ಸ್ವಂತದ ಕೊರತೆಗಳನ್ನು ಕೊಂದುಕೊಂಡಾಗಲೇ ಅವನ ನಿಜವಾದ ಗೆಲುವು. ಆದ್ದರಿಂದಲೇ ಹಲವಾರು ಧರ್ಮಗಳು ತಮ್ಮ ಪುರಾಣಗಳಲ್ಲಿ, ಧರ್ಮ ಗ್ರಂಥಗಳಲ್ಲಿ ಯೋಧನೊಬ್ಬನನ್ನು ನಾಯಕನಂತೆ ಬಿಂಬಿಸುತ್ತವೆ ~ ಡೆಂಗ್ ಮಿಂಗ್ ದಾವೋ | ಚಿದಂಬರ ನರೇಂದ್ರ
ಯೋಧನಾಗಲು ಶಿಸ್ತು, ಧೈರ್ಯ ಮತ್ತು ಸತತ ಪ್ರಯತ್ನ ಅತ್ಯವಶ್ಯ. ಯೋಧನಾಗುವುದೆಂದರೆ ಕೊಲೆಗಾರನಾಗುವುದಲ್ಲ. ಜನ ಸಾಮಾನ್ಯರು ಯೋಧನಾಗುವುದೆಂದರೆ ಹಿಂಸೆಯ ದಾರಿಯನ್ನು ತುಳಿಯುವುದು ಎಂದು ತಪ್ಪು ತಿಳಿದುಕೊಂಡು ಸೈನಿಕ ತರಬೇತಿಯ ಅತ್ಯುತ್ತಮ ಅಂಶಗಳನ್ನು ನಿರ್ಲಕ್ಷಿಸಿಬಿಡುತ್ತಾರೆ. ನಿಜವಾದ ಯೋಧ ಕ್ರೂರಿಯಲ್ಲ ಆತ ವೈಚಾರಿಕತೆಯ, ಸಿದ್ಧಾಂತಗಳ ಮತ್ತು ಆತ್ಮ ಗೌರವದ ರಕ್ಷಕ. ನಿಜವಾದ ಯೋಧ ಪ್ರಾಮಾಣಿಕ ಮತ್ತು ವೀರೋಚಿತ ಸ್ವ ಭಾವವನ್ನು ಮೈಗೂಡಿಸಿಕೊಂಡವ.
ನನಗೆ,
ನಿನ್ನ ಬಗ್ಗೆ ಗೊತ್ತಿರುವುದು
ಜಾಣತನವಾದರೆ
ನನ್ನ ಬಗ್ಗೆ ಗೊತ್ತಿರುವುದು
ಜ್ಞಾನ.
ನಾನು,
ನಿನ್ನ ಸೋಲಿಸುವುದು ಅಧಿಕಾರವಾದರೆ
ನನ್ನ ಗೆಲ್ಲುವುದು ಪರಮ ಶಕ್ತಿ.
ಮುನ್ನುಗ್ಗುವುದು ಹಟ
ನಿಂತಲ್ಲೇ ನಿರಾಳವಾಗುವುದು ಧೈರ್ಯ
ಇರುವುದು ಸಾಕಷ್ಟು ಎನ್ನುವವ ಶ್ರೀಮಂತ
ಸತ್ತ ಮೇಲೂ ಬಾಳುವವ ಚಿರಂಜೀವಿ.
ಬದುಕಿನಲ್ಲಿ ಯೋಧನಿಗೆ ಹಲವಾರು ವಿರೋಧಿಗಳಿರುತ್ತಾರೆ. ಆದರೆ ಅವನ ಪರಮ ಶತ್ರುವೆಂದರೆ ಸ್ವತಃ ಅವನೇ. ಅವನ ವ್ಯಕ್ತಿತ್ವದಲ್ಲಿಯೇ ಅವನು ಗೆಲ್ಲಬೇಕಾದ ಹಲವಾರು ಸೈತಾನರಿದ್ದಾರೆ ; ಆಲಸ್ಯ, ಅವಿದ್ಯೆ, ಸ್ವಾರ್ಥ, ಅಹಂಕಾರ ಇನ್ನೂ ಎಷ್ಟೋ. . ಬೇರೆ ಜನರನ್ನು ಸೋಲಿಸುವುದು ಅಷ್ಟೇನು ಮುಖ್ಯ ವಿಷಯವಲ್ಲ.
ಒಂದು ಝೆನ್ ಕಥೆ ಹೀಗಿದೆ
ಒಬ್ಬ ಝೆನ್ ವಿದ್ಯಾರ್ಥಿಗೆ ಮಾರ್ಶಲ್ ಆರ್ಟ್ ನ ಹುಚ್ಚು. ಝೆನ್ ಜೊತೆಜೊತೆಗೆ ಯುದ್ಧಕಲೆಯನ್ನೂ ಅಭ್ಯಾಸ ಮಾಡುತ್ತಿದ್ದ.
ಒಮ್ಮೆ ಅವನಿಗೆ ತನ್ನ ಯುದ್ಧಕಲೆಯನ್ನು ಬಳಸಿ ಗುರುವಿನ ಸಾಮರ್ಥ್ಯ ಪರೀಕ್ಷಿಸುವ ಮನಸ್ಸಾಯಿತು.
ಗುರು ವಿಶ್ರಾಂತಿಯಲ್ಲಿದ್ದಾಗ ಅಚಾನಕ್ ಆಗಿ ಈಟಿಯಿಂದ ಗುರುವಿನ ಮೇಲೆ ಆಕ್ರಮಣ ಮಾಡಿದ.
ಗುರು ಕ್ಷಣಾರ್ಧದಲ್ಲಿ ತನ್ನ ಜಪಮಣಿ ಬಳಸಿ ಈಟಿಯ ದಿಕ್ಕನ್ನೇ ಬದಲಾಯಿಸಿದ.
ಶಿಷ್ಯನಿಗೆ ಆಶ್ಚರ್ಯವಾಯಿತು.
ಗುರು ಉತ್ತರಿಸಿದ
“ಹುಡುಗಾ, ನಿನ್ನ ಯುದ್ಧತಂತ್ರ ಇನ್ನೂ ಪಕ್ವವಾಗಿಲ್ಲ, ಈಟಿಗಿಂತಲೂ ಮೊದಲು ನಿನ್ನ ಮನಸ್ಸು ಚಲಿಸಿದ್ದನ್ನು ನಾನು ಕ್ಷಣಾರ್ಧದಲ್ಲಿ ಗಮನಿಸಿದೆ”
ಸ್ವಂತದ ಕೊರತೆಗಳನ್ನು ಕೊಂದುಕೊಂಡಾಗಲೇ ಅವನ ನಿಜವಾದ ಗೆಲುವು. ಆದ್ದರಿಂದಲೇ ಹಲವಾರು ಧರ್ಮಗಳು ತಮ್ಮ ಪುರಾಣಗಳಲ್ಲಿ, ಧರ್ಮ ಗ್ರಂಥಗಳಲ್ಲಿ ಯೋಧನೊಬ್ಬನನ್ನು ನಾಯಕನಂತೆ ಬಿಂಬಿಸುತ್ತವೆ. ಈ ನಾಯಕರು ಬರೀ ವಿರೋಧಿಗಳನ್ನು ಬಗ್ಗು ಬಡಿಯುವ ಯೋಧರಲ್ಲ ತಮ್ಮನ್ನು ತಾವು ಅಗ್ನಿದಿವ್ಯಕ್ಕೆ ಒಡ್ಡಿಕೊಂಡು, ಒಳಗಿನ ಸೈತಾನರನ್ನು ನಾಶ ಮಾಡಿ ಅಪ್ಪಟ ಬಂಗಾರದಂತೆ ಹೊರ ಬರುವ ಮಹಾ ನಾಯಕರ ಸಂಕೇತಗಳಂತೆ ಕಾಣುತ್ತಾರೆ.
ಸಂತನಿಗೆ ಸಣ್ಣದೂ ಸ್ಪಷ್ಟ
ಯೋಧನಿಗೆ ಸೋಲೂ ಒಂದು ಶಕ್ತಿ
ತಾವೋ ಬೆಳಕಲ್ಲಿ
ಒಳಗಿನದನ್ನು ಕಾಣುವುದೇ
ಶಾಶ್ವತವನ್ನು ಅನುಭವಿಸುವ ವಿಧಾನ.