ಇಂದು ಹಯಗ್ರೀವ ಜಯಂತಿ

ಶ್ರಾವಣ ಹುಣ್ಣಿಮೆಯಂದು ಹಯಗ್ರೀವ ಜಯಂತಿಯನ್ನು ಆಚರಿಸಲಾಗುತ್ತದೆ. ಹಯ ಎಂದರೆ ಕುದುರೆ. ಹಯಗ್ರೀವ ದೇವರು ಎಂದರೆ ಕುದುರೆ ಮುಖ ಉಳ್ಳವನು ಎಂದರ್ಥ. ದೇವಾಲಯಗಳಲ್ಲಿ ಹಯಗ್ರೀವ ದೇವರ ಜೊತೆಯಲ್ಲಿ ಲಕ್ಷ್ಮಿಯನ್ನು ಕಾಣಬಹುದಾಗಿದ್ದು, ಇದು ಮಹಾವಿಷ್ಣುವಿನ ಅವತಾರ ಎಂಬುದು ಸುಲಭವಾಗಿ ತಿಳಿಯಬಹುದಾಗಿದೆ. ಪುರಾಣಗಳಿಂದ ಮಹಾಭಾರತದವರೆಗೆ ಹಯಗ್ರೀವ ದೇವರ ವರ್ಣನೆಗಳನ್ನು ಕಾಣಬಹುದಾಗಿದೆ.

ಬ್ರಹ್ಮನಿಂದ ವೇದಗಳನ್ನು ಕದ್ದೊಯ್ದ ಮಧು ಮತ್ತು ಕೈಟಭರೆಂಬ ರಾಕ್ಷಸರ ಸಂಹಾರ ಮಾಡಲು ವಿಷ್ಣುವೆತ್ತಿದ ಅವತಾರವೇ ಹಯಗ್ರೀವ ರೂಪ ಎಂಬುದು ಪುರಾಣೇತಿಹಾಸಗಳಿಂದ ತಿಳಿದುಬರುತ್ತದೆ. ಪರಮಾತ್ಮನ ಈ ಹಯಗ್ರೀವ ಅವತಾರ ವೇದಗಳ ಸಂರಕ್ಷಣೆಗಾಗಿ. ಇಲ್ಲಿ ವೇದವೆಂಬುದು ಜ್ಞಾನದ ಪ್ರತೀಕವಾಗಿದೆ. ರಾಕ್ಷಸೀತನದ ಪ್ರತೀಕವಾದ ಅಜ್ಞಾನವೆಂಬ ಕತ್ತಲೆಯ ವಿರುದ್ಧ ದೈವೀತನದ ಪ್ರತೀಕವಾದ ಜ್ಞಾನ ಬೆಳಕಿನ ಜಯವನ್ನು ಪಡೆಯುವ ಸಂದೇಶ ದೊರಕುತ್ತದೆ. ಹಯಗ್ರೀವ ಜಯಂತಿಯಂದು ದಿವ್ಯಜ್ಞಾನವನ್ನು ಬೇಡುವುದರ ಜೊತೆಗೆ ಸದ್ಭಕ್ತಿಯಿಂದ ಆರಾಧಿಸಲಾಗುತ್ತದೆ.

ಮುದ್ರಾಪುಸ್ತಕಶಂಖಾಕ್ಷವಿದ್ಯೋತಿತಕರಾಂಬುಜ |
ಹೃದ್ಯವೇಷ ಹಯಗ್ರೀವ ಮದ್ಧ್ಯಾನವಿಷಯೋ ಭವ ||

ಕರ್ತೇ ಧರ್ತ್ರೇ ಚ ಹರ್ತ್ರೇ ಚ ಪಾತ್ರೇ ಚ ಹಯವಕ್ತ್ರ ಮೇ |
ಪಿತ್ರೇ ಧಾತ್ರೇ ಧಿಯಾಂ ದಾತ್ರೇ ಸತ್ರೇ ಜಾತಾಯ ತೇ ನಮಃ ||

ಜ್ಞಾನಮುದ್ರೆ, ಪುಸ್ತಕ, ಶಂಖ, ಜಪಮಾಲೆಗಳನ್ನು ಧರಿಸಿದ ನಾಲ್ಕು ಕೈಗಳುಳ್ಳ ಹಯಗ್ರೀವ. ಜಗದ ಕರ್ತೃ, ಲೋಕೋಧಾರಕ, ಕೊನೆಗೆ ಲೋಕಸಂಹರ್ತೃ, ಮುಕ್ತಿಯಲ್ಲೂ ಪಾಲಕ, ಪಿತೃ, ಧಾತೃ, ಬುದ್ಧಿದಾತೃವೂ ಆಗಿರುವ, ಸತ್ರದಲ್ಲಿ ಆವಿರ್ಭಾವಗೊಂಡ ಹಯವದನನಿಗೆ ನಮನ.

(ಲೇಖನ ಕೃಪೆ : ಶ್ರೀವಿದ್ಯಾ)

Leave a Reply