ಯಾರು ಮೂರ್ಖ!? : ಒಂದು ನಸ್ರುದ್ದೀನ್ ಕಥೆ

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಒಮ್ಮೆ ಮುಲ್ಲಾ ನಸ್ರುದ್ದೀನ ವಿದ್ವಾಂಸರೊಬ್ಬರಿಗೆ ಒಂದು ಚರ್ಚೆಗಾಗಿ ಸಮಯ ಕೊಟ್ಟಿದ್ದ. ಆದರೆ ಮರೆತು ಯಾವದೋ ಕೆಲಸಕ್ಕೆಂದು ಬೇರೆ ಊರಿಗೆ ಹೋಗಿ ಬಿಟ್ಟ.
ನಿಗದಿ ಮಾಡಿದ ಸಮಯಕ್ಕೆ ಸರಿಯಾಗಿ ವಿದ್ವಾಂಸರು ಮುಲ್ಲಾನ ಮನೆಗೆ ಆಗಮಿಸಿದರು. ಆದರೆ ಮನೆಯ ಬಾಗಿಲಿಗೆ ಬೀಗ ಹಾಕಿರುವುದನ್ನು ಕಂಡು ಮನೆಯ ಬಾಗಿಲಲ್ಲಿ ಸ್ವಲ್ಪ ಹೊತ್ತು ಕಾದರು. ಆದರೂ ಮುಲ್ಲಾ ವಾಪಸ್ ಬರುವ ಸೂಚನೆ ಕಾಣದಿದ್ದಾಗ ಸಿಟ್ಟಿನಿಂದ ಮನೆಯ ಬಾಗಿಲ ಮೇಲೆ ‘ಮೂರ್ಖ’ ಎಂದು ಸುಣ್ಣದಿಂದ ಬರೆದು ವಾಪಸ್ ಹೋಗಿಬಿಟ್ಟರು.
ಸಂಜೆ ಮನೆಗೆ ವಾಪಸ್ ಬಂದ ನಸ್ರುದ್ದೀನ ಮನೆಯ ಬಾಗಿಲ ಮೇಲೆ ಬರೆದದ್ದನ್ನು ಓದಿದ. ಆಗ ಅವನಿಗೆ ತಾನು ವಿದ್ವಾಂಸರಿಗೆ ಚರ್ಚೆಗೆಂದು ಸಮಯ ಕೊಟ್ಟಿದ್ದು ನೆನಪಾಯಿತು.
ಕೂಡಲೇ ಮುಲ್ಲಾ ಓಡುತ್ತ ವಿದ್ವಾಂಸರ ಮನೆಗೆ ಹೋದ. ಇವನನ್ನು ಕಂಡ ಕೂಡಲೆ ವಿದ್ವಾಂಸರ ಸಿಟ್ಟು ನೆತ್ತಿಗೇರಿತು. ಅವರು ಬಾಯಿಗೆ ಬಂದ ಹಾಗೆ ಮುಲ್ಲಾನನ್ನು ಬೈಯ್ಯಲು ಶುರುಮಾಡಿದರು.
ಅವರನ್ನು ಸಮಾಧಾನ ಮಾಡುತ್ತ ಮುಲ್ಲಾ ಹೇಳಿದ,
“ ಸ್ವಾಮಿ ದಯವಿಟ್ಟು ಕ್ಷಮಿಸಿ, ನನಗೆ ಮರೆತು ಹೋಗಿತ್ತು. ಸಂಜೆ ಮನೆಗೆ ಬಂದಾಗ ಯಾರೋ ನನ್ನ ಮನೆಯ ಬಾಗಿಲ ಮೇಲೆ ನಿಮ್ಮ ಹೆಸರು ಬರೆದಿದ್ದರು, ಕೂಡಲೇ ಓಡಿ ಬಂದೆ“.

Leave a Reply