ಏಕ ಏವ ಹಿ ಭೂತಾತ್ಮಾ ಭೂತೇಭೂತೇ ವ್ಯವಸ್ಥಿತಃ| ಏಕಧಾ ಬಹುಧಾ ಚೈವ ದೃಶ್ಯತೇ ಜಲಚಂದ್ರವತ್
ಪ್ರತಿಯೊಂದು ಜಡ – ಚೇತನದಲ್ಲೂ ಸರ್ವಕಾರಣ ಕಾರಣ ಶಕ್ತಿ ನೆಲೆಸಿದೆ. ಬಾನಿನಲ್ಲಿರುವ ಏಕೈಕ ಚಂದ್ರನು ನೀರು ತುಂಬಿದ ಪ್ರತಿ ಕೊಡ, ಬಾವಿ, ಕೊಳ, ಬೊಗಸೆಯಲ್ಲೂ ಪ್ರತಿಫಲಿಸುವನೋ; ಹಾಗೆಯೇ ಸರ್ವಜಗನ್ನಿಯಾಮಕ ನಮ್ಮೆಲ್ಲರಲ್ಲೂ ನೆಲೆಸಿದ್ದಾನೆ. ಆದ್ದರಿಂದ, ಸರ್ವರೂ ಸಮಾನರು ಎನ್ನುವ ಅರಿವು ನಮ್ಮಲ್ಲಿ ಸ್ಥಾಪಿಸಿಕೊಳ್ಳಬೇಕು. ಈ ಪ್ರಜ್ಞೆ ನಮ್ಮನ್ನು ಉತ್ತಮ ಜೀವಿಗಳನ್ನಾಗಿ ಮಾಡುವುದು. ಆತ್ಮಸಾಧನೆಯ ಮಾರ್ಗದಲ್ಲಿ ಮುನ್ನಡೆಸುವುದು. – ಇದು ಸುಭಾಷಿತದ ತಾತ್ಪರ್ಯ.
ಆಕಾಶದಲ್ಲಿ ಇರುವುದು ಒಂದೇ ಚಂದ್ರ. ಆದರೆ ಭೂಮಿ ಮೇಲಿನ ಪ್ರತಿಯೊಂದು ನೀರಿನ ಸೆಲೆಯಲ್ಲೂ ಅವನ ಪ್ರತಿಬಿಂಬವಿದೆ. ಮತ್ತು ಆ ಎಲ್ಲ ಪ್ರತಿಬಿಂಬಗಳೂ ಸಮಾನವಾಗಿವೆ. ಅವುಗಳಲ್ಲಿ ಯಾವ ಭಿನ್ನತೆಯೂ ಇರುವುದಿಲ್ಲ. ಮತ್ತು ಚಂದ್ರಬಿಂಬ ಯಾವುದೇ ಒಂದು ನೀರಸೆಲೆಗೆ ಸೀಮಿತವೂ ಅಲ್ಲ. ಯಾರೂ ಅದನ್ನು “ಮಾತ್ರ ನನ್ನದು” ಎಂದು ಅಧಿಕಾರ ಸ್ಥಾಪಿಸಲು ಬರುವುದಿಲ್ಲ.
ಹಾಗೆಯೇ ನಮ್ಮೆಲ್ಲರಲ್ಲೂ ಚಂದ್ರಬಿಂಬದಂತೆ ಒಬ್ಬನೇ ಭಗವಂತ ನೆಲೆಸಿದ್ದಾನೆ. ಮೇಲು – ಕೀಳು, ಬಂಧು – ಶತ್ರು ಎಂಬ ಹೊಡೆದಾಟಗಳನೆಲ್ಲ ಬಿಟ್ಟು ಕೂಡಿ ಬಾಳೋಣ – ಇದು ಸುಭಾಷಿತದ ಆಶಯ.