ಪಂಡಿತೋತ್ತಮ ಹನುಮನಿಂದ ಕಲಿಯಬೇಕಾದ 4 ಪಾಠಗಳು

ಹನುಮಂತ ಒಬ್ಬ ಸಂಸ್ಕಾರಿ, ಸಜ್ಜನ ವಿದ್ವಾಂಸನೆಂದು ರಾಮ ಮೊದಲ ಭೇಟಿಯಲ್ಲೇ ಕಂಡುಕೊಳ್ಳುತ್ತಾನೆ. ಲಕ್ಷ್ಮಣನಿಗೆ ಅವನೊಡನೆ ಮಧುರವಾಗಿ ವ್ಯವಹರಿಸು ಅನ್ನುತ್ತಾನೆ. ರಾಮ ಹನುಮಂತನ ಕುರಿತು ಹೀಗೆ ಹೇಳಲು ಕಾರಣವೇನು? ಅವನ ಮಾತಿನಲ್ಲಿ ಅಂಥಾ ಯಾವ ವಿಶಿಷ್ಟ ಗುಣಗಳಿದ್ದವು? ಅದರಿಂದ ನಾವು ಕಲಿಯಬಹುದಾದ ಪಾಠವೇನು…? ~ ಸಾ.ಹಿರಣ್ಮಯಿ

ಮೊದಲ ಭೇಟಿಯಲ್ಲೇ ತನ್ನ ಮಾತಿನ ಕೌಶಲದಿಂದ ರಾಮನ ಹೃದಯ ಗೆದ್ದುಬಿಡುತ್ತಾನೆ ಹನುಮಂತ. ಮೊದಲು ಸಾಮಾನ್ಯ ವಟುವಿನಂತೆ ವೇಷ ಧರಿಸಿ ಬಂದು ರಾಮ ಲಕ್ಷ್ಮಣರನ್ನು ಮಾತಾಡಿಸುವ ಹನುಮ, ಅವರು ನಿರಪಾಯರೆಂದು ಮನದಟ್ಟಾದ ನಂತರ ತನ್ನ ನಿಜ ರೂಪದಲ್ಲಿ ಪ್ರಕಟವಾಗುತ್ತಾನೆ. ಆಗ ಲಕ್ಷ್ಮಣ ಅವನ ಮೇಲೆ ಸಂದೇಹಗೊಂಡು, ಯಾರೋ ಮಾಯಾವಿ ಇರಬೇಕೆಂದು ಉದ್ವಿಗ್ನವಾಗುತ್ತಾನೆ.

ರಾಮ ತನ್ನ ಸಹೋದರನನ್ನು ಸಮಾಧಾನಪಡಿಸುತ್ತಾ, “ಸೌಮಿತ್ರಿ! ಸುಗ್ರೀವನ ಸಚಿವನಾದ ಇವನು (ಹನುಮನು) ಮಾತಿನಲ್ಲಿ ಸ್ನೇಹಮಯಿಯೂ ವಿದ್ವಾಂಸನೂ ಆಗಿರುವನು. ಇವನೊಡನೆ ಮಧುರವಾಗಿ ವ್ಯವಹರಿಸು” ಎಂದು ಸೂಚಿಸುತ್ತಾನೆ. ಅಷ್ಟೇ ಅಲ್ಲ, ಇಂತಹ ವ್ಯಕ್ತಿಯನ್ನು ಸಚಿವನನ್ನಾಗಿ ಹೊಂದಿರುವ ದೊರೆ ಭಾಗ್ಯಶಾಲಿ ಎಂದು ಹೊಗಳುತ್ತಾನೆ.
ಹನುಮನಿಗಿದ್ದ ಮಾತಿನ ಕೌಶಲವನ್ನು ರೂಢಿಸಿಕೊಂಡ ಯಾವುದೇ ವ್ಯಕ್ತಿ, ತಾನು ದುಡಿಯುವ, ಪ್ರತಿನಿಧಿಸುವ ಸಂಸ್ಥೆಗೆ ಅಗತ್ಯವಾಗಿ ಯಶ ತಂದುಕೊಡಬಲ್ಲರು, ಸ್ವತಃ ತಾವೂ ವೃತ್ತಿಯಲ್ಲೂ ವೈಯಕ್ತಿಕ ಬದುಕಿನಲ್ಲೂ ಮೇಲೇರಬಲ್ಲರು ಎಂಬುದನ್ನು ಇದು ಸೂಚಿಸುತ್ತದೆ.
ರಾಮ ಹನುಮಂತನ ಕುರಿತು ಹೀಗೆ ಹೇಳಲು ಕಾರಣವೇನು? ಹನುಮನ ಮಾತಿನಲ್ಲಿ ಅಂಥಾ ಯಾವ ವಿಶಿಷ್ಟ ಗುಣಗಳಿದ್ದವು? ಕಿಷ್ಕಿಂಧಾ ಕಾಂಡದ ಶ್ಲೋಕ 4.3.29 ರಿಂದ 32ವರೆಗೆ ಇದರ ವಿವರಣೆಯಿದೆ. ಇಲ್ಲಿ ಮೂಲ ಶ್ಲೋಕವನ್ನೂ ತಾತ್ಪರ್ಯವನ್ನೂ ನೀಡಲಾಗಿದೆ.

1

ನೂನಂ ವ್ಯಾಕರಣಂ ಕೃತ್ಸ್ನಮನೇನ ಬಹುಧಾ ಶೃತಮ್ |
ಬಹು ವ್ಯಾಹರತಾSನೇನ ಕಿಂಚಿದಪಶಬ್ದಿತಮ್ ||
ವ್ಯಾಕರಣದೋಷವಿಲ್ಲದ, ಸ್ಪಷ್ಟ ಉಚ್ಚಾರಣೆ
ಸುದೀರ್ಘವಾಗಿ ಮಾತಾಡುವಾಗಲೂ ಒಂದೇ ಒಂದು ಅಪಶಬ್ದ ಬಳಸದೆ ಇರುವುದು

2

ನ ಮುಖೇ ನೇತ್ರಯೋರ್ವಾಪಿ ಲಲಾಟೇ ಚ ಭ್ರುವೋಸ್ತಥಾ |
ಅನ್ಯೇಷ್ಚಪಿ ಚ ಗಾತ್ರೇಷು ದೋಷಃ ಸಂವಿದಿತಃ ಕ್ವಚಿತ್ ||
ಮಾತನಾಡುವಾಗ ಹಣೆಯನ್ನು ಸುಕ್ಕುಗಟ್ಟಿಸಿ ಅಸಹನೆ ತೋರದಿರುವುದು; ಕಣ್ಣುಗಳಾಗಲೀ, ಹುಬ್ಬುಗಳಾಗಲೀ ಯಾವ ಆಂಗಿಕ ಭಂಗಿಯಾಗಲೀ ವಿಕಾರ ಸೂಚಿಸದೆ ಇರುವುದು

3

ಅವಿಸ್ತರಂ, ಅಸಂದಿಗ್ಧಂ, ಅವಿಲಂಬಿತಮದ್ರುತಮ್ |
ಅರಸ್ಥಂ ಕಂಠಗಂ ವಾಕ್ಯಂ ವರ್ತತೇ ಮಧ್ಯಮೇ ಸ್ವರೇ ||
ಅತಿ ವಿಸ್ತಾರವಾಗಿ ಬೇಸರ ತರುವಂತೆಯೂ ಇಲ್ಲದೆ, ಸಂದೇಹಾಸ್ಪದವಾಗಿಯೂ ತೋರದೆ, ಕಿರುಚಿದಂತೆಯೂ ಅಲ್ಲದೆ, ನಿಧಾನ ಪಿಸುಗುಡವಂತೆಯೂ ಅಲ್ಲದೆ ಮಧ್ಯಮ ಸ್ವರದಲ್ಲಿ ಮಾತನಾಡುವುದು

4

ಸಂಸ್ಕಾರಕ್ರಮಸಂಪನ್ನಾಮದ್ರುತಾಮವಿಲಂಬಿತಾಮ್ |
ಉಚ್ಚಾರಯತಿ ಕಲ್ಯಾಣೀಂ ವಾಚಂ ಹೃದಯಹಾರಿಣೀಮ್ ||
ಸಂಸ್ಕಾರ ಬುದ್ಧಿಯಿಂದ, ಮಧುರವಾಗಿ, ಸ್ಪಷ್ಟವಾಗಿ, ಅವಸರವಾಗಿಯೂ ಅಲ್ಲದೆ – ನಿಧಾನವಾಗಿಯೂ ಇಲ್ಲದೆ, ಮಂಗಳಕರವಾಗಿ ಮನ ಗೆಲ್ಲುವಂತೆ ಮಾತನಾಡುವುದು

Leave a Reply