ಅಧ್ಯಾತ್ಮವೇ ಭಾರತದ ಆತ್ಮ : ಸ್ವಾತಂತ್ರ್ಯ ದಿನವಿಶೇಷ

ಭಾರತ ರಾಜಕೀಯವಾಗಿ ಒಂದು ರಾಷ್ಟ್ರದ ಗುರುತು ಪಡೆಯುವ ಮೊದಲೂ ಒಂದು ಎಳೆಯಲ್ಲಿ ಬೆಸೆದುಕೊಂಡಿತ್ತು. ನಿರ್ದಿಷ್ಟ ಗಡಿಯ ಭೂಪಟ ಭಾರತವಾಗುವ ಮೊದಲೂ ಈ ಭೂಭಾಗದ ವಿವಿಧ ಸಮುದಾಯಗಳು ತಮ್ಮ ನೆಲೆಯನ್ನು ಭರತ ಖಂಡ ಎಂದೇ ಕರೆದಿದ್ದರು. ಇದಕ್ಕೆ ಕಾರಣ, ಈ ಮಣ್ಣಿನ ಜೊತೆ ಹೆಣೆದುಕೊಂಡ ಮನುಷ್ಯರ ಭಾವತಂತು. ದೇಶವೆಂದರೆ ಗಡಿ ಗುರುತಲ್ಲ, ದೇಶವೆಂದರೆ ಮನುಷ್ಯರು.... ~ ಚೇತನಾ ತೀರ್ಥಹಳ್ಳಿ

ಗತ್ತಿನಲ್ಲಿ ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಕೇಂದ್ರವಿದೆ, ಆತ್ಮವಿದೆ. ರಾಜಕಾರಣ ಯುರೋಪಿನ ಆತ್ಮವಿದ್ದಂತೆ ಭಾರತಕ್ಕೆ ಆಧ್ಯಾತ್ಮಿಕತೆಯೇ ಆತ್ಮ. ಧರ್ಮ ಭಾರತದ ಕೇಂದ್ರಬಿಂದು – ಇದು ಸ್ವಾಮಿ ವಿವೇಕಾನಂದರ ಮಾತು. ಮುಂದೆ ಶ್ರೀ ಅರವಿಂದರೂ ಇವೇ ಮಾತುಗಳನ್ನು ಪುರುಚ್ಚರಿಸುತ್ತಾ `ಜಗತ್ತಿನ ಒಂದೊಂದು ರಾಷ್ಟ್ರಕ್ಕೆ ಒಂದೊಂದು ವಿಶಿಷ್ಟ ಸತ್ವ ಇರುತ್ತದೆ. ಭಾರತದ ವೈಶಿಷ್ಟ್ಯ ಅದರ ಆಧ್ಯಾತ್ಮಿಕ ಶಕ್ತಿ’ ಎಂದಿದ್ದರು.

ಹೌದು. ಭಾರತದ ಕೇಂದ್ರ ಇರುವುದು ಧಾರ್ಮಿಕತೆಯಲ್ಲಿಯೇ. ಈ ಎಳೆಯೇ ನೂರಾರು ವೈವಿಧ್ಯಗಳ ಪ್ರಾಂತ್ಯಗಳನ್ನು ‘ರಾಷ್ಟ್ರ’ವೆಂಬ ಸೂತ್ರದಲ್ಲಿ ಬೆಸೆದಿಟ್ಟಿರುವುದು. ಕಾಶಿ ಕಂಡು ಬಂದವರು ರಾಮೇಶ್ವರಕ್ಕೆ ಪಾದ ಬೆಳೆಸಬೇಕೆಂಬ ನಿಯಮವಿರಲಿ, ದೇಶದ ಎಂಟು ದಿಕ್ಕುಗಳಲ್ಲೂ ಹಂಚಿ ಹರಡಿದ ದ್ವಾದಶ ಜ್ಯೋತಿರ್ಲಿಂಗಗಳಿರಲಿ, ಹೆಚ್ಚೂಕಡಿಮೆ ದೇಶದ ಎಲ್ಲಾ ಭಾಗಗಳಲ್ಲಿಯೂ ಹರಡಿಕೊಂಡಿರುವ ಶಕ್ತಿಪೀಠಗಳಿರಲಿ- ಇವೆಲ್ಲವೂ ನಮ್ಮನ್ನು ಪರಸ್ಪರ ಜೋಡಿಸುವ ಕೊಂಡಿಗಳಾಗಿವೆ; ರಾಜ್ಯ – ರಾಜ್ಯಗಳ ಒಳಜಗಳಗಳಾಚೆಗೂ ನಾವೊಂದು `ರಾಷ್ಟ್ರ’ವಾಗಿರುವುದರ ಭಾವನೆಯನ್ನು ಕಾಯ್ದಿಟ್ಟಿವೆ. ಮತ್ತು ಈ ಎಲ್ಲ ಸ್ಥಳಗಳು ಧಾರ್ಮಿಕ ಭಾವನೆಗಳ ಪೋಷಣೆಯ ಜೊತೆಜೊತೆಗೇ ಆರ್ಥಿಕತೆಯನ್ನೂ ಪೋಷಿಸುತ್ತಾ ಜಾತಿಧರ್ಮಗಳ ಎಲ್ಲೆಗಳನ್ನು ಮೀರಿ ಈ ರಾಷ್ಟ್ರದ ಒಟ್ಟು ನಾಗರಿಕರಿಗೆ ಇಂಬಾಗಿ ನಿಂತಿವೆ. ಈ ಮೂಲಕ ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿವೆ.

ಪ್ರಾಚೀನ ಪರಿಕಲ್ಪನೆಯಲ್ಲಿ ರಾಷ್ಟ್ರ
ಭಾರತದ ಪ್ರಾಚೀನ ಸಾಹಿತ್ಯವೆಂದು ಪರಿಗಣಿಸಲ್ಪಡುವ ವೇದೋಪನಿಷತ್ತುಗಳಲ್ಲಿ `ರಾಷ್ಟ್ರ’ದ ಪರಿಕಲ್ಪನೆಯನ್ನು ಕಾಣಬಹುದು. (ಇದು ಇಂಗ್ಲೀಷಿನ ನೇಷನ್’ಗಿಂತ ಭಿನ್ನವಾದದ್ದು). ಈ ಗ್ರಂಥಗಳು ಸಮಗ್ರ ಜನಜೀವನದ ಚಿತ್ರಣ ನೀಡದೆ ಹೋದರೂ ಆ ಕಾಲಘಟ್ಟದಲ್ಲಿ ಜೀವಿಸಿದ್ದ ಕೆಲವು ಸಮುದಾಯಗಳ ವಿವರಣೆಯನ್ನಂತೂ ನೀಡುತ್ತವೆ. ಆದ್ದರಿಂದ ಇವನ್ನು ಐತಿಹಾಸಿಕ ಆಕರಗಳೆಂದೂ ಕರೆಯಬಹುದು. ಅಂದಿನ ದಿನಗಳ `ಭರತ ವರ್ಷ’ವೂ ಇಂದಿನ ಭಾರತದಂತೆ ಸಂಕೀರ್ಣವಾಗಿಯೇ ಇದ್ದು, ಏಕಾಡಳಿತಕ್ಕೆ ಒಳಪಟ್ಟಿರಲಿಲ್ಲ. ಆದರೆ, ವಿಷ್ಣುಪುರಾಣದ `ಉತ್ತರಮ್ ಯತ್ ಸಮುದ್ರಸ್ಯ ಹಿಮಾದ್ರೇಶ್ಬೈವ ದಕ್ಷಿಣಮ್| ವರ್ಷಮ್ ತದ್ ಭಾರತಮ್ ನಾಮ ಭಾರತೀ ಯತ್ರ ಸಂತತಿಃ’ ಎಂಬ ಶ್ಲೋಕವನ್ನು ಅವಲೋಕಿಸಿದರೆ ಸಮುದ್ರದಿಂದ ಉತ್ತರಕ್ಕೆ, ಹಿಮಾಲಯದಿಂದ ದಕ್ಷಿಣಕ್ಕೆ ಇರುವ ಭೂಭಾಗ ಪೂರ್ತಿಯಾಗಿ `ಭಾರತ’ ಎಂದು ಗುರುತಿಸಲ್ಪಡುತ್ತಿತ್ತು. ಈ ಭೂಭಾಗವನ್ನು ವಿಭಿನ್ನ ರಾಜವಂಶಗಳ ಅರಸರು ಆಳುತ್ತಿದ್ದು, ಪ್ರತಿಯೊಬ್ಬರ ಆಳ್ವಿಕೆಯ ಪ್ರಾಂತ್ಯಕ್ಕೆ ಬೇರೆ ಬೇರೆ ಹೆಸರುಗಳಿದ್ದರೂ ಒಟ್ಟಾರೆಯಾಗಿ ಅವೆಲ್ಲವೂ ‘ಭರತ ಖಂಡ’ದ ಅಡಿಯಲ್ಲೆ ಗುರುತಿಸಲ್ಪಡುತ್ತಿದ್ದವು.

ಇಂತಹ ಏಕರೂಪದ ಗುರುತಿಗೆ ಕಾರಣ ನಿಸ್ಸಂದೇಹವಾಗಿ ಈ ಭೂಭಾಗದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಐಕ್ಯತೆಗಳೇ. ರಾಮಾಯಣವು ಹೇಳುವಂತೆ ರಾಮ ನಡೆದು ಬಂದ ಹಾದಿ, ಅವನಿಗೆ ಎದುರಾದ, ಜೊತೆಯಾದ ಜನಪದಗಳೆಲ್ಲವೂ ರಾಮಾಯಣದಲ್ಲಿ ಅಡಕಗೊಂಡಾಗ; ಎಲ್ಲ ಭಾಗಗಳ ಜನರಿಗೆ ಪರಸ್ಪರರ ಆಪ್ತಭಾವ ಉಂಟಾಗಿದ್ದು ಸಹಜ. ಹೀಗೆ ರಾಮನ ಕಾರಣದಿಂದ, ಕೃಷ್ಣನ ಕಾರಣದಿಂದ, ಶಿವ ಶಿವೆಯರ ಕಾರಣಗಳಿಂದಲೂ ಭಾರತದ ಉತ್ತರ ದಕ್ಷಿಣ, ಪೂರ್ವ ಪಶ್ಚಿಮಗಳು ಪರಸ್ಪರ ನಂಟು ಸಾಧಿಸಿದವೆನ್ನಬಹುದು.

ಸಂತರ ಭಾರತ
“ಭಾರತದ ಚರಿತ್ರೆಯೆಂದರೆ ಇಲ್ಲಿನ ಮಹಾಪುರುಷರ ಜೀವನಗಾಥೆಗಳೇ” ಎಂದಿದ್ದಾರೆ ಇತಿಹಾಸಕಾರ ಸುರೇಂದ್ರನಾಥ ಬ್ಯಾನರ್ಜಿ. ಭಾರತದ ಮಹಾಪುರುಷರೆಂದರೆ ಶ್ರೀಮಂತ ವ್ಯಾಪಾರಿಗಳಲ್ಲ, ರಾಜಮಹಾರಾಜರುಗಳಲ್ಲ. ಇಲ್ಲಿ ಸಾಧು ಸಂತರು, ಸಂನ್ಯಾಸಿಗಳಿಗೇ ಹೆಚ್ಚಿನ ಮನ್ನಣೆ, ಬೆಲೆ. ಮತ್ತು ಈ ಸಂತ ಸಾಲಿನಲ್ಲಿ ವರ್ಗ ಭೇದಗಳಿಲ್ಲ. ಆಧ್ಯಾತ್ಮಿಕವಾಗಿ ವಿಕಾಸಗೊಂಡ ಪ್ರತಿಯೊಬ್ಬರನ್ನೂ ಇಲ್ಲಿನ ನೆಲ ಗುರುವೆಂದು ಸ್ವೀಕರಿಸಿದೆ, ಅನುಸರಿಸುತ್ತ ನೆಚ್ಚಿಕೊಂಡಿದೆ.

ಅದಕ್ಕೆ ಪೂರಕವಾಗಿ ಇಲ್ಲಿ ಆಗಿಹೋದ ಸಂತರನೇಕರು ರಾಷ್ಟ್ರೀಯತೆಯ ಹರಿಕಾರರಾಗಿಯೂ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಶರಣ ಪರಂಪರೆ, ದಾಸ ಪರಂಪರೆ, ಭಕ್ತಿ ಚಳವಳಿಯ ಸಾಧಕರು, ಸೂಫಿಗಳು, ದರ್ವೇಶರು – ಇವರೆಲ್ಲರೂ ನಿಂತಲ್ಲಿ ನಿಲ್ಲದೆ ಜನರನ್ನು ಬೆಸೆಯುವ, ಆ ಮೂಲಕ ಐಕ್ಯತೆಯನ್ನು ಹೊಸೆಯುವ ಕೆಲಸ ಮಾಡಿದರು. ಆಧುನಿಕ ಭಾರತದ ಕಾಲಘಟ್ಟವನ್ನೆ ತೆಗೆದುಕೊಂಡರೆ, 20ನೇ ಶತಮಾನದಲ್ಲಿ ಆಗಿಹೋದ ಸ್ವಾಮಿ ವಿವೇಕಾನಂದ, ಸ್ವಾಮಿ ರಾಮತೀರ್ಥ, ಯೋಗಿ ಅರವಿಂದ, ನಾರಾಯಣ ಗುರು, ರಮಣ ಮಹರ್ಷಿ – ಇವರೆಲ್ಲರೂ ರಾಷ್ಟ್ರರ್ಷಿಗಳಂತೆ ಮುಂಚೂಣಿಯಲ್ಲಿ ನಿಂತು ಅಧ್ಯಾತ್ಮ ಹಾಗೂ ರಾಷ್ಟ್ರೀಯ ಭಾವನೆಗಳನ್ನು ಜೊತೆಜೊತೆಯಲ್ಲೆ ಪೋಷಿಸಿದರು. ಹಾಗೆಯೇ ಜಿದ್ದು ಕೃಷ್ಣಮೂರ್ತಿ, ಓಶೋ ರಜನೀಶ್ ಮೊದಲಾದ ಸಾಧಕರು ಎಲ್ಲ ವರ್ಗದ ಜನರ ಆಧ್ಯಾತ್ಮಿಕ ಚಿಂತನೆಯನ್ನು ಬೆಸೆಯುವ ಮೂಲಕ, ದೇಶವನ್ನು ಬೆಸೆದಿಟ್ಟರು. ವಿದೇಶದಿಂದ ಬಂದು ನೆಲೆಸಿ ಇಲ್ಲಿನ ತತ್ತ್ವ ಶಾಸ್ತ್ರ, ಅಧ್ಯಾತ್ಮಗಳ ಅಭ್ಯಾಸದಲ್ಲಿ ತೊಡಗಿದ್ದ ಆ್ಯನಿ ಬೆಸೆಂಟ್ ಹಾಗೂ ಸೋದರಿ ನಿವೇದಿತಾ ತಮ್ಮ ಆಧ್ಯಾತ್ಮಿಕ ಚಟುವಟಿಕೆಗಳ ವಿಸ್ತರಣೆಯಾಗಿ ಭಾರತಪ್ರೇಮದಲ್ಲಿ, ಭಾರತದ ಸೇವೆಯಲ್ಲಿ ಆಸಕ್ತಿ ತೋರಿದರು. `ಈ ರಾಷ್ಟ್ರದ ಕಂಪನವನ್ನು, ಮಿಡಿತವನ್ನು ನಾವು ಅರಿಯಲಿಲ್ಲವಾದರೆ, ಈ ನೆಲದ ಅತಿ ಶ್ರೇಷ್ಠ ಆಧ್ಯಾತ್ಮಿಕ ಕೊಡುಗೆಗಳನ್ನೂ ನಾವು ಅರಿಯಲು ಸಾಧ್ಯವಾಗದು’ ಎಂದಿದ್ದರು ಭಗಿನಿ ನಿವೇದಿತಾ.

ರಾಷ್ಟ್ರದೊಡನೆ ತಾದಾತ್ಮ್ಯದ ಪ್ರಸ್ತಾಪ ಬಂದಾಗ ವಿವೇಕಾನಂದರಿಗಿಂತಲೂ ಒಂದು ಹೆಜ್ಜೆ ಮುಂದೆ ನಿಲ್ಲುವವರು ರಾಮತೀರ್ಥರು. ಅಪ್ರತಿಮ ಅದ್ವೈತಿಯಾಗಿದ್ದ ರಾಮತೀರ್ಥರು `ನಾನೇ ಭಾರತ, ಭಾರತವೇ ನಾನು. ನಾನು ನಡೆದಾಡಿದರೆ ಭಾರತ ನಡೆದಾಡಿದಂತೆ, ಮಾತಾಡಿದರೆ ಭಾರತವೇ ಮಾತಾಡಿದಂತೆ ನನಗೆ ಭಾಸವಾಗುತ್ತದೆ’ ಎಂದು ಘೋಷಿಸಿದ್ದರು ಅವರು. ಒಬ್ಬ ವ್ಯಕ್ತಿಯಲ್ಲಿ ಒಂದು ದೇಶವನ್ನು ಕಾಣಲು ಸಾಧ್ಯವಾಗಬೇಕು. ಹೀಗೆ ಪ್ರತಿಯೊಬ್ಬರಲ್ಲೂ ರಾಷ್ಟ್ರವನ್ನೆ ಕಂಡರೆ, ಪರಸ್ಪರ ಸೇವೆಗೈಯುತ್ತ ದೇಶವನ್ನು ಪ್ರಗತಿಯ ಉತ್ತುಂಗಕ್ಕೆ ಕೊಂಡೊಯ್ಯಬಹುದು ಎನ್ನುವುದು ಅವರ ಬೋಧನೆಯ ಸಾರವಾಗಿತ್ತು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.