ಪ್ರೀತಿಗೆ ಹೊಂದಾಣಿಕೆಯ ಸಾಮರ್ಥ್ಯವಿಲ್ಲ| ಜಿಡ್ಡು ಕಂಡ ಹಾಗೆ

ಹೊಂದಾಣಿಕೆಯೆನ್ನುವುದು ಬುದ್ಧಿ-ಮನಸ್ಸಿಗೆ ಸಂಬಂಧಿಸಿದ್ದು, ಒಂದು ಶುದ್ಧ ಬೌದ್ಧಿಕ ಪ್ರಕ್ರಿಯೆ. ಆದರೆ ಖಂಡಿತವಾಗಿಯೂ ಪ್ರೀತಿ ಹೊಂದಾಣಿಕೆಗೆ ಒಗ್ಗುವಂಥದಲ್ಲ ~ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ : ಚಿದಂಬರ ನರೇಂದ್ರ

ಪ್ರೀತಿ, ಬುದ್ಧಿ-ಮನಸ್ಸಿನ ವಿಷಯವಲ್ಲ. ಪ್ರೀತಿ ಕೇವಲ ಲೈಂಗಿಕ ಕ್ರಿಯೆಗೆ ಸಂಬಂಧಿಸಿದ್ದೂ ಅಲ್ಲ. ಪ್ರೀತಿ, ಬುದ್ಧಿ-ಮನಸ್ಸಿಗೆ ಕಲ್ಪನೆ ಮಾಡಿಕೊಳ್ಳಲೂ ಆಗದಂಥ ಸಂಗತಿ. ಪ್ರೀತಿ ಎಂಥದೆಂದರೆ ಇದನ್ನ ಕಟ್ಟಿಕೊಳ್ಳುವುದೂ ಸಾಧ್ಯವಿಲ್ಲ. ಹೀಗಿರುವಾಗ ನೀವು ಪ್ರೀತಿಯಿಲ್ಲದೇ ಸಂಬಂಧ ಕಟ್ಟಿಕೊಳ್ಳುತ್ತೀರಿ, ಮದುವೆಯಲ್ಲಿ ಒಂದಾಗುತ್ತೀರಿ. ನಂತರ ಆ ಸಂಬಂಧದಲ್ಲಿ, ಆ ಮದುವೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ.

ಆದರೆ ಈ ಹೊಂದಾಣಿಕೆಯೆನ್ನುವುದು ಬುದ್ಧಿ-ಮನಸ್ಸಿಗೆ ಸಂಬಂಧಿಸಿದ್ದು, ಒಂದು ಶುದ್ಧ ಬೌದ್ಧಿಕ ಪ್ರಕ್ರಿಯೆ. ಆದರೆ ಖಂಡಿತವಾಗಿಯೂ ಪ್ರೀತಿ ಹೊಂದಾಣಿಕೆಗೆ ಒಗ್ಗುವಂಥದಲ್ಲ. ಇನ್ನೊಬ್ಬರನ್ನ ಪ್ರೀತಿಸುವುದೆಂದರೆ ಅಲ್ಲೊಂದು ಪೂರ್ಣ ಒಂದಾಗುವಿಕೆಯಿದೆ. ಪ್ರೀತಿ ಇಲ್ಲದಾಗ ಮಾತ್ರ ಹೊಂದಾಣಿಕೆ ಪ್ರಯತ್ನ ಮಾಡುತ್ತೇವೆ ಮತ್ತು ಈ ಹೊಂದಾಣಿಕೆಯನ್ನೇ ಮದುವೆ ಎಂಬ ಹೆಸರಿನಿಂದ ಗುರುತಿಸುತ್ತೇವೆ. ಮದುವೆಗಳು ವಿಫಲವಾಗುವ ಸಾಧ್ಯತೆ ಇರುವುದೇ ಆಗ. ಏಕೆಂದರೆ ಇಂಥ ಮದುವೆಯ ಮೂಲದಲ್ಲೇ ಸಂಘರ್ಷದ ಸಾಧ್ಯತೆಗೆ ಅವಕಾಶವಿದೆ. ಆಗಲೇ ಗಂಡ ಹೆಂಡಿರು ಒಬ್ಬರನ್ನೊಬ್ಬರು ದೂಷಿಸಲು ಆರಂಭಿಸುತ್ತಾರೆ. ಇದೊಂದು ಅಸಾಧಾರಣ ಸಂಕೀರ್ಣ ಸಮಸ್ಯೆ. ಎಲ್ಲ ಥರದ ಸಂಬಂಧಗಳಲ್ಲಿ ಸಮಸ್ಯೆಗಳಿರುತ್ತವೆಯಾದರೂ ಮದುವೆಯನ್ನ ತುಂಬ ಸಂಕೀರ್ಣ ಸಮಸ್ಯೆ ಎನ್ನುವುದಕ್ಕೆ ಕಾರಣ , ಮದುವೆಯಲ್ಲಿ ದೈಹಿಕ ಹಸಿವು, ಲೈಂಗಿಕ ಒತ್ತಡಗಳು ಬಹಳ ಪ್ರಬಲವಾಗಿರುವುದು.

ಹೊಂದಾಣಿಕೆಯಲ್ಲಿ ಸದಾ ಮಗ್ನವಾಗಿರುವ ಮನಸ್ಸು, ಸೆಕ್ಸ್ ಮೂಲಕ ಸುಖ ಕಾಣಲು ಹಾತೊರೆಯುತ್ತಿರುವ ಮನಸ್ಸು ಶುದ್ಧವಾಗಿರುವುದು ಹೇಗೆ ಸಾಧ್ಯ. ಸೆಕ್ಸ್ ಮೂಲಕ ತಾತ್ಕಾಲಿಕವಾಗಿ ಮನುಷ್ಯ ತನ್ನನ್ನು ತಾನು ಮರೆಯಬಹುದು, ಇಲ್ಲವಾಗಿಸಿಕೊಳ್ಳಬಹುದು. ಆದರೆ ಸೆಕ್ಸ್ ನ ಮೂಲಕ ಸುಖವನ್ನ ಹಿಂಬಾಲಿಸುವುದು ಕೇವಲ ಮನಸ್ಸಿನ ಆಟ ಮತ್ತು ಇಂಥ ಒಂದು ಬಯಕೆಯೇ ಮನಸ್ಸನ್ನು ಅಶುದ್ಧ ಸ್ಥಿತಿಯಲ್ಲಿಡುವುದು. ಪರಸ್ಪರರಲ್ಲಿ ಪ್ರೀತಿ ಇದ್ದಾಗ ಮಾತ್ರ ಮನಸ್ಸು ಸ್ವಚ್ಛವಾಗಿರುವುದು ಮತ್ತು ಸಂಬಂಧಗಳು ಯಶಸ್ವಿಯಾಗುವವು.

Leave a Reply