ಶಾಂತಿ : ಸನಾತನ ಚಿಂತನೆಯ ಉದಾತ್ತ ಮಂತ್ರ

ನಮ್ಮ ವೇದ ಸಾಹಿತ್ಯದಲ್ಲಿ, ಉಪನಿಷತ್ ಗ್ರಂಥಗಳಲ್ಲಿ ಶಾಂತಿಯ ಅರಿವು ಮತ್ತು ಹೊಂದುವಿಕೆಯ ಕುರಿತು ಸಾಕಷ್ಟು ವಿವರಣೆ ದೊರಕುತ್ತವೆ. ಯಾವುದು ಅಧಿಭೌತಿಕ, ಅಧಿದೈವಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ನಿರುಮ್ಮಳ ಭಾವವನ್ನು ಮೂಡಿಸುತ್ತದೆಯೋ ಅದು ಶಾಂತಿ ಎನ್ನುತ್ತದೆ ನಮ್ಮ ಪ್ರಾಚೀನ ಸಾಹಿತ್ಯ ~ ಚೇತನಾ 

ನಾವು ಬಹಳ ಬಾರಿ ಶಾಂತಿಯ ಮಾತಾಡುತ್ತೇವೆ. ನಮ್ಮ ಅರ್ಥದಲ್ಲಿ ಶಾಂತಿ ಎನ್ನುವುದು ಬಹುತೇಕ ಗದ್ದಲವಿಲ್ಲದ ಸ್ಥಿತಿ. ಯುದ್ಧವಿಲ್ಲದ ಸ್ಥಿತಿಯೇ ನಮ್ಮ ಪಾಲಿಗೆ ಶಾಂತಿ. ಆದರೆ ಉಚ್ಚಾರ ಮಾತ್ರದಿಂದಲೇ ಮನಸ್ಸು ಉಲ್ಲಸಿತಗೊಳ್ಳುವ ಈ ಪದದ ವ್ಯಾಪ್ತಿ ವಿಪರೀತ ದೊಡ್ಡದಿದೆ.

ಶಾಂತಿ ಎಂದರೆ ಅದೊಂದು ವಿಚಾರವಲ್ಲ; ಅದೊಂದು ಸ್ಥಿತಿ. ಅದು ಸೀಮಿತ ಸಂಗತಿಯ ನಿರ್ವಚನೆಯಲ್ಲ. ಶಾಂತಿ ಒಳ – ಹೊರಗುಗಳನ್ನೂ, ಜಡ – ಚೇತನಗಳನ್ನೂ ಆವರಿಸಿಕೊಂಡಿರುವ ವ್ಯಾಪಕ, ನಿತ್ಯ ಸ್ಥಿತಿ. ಸೃಷ್ಟಿಯ ಪ್ರತಿಯೊಂದು ಕಣದಲ್ಲಿಯೂ ಇದು ಹುದುಗಿರುತ್ತದೆ. ನಮ್ಮಲ್ಲಿ ಮಾಯಾಮೋಹಗಳು ಪದರಗಟ್ಟುತ್ತ ಶಾಂತಿಯು ಮಸುಕಾಗಿ ಚಡಪಡಿಕೆ ಉಂಟಾಗುತ್ತದೆ. ಈ ಚಡಪಡಿಕೆಯನ್ನು ಅರ್ಥೈಸಿಕೊಂಡವರು ತಮ್ಮೊಳಗಿನ ಶಾಂತಿಯ ಹುಡುಕಾಟದಲ್ಲಿ ತೊಡಗುತ್ತಾರೆ. ಈ ಹುಡುಕಾಟವೇ ಧ್ಯಾನ. ನಮ್ಮೊಳಗಿನ ಶಾಂತಿಯನ್ನು ನಮಗೇ ಹುಡುಕಿಕೊಡುವುದು. ಸಮುದ್ರ ಮಥನದ ಆರಂಭದಲ್ಲಿ ವಿಷವು ಹೊಮ್ಮಿದಂತೆ, ಅನಂತರ ಮನಸ್ಸನ್ನು ತಿರುಗಿಸುವ ಅನೇಕಾನೇಕ ಲೌಕಿಕ ಸಂಪತ್ತು ಹೊಮ್ಮಿದಂತೆ – ಧ್ಯಾನದ ಆರಂಭ ಸ್ಥಿತಿಯಲ್ಲಿ ಹಲವು ಸಿದ್ಧಿಗಳು ಒದಗಿಬರುತ್ತವೆ. ಆದರೆ ಅವೆಲ್ಲವನ್ನೂ ಅವಗಣಿಸಿ ಮುಂದುವರೆಯುವ ಸಾಧಕರಿಗೆ ಅಮೃತ ದೊರೆತಂತೆ, ಮಾನಸ ಸಮುದ್ರದಲ್ಲಿ ಅಡಗಿರುವ ಶಾಂತಿಯು ದೊರಕುತ್ತದೆ.

ನಮ್ಮ ವೇದ ಸಾಹಿತ್ಯದಲ್ಲಿ, ಉಪನಿಷತ್ ಗ್ರಂಥಗಳಲ್ಲಿ ಶಾಂತಿಯ ಅರಿವು ಮತ್ತು ಹೊಂದುವಿಕೆಯ ಕುರಿತು ಸಾಕಷ್ಟು ವಿವರಣೆ ದೊರಕುತ್ತವೆ. ಯಾವುದು ಅಧಿಭೌತಿಕ, ಅಧಿದೈವಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ನಿರುಮ್ಮಳ ಭಾವವನ್ನು ಮೂಡಿಸುತ್ತದೆಯೋ ಅದು ಶಾಂತಿ ಎನ್ನುತ್ತದೆ ನಮ್ಮ ಪ್ರಾಚೀನ ಸಾಹಿತ್ಯ.

ಅಧಿಭೌತಿಕ ಸ್ತರದಲ್ಲಿ ಹೊರಗಿನಿಂದ ಅಡಚಣೆಗಳು ಉಂಟಾಗುತ್ತವೆ. ಪ್ರಕೃತಿ ವಿಕೋಪ, ಅಪಘಾತ, ಯುದ್ಧ ಇತ್ಯಾದಿ ಇದಕ್ಕೆ ಉದಾಹರಣೆ. ಅಧಿದೈವಿಕ ಸ್ತರದಲ್ಲಿ ದುಷ್ಟ ಶಕ್ತಿಗಳು, ಯಕ್ಷ, ರಕ್ಷ, ಪ್ರೇತಾದಿಗಳು, ಉಪ – ಕ್ಷುದ್ರ ದೇವತೆಗಳಿಂದ ಅಡಚನೆ ಉಂಟಾಗುತ್ತದೆ. ಆಧ್ಯಾತ್ಮಿಕ ಸ್ತರದಲ್ಲಿ ಅಡಚಣೆ ಉಂಟಾಗುವುದು ನಮ್ಮೊಳಗಿನಿಂದಲೇ. ಮಾನಸಿಕ ಒತ್ತಡ, ದುಗುಡ, ಕ್ಲೇಷಗಳು ಇಲ್ಲಿ ಅಡ್ಡಿಯಾಗುತ್ತವೆ. ಈ ಮೂರು ಸ್ತರಗಳ ಅಡಚಣೆಯನ್ನು ನಿವಾರಿಸಲೆಂದೇ ವೇದೋಪನಿತ್ತುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಂತಿ ಮಂತ್ರಗಳನ್ನು ಹೇಳಲಾಗಿದೆ. ಈ ಉದಾತ್ತ ಮಂತ್ರಗಳು ಸೃಷ್ಟಿಯ ಅಣು-ರೇಣು-ತೃಣ-ಕಾಷ್ಠಗೆಳೆಲ್ಲವಕ್ಕೂ ಶಾಂತಿಯನ್ನು ಹಾರೈಸುತ್ತವೆ.

ಉಪನಿಷತ್ತಿನ ಮಂತ್ರವೊಂದು ಹೀಗೆ ಹೇಳುತ್ತದೆ:
ಓಂ ದ್ಯೌಃ ಶಾಂತಿಃ ಅಂತರಿಕ್ಷಃ ಶಾಂತಿಃ
ಪೃಥಿವೀ ಶಾಂತಿಃ ಆಪಃ ಶಾಂತಿಃ ಓಷಧಯಃ ಶಾಂತಿಃ
ವನಸ್ಪತಯಃ ಶಾಂತಿಃ ವಿಶ್ವೇದೇವಾಃ ಶಾಂತಿಃ
ಬ್ರಹ್ಮಶಾಂತಿಃ ಸರ್ವಂ ಶಾಂತಿಃ
ಶಾಂತಿರೇವ ಶಾಂತಿಃ ಸಾ ಮಾ ಶಾಂತಿರೇಧಿ
ಓಂ ಶಾಂತಿಃ ಶಾಂತಿಃ ಶಾಂತಿಃ
– ಭೂಮ್ಯಾಕಾಶಗಳಲ್ಲಿ ನೆಲೆಸಲಿ ಶಾಂತಿ; ಅಂತರಿಕ್ಷದಲ್ಲಿ ನೆಲೆಸಲಿ ಶಾಂತಿ; ನೆಲದಲ್ಲಿ, ನೀರಿನಲ್ಲಿ, ಸಸ್ಯರಾಶಿಗಳಲ್ಲಿ, ತರುಲತೆಗಳಲ್ಲಿ, ಅಗ್ನಿಯಲ್ಲಿ, ಬ್ರಹ್ಮದಲ್ಲಿ – ಎಲ್ಲೆಲ್ಲೂ ನೆಲೆಸಲಿ ಶಾಂತಿ; ಶಾಂತಿಯೇ ನೆಲೆಸಲಿ ಶಾಂತಿ; ನಮ್ಮೊಳಗೆ ನೆಲೆಸಲಿ ಶಾಂತಿ; ಸಕಲರೊಳಗೆ ನೆಲೆಸಲಿ ಶಾಂತಿ – ಎನ್ನುತ್ತದೆ.

ಶಾಂತಿ ಕೇವಲ ಮನುಷ್ಯನಿಗೆ, ಮನಸ್ಸಿಗೆ ಸಂಬಂಧಿಸಿದ ಸಂಗತಿಯಲ್ಲ. ಅಧಿಭೌತಿಕ ಶಾಂತಿ ಸಾಧ್ಯವಾಗಬೇಕು ಎಂದಾದರೆ ಸಮಸ್ತ ಜಡ ಚೇತನಗಳಲ್ಲೂ ಅದು ನೆಲೆಗೊಂಡಿರಬೇಕು.
ವೈದಿಕ ಮಂತ್ರವೊಂದು ಇಂದ್ರಾಗ್ನಿವರುಣರಿಗೆಲ್ಲ ಶಮವನ್ನು (ಆನಂದವನ್ನು, ಶಾಂತಿಮೂಲವನ್ನು) ಕೋರುತ್ತ `ಶಂ ನೋ ಅಸ್ತು ದ್ವಿಪದೇ, ಶಂ ಚತುಷ್ಪದೇ’ ಎಂದು ಹೇಳುತ್ತದೆ. ಇದರರ್ಥ ಇಂದ್ರಾದಿಗಳಿಗೆ ಹೇಗೋ ಹಾಗೇ ದ್ವಿಪಾದಿ -ಚತುಷ್ಪಾದಿಗಳಾದ ಪಕ್ಷಿ – ಪ್ರಾಣಿಗಳಿಗೂ ಆನಂದ ದೊರೆತು ಅವು ಶಾಂತಿಯಿಂದಿರಲಿ ಎಂದು. ದೇವತೆಗಳಿಗೂ ಪ್ರಾಣಿ ಪಕ್ಷಿಗಳಿಗೂ ತಾರತಮ್ಯ ತೋರದೆ ಒಂದೇ ಮಂತ್ರದಲ್ಲಿ ಇದು ಅಡಕಗೊಂಡಿರುವುದನ್ನು ಗಮನಿಸಬೇಕು.

ಮತ್ತೊಂದು ಪ್ರಖ್ಯಾತ ಶಾಂತಿ ಮಂತ್ರವು ತನ್ನ ಒಡಲಲ್ಲಿ ವಿಶ್ವಾರ್ಥವನ್ನೆ ಅಡಗಿಸಿಟ್ಟುಕೊಂಡಿದೆ. ಬೃಹದಾರಣ್ಯಕ ಹಾಗೂ ಈಶಾವಾಸ್ಯ ಉಪನಿಷತ್ತುಗಳಲ್ಲಿ ಕಂಡುಬರುವ ಈ ಶಾಂತಿ ಮಂತ್ರವು ಅದ್ವೈತ ತತ್ತ್ವವನ್ನೂ ಸೃಷ್ಟಿ ರಹಸ್ಯವನ್ನೂ ಏಕಕಾಲಕ್ಕೆ ಸಾರುತ್ತದೆ. ಈ ಶಾಂತಿ ಮಂತ್ರದಲ್ಲಿ ಆಧುನಿಕ ಗಣಿತಜ್ಞರು ಕಂಡುಕೊಂಡ ಮಹತ್ತರವಾದ `ಅನಂತ’ದ ಪರಿಕಲ್ಪನೆಯೂ ಇದೆ:
ಓಂ ಪೂರ್ಣಮದಃ ಪೂರ್ಣಮಿದಮ್ | ಪೂರ್ಣಾತ್ ಪೂರ್ಣಮುದಚ್ಯತೇ ||
ಪೂರ್ಣಸ್ಯ ಪೂರ್ಣಮಾದಾಯ | ಪೂರ್ಣಮೇವಾವಶಿಷ್ಯತೇ ||
ಓಂ ಶಾಂತಿಃ ಶಾಂತಿಃ ಶಾಂತಿಃ
– ಅದು ಪೂರ್ಣ (ಅನಂತ ಬ್ರಹ್ಮ) ಇದು ಪೂರ್ಣ (ಅನಂತ ಸೃಷ್ಟಿ). ಪೂರ್ಣದಿಂದ ಪೂರ್ಣವು ಉದಿಸಿದೆ. ಪೂರ್ಣದಿಂದ (ಅನಂತದಿಂದ) ಪೂರ್ಣವನ್ನು (ಅನಂತವನ್ನು) ತೆಗೆದರೆ ಪೂರ್ಣವೇ (ಅನಂತವೇ) ಉಳಿಯುತ್ತದೆ.  ಓಂ ಶಾಂತಿ… ಶಾಂತಿ.. ಶಾಂತಿ.

ಪರಿಪೂರ್ಣವೂ ಅನಂತವೂ ಆದ ಪರಬ್ರಹ್ಮದ ಒಡಲಿನಿಂದ ಸೃಷ್ಟಿಯಾದ ಜಗತ್ತು ಕೂಡ ಸ್ವಯಂಪೂರ್ಣವೂ ಅನಂತವೂ ಆಗಿರುತ್ತದೆ. ಇದರಿಂದ ಏನೇ ಎಷ್ಟೇ ಲಯಗೊಂಡರೂ ಅದರ ಅನಂತತೆಗೆ ಚ್ಯುತಿಯಾಗದೆ ಅದು ಅನಂತವಾಗಿಯೇ ಇರುತ್ತದೆ. ಹೀಗಿರುವಾಗ ಅನಗತ್ಯ ಭ್ರಾಂತಿ ಏತಕೆ? ಶಾಂತಿಯೊಂದೇ ನೆಲೆಸಲಿ ಸದಾ – ಎನ್ನುವುದು ಈ ಮಂತ್ರದ ಆಶಯ.

ಮತ್ತೊಂದು ಸುಪ್ರಸಿದ್ಧ ಮಂತ್ರ ಸರ್ವರೂ ಸಮಭಾವದಿಂದ, ಸಮಚಿತ್ತಂದ ಇರುವುದಷ್ಟೆ ಅಲ್ಲ, ಒಬ್ಬರಿಗೊಬ್ಬರು ಕೂಡಿ ಬೆಳೆಯೋಣ ಎಂಬ ಆಶಯವನ್ನು ಸಾರುತ್ತದೆ:
ಸಹನಾವವತು ಸಹನೌಭುನಕ್ತು ಸಹವೀರ್ಯಂ ಕರವಾವಹೈ|
ತೇಜಸ್ವಿನಾವ ಧೀತಮಸ್ತು ಮಾ ವಿದ್ವಿಷಾವಹೈ||
ಓಂ ಶಾಂತಿಃ ಶಾಂತಿಃ ಶಾಂತಿಃ
– ಭಗವಂತ ನಮ್ಮಿಬ್ಬರನ್ನೂ ರಕ್ಷಿಸಲಿ. ನಮ್ಮಿಬ್ಬರಿಗೆ ನಿತ್ಯ ಸುಖವನ್ನು ಉಂಟುಮಾಡಲಿ. ನಾವಿಬ್ಬರೂ ಜ್ಞಾನವನ್ನು ಬೆಳೆಸುವಂತಾಗಲಿ. ನಾವು ಒಟ್ಟಿಗೆ ಬೆಳೆಯುವಂತಾಗಲಿ ಮತ್ತು ನಮ್ಮಿಬ್ಬರಲ್ಲಿ ದ್ವೇಷವು ಉಂಟಾಗದಿರಲಿ. ನಮ್ಮ ತಾಪತ್ರಯಗಳು ಶಾಂತವಾಗಲಿ. ಶಾಂತಿ, ಶಾಂತಿ, ಶಾಂತಿ ನೆಲೆಸಲಿ.
ಎಲ್ಲಿ ಸ್ಪರ್ಧೆ ಇರುವುದಿಲ್ಲವೋ, ಆಯ್ಕೆ ಇರುವುದಿಲ್ಲವೋ ಅಲ್ಲಿ ಶಾಂತಿ ತಾನೇ ತಾನಾಗಿ ಇರುತ್ತದೆ ಎನ್ನುತ್ತದೆ ತಾವೋ ತತ್ತ್ವ. ಮೇಲಿನ ಮಂತ್ರ ಈ ಆಶಯವನ್ನು ಸಮರ್ಥವಾಗಿ ಸಾರುತ್ತದೆ. ಒಟ್ಟಿಗೆ ಬೆಳೆಯುವುದು ಮಾತ್ರವಲ್ಲ, ನಮ್ಮೊಳಗೆ ಸ್ಪರ್ಧೆಯಿಂದ ದ್ವೇಷವು ಉಂಟಾಗದೆ ಶಾಂತಿ ನೆಲೆಸುವಂತಾಗಲಿ ಎಂಬ ಪ್ರಾರ್ಥನೆ ಈ ಶಾಂತಿ ಮಂತ್ರದಲ್ಲಿದೆ.

ಇವತ್ತಿನ ತುರ್ತು ಅಗತ್ಯ ಎಂಬುದೇನಾದರೂ ಇದ್ದರೆ, ಅದು `ಶಾಂತಿ’ಯದೇ. ಅಂತರಿಕ್ಷದಲ್ಲಿ ಯಂತ್ರದ ಕಣ್ಣುಗಳನ್ನಿಟ್ಟು ಹುಡುಕಾಟ ನಡೆಸಿರುವ ಮನುಕುಲ, ತನ್ನೊಳಗನ್ನು ಕಾಣುವ ಕಣ್ಣುಗಳನ್ನೆ ಕಳೆದುಕೊಳ್ಳುತ್ತಿದೆ. ನಾವು ಸದಾ ಹೊರಗೇನು ನಡೆಯುತ್ತಿದೆ ಎಂಬುದರ ಬಗ್ಗೆಯೇ ಕುತೂಹಲಿಗಳಾಗಿದ್ದೇವೆ. ಸಹಜವಾಗಿಯೇ ನಮ್ಮ ಆಧ್ಯಾತ್ಮಿಕ ಕ್ಲೇಷಗಳಿಗೂ ಹೊರಗಿನ ಪರಿಹಾರಗಳನ್ನು ಹುಡುಕುತ್ತಿದ್ದೇವೆ. ಒಂದೊಮ್ಮೆ ನಮ್ಮ ನೋಟದ ಗುರಿಯನ್ನು ಒಳಮುಖ ತಿರುಗಿಸಿಕೊಳ್ಳಬೇಕು. ಮೇಲುಮೇಲಿನ ಅಬ್ಬರ, ಸುಳಿಗಳೆಲ್ಲವನ್ನೂ ದಾಟಿ ಧ್ಯಾನಸ್ಥರಾಗಿ ಆಳಕ್ಕಿಳಿದರೆ ಅಲ್ಲಿ ಆತ್ಮದ ಮೂಲಭೂತ ಗುಣವಾದ ಶಾಂತಿಯೆಂಬ ಪರುಷಮಣಿ ದೊರಕುವುದು. ಈ ಮಣಿಯು ತಾನು ಸೋಕಿದ್ದನ್ನೆಲ್ಲ ಸಮಾಧಾನಗೊಳಿಸುತ್ತ ಸಾಗುವುದು. ನಮ್ಮನ್ನು ಮುತ್ತಿಕೊಂಡಿರುವ ಅಧಿಭೌತಿಕ – ದೈವಿಕ- ಆತ್ಮಿಕ ಅಡಚಣೆಗಳೆಲ್ಲ ಕಳಚಿ ಶಾಂತಿ – ಶಾಂತಿ -ಶಾಂತಿಯೇ ಸರ್ವವ್ಯಾಪಿಯಾಗುವುದು. 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.