ಪ್ರೇಮ ಕರ್ತವ್ಯವಲ್ಲ |ಜಿಡ್ಡು ಕಂಡ ಹಾಗೆ

ಪ್ರೇಮವಿರುವಾಗ, ಕರ್ತವ್ಯ, ನಿಬಂಧನೆ ಯಾವುದಕ್ಕೂ ಜಾಗವಿಲ್ಲ. ಎದೆಯಲ್ಲಿ ಪ್ರೇಮವಿರದ ಮನುಷ್ಯ ಮಾತ್ರ ಕರ್ತವ್ಯ, ಹಕ್ಕುಗಳ ಬಗ್ಗೆ ಮಾತನಾಡುತ್ತಾನೆ ~ ಜಿಡ್ಡು ಕೃಷ್ಣಮೂರ್ತಿ | ಅನುವಾದ ಮತ್ತು ನಿರೂಪಣೆ : ಚಿದಂಬರ ನರೇಂದ್ರ

ಪ್ರೇಮದ ಹಾಜರಾತಿಯಲ್ಲಿ ಕರ್ತವ್ಯಕ್ಕೆ ಯಾವ ಮನ್ನಣೆಯೂ ಇಲ್ಲ. ನೀವು ನಿಮ್ಮ ಸಂಗಾತಿಯನ್ನ ಪ್ರೀತಿಸುವಾಗ, ನಿಮ್ಮ ಎಲ್ಲವನ್ನೂ ನೀವು ಅವರೊಡನೆ ಹಂಚಿಕೊಳ್ಳುತ್ತೀರಿ – ನಿಮ್ಮ ಆಸ್ತಿ, ನಿಮ್ಮ ದುಗುಡಗಳು, ನಿಮ್ಮ ಆತಂಕಗಳು, ನಿಮ್ಮ ಖುಶಿ ಎಲ್ಲವನ್ನೂ.

ಪ್ರೇಮದಲ್ಲಿ ನೀವು ಅವರ ಮೇಲೆ ಅಧಿಕಾರ ಚಲಾಯಿಸುವುದಿಲ್ಲ ನಿಮ್ಮ ಸಂಗಾತಿ ಕೇವಲ ನಿಮ್ಮ ಲೈಂಗಿಕ ಹಸಿವನ್ನು ತಣಿಸುವ, ನಿಮಗಾಗಿ ಮಕ್ಕಳನ್ನು ಹೆರುವ ಯಂತ್ರವಲ್ಲ. ಬೇಕಾದಾಗ ಬಳಸಿ ಎಸೆದುಬಿಡುವ ವಸ್ತುವಲ್ಲ.

ಪ್ರೇಮವಿರುವಾಗ, ಕರ್ತವ್ಯ, ನಿಬಂಧನೆ ಯಾವುದಕ್ಕೂ ಜಾಗವಿಲ್ಲ. ಎದೆಯಲ್ಲಿ ಪ್ರೇಮವಿರದ ಮನುಷ್ಯ ಮಾತ್ರ ಕರ್ತವ್ಯ, ಹಕ್ಕುಗಳ ಬಗ್ಗೆ ಮಾತನಾಡುತ್ತಾನೆ. ಈ ದೇಶದಲ್ಲಿ ಪ್ರೇಮದ ಜಾಗವನ್ನು ಕರ್ತವ್ಯ ಮತ್ತು ಹಕ್ಕುಗಳು ಆಕ್ರಮಿಸಿಕೊಂಡಿವೆ. ಕಾನೂನು, ನಿಯಮ, ನಿಬಂಧನೆಗಳು ಪ್ರೀತಿ, ವಾತ್ಸಲ್ಯಗಳಿಗಿಂತಲೂ ಹೆಚ್ಚಿನ ಮಹತ್ವ ಪಡೆದುಕೊಂಡಿವೆ.

ಪ್ರೇಮವಿರುವಾಗ ಎಂಥ ಸಮಸ್ಯೆಯೂ ಸರಳ, ಪ್ರೇಮದ ಅನುಪಸ್ಥಿತಿಯಲ್ಲಿ ಎಲ್ಲವೂ ಭೀಕರ ಸಮಸ್ಯೆಗಳೇ. ತನ್ನ ಸಂಗಾತಿಯನ್ನ, ಮಕ್ಕಳನ್ನ ಪ್ರೀತಿಸುವ ಮನುಷ್ಯ, ಹಕ್ಕು, ಕರ್ತವ್ಯಗಳ ದಿಕ್ಕಿನಲ್ಲಿ ಯೋಚಿಸುವುದು ಸಾಧ್ಯವಿಲ್ಲ.

ನೀವು ನಿಮ್ಮ ಸ್ವಂತ ಹೃದಯ, ಮನಸ್ಸುಗಳನ್ನೊಮ್ಮೆ ಸೂಕ್ಷ್ಮವಾಗಿ ಪರೀಕ್ಷಿಸಿಕೊಳ್ಳಿ. ನಿಮ್ಮ ಸಂಗಾತಿಯನ್ನ ಕೇವಲ ನಿಮ್ಮ ಲೌಕಿಕ ಮತ್ತು ದೈಹಿಕ ಉಪಯೋಗಗಳಿಗಾಗಿ ಮಾತ್ರ ನೀವು ಅವಲಂಬಿಸಿರುವಿರಿ. ಆ ಅವಲಂಬನೆ ಬೇಡವಾದಾಗ, ನೀರಸ ಎನಿಸತೊಡಗಿದಾಗ ಅವರನ್ನ ದೈಹಿಕವಾಗಿ, ಮಾನಸಿಕವಾಗಿ ಹಿಂಸಿಸಲು ಶುರುಮಾಡುತ್ತೀರಿ. ಈ ಹಿಂಸೆಯನ್ನು ಸಹಜಗೊಳಿಸಲು ನೀವು ಹಕ್ಕು ಮತ್ತು ಕರ್ತವ್ಯ ಎನ್ನುವ ವ್ಯವಸ್ಥೆಯನ್ನ ರೂಪಿಸಿಕೊಂಡಿದ್ದೀರಿ. ದೌರ್ಜನ್ಯಕ್ಕೊಳಗಾದ ಸಂಗಾತಿ ಬಂಡೆದ್ದಾಗ ಈ ವ್ಯವಸ್ಥೆಯನ್ನ ಮುಂದುಮಾಡಿಕೊಂಡು ಅವರ ಸ್ಥೈರ್ಯವನ್ನ ಕುಂದಿಸುವ ಪ್ರಯತ್ನ ಮಾಡುತ್ತೀರಿ. ಚಲನಶೀಲವಲ್ಲದ, ಅವನತಿಯತ್ತ ಹೆಜ್ಜೆ ಹಾಕುತ್ತಿರುವ ಸಮಾಜ ಮಾತ್ರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾತನಾಡುತ್ತದೆ.

ಜಿಡ್ಡು ಅವರ ಈ ಚಿಂತನೆಯೊಡನೆ, ಲಾವೋತ್ಸು ನ ಪದ್ಯ ಒಂದು ನೆನಪಾಗುತ್ತಿದೆ.

ದೊಡ್ಡ ಸಂಪ್ರದಾಯವೊಂದು
ಅವನತಿಯ ಹಾದಿ ಹಿಡಿದಾಗ
ಕರುಣೆ ಮತ್ತು ನೈತಿಕತೆ ಹುಟ್ಟಿಕೊಳ್ಳುತ್ತವೆ.

ಕಲಿಕೆ ಮತ್ತು ಜಾಗರೂಕತೆ
ಮೇರೆ ಮೀರುತ್ತಿದ್ದಂತೆಯೇ
ಬೂಟಾಟಿಕೆ ಹುಟ್ಟಿಕೊಳ್ಳುತ್ತದೆ.

ಒಡೆದ ಮನೆಯಲ್ಲಿ
ಮಕ್ಕಳು, ತಂದೆ ತಾಯಂದಿರು
ಕರ್ತವ್ಯಪರಾಯಣರು.

ಛಿದ್ರಗೊಂಡ ಸಮಾಜದ ತುಂಬ
ನಂಬಿಕಸ್ತ ಭಕ್ತರ
ಮೆರವಣಿಗೆ, ಉರವಣಿಗೆ.

Leave a Reply