು ಸಾಕಷ್ಟು ಅವಕಾಶವಿರಬೇಕಾದುದು ಅತ್ಯವಶ್ಯ.

ಚಿಪ್ಪೊಡೆಯುವ ಕ್ರಿಯೆಯೇ ಮಿಂಚಿನಂಥದು ದಿಗ್ಭ್ರಮೆಯಿಂದ ಕೂಡಿರುವಂಥದು. ಬೀಜ, ಮೊಳಕೆಯೊಡೆದು ಹೊರಬಂದು ಆಕಾಶವನ್ನು ದಿಟ್ಟಿಸುವ ಕ್ರಿಯೆ, ಆಳದಲ್ಲಿ ಹುದುಗಿಕೊಂಡಿರುವ ಜೀವಶಕ್ತಿಯೊಂದು ತನ್ನನ್ನು ತಾನು ಅಭಿವ್ಯಕ್ತಿಸಲು ನಡೆಸಿದ ಹೋರಾಟದ ಚರಮಸೀಮೆ. ಈ ಚಿಪ್ಪೊಡೆಯುವ ಕ್ರಿಯೆ ನಮಗೆ ಸಹಜ ಅನಿಸಬಹುದು ಆದರೆ ಇದು ನಮ್ಮ ಅನುಭವಕ್ಕೆ ಬರದ ಸೂಕ್ಷ್ಮ ಕಾರ್ಯಾಚರಣೆಯೊಂದರ ಪ್ರತಿಫಲ.

ಬೀಜವೊಂದು ಮೊಳಕೆಯೊಡೆದಾಗ ಅದು ತನ್ನೊಳಗೆ ತನ್ನ ಬೆಳವಣಿಗೆಯ ನೀಲಿ ನಕ್ಷೆಯನ್ನು ಹೊತ್ತುಕೊಂಡೇ ಹೊರಹೊಮ್ಮಿರುತ್ತದೆ, ಮುಂದೆ ಬೆಳೆದು ಮಹಾವೃಕ್ಷವಾಗುವ ಸುಳುಹುಗಳ ಸಹಿತ. ಬೀಜ ಬೆಳೆದು ಮಹಾ ವೃಕ್ಷವಾಗಲು ಸಮಯ ಮತ್ತು ಸುತ್ತ ಮುತ್ತಲಿನ ಸೂಕ್ತ ವಾತಾವರಣ ಸಹಾಯ ಮಾಡುತ್ತವೆ ನಿಜ ಆದರೆ ಇವೆರಡೂ ಮೊಳಕೆಯ ಒಳಗಿನ ಅದರ ಸಹಜ ಸ್ವಭಾವದ ಮೇಲೆ ಯಾವ ಪ್ರಭಾವವನ್ನೂ ಬೀರುವುದಿಲ್ಲ. ಬೀಜ ತನ್ನ ನಿಯತಿಯನ್ನು ತನ್ನೊಳಗೆ ಸಂಪೂರ್ಣವಾಗಿ ಹುದುಗಿಸಿಕೊಂಡಿರುತ್ತದೆ. ಆದ್ದರಿಂದಲೇ ವೃಕ್ಷದ ಸ್ವಭಾವ , ಗುಣ ಲಕ್ಷಣ ಹಾಗು ಅದರ ಜೀವ ಶಕ್ತಿ ಎಲ್ಲವೂ ಅದು ಬೀಜದಿಂದ ಹೊರಹೊಮ್ಮುವ ಆ ದಿವ್ಯ ಘಳಿಗೆಯಲ್ಲಿಯೇ ಹಾಜರಾತಿಯಲ್ಲಿರುತ್ತವೆ.

ತನ್ನ ಮತ್ತು ಗುಹೇಶ್ವರನ ನಡುವಿನ ಅವಿನಾಭಾವ ಸಂಬಂಧವನ್ನು ಪ್ರಭು ಹೀಗೆ ಅದ್ಭುತವಾಗಿ ವರ್ಣಿಸುತ್ತಾನೆ.

ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಶಬ್ದದಂತೆ
ಗುಹೇಶ್ವರ, ನಿಮ್ಮ ಶರಣ ಸಂಬಂಧ.

ಜೀವ-ದೇವರ ಸಂಬಂಧವನ್ನು ಬೇಂದ್ರೆ ಕೂಡ ಬೀಜ- ವೃಕ್ಷದ ರೂಪಕವನ್ನು ಬಳಸಿಯೇ ಹಾಡುತ್ತಾರೆ.
ಬೀಜದಲ್ಲಿ ಅಡಗಿಹುದು ಮರವು; ಮರ-
-ದಲ್ಲಿ ಅಡಗಿ ಬೀಜ
ತೇಜವೆಂಬ ಬಸಿರಲ್ಲೇ ಕತ್ತಲಿದೆ
ಕತ್ತಲಲ್ಲೇ ತೇಜ.

Leave a Reply