ಕತ್ತೆಯೊಡನೆ ಕುಸ್ತಿ ಆಡುವ ಕನಸು : ನಸ್ರುದ್ದೀನನ ಕಥೆಗಳು

Mullaಕೆಲ ದಿನಗಳಿಂದ ಮುಲ್ಲಾ ನಸ್ರುದ್ದೀನ್ ಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ರಾತ್ರಿ ಎಚ್ಚರವಾಗಿಬಿಡುತ್ತಿತ್ತು. ತನ್ನ ಈ ಸಮಸ್ಯೆಯನ್ನು ತನ್ನ ಬಂಧು ಬಳಗದವರ ಹತ್ತಿರ ಮುಲ್ಲಾ ಹಂಚಿಕೊಂಡ, “ ನನಗೆ ಕೆಲ ದಿನಗಳಿಂದ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ. ಕತ್ತೆಯೊಡನೆ ಕುಸ್ತಿ ಆಡುವ ಕನಸುಗಳು ಬೀಳುತ್ತವೆ.”

ಮುಲ್ಲಾನ ಸಮಸ್ಯೆ ಕೇಳಿ ಸಂಬಧಿಕರು ಚಿಂತಿತರಾದರು. ಅವನನ್ನು ಹತ್ತಿರದ ಮಂತ್ರದ ಮದ್ದು ಮಾಡುವ ವೈದ್ಯನ ಹತ್ತಿರ ಕರೆದುಕೊಂಡು ಹೋದರು. ಮುಲ್ಲಾನ ಸಮಸ್ಯೆಯನ್ನು ಕೂಲಂಕಷವಾಗಿ ಕೇಳಿಸಿಕೊಂಡ ವೈದ್ಯ, ಕೆಲವು ಗಿಡ ಮೂಲಿಕೆಗಳನ್ನು ರುಬ್ಬಿ ಔಷಧಿ ತಯಾರಿಸಿದ. ಪವಿತ್ರ ಗ್ರಂಥದ ಕೆಲವು ಮಂತ್ರಗಳನ್ನು ಉಚ್ಛರಿಸಿ ಆ ಔಷಧಿಗೆ ಶಕ್ತಿ ತುಂಬಿದ.

“ ನಸ್ರುದ್ದೀನ ತೊಗೋ, ಈ ಸಂಜೆ ಊಟಕ್ಕಿಂತ ಮುಂಚೆ ಅಲ್ಲಾಹ್ ನನ್ನು ಸ್ಮರಿಸುತ್ತ ಈ ಔಷಧಿ ಕುಡಿ. ನಿನ್ನ ಸಮಸ್ಯೆ ಪರಿಹಾರವಾಗುತ್ತದೆ. ಇನ್ನು ಮುಂದೆ ಕತ್ತೆಯ ಕನಸುಗಳು ಬೀಳುವುದಿಲ್ಲ” ಹೇಳಿದ ವೈದ್ಯ .

“ ಕ್ಷಮಿಸಿ ವೈದ್ಯರೆ, ಈ ಔಷಧಿ ನಾಳೆ ಕುಡಿಯಲಾ” ಎಂದ ನಸ್ರುದ್ದೀನ.

“ ಯಾಕೆ? ಇವತ್ತಿಗೇನು ಸಮಸ್ಯೆ?” ವೈದ್ಯ ತಿರುಗಿ ಪ್ರಶ್ನೆ ಮಾಡಿದ .

“ ಏನಿಲ್ಲ ಇವತ್ತು ಕನಸಿನಲ್ಲಿ ಕತ್ತೆಯೊಂದಿಗೆ ಫೈನಲ್ ಕುಸ್ತಿ ಪಂದ್ಯ ಇದೆ” ಉತ್ತರಿಸಿದ ನಸ್ರುದ್ದೀನ.

Leave a Reply