ಝೆನ್, ಆನಂದದಿಂದ ಸರಳವಾಗಿ ಬದುಕಲಿಕ್ಕೆಂದೇ ಇರುವ ಆಧ್ಯಾತ್ಮಿಕ ಜೀವನಶೈಲಿ. ಈ ಜೀವನಶೈಲಿಯಲ್ಲಿ ಮುಖ್ಯವಾಗಿ ಕಂಡುಬರುವುದು ವ್ಯಕ್ತಿಗಳ ನಡುವೆ ಪರಸ್ಪರ ‘ಅವಕಾಶ’ (space).

ಯಾವುದೇ ಸಂಬಂಧದಲ್ಲಿ ಪರಸ್ಪರ ‘ಸ್ಪೇಸ್’ ಅಥವಾ ತಮ್ಮತನಕ್ಕೆ ಅವಕಾಶ ನೀಡುವುದು ಮುಖ್ಯವಾಗುತ್ತದೆ. ಹೀಗೆ ಅವಕಾಶ ನೀಡದೆ ಇರುವುದೇ ಎಲ್ಲ ಸಮಸ್ಯೆಗಳ ಮೂಲ ಕಾರಣವಾಗಿಬಿಡುತ್ತದೆ.
ನಾವು ನಮ್ಮ ಮಕ್ಕಳನ್ನು, ನಮ್ಮ ಗೆಳೆಯರನ್ನು, ಸಂಗಾತಿಯನ್ನು ವಿಪರೀತವಾಗಿ ಪ್ರೀತಿಸುತ್ತೇವೆ ಎಂದುಕೊಳ್ಳಿ. ಈ ಪ್ರೀತಿಯೇ ಕಾಳಜಿಯ ರೂಪದಲ್ಲಿ ವ್ಯಕ್ತವಾಗುತ್ತ ಇರುತ್ತದೆ. ಆದರೆ ಈ ಕಾಳಜಿ ಅವರ ಉಸಿರುಗಟ್ಟಿಸುವಂತೆ ಇರಬಾರದು. ಅವರ ಆಯ್ಕೆ, ಅವರ ನಿರ್ಧಾರ, ಅವರ ಇಷ್ಟಾನಿಷ್ಟಗಳಂತೆ ಬದುಕುವ ಅವಕಾಶವನ್ನು ಕಸಿದುಕೊಳ್ಳುವಂತೆ ಇರಬಾರದು.
ಹಾಗೆಯೇ, ನಿಮ್ಮನ್ನು ಯಾರನ್ನಾದರೂ ವಿಪರೀತ ಪ್ರೇಮಿಸುತ್ತಿರದ್ದಲ್ಲಿ, ನಿಮ್ಮ ಸ್ಪೇಸ್ ಅನ್ನು ಉಳಿಸಿಕೊಂಡೇ ಅವರ ಪ್ರೇಮವನ್ನು ಸ್ವೀಕರಿಸಿ. ಇಲ್ಲವಾದರೆ ನಿಮ್ಮತನವನ್ನು ಬಿಟ್ಟುಕೊಂಡು ಬದುಕಿದ ಭಾವನೆ ಜೀವನದ ಯಾವುದೇ ಕ್ಷಣದಲ್ಲಿ ನಿಮ್ಮನ್ನು ಕಾಡಲು ಆರಂಭಿಸಬಹುದು. ಅದು ಸಂಬಂಧದಲ್ಲಿ ಬಿರುಕು ಮೂಡಿಸುವ ಕಂದಕವಾಗಿ ಬೆಳೆಯಲೂಬಹುದು.
ಪ್ರೇಮ, ಮಮತೆ, ಗೆಳೆತನಗಳು ಯಾವುದೇ ವ್ಯಕ್ತಿಯ ಬದುಕನ್ನು ವಿಸ್ತಾರಗೊಳಿಸುವಂತಿರಬೇಕೇ ಹೊರತು ಸಂಕುಚಿತಗೊಳಿಸುವಂತೆ ಇರಬಾರದು. ನೀವು ನಿಮ್ಮ ಪ್ರೀತಿಪಾತ್ರರ ಸ್ಪೇಸ್ ಕಸಿದುಕೊಂಡರೆ ನಿಮ್ಮ ವ್ಯಾಪ್ತಿಯೂ ಕುಗ್ಗುತ್ತದೆ. ಆದ್ದರಿಂದ, ಸಂಬಂಧಗಳಲ್ಲಿ ಸ್ಪೇಸ್ ಉಳಿಸಿಕೊಳ್ಳಿ, ಆ ಮೂಲಕ ಸಂಬಂಧವನ್ನೂ ಸುಂದರವಾಗಿ ಕಾಯ್ದಿಟ್ಟುಕೊಳ್ಳಿ.