“ದಿಬ್ಬವು ಏರುವ ದಾರಿಯನ್ನೂ ಇಳಿಯುವ ದಾರಿಯನ್ನೂ ಒಟ್ಟಿಗೆ ಹೊತ್ತುಕೊಂಡಿರುತ್ತದೆ. ಅಸ್ತಿತ್ವ ಉಳಿದುಕೊಂಡಿರುವುದು ಇಂತಹ ಸೌಹಾರ್ದದ ಮೇಲೆಯೇ” ~ ಹೆರಾಕ್ಲಿಟಸ್
ಸದಾ ನೀರುಗಣ್ಣನಾಗಿರುತ್ತಿದ್ದ ಆರ್ದ್ರಹೃದಯಿ ಹೆರಾಕ್ಲಿಟಸ್ ಅಳುಮುಂಜಿ ತತ್ತ್ವಜ್ಞಾನಿ (ವೀಪಿಂಗ್ ಫಿಲಾಸಫರ್) ಎಂದೇ ಖ್ಯಾತ. ಕ್ರಿ.ಪೂ.6ನೇ ಶತಮಾನದಲ್ಲಿ ಗ್ರೀಸ್’ನಲ್ಲಿ ಜೀವಿಸಿದ್ದ ಹೆರಾಕ್ಲಿಟಸ್ ಒಬ್ಬ ಭೌತಶಾಸ್ತ್ರಜ್ಞನೂ ಹೌದು.
ಈವರೆಗಿನ ದಾಖಲೆಗಳ ಪ್ರಕಾರ “ಬದಲಾವಣೆಯೊಂದೇ ಶಾಶ್ವತ, ಮತ್ತಾವುದೂ ಅಲ್ಲ” ಎಂದು ಮೊದಲ ಬಾರಿಗೆ ಹೇಳಿದ್ದು ಹೆರಾಕ್ಲಿಟಸ್.
ಒಂದೇ ದಿಬ್ಬವನ್ನು ಎರಡು ಬಗೆಯಲ್ಲಿ ನೋಡಬಹುದು. ಮೇಲಿನಿಂದ ನೋಡಿದಾಗ ಕೆಳಕ್ಕೆ ಇಳಿಯುವಂತೆಯೂ, ಕೆಳಗಿನಿಂದ ನೋಡುವಾಗ ಮೇಲಕ್ಕೆ ಏರಬೇಕಿರುವಂತೆಯೂ ಕಾಣುತ್ತದೆ. ಇರುವುದೊಂದೇ ದಿಬ್ಬ. ಅದನ್ನು ಏರಲೂಬಹುದು, ಇಳಿಯಲೂ ಬಹುದು. ಅದು ನಿಮ್ಮನ್ನು ಯಾವುದಕ್ಕೂ ನಿರ್ದೇಶಿಸುವುದಿಲ್ಲ. ನಿಮ್ಮ ಅಗತ್ಯದಂತೆ ಅದನ್ನು ಬಳಸಿಕೊಳ್ಳಬಹುದು. ಅದು ಎರಡೂ ಆಯ್ಕೆಗಳಿಗೆ ಮುಕ್ತವಾಗಿ ತೆರೆದುಕೊಂಡಿದೆ. ಎರಡು ವೈರುಧ್ಯಗಳನ್ನು ತನ್ನಲ್ಲಿ ಹೊತ್ತುಕೊಂಡು, ಸೌಹಾರ್ದತೆಯನ್ನು ಸಾರುತ್ತಿದೆ.
ದಿಬ್ಬ ಸೃಷ್ಟಿಯ ಸೌಹಾರ್ದತೆಗೆ ಒಂದು ಪುಟ್ಟ, ಸುಂದರ ಉದಾಹರಣೆ. ಸೃಷ್ಟಿಯ ಪ್ರತಿಯೊಂದು ವಸ್ತುವೂ ಇಂಥ ವೈರುಧ್ಯಗಳನ್ನು ಹೊತ್ತುಕೊಂಡೇ ಇರುತ್ತದೆ. ಇದಕ್ಕೆ ಗಹನವಾದ, ಆದರೆ ಸರಳವಾದ ಮತ್ತೊಂದು ಉದಾಹರಣೆ: ಹುಟ್ಟು ಮತ್ತು ಸಾವು. ಪ್ರತಿಯೊಂದು ಜೀವಿಯೂ ಹುಟ್ಟಿನೊಂದಿಗೆ ಸಾವನ್ನೂ ಹೊತ್ತುಕೊಂಡಿರುತ್ತದೆ. ಎಲ್ಲ ಜೀವಿಗಳೂ ಸಾವಿನೊಂದಿಗೇ ಹುಟ್ಟುತ್ತವೆ. ಜೊತೆಜೊತೆಗೇ ಇರುವ ಈ ವೈರುಧ್ಯವನ್ನು ಸೌಹಾರ್ದದಿಂದ ಕಂಡರೆ, ಬದುಕು ಸುಂದರ ಮತ್ತು ಸಲೀಸು.