ಉದ್ಧರೇದಾತ್ಮನಾತ್ಮಾನಂ : ಇಂದಿನ ಸುಭಾಷಿತ ಭಗವದ್ಗೀತೆಯಿಂದ…

ಉದ್ಧರೇದಾತ್ಮನಾತ್ಮಾನಂ|ನಾತ್ಮಾನಮ್ ಅವಸಾದಯೇತ್||ಆತ್ಮೈವ ಹಿ ಆತ್ಮನೋ ಬಂಧುರಾತ್ಮೈವ ರಿಪುರಾತ್ಮನಃ || ಭಗವದ್ಗೀತೆ 6.5||

ಅರ್ಥ: ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು. ನಮಗೆ ನಾವೇ ಪತನ ಹೊಂದಲು ಅವಕಾಶ ಕೊಟ್ಟುಕೊಳ್ಳಬಾರದು. ನಮಗೆ ನಾವೇ ಬಂಧು ನಮಗೆ ನಾವೇ ವೈರಿ ಕೂಡಾ.

ತಾತ್ಪರ್ಯ: ನಮ್ಮನ್ನು ನಾವು ಸರಿಯಾಗಿ ಇಟ್ಟುಕೊಳ್ಳದೆ ಹೋದರೆ ನಮ್ಮಿಂದ ಏನನ್ನೂ ಮಾಡಲು ಆಗುವುದಿಲ್ಲ. ನಮ್ಮಲ್ಲಿ ಟೊಳ್ಳುತನ ಇದ್ದರೆ ನಮ್ಮ ಒಳ ಹೊರಗಣ ಪ್ರಗತಿ ಸಾಧ್ಯ ಆಗುವುದಿಲ್ಲ ಮಾತ್ರವಲ್ಲ, ನಾವು ಸಮಾಜಕ್ಕಾಗಲಿ ರಾಷ್ಟ್ರಕ್ಕಾಗಲಿ ಯಾವ ಕೊಡುಗೆಯನ್ನೂ ಕೊಡಲು ಸಾಧ್ಯ ಆಗುವುದಿಲ್ಲ. ಆದ್ದರಿಂದ ಎಲ್ಲಕ್ಕಿಂತ ಮೊದಲು ನಮ್ಮನ್ನು ನಾವು ಉದ್ದಾರ ಮಾಡಿಕೊಳ್ಳಬೇಕು ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ.

ನಮ್ಮಲ್ಲಿ ಎಷ್ಟೇ ಓದು, ತಿಳುವಳಿಕೆ, ಮಾತುಗಾರಿಕೆ ಇತ್ಯಾದಿಗಳು ಇದ್ದರೂ ಕೂಡ ನಮ್ಮ ಒಳಗೆ ಗಟ್ಟಿತನ ಇಲ್ಲದೇ ಹೋದರೆ ಅದು ವ್ಯರ್ಥವೇ. ನಮ್ಮಲ್ಲಿ ಸ್ವಾರ್ಥ ಇತ್ಯಾದಿಗಳು ತುಂಬಿಕೊಂಡಿದ್ದರೆ ನಮ್ಮಿಂದ ಯಾವ ಪ್ರಯೋಜನವೂ ಆಗಲಾರದು.

ಆದ್ದರಿಂದ ಮೊದಲು ನಾವು ನಮ್ಮ ವ್ಯಕ್ತಿತ್ವವನ್ನು ಗಟ್ಟಿಯಾಗಿ ರೂಪಿಸಿಕೊಳ್ಳಬೇಕು. ಇಲ್ಲವಾದರೆ ನಮ್ಮ ಟೊಳ್ಳುತನ, ನಮ್ಮ ಕೊರತೆಗಳು ನಮ್ಮನ್ನೇ ತಿಂದುಹಾಕಿಬಿಡುತ್ತವೆ – ಎಂದು ಭಗವದ್ಗೀತೆಯ ಮೂಲಕ ಶ್ರೀಕೃಷ್ಣ ಹೇಳುತ್ತಿದ್ದಾನೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.