ವಿಶಿಷ್ಟ ಅಧ್ಯಾತ್ಮ ಚಿಂತಕ ಯುಜಿ ಕೃಷ್ಣಮೂರ್ತಿಯವರ ಜೊತೆ ಆಸಕ್ತರು ನಡೆಸಿದ ಸಂವಾದದ ಒಂದು ತುಣುಕು ಇಲ್ಲಿದೆ… ಸ಼ಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಪ್ರಶ್ನೆ : ಸಾವಿನ ಬಗ್ಗೆ ಕೇಳಬಹುದೆ? ಸಾವು ಎಂದರೇನು ?
ಯೂಜಿ : ಪ್ರಕೃತಿಯಲ್ಲಿ ಸಾವು ಅನ್ನುವಂಥದ್ದು ಏನೂ ಇಲ್ಲ, ಇರುವುದೆಲ್ಲ ಅಣುಗಳ ಮರು ಜೋಡಣೆ. (ನಗು)
ಪ್ರಶ್ನೆ : ಏನಿದು ಅಣುಗಳ ಮರು ಜೋಡಣೆ?
ಯೂಜಿ: ಪ್ರಕೃತಿಯಲ್ಲಿನ ಶಕ್ತಿಯ ಸಮತೋಲನವನ್ನ ಯಾವದೋ ಒಂದು ಕಾರಣಕ್ಕೆ ಕಾಪಾಡಬೇಕಿದೆ, ಯಾವ ಕಾರಣ ಅಂತ ನನಗೆ ಗೊತ್ತಿಲ್ಲ. ಆದ್ದರಿಂದ ಪ್ರಕೃತಿಯಲ್ಲಿನ ಶಕ್ತಿಯ ಸಮತೋಲನದಲ್ಲಿ ಏರು ಪೇರುಗಳಾದಾಗ ಸಾವುಗಳಾಗುತ್ತವೆ. ಇದು ಬೇರೇನಲ್ಲ ಅಣುಗಳ ಮರ ಜೋಡಣೆ ಅಷ್ಟೇ. ಈ ಜೀವಿಗೆ ತಾನು ಒಂದು ಕಾಲಘಟ್ಟದಲ್ಲಿ ಹುಟ್ಟದ್ದೆ, ಮತ್ತು ಇನ್ನೊಂದು ಕಾಲಘಟ್ಟದಲ್ಲಿ ಸಾಯಲಿದ್ದೇನೆ ಹಾಗು ಈ ಜೀವ ಈಗ ಈ ಕ್ಷಣದಲ್ಲಿ ಬದುಕುತ್ತಿದೆ, ಸತ್ತಿಲ್ಲ ಎನ್ನುವುದನ್ನ ಕಂಡುಕೊಳ್ಳುವುದು ಸಾಧ್ಯವೇ ಇಲ್ಲ. ಈ ಜೀವಿಯ ಬಗ್ಗೆ ಇರುವ ಎಲ್ಲ ತಿಳುವಳಿಕೆ….. ಹುಟ್ಟು, ಸಾವು ಇಂಥದೆಲ್ಲ, ಇಲ್ಲಿ (ತಮ್ಮ ತಲೆಯತ್ತ ಬೊಟ್ಟು ಮಾಡುತ್ತ) ಇಲ್ಲವೇ ಇಲ್ಲ.
ಪ್ರಶ್ನೆ : ಹಾಗಾದರೆ ನೀವು ಬದುಕಿರುವಿರೋ ಅಥವಾ ಸತ್ತಿರುವಿರೋ ಎನ್ನುವುದು ನಿಮಗೆ ಗೊತ್ತಾಗುವುದಿಲ್ಲವೆ ?
ಯೂಜಿ : ಸಾಧ್ಯವೇ ಇಲ್ಲ. “ ನೀವು ಜೀವಂತವಿರುವಿರಾ?” ಎಂದು ನನ್ನನ್ನ ನೀವು ಪ್ರಶ್ನೆ ಮಾಡಿದರೆ, ಹೌದು ನಾನು ಜೀವಂತ ಎಂದು ಉತ್ತರಿಸುತ್ತೇನೆ. ಏಕೆಂದರೆ ನಿಮ್ಮ ಪ್ರಶ್ನೆ ಹುಟ್ಟಿರೋದು, ಹೇಗೆ ಜೀವಂತ ಮನುಷ್ಯರು ಕಾರ್ಯ ನಿರ್ವಹಿಸುತ್ತಾರೆ ಎನ್ನುವ ಸಾಮಾನ್ಯ ತಿಳುವಳಿಕೆಯ ಮೇಲಿಂದ. ಅದು ಒಂದು ಸಾಮಾನ್ಯ ತಿಳುವಳಿಕೆ ಅಷ್ಟೇ. ಹಾಗಾಗಿ ಸಹಜವಾಗಿಯೇ “ ನೀವು ಜೀವಂತವಾಗಿರುವಿರ?” ಎಂದು ನನ್ನ ನೀವು ಪ್ರಶ್ನೆ ಮಾಡಿದರೆ “ ಹೌದು, ಖಂಡಿತವಾಗಿ ನಾನು ಜೀವಂತವಾಗಿರುವೆ” ಎಂದು ನಾನು ಉತ್ತರಿಸುವೆ, ಏಕೆಂದರೆ ಜೀವಂತ ಮನುಷ್ಯ ಕಾರ್ಯನಿರ್ವಹಿಸುವ ಬಗ್ಗೆ ನಿಮಗಿರುವ ತಿಳುವಳಿಕೆಯನ್ನೇ ನನಗೂ ಕಲಿಸಲಾಗಿದೆ. ಆದರೆ ಈ ಜೀವ ಜೀವಂತವಾಗಿದೆ ಎನ್ನುವುದನ್ನ ಅನುಭವಿಸಿ ಕಂಡುಕೊಳ್ಳಲು ನಮಗೆ ಸಾಧ್ಯವಿಲ್ಲ. ಏಕೆಂದರೆ thought ಒಂದು ಸತ್ತ ಸಂಗತಿ ಆದ್ದರಿಂದಲೇ thought ಗೆ ಜೀವಂತವಾಗಿ ಮಿಡಿಯುತ್ತಿರುವುದನ್ನ ತನ್ನ ಪರೀಧಿಯಲ್ಲಿ ಹಿಡಿದಿಡುವುದು ಅಸಾಧ್ಯ.
ಪ್ರಶ್ನೆ : ಅಂದರೆ thought ತನಗೆ ಅನುಭವಿಸಲು ಸಾಧ್ಯವಾಗದೇ ಇರುವ ಒಂದು ಸಂಗತಿಯನ್ನ ಅನುಭವಿಸಲು ವಿಫಲ ಪ್ರಯತ್ನ ನಡೆಸುತ್ತಿದೆಯೇ ?
ಯೂಜಿ: ಹೌದು, ಏಕೆಂದರೆ thought ಗೆ ತಾನು ಸುಟ್ಟು ಹೋಗುವ ಭಯ. ವಿದ್ಯುತ್ ಹರಿಯುತ್ತಿರುವ ತಂತಿಯನ್ನ ನೀವು ಮುಟ್ಟಿದರೆ ನೀವು ತಕ್ಷಣ ಸುಟ್ಟು ಹೋಗುತ್ತೀರಿ. ಆದ್ದರಿಂದಲೇ thought ಜೀವಂತ ಬದುಕನ್ನ ಮುಟ್ಟುವುದಿಲ್ಲ , ಆಟ ಆಡುತ್ತದೆ, ಕೈ ಗಳಿಗೆ ಗ್ಲೌಸ್ ಹಾಕಿಕೊಳ್ಳುತ್ತದೆ ಮತ್ತು ಬದುಕು, ಸಾವಿನ ಬಗ್ಗೆ ಮಾತನಾಡುತ್ತದೆ.
ಪ್ರಶ್ನೆ : ದೇಹಕ್ಕೆ thought ಹೊರತಾಗಿಯೂ ಒಂದು ತಿಳುವಳಿಕೆ ಇದೆಯೇ ?
ಯೂಜಿ : ಹೃದಯಕ್ಕೆ ತಾನು ರಕ್ತ ಪಂಪ್ ಮಾಡುತ್ತಿರುವ ಬಗ್ಗೆ ಗೊತ್ತಿಲ್ಲ. “ ನಾನು ಸರಿಯಾಗಿ ರಕ್ತ ಪಂಪ್ ಮಾಡುತ್ತಿದ್ದೀನಾ?” ಎಂದು ಹೃದಯ ಎಂದೂ ಪ್ರಶ್ನೆ ಮಾಡಿಕೊಳ್ಳುವುದಿಲ್ಲ , ಅದು ಸುಮ್ಮನೇ ತನ್ನ ಕೆಲಸ ಮಾಡುತ್ತದೆ.” ಬದುಕಿಗೇನಾದರೂ ಅರ್ಥ ಇದೆಯೆ? ಉದ್ದೇಶ ಇದೆಯೆ?” ಇಂಥ ಪ್ರಶ್ನೆಗಳು ಬದುಕಿನ ಜೀವಂತಿಕೆಗೆ ಅಪಮಾನದಂತಿವೆ. ನೀವು ಕಲ್ಪನೆ ಮತ್ತು ಭಾವನೆಗಳ ಲೋಕದಲ್ಲಿ ಬದಕುತ್ತಿದ್ದೀರಿ.
ಪ್ರಶ್ನೆ : ಸಾವಿನ ನಂತರ ಬದುಕು ಇದೆಯಾ?
ಯೂಜಿ : ಈ ಬಗ್ಗೆ ನಾನು ಏನು ಹೇಳಿದರೂ ಜನರಿಗೆ ಆ ಬಗ್ಗೆ ಆಸಕ್ತಿ ಇಲ್ಲ. ಪುನರ್ಜನ್ಮದ ಬಗ್ಗೆ ಜನ ನನ್ನ ಪ್ರಶ್ನೆ ಮಾಡಿದಾಗ, ನಂಬುವವರಿಗೆ ಇದೆ, ನಂಬದವರಿಗೆ ಇಲ್ಲ ಎಂದೇ ಉತ್ತರಿಸುತ್ತೇನೆ. ಇದು ಕೇವಲ ಜಾಣ ಉತ್ತರವಲ್ಲ, ನಂಬಿಕೆಯ ಪ್ರಶ್ನೆ. ಪ್ರಕೃತಿಯ ನಿಯಮಗಳ ಹಾಗೆ, ಉದಾಹರಣೆಗೆ ಭೂಮಿಯ ಗುರುತ್ವಾಕರ್ಷಣೆಯ ನಿಯಮ ಗಳ ಹಾಗೆ ನೀವು ಪುನರ್ಜನ್ಮದ ಬಗ್ಗೆ ಮೂಲ ಭೂತ ಪ್ರಶ್ನೆ ಕೇಳುವಿರಾದರೆ, ನನ್ನ ಉತ್ತರ “ಖಂಡಿತವಾಗಿ ಪುನರ್ಜನ್ಮವಿಲ್ಲ”
ಪುನರ್ಜನ್ಮದ ಬಗ್ಗೆ ನಂಬಿಕೆ ಹುಟ್ಟಿದ್ದು ಸಾವಿನ ನಂತರವೂ ಜೀವದ ಏನೋ ಒಂದು ಮುಂದುವರೆಯುತ್ತದೆ ಎನ್ನುವ ಬೇಡಿಕೆ ಕಾರಣವಾಗಿ. ಈ ಯಾಂತ್ರಿಕ ಮನಸ್ಥಿತಿಯೇ ಸಾವಿನ ನಂತರ ಏನಾಗುತ್ತದೆ ಎನ್ನುವ ಪ್ರಶ್ನೆ ಕೇಳುತ್ತಿರುವುದು. ಮತ್ತು ಇದೇ ಕಾರಣಕ್ಕೆ ನೀವು ಬದುಕಿಗೆ ಅರ್ಥವಿದೆಯೆ, ಉದ್ದೇಶವಿದೆಯೆ ಎನ್ನುವ ಪ್ರಶ್ನೆ ಕೇಳುತ್ತಿರುವುದು. ಏನೋ ಒಂದು ಕಾರಣಕ್ಕಾಗಿ ಈ ಯಾಂತ್ರಿಕ ಮನಸ್ಥಿತಿಗೆ , thought ನ ಚಲನೆಗೆ ಸಾವಿಗೀಡಾಗುವುದು ಇಷ್ಟವಿಲ್ಲ. ಜನ ಅಲ್ಲಿ ಸಾಯುವುದನ್ನ ನೀವು ನೋಡುತ್ತೀರಿ. ಆದ್ದರಿಂದ ಇಲ್ಲೊಂದು ಕೇಂದ್ರವಿದೆ, ಚೇತನವಿದೆ, ಆತ್ಮವಿದೆ ಎನ್ನುವ ನಂಬಿಕೆ ಇದರ ಆಚೆಗೂ ಏನೋ ಇದೆ ಎನ್ನುವ ಇನ್ನೊಂದು ನಂಬಿಕೆಗೆ ಕಾರಣವಾಗಿದೆ. ಆದರೆ ಈ ಬದುಕಿನ ನಂತರ ಏನಿದೆ ಎನ್ನುವುದನ್ನ ನೀವು ತಿಳಿದುಕೊಳ್ಳಬೇಕಾದರೆ ನೀವು ಈ ಕ್ಷಣ ಸಾಯಬೇಕು. ಯಾವಾಗ ಈ ಪ್ರಶ್ನೆ ಅಥವಾ ಈ ಬಗೆಗಿನ ನಂಬಿಕೆ ಕೊನೆಯಾಗುವುದೋ ಆಗ ಅದೇ ಕ್ಷಣದಲ್ಲಿ ಸಾವು ಸಂಭವಿಸುವುದು, ವೈದ್ಯಕೀಯ ಸಾವು. ಆಗ ಬದುಕಿನ ಆಚೆಯ ಬಗ್ಗೆ ಯಾವ ಪ್ರಶ್ನೆಯೂ ಉದ್ಭವವಾಗುವುದಿಲ್ಲ, ಏಕೆಂದರೆ ಜೀವಂತ ವ್ಯವಸ್ಥೆಗೆ ತಾನು ಬದುಕಿದ್ದೇನೋ ಇಲ್ಲವೋ ಎಂದು ತಿಳಿದುಕೊಳ್ಳುವ ಯಾವ ಸಾಧ್ಯತೆಯೂ ಇಲ್ಲ.
ಪ್ರಶ್ನೆ : ನೀವು ಹೇಳಿದಿರಿ, ಪುನರ್ಜನ್ಮ ನಂಬುವ ಜನ…….
ಯೂಜಿ : ನಂಬಿಕೆ ಹೋಗಬೇಕು, ನಂಬಿಕೆಯ ಕೊನೆಯೇ ಸಾವು.
ಪ್ರಶ್ನೆ : ಹಾಗಾದರೆ ಸಾವು ಎಲ್ಲ ನಂಬಿಕೆಗಳ ಕೊನೆಯೇ?
ಯೂಜಿ : ಆದರೆ ನೀವು ಒಂದು ನಂಬಿಕೆಯನ್ನ ಇನ್ನೊಂದರಿಂದ ಬದಲಿಸುತ್ತೀರಿ, ಒಂದು ಭ್ರಮೆಯಿಂದ ಇನ್ನೊಂದನ್ನ. ಇದನ್ನೇ ನಾವು ಮಾಡುತ್ತಿರುವುದು.
ಪ್ರಶ್ನೆ : ಇನ್ನೊಂದು ಬೇರೆ ಪ್ರಶ್ನೆ.
ಯೂಜಿ : ನನ್ನ ಉತ್ತರ ಮಾತ್ರ ಇದೇ ( ನಗುತ್ತ)