ಜುನೈದ್ ತನ್ನ ಶಿಷ್ಯರಿಗೆ ಪ್ರಶ್ನೆ ಮಾಡಿದ. “ ಹೇಳಿ , ಇಲ್ಲಿ ಯಾರು ಯಾರನ್ನು ಕಟ್ಟಿ ಹಾಕಿದ್ದಾರೆ? ಮನುಷ್ಯ ಆಕಳನ್ನು ಹಗ್ಗದಿಂದ ಕಟ್ಟಿದ್ದಾನೋ ಅಥವಾ ಆಕಳು ಮನುಷ್ಯನನ್ನು ಹಗ್ಗದಿಂದ ಕಟ್ಟಿ ಹಾಕಿದೆಯೋ?” ಈ ಪ್ರಶ್ನೆಗೆ ಸಿಕ್ಕ ಉತ್ತರ ಮತ್ತು ಜುನೈದ್ ಹೇಳಿದ ಪಾಠವೇನಿತ್ತು ಗೊತ್ತೆ? |ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಸೂಫೀ ಜುನೈದ್ ತನ್ನ ಶಿಷ್ಯರೊಂದಿಗೆ ರಸ್ತೆಯ ಮೂಲಕ ಪ್ರಯಾಣ ಮಾಡುತ್ತಿದ್ದ. ರಸ್ತೆಯಲ್ಲಿ ಅವನಿಗೆ ಒಬ್ಬ ಮನುಷ್ಯ ಆಕಳೊಂದನ್ನು ಹಗ್ಗದಿಂದ ಎಳೆದುಕೊಂಡು ಬರುತ್ತಿರುವುದು ಕಾಣಿಸಿತು. ಸೂಫೀ ತನ್ನ ಶಿಷ್ಯರಿಗೆ ಹೇಳಿದ, “ ಆ ಮನುಷ್ಯನನ್ನು ಹಿಡಿದು ನಿಲ್ಲಿಸಿ, ನಿಮಗೆಲ್ಲ ಒಂದು ಪ್ರಶ್ನೆ ಕೇಳಬೇಕು ನಾನು”
ಶಿಷ್ಯರು ಆಕಳನ್ನು ಎಳೆದುಕೊಂಡು ಹೋಗುತ್ತಿದ್ದ ಮನುಷ್ಯನನ್ನು ತಡೆದು ನಿಲ್ಲಿಸಿದರು.
ಜುನೈದ್ ತನ್ನ ಶಿಷ್ಯರಿಗೆ ಪ್ರಶ್ನೆ ಮಾಡಿದ. “ ಹೇಳಿ , ಇಲ್ಲಿ ಯಾರು ಯಾರನ್ನು ಕಟ್ಟಿ ಹಾಕಿದ್ದಾರೆ? ಮನುಷ್ಯ ಆಕಳನ್ನು ಹಗ್ಗದಿಂದ ಕಟ್ಟಿದ್ದಾನೋ ಅಥವಾ ಆಕಳು ಮನುಷ್ಯನನ್ನು ಹಗ್ಗದಿಂದ ಕಟ್ಟಿ ಹಾಕಿದೆಯೋ?”
“ಇದೆಂಥ ಪ್ರಶ್ನೆ ? ಮನುಷ್ಯ ತಾನೇ ಆಕಳನ್ನು ಕಟ್ಟಿ ಹಾಕಿರುವುದು” ಶಿಷ್ಯನೊಬ್ಬ ಉತ್ತರಿಸಿದ.
“ ಓಹ್ ಹೌದಾ ! ಈಗ ನೋಡಿ” ಎನ್ನುತ್ತಾ ಜುನೈದ್ ಚಾಕುವಿನಿಂದ ಆಕಳನ್ನು ಕಟ್ಟಿ ಹಾಕಿದ್ದ ಹಗ್ಗ ಕತ್ತರಿಸಿಬಿಟ್ಟ. ಹಗ್ಗ ಕತ್ತರಿಸಿದೊಡನೆ ಆಕಳು ಅಲ್ಲಿಂದ ಓಡತೊಡಗಿತು. ಆಕಳ ಮಾಲಿಕನಿಗೆ ಸಿಟ್ಟು ಬಂತು, ಅವನೂ ಆಕಳ ಹಿಂದೆ ಓಡತೊಡಗಿದ.
“ ಈಗ ಹೇಳಿ ? ಆಕಳಿಗೆ ಆ ಮನುಷ್ಯನ ಬಗ್ಗೆ ಆಸಕ್ತಿ ಇಲ್ಲ, ಬದಲಾಗಿ ಅದು ಇವನಿಂದ ತಪ್ಪಿಸಿಕೊಳ್ಳಲು ಬಯಸುತ್ತಿದೆ. ಆದರೆ ಆ ಮನುಷ್ಯ ತನ್ನ ಲಾಭಕ್ಕಾಗಿ ಆಕಳನ್ನು ಬಯಸುತ್ತಿದ್ದಾನೆ. ಹೀಗೆಯೇ ನಮ್ಮ ಮತ್ತು ನಮ್ಮ ಮನಸ್ಸಿನೊಡನೆಯ ಸಂಬಂಧ. ನಮ್ಮ ಮನಸ್ಸಿನಲ್ಲಿ ಬರುತ್ತಿರುವ ನೂರಾರು ವಿಚಾರಗಳಿಗೆ ನಮ್ಮ ಬಗ್ಗೆ ಆಸಕ್ತಿ ಇಲ್ಲ. ನಾವೇ ಆ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡಿದ್ದೇವೆ. ಆ ವಿಚಾರಗಳ ಬಗ್ಗೆ ಆಸಕ್ತಿ ಕಳೆದುಕೊಂಡು ಕ್ಷಣದಲ್ಲಿಯೇ ಅವು ಆ ಆಕಳು ಓಡಿ ಹೋದಂತೆ ಓಡಿ ಹೋಗುತ್ತವೆ”