ಋತುಮಾನ ಮತ್ತು ಕಾಯಕದ ಸ್ವಭಾವ ಅರಿತು ಕಾಯಕಕ್ಕಿಳಿದಾಗ ಅದು ಕಾಯಕವೂ ಹೌದು ಪ್ರೇಮವೂ ಹೌದು ~ ~ ಡೆಂಗ್ ಮಿಂಗ್ ದಾವೋ | ಚಿದಂಬರ ನರೇಂದ್ರ
ಕಟ್ಟಿಗೆ ಕತ್ತರಿಸುವವನ ಸಂಧಾನ
ಋತುಗಳೊಂದಿಗೆ.
ಕಟ್ಟಿಗೆ ಸೀಳುವುದು ಅವನಿಗೆ
ದುಡಿಮೆಯೂ ಹೌದು,
ದುಡಿಮೆ ಅಲ್ಲವೂ ಹೌದು.
ಹಿಮ ಸುರಿಯುತ್ತಿರುವಾಗಲೂ ಕಟ್ಟಿಗೆ ಕತ್ತರಿಸುವವನಿಗೆ ಬಿಡುವಿಲ್ಲ. ಅವನು ಕಟ್ಟಿಗೆ ಕತ್ತರಿಸದೇ ಹೋದರೆ, ಅವನು ಮತ್ತು ಅವನ ಮನೆಯವರು ಬೆಚ್ಚಗಿರಲಾರರು ಹಾಗು ಅವನನ್ನು ಅವಲಂಬಿಸಿದವರು ಕೂಡ ಸರಾಗವಾಗಿ ಉಸಿರಾಡಲಾರರು. ಆದರೆ ಕಟ್ಟಿಗೆ ಕತ್ತರಿಸುವವ ತುಂಡು ಗುತ್ತಿಗೆಯವನ ಹಾಗಲ್ಲ, ಅವನ ಯೋಜನೆ ಸಮಗ್ರ, ಋತುಗಳ ಜೊತೆಗಿನ ಅವನ ಒಪ್ಪಂದವನ್ನು ಆತ ಚಾಚೂ ತಪ್ಪದೇ ಪಾಲಿಸುತ್ತಾನೆ. ಮೊದಲ ಹಿಮ ನೆಲಕ್ಕೆ ತಾಕುವ ಮುಂಚೆಯೇ ಸಾಕಷ್ಟು ಮರ ಕತ್ತರಿಸಿ ಇಟ್ಟುಕೊಳ್ಳುತ್ತಾನೆ, ಈಗ ಅವನ ಕೆಲಸ ಕಟ್ಟಿಗೆ ಸೀಳಿ, ಕಿಡಿ ಹೊತ್ತಿಸುವುದಷ್ಟೇ. ಈಗ ಆತ ಕಾಲುಚಾಚಿಕೊಂಡು ಕೂತಿರುವವನ ಹಾಗೆ ಕಂಡರೂ ಕಳೆದ ಋತುವಿನಲ್ಲಿ ಬೆವರು ಹರಿಸಿದ್ದನ್ನ ಮರೆಯುವಂತಿಲ್ಲ.
ಕಟ್ಟಿಗೆ ಸೀಳುವಾಗ ಅವನು, ಮರದ ದಿಮ್ಮಿಯನ್ನು ನೆಲದ ಮೇಲೆ ಇಡುವುದಿಲ್ಲ ಬದಲಾಗಿ ಸೂಕ್ತವಾದ ಇನ್ನೊಂದು ಮರದ ತುಂಡಿನ ಮೇಲೆ ಇಟ್ಟು, ಕೊಡಲಿ ಎತ್ತುತ್ತಾನೆ. ಕೊಡಲಿಯಿಂದ ಪ್ರಹಾರ ಮಾಡುವಾಗ, ಮರದ ದಿಮ್ಮಿಯ ಗೆಣ್ಣುಗಳಿಗೆ ಅನುಗುಣವಾಗಿ ಪ್ರಹಾರ ಮಾಡುತ್ತಾನೆ ಮತ್ತು ಎತ್ತಿದ ಕೊಡಲಿ ತನ್ನ ಭಾರಕ್ಕೆ ತಾನೇ ಮರದ ದಿಮ್ಮಿಯ ಮೇಲೆ ಬೀಳುವಂತೆ ನೋಡಿಕೊಳ್ಳುತ್ತಾನೆ. ಮರದ ಗೆಣ್ಣುಗಳಿಗಳಿಗೆ ಲಂಬವಾಗಿ ಕೊಡಲಿಯ ಪ್ರಹಾರವಾದರೆ, ಅದು ಪ್ರಯಾಸದ ಪ್ರಯತ್ನ, ಕೊಡಲಿಯ ಭಾರದ ಜೊತೆ ಅವನು ತನ್ನ ಬಲವನ್ನೂ ಸೇರಿಸಿದರೆ ಯಾವ ಹೆಚ್ಚಿನ ಲಾಭವೂ ಇಲ್ಲ.
ಕಟ್ಟಿಗೆ ಕತ್ತರಿಸುವವನ ಹಾಗೆ ಋತುಗಳ ಜೊತೆ ಮತ್ತು ಕಟ್ಚಿಗೆಯ ಸ್ವಭಾವದ ಜೊತೆ ನಮ್ಮ ಸಮನ್ವಯ ಸಾಧ್ಯವಾಗುವುದಾದರೆ ಎಷ್ಟೊಂದು ಸಮಯ, ಶಕ್ತಿ ಉಳಿಸಬಹುದು. ನಿಜದ ದುಡಿಮೆ ಎಂದರೆ, ಅರ್ಧ ಸಂಕಲ್ಪ ಮತ್ತು ಇನ್ನರ್ಧ ದುಡಿಮೆ ಹೇಗೆ ತನ್ನನ್ನು ತಾನು ದುಡಿಸಿಕೊಳ್ಳಲು ಬಯಸುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದೇ ಆಗಿದೆ.
ಋತುಮಾನ ಮತ್ತು ಕಾಯಕದ ಸ್ವಭಾವ ಅರಿತು ಕಾಯಕಕ್ಕಿಳಿದಾಗ ಅದು ಕಾಯಕವೂ ಹೌದು ಪ್ರೇಮವೂ ಹೌದು.
ಮನುಷ್ಯ,
ಕಾಯಕಕ್ಕೆ ಮುಂದಾಗುವುದು
ಭೂಮಿಯ ಗತಿಯೊಂದಿಗೆ, ಆತ್ಮದೊಂದಿಗೆ
ಜೊತೆ ಜೊತೆಯಾಗಿ ಹೆಜ್ಜೆ ಹಾಕಲು.
ಸೋಮಾರಿಯಾಗುವುದೆಂದರೆ,
ಋತುಮಾನಗಳಿಗೆ ಅಪರಿಚಿತನಾದಂತೆ.
ಗಂಭೀರವಾಗಿ, ತಲೆ ಎತ್ತಿಕೊಂಡು
ಅಪಾರದತ್ತ ಹೆಜ್ಜೆ ಹಾಕುತ್ತಿರುವ
ಬದುಕಿನ ಮೆರವಣಿಗೆಯಿಂದ
ಹೊರಗುಳಿದಂತೆ.
ಕಾಯಕದಲ್ಲಿ ಮಗ್ನರಾದಾಗಲೇ
ನೀವು ಬದುಕಿನೊಡನೆಯ ಪ್ರಣಯದಲ್ಲಿ ಸಂಲಗ್ನರು.
: ಖಲೀಲ್ ಗಿಬ್ರಾನ್