“ಉರುವಲನ್ನು ಹಾಕದೆ ಇದ್ದರೆ ಬೆಂಕಿ ಹೊತ್ತುರಿಯಬಲ್ಲದೆ? ಇಲ್ಲವಲ್ಲ!? ಹಾಗೆಯೇ…. ಚಿಂತೆಗಳನ್ನು ಉಣಿಸದೆ ಹೋದರೆ, ಮನಸ್ಸು ಕೂಡಾ ವಿಚಲಿತವಾಗುವುದಿಲ್ಲ” ಅನ್ನುತ್ತಾಳೆ ಉಪನಿಷತ್ಕಾರಿಣಿ ಮೈತ್ರೇಯಿ ~ ಅಪ್ರಮೇಯ
ಯಥಾ ನಿರಿಂಧನಃ ವಹ್ನಿಃ ಸ್ವಯೋನೌ ಉಪಶಾಮ್ಯತಿ | ತಥಾ ವೃತ್ತಿಕ್ಷಯಾತ್ ಚಿತ್ತಮ್ ಸ್ವಯೋನೌ ಉಪಶಾಮ್ಯತಿ || ಮೈತ್ರೇಯಿ ಉಪನಿಷತ್ : 3 ||
ಅರ್ಥ: ಕಟ್ಟಿಗೆಯನ್ನು ಒಟ್ಟದೆ ಇರುವಾಗ ಅಗ್ನಿಯು ಹೇಗೆ ತನ್ನ ಸ್ಥಾನದಲ್ಲಿಯೇ ಶಾಂತವಾಗುವುದೋ; ಹಾಗೆಯೇ, ಯಾವುದೇ ಉಣಿಸನ್ನು (ಆಲೋಚನೆಗಳನ್ನು) ಒದಗಿಸದೆ ಹೋದರೆ ಚಿತ್ತವು ತನ್ನ ಸ್ಥಾನದಲ್ಲಿ ಶಾಂತವಾಗುತ್ತದೆ.
ಭಾವಾರ್ಥ: ಯಾವುದೇ ಸಂಗತಿಯಾದರೂ ಸರಿ. ಪೋಷಣೆ ಇಲ್ಲದೆ ಹಬ್ಬಲಾರದು. ನಮ್ಮಲ್ಲಿ ಕಾಮ ಕ್ರೋಧಾದಿ ಯಾವುದೇ ಭಾವ ಉದಿಸಿದರೂ ಅದನ್ನು ಹಾಗೆಯೇ ಉಪೇಕ್ಷಿಸಿಬಿಟ್ಟರೆ ತಾನೇತಾನಾಗಿ ಮುರುಟಿಹೋಗುತ್ತದೆ. ಅದರ ಬದಲು ಅವನ್ನು ಕಾಯ್ದಿಟ್ಟುಕೊಳ್ಳಲು, ಮತ್ತಷ್ಟು ಜ್ವಲಿಸುವಂತೆ ಮಾಡಲು ಕಾರಣಗಳನ್ನು ಗುಡ್ಡೆ ಹಾಕಿದರೆ, ಮುಂದೆ ನಾವೇ ಅದನ್ನು ನಿಯಂತ್ರಿಸಲಾಗದೆ ಜ್ವಲಿಸಿಹೋಗುತ್ತೇವೆ.
ಆದ್ದರಿಂದಲೇ ಇಲ್ಲಿ ಮೈತ್ರೇಯಿ, “ನಿಮ್ಮ ಮನೋವಿಕಾರಗಳಿಗೆ ಸೊಪ್ಪು ಹಾಕಬೇಡಿ, ಅವನ್ನು ಹಾಗೇ ಬಿಟ್ಟುಬಿಡಿ” ಎಂದು ಹೇಳುತ್ತಿದ್ದಾಳೆ.