ಅಲ್ಲಾಹ್ ನ ಕೃಪೆಯಿದ್ದರೆ ಅನ್ನುತಿದ್ದ ದರ್ಜಿಗೆ ನಸ್ರುದ್ದೀನ್ ಉತ್ತರ : Tea time Story

Mullaಹಬ್ಬ ಇನ್ನೂ ತಿಂಗಳಿರುವಾಗಲೇ ಮುಲ್ಲಾ ನಸ್ರುದ್ದೀನ ಬಟ್ಟೆ ಅಂಗಡಿಗೆ ಹೋಗಿ ಎರಡು ಅಂಗಿಗಳಿಗೆ ಸಾಕಾಗುವಷ್ಟು ಬಟ್ಟೆ ಖರೀದಿ ಮಾಡಿ ದರ್ಜಿಯ ಅಂಗಡಿಗೆ ಬಟ್ಟೆ ತೆಗೆದುಕೊಂಡು ಹೋದ.

ಮುಲ್ಲಾನ ಅಂಗಿ ಹೊಲೆಯಲು ಅಳತೆ ತೆಗೆದುಕೊಂಡ ದರ್ಜಿ “ಮುಂದಿನ ವಾರ ಬಾ, ನಿನ್ನ ಅಂಗಿ ತಯಾರಾಗಿರುತ್ತದೆ, ಅಲ್ಲಾಹ್ ನ ಕೃಪೆ ಇದ್ದರೆ” ಎಂದ.

ಒಂದು ವಾರದ ಬಳಿಕ ಮುಲ್ಲಾ ದರ್ಜಿಯ ಅಂಗಡಿಗೆ ಹೋದ. “ದುರದೃಷ್ಟವಶಾತ್ ನಿನ್ನ ಅಂಗಿ ಇನ್ನೂ ತಯಾರಾಗಿಲ್ಲ, ನಾಳೆ ಬಾ, ನಿನ್ನ ಅಂಗಿ ತಯಾರಾಗಿರುತ್ತದೆ, ಅಲ್ಲಾಹ್ ನ ಕೃಪೆ ಇದ್ದರೆ” ದರ್ಜಿ ಸಮಜಾಯಿಶಿ ನೀಡಿದ.

ಮರುದಿನ ನಸ್ರುದ್ದೀನ ಮತ್ತೆ ದರ್ಜಿಯ ಅಂಗಡಿಗೆ ಹೋದ. “ ಕ್ಷಮಿಸು, ನಿನ್ನ ಅಂಗಿಯ ಕೆಲಸ ಇನ್ನೂ ಸ್ವಲ್ಪ ಬಾಕಿ ಇದೆ, ನಾಳೆ ಸಂಜೆ ಬಾ, ನಿನ್ನ ಅಂಗಿ ತಯಾರಾಗಿರುತ್ತದೆ, ಅಲ್ಲಾಹನ ಕೃಪೆ ಇದ್ದರೆ” ದರ್ಜಿ ಮತ್ತೆ ಕಾರಣ ಕೊಟ್ಟ.

ಈ ಮಾತು ಕೇಳಿತ್ತಿದ್ದಂತೆಯೇ ಮುಲ್ಲಾನ ಸಿಟ್ಟು ನೆತ್ತಿಗೇರಿತು,
“ಅಲ್ಲಾಹ್ ನನ್ನು ಈ ಅಂಗಿ ಹೊಲೆಯುವ ಕೆಲಸದಿಂದ ಹೊರಗಿಟ್ಟರೆ, ಎಷ್ಟು ಸಮಯ ಬೇಕು ನಿನಗೆ ಅಂಗಿ ಹೊಲೆಯಲು ?” ಮುಲ್ಲಾ ಮುಖ ಕೆಂಪಗೆ ಮಾಡಿಕೊಂಡು ದರ್ಜಿಯನ್ನು ಪ್ರಶ್ನಿಸಿದ.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply