ಪದಗಳಿಗೆ ಶಕ್ತಿ ಇದೆಯೆ? ~ ಮಾಧವ ಲಾಹೋರಿ ಕಥೆಗಳು

“ಔಷಧಕ್ಕೆ ಗುಣವಾಗದ ಕಾಯಿಲೆ ಪ್ರಾರ್ಥನೆಯಿಂದ ಆಗ್ತದಾ? ಇದೆಂಥ ವಿಚಿತ್ರ? ಪದಗಳಿಗೆ ಕಾಯಿಲೆ ವಾಸಿ ಮಾಡುವಷ್ಟು ಶಕ್ತಿ ಇದ್ದಿದ್ದರೆ ಪ್ರಪಂಚ ಹೀಗಿರುತ್ತಿತ್ತಾ? ” ಎಂದು ಕೇಳಿದ. ಅದಕ್ಕೆ ಮಾಧವ ಲಾಹೋರಿ ಕೊಟ್ಟ ಉತ್ತರವೇನು ಗೊತ್ತೆ? ~ ಆನಂದಪೂರ್ಣ

lahori2

ಮಾಧವ ಲಾಹೋರಿ ಕಾಯಿಲೆಯನ್ನೂ ಗುಣಪಡಿಸುತ್ತಿದ್ದ. ಅವನ ಕೈಗುಣ ಚೆನ್ನಾಗಿದೆ ಎಂದು ಊರವರು ಹೇಳುತ್ತಿದ್ದರು.

ಆದರೆ ತನ್ನ ಬಳಿ ಚಿಕಿತ್ಸೆಗೆ ಬರುವವರಿಗೆ ಲಾಹೋರಿ ಒಂದು ಷರತ್ತು ವಿಧಿಸಿದ್ದ. ತನ್ನತನಕ ಬರುವ ಮುಂಚೆ ರೋಗಿಗಳು ಯಾರಾದರೊಬ್ಬ ಸಾಂಪ್ರದಾಯಿಕ ವೈದ್ಯರನ್ನು ಭೇಟಿಯಾಗುವುದು ಕಡ್ಡಾಯ ಮಾಡಿದ್ದ. ಅವರು ಕೊಟ್ಟ ಔಧಗಳು ಸರಿ ಇವೆಯೇ ಎಂದು ಹೇಳುವುದು, ಆ ಔಷಧಗಳು ‘ಸರಿಯಾಗಿ ಕೆಲಸ ಮಾಡುವಂತೆ’ ಪ್ರಾರ್ಥನೆ ಮಾಡುವುದು ಅವನ ಚಿಕಿತ್ಸೆಯ ವಿಧಾನವಾಗಿತ್ತು.

ಗೌಸ್ಪೀರ್ ಒಮ್ಮೆ ಮಗು ಸಹಿತ ದಂಪತಿಯನ್ನು ಕರೆತಂದ. ಆ ಮಗು ಕಾಯಿಲೆಯಿಂದ ಬಸವಳಿದುಹೋಗಿತ್ತು. ಸುಸ್ತಿಗೆ ಒಂದೇ ಸಮನೆ ರಚ್ಚೆ ಹಿಡಿದಿತ್ತು. ಹುಕ್ಕಾದ ಕೊನೆಯ ಗುಟುಕು ಸೇದಿ ಗಂಟಲು ಸರಿ ಮಾಡಿಕೊಂಡ ಮಾಧವ ಲಾಹೋರಿ ಗೌಸ್ಪೀರನ ಬಳಿ ಅವರ ಬಗ್ಗೆ ವಿಚಾರಿಸಿದ.

“ಮಾಧೋ! ಇವರು ನನ್ನ ಪರಿಚಿತರು. ಈ ಮಗು ಮೂಳೆಜ್ವರದಿಂದ ನರಳುತ್ತಿದೆ. ಇದನ್ನು ನೀನೇ ಗುಣಪಡಿಸಬೇಕು. ಏನಾದರೂ ಮಾಡು” ಅಂದ.

ಮಾಧೋ ಮೂರು ವರ್ಷದ ಆ ಮಗುವನ್ನು ಎತ್ತಿಕೊಂಡು, ಅದಕ್ಕೆ ಏನೆಲ್ಲ ಔಷಧ ಕೊಡಲಾಗಿದೆ ಎಂದು ವಿಚಾರಿಸಿದ. ಸರಿಯಾದ ಚಿಕಿತ್ಸೆಯನ್ನೇ ಕೊಡಲಾಗಿದೆ ಎಂದು ಅವನಿಗೆ ಖಾತ್ರಿಯಾಯಿತು. ಅವನು ಮಗುವಿನ ತಲೆ ಮೇಲೆ ಕೈಯಿಟ್ಟು ಛಾವಣಿ ಕಡೆಗೆ ಮುಖ ಮಾಡಿ ಭಗವಂತನನ್ನು ಪ್ರಾರ್ಥಿಸಿದ. ಆಮೇಲೆ ದಂಪತಿಗೆ ಮಗುವನ್ನು ಮರಳಿಸುತ್ತಾ, “ಇನ್ನು ಚಿಂತೆಯಿಲ್ಲ. ಎಲ್ಲವೂ ಸರಿಹೋಗುತ್ತೆ” ಅಂದ. ಸಮಾಧಾನಗೊಂಡ ದಂಪತಿ ಅವನಿಗೆ ಒಂದು ಮುಟೆ ಕಬ್ಬಿನ ಜಲ್ಲೆಗಳನ್ನು ಕಾಣಿಕೆಯಾಗಿ ಕೊಟ್ಟು, ಕೈಮುಗಿದು ಹೊರಟುಹೋದರು. 

ಗೌಸ್ಪೀರನ ಮನೆಗೆ ಬಂದಿದ್ದ ಹೊರ ಊರಿನ ನೆಂಟನೊಬ್ಬ ಇದನ್ನೆಲ್ಲ ನೋಡುತ್ತಾ ನಿಂತಿದ್ದ. “ಔಷಧಕ್ಕೆ ಗುಣವಾಗದ ಕಾಯಿಲೆ ಪ್ರಾರ್ಥನೆಗೆ ಆಗ್ತದಾ? ಇದೆಂಥ ವಿಚಿತ್ರ? ಪದಗಳಿಗೆ ಕಾಯಿಲೆ ವಾಸಿ ಮಾಡುವಷ್ಟು ಶಕ್ತಿ ಇದ್ದಿದ್ದರೆ ಪ್ರಪಂಚ ಹೀಗಿರುತ್ತಿತ್ತೇ? ” ಎಂದು ಕೇಳಿದ.

ಯಾವಾಗಲೂ ಮಿತಭಾಷಿಯೂ ಮೃದು ಭಾಷಿಯೂ ಆಗಿರುವ ಲಾಹೋರಿ ಸಿಟ್ಟುಗೊಂಡು, ಮೂಟೆಯಿಂದ ಒಂದು ಕಬ್ಬಿನ ಜಲ್ಲೆ ತೆಗೆದು ಹೊಡೆಯುವವನಂತೆ ಕೈ ಮೇಲಕ್ಕೆತ್ತಿದ; ಮತ್ತು, “ನೀನೊಬ್ಬ ಮೂರ್ಖ! ಇವೆಲ್ಲ ನಿನಗೆ ಗೊತ್ತಾಗಲ್ಲ ಸುಮ್ಮನಿರು” ಅಂದ.

ಇದರಿಂದ ಗೌಸ್ಪೀರನ ನೆಂಟನಿಗೆ ಅವಮಾನವಾದಂತಾಯ್ತು. ಸಿಟ್ಟೂ ಬಂದು ಮುಖ ಕೆಂಪಡರಿತು. ಮುಷ್ಟಿಗಟ್ಟಿ ತನ್ನ ಅಂಗೈಗೆ ಗುದ್ದಿಕೊಂಡು ತನ್ನ ಸಿಟ್ಟು ತೋರ್ಪಡಿಸಿಕೊಂಡ.

ಚಾವಡಿಯಿಂದ ಹುಕ್ಕ ಹಿಡಿದುಕೊಂಡೇ ಕೆಳಗಿಳಿದು ಬಂದ ಲಾಹೋರಿ, ನೆಂಟನ ಹೆಗಲ ಮೇಲೆ ಕೈಯಿಟ್ಟು ಸಾವರಿಸಿದ. ಅವನಿಗೆ ಸೇದಲು ಕೊಡುತ್ತಾ, “ನೋಡು! ನಾನು ಒಂದು ಸಲ ಮೂರ್ಖ ಅಂದಿದ್ದು ನಿನ್ನ ಮೇಲೆ ಪರಿಣಾಮ ಬೀರಲಿಲ್ಲವೆ? ನಿನ್ನ ಎದೆ ಬಡಿತ ಏರುಪೇರು ಮಾಡಿ, ನಿನ್ನನ್ನು ಉದ್ವಿಗ್ನಗೊಳಿಸಲಿಲ್ಲವೆ? ಸಿಟ್ಟಿಗೆ ನಿನ್ನ ಮೈ ಬಿಸಿಯಾಯಿತಲ್ಲವೆ? ಪದಗಳಿಗೆ ಎಷ್ಟು ಶಕ್ತಿ ಇದೆ ನೋಡು!! ನಿಂದನೆಗೇ ಇಷ್ಟು ಶಕ್ತಿ ಇದೆಯಾದರೆ, ಪ್ರಾರ್ಥನೆಗೆ ಇನ್ನೆಷ್ಟು ಶಕ್ತಿ ಇರಬೇಡ! ಅದೂ ಇತರ ಔಷಧಗಳ ಜೊತೆ ಸೇರಿದಾಗ ಅದು ಇನ್ನೆಷ್ಟು ಪರಿಣಾಮ ಬೀರಬೇಡ!!” ಅಂದ.

ನೆಂಟನಿಗೆ ಮಾಧವ ಲಾಹೋರಿ ಏನು ಹೇಳುತ್ತಿದ್ದಾನೆಂದು ಅರಿವಾಯ್ತು. ಕ್ಷಮೆ ಕೇಳಿ ಅವನನ್ನು ಆಲಿಂಗಿಸಿಕೊಂಡ.

 

Leave a Reply