ದೊರೆ ‘ವೂ’ ಮತ್ತು ಬೋಧಿಧರ್ಮ : ಕಿರು ಸಂಭಾಷಣೆ

wu

ಚೀನಾದ ದೊರೆ ವೂ, ಬೌದ್ಧ ಧರ್ಮ ಪ್ರಚಾರಕ್ಕಾಗಿ ದಕ್ಷಿಣ ಭಾರತದಿಂದ ಆಗಮಿಸಿದ್ದ ಬೋಧಿಧರ್ಮನ ಬಗ್ಗೆ ಸಾಕಷ್ಟು ಕೇಳಿದ್ದ. ಆಗ ಚೀನಾದಲ್ಲಿ ಸುಪ್ರಸಿದ್ಧನಾಗಿದ್ದ ಅಧ್ಯಾತ್ಮ ಗುರು ಹ್ಯೊ ಕಿ ಕೂಡಾ ಬೋಧಿಧರ್ಮನಿಂದ ಜ್ಞಾನ ಪಡೆದಿದ್ದ. ಹೀಗಾಗಿ ವೂ ಬೋಧಿಧರ್ಮನನ್ನು ಭೇಟಿ ಮಾಡಿ ತನ್ನ ಅಶಾಂತಮನಸ್ಕತೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ.
ಅವರಿಬ್ಬರ ನಡುವೆ ನಡೆದ ಸಂಭಾಷಣೆ ಹೀಗಿದೆ:

ವೂ : ಬೋಧಿಧರ್ಮ, ನನ್ನ ಮನಸ್ಸು ತುಂಬಾ ಅಶಾಂತವಾಗಿದೆ. ದಯವಿಟ್ಟು ನನ್ನ ಮನಸ್ಸನ್ನು ಶಾಂತಗೊಳಿಸು
ಬೋಧಿಧರ್ಮ : ಆಗಲಿ. ನೀನು ಬೆಳಗಿನ ಜಾವ ನಾಲ್ಕು ಗಂಟೆಗೆ ಬಾ. ಬರುವಾಗ ನಿನ್ನ ಅಶಾಂತ ಮನಸ್ಸನ್ನೂ ತಪ್ಪದೆ ಕರೆದುಕೊಂಡು ಬಾ.
ವೂ : ಇದೇನು ಹೇಳುತ್ತಿದ್ದೀಯ? ಮನಸ್ಸನ್ನು ಎಲ್ಲಾದರೂ ಬಿಟ್ಟುಬಿಡಲು ಸಾಧ್ಯವೆ?
ಬೋಧಿಧರ್ಮ : ಹಾಗಾದರೆ ತೋರಿಸು. ಈಗಲೇ ಅದರ ಚಿಕಿತ್ಸೆ ಮಾಡುತ್ತೇನೆ
ವೂ : ಮನಸ್ಸನ್ನು ತೋರಿಸುವುದು ಹೇಗೆ? ಅದು ಒಳಗೆ ಇರುತ್ತದೆ!
ಬೋಧಿಧರ್ಮ : ಹಾಗಿದ್ದರೆ ಕಣ್ಣು ಮುಚ್ಚಿಕೊಂಡು ನಿನ್ನೊಳಗೆ ಹುಡುಕು. ಸಿಕ್ಕಿದರೆ ನನಗೆ ತಿಳಿಸು.

ಇದಕ್ಕೇನೂ ಉತ್ತರಿಸಲು ತೋಚದೆ ದೊರೆ ವೂ ಕಣ್ಣು ಮುಚ್ಚಿ ಮನಸ್ಸು ಎಲ್ಲಿದೆಯೆಂದು ಹುಡುಕತೊಡಗಿದ. ಈ ಪ್ರಕ್ರಿಯೆಯಲ್ಲಿ ತನ್ನೊಳಗೆ ತಾನೇ ಮುಳುಗಿಹೋದ. ಕಣ್ಣು ಬಿಡುವ ಹೊತ್ತಿಗೆ ಅವನ ಮನಸ್ಸು ಶಾಂತವಾಗಿಬಿಟ್ಟಿತ್ತು.

1 Comment

Leave a Reply