ಶಿಶಿರದಲ್ಲಿ ವಸಂತ ಪಂಚಮಿ! : ಪ್ರಕೃತಿ – ಸರಸ್ವತಿಯರ ಸಂಭ್ರಮದ ಹಬ್ಬ

ವಸಂತ ಪಂಚಮಿ ಪ್ರಕೃತಿಯ ಹೊಸತನವನ್ನು ಸಂಭ್ರಮಿಸುವ ಹಬ್ಬ. ಪುರಾಣಗಳ ಪ್ರಕಾರ ಈ ದಿನ ಸರಸ್ವತಿ ಆವಿರ್ಭವಿಸಿದ ದಿನವೂ ಹೌದು…

ಮಾಘ ಶುದ್ಧ ಪಂಚಮೀ ತಿಥಿಯನ್ನು “ವಸಂತ ಪಂಚಮಿ” ಎಂದು ಆಚರಿಸುವ ರೂಢಿ ಇದೆ. ಈ ದಿನದಿಂದ ಮೊದಲುಗೊಂಡು ಪ್ರಕೃತಿ ವಸಂತ  ಋತುವಿನ ಆಗಮನವನ್ನು ಪ್ರಕಟಿಸುತ್ತಾ ಹೋಗುತ್ತದೆ. ಶಿಶಿರದಲ್ಲಿ ಎಲೆ ಕಳಚಿ ಬೆತ್ತಲಾದ ಮರಗಳು ಹೂತುಂಬಿ ನಿಲ್ಲುತ್ತವೆ. ಹೀಗೆ ಮಾಘದಲ್ಲೂ ಚೈತ್ರವನ್ನು ನೆನಪಿಸುವ ಸಂಭ್ರಮಾಚರಣೆಯೇ ಈ ವಸಂತ ಪಂಚಮೀ ಉತ್ಸವ.

ಈ ಉತ್ಸವಾಚರಣೆ ಉತ್ತರ ಭಾಗದಲ್ಲಿ ಹೆಚ್ಚು. ಅಲ್ಲಿಯ ಭೌಗೋಳಿಕ ಲಕ್ಷಣಕ್ಕೆ ತಕ್ಕಂತೆ ಅಲ್ಲಿಯ ಸಸ್ಯ ಸಂಪತ್ತು ಮಾಘ ಮಾಸದಲ್ಲಿ ಹೂದುಂಬುವುದು ಹೆಚ್ಚು. ಜೊತೆಗೆ ವಾಣೀಜ್ಯ ಬೆಳೆಗಳಾದ ಸಾಸಿವೆ, ಸೂರ್ಯಕಾಂತಿಗಳೂ ಹೂತು ಹೊಲವನ್ನೇ ಹಳದಿಯಾಗಿಸಿಬಿಡುತ್ತವೆ. ಆದ್ದರಿಂದ ಉತ್ತರ ಭಾರತೀಯರು ಈ ದಿನ ಹಳದಿ ಬಟ್ಟೆ ತೊಟ್ಟು ಸಕ್ಕರೆ ಮಿಠಾಯಿ ಹಂಚಿ ಉತ್ಸವ ಮಾಡುತ್ತಾರೆ. ಗಾಳಿಪಟ ಹಾರಿಸಿ ಸಂಭ್ರಮಿಸುತ್ತಾರೆ.

ಕೃಷ್ಣ ಭಕ್ತರು ಮತ್ತು ಭಕ್ತ ವೈಷ್ಣವರು ಈ ದಿನವನ್ನು ಬಾಲಕೃಷ್ಣ ಗೋವರ್ಧನ ಗಿರಿಯ ಮೇಲೆ ನರ್ತನ ಮಾಡಿದ ದಿನವ್ಎಂದು ಗುರುತಿಸುತ್ತಾರೆ. ಈ ದಿನ ಕೃಷ್ಣನ ನರ್ತನ ನೋಡಲು ನಿಂತಲ್ಲೇ ನಿಂತ ಚಂದ್ರ ಒಂದು ಬ್ರಹ್ಮರಾತ್ರಿಯ ಕಾಲದವರೆಗೆ ಚಲಿಸಲಿಲ್ಲವಂತೆ. ಅಂದರೆ ಭೂಲೋಕದಲ್ಲಿ ಒಂದಿಡೀ ಬ್ರಹ್ಮರಾತ್ರಿಯಷ್ಟು ಕಾಲ ಕೃಷ್ಣ ನರ್ತನ ಮಾಡಿದನಂತೆ! ಭಕ್ತಿರಸ ತುಂಬಿದ ಇಂಥಾ ಕಲ್ಪನೆಗಳೇ ಅದೆಷ್ಟು ರಮ್ಯ! ಅಂದ ಹಾಗೆ ಈ ಕಥೆ ಭಾಗವತದಲ್ಲಿದೆ.

ಉಳಿದಂತೆ, ಸಾರ್ವತ್ರಿಕವಾಗಿ ವಸಂತ ಪಂಚಮಿಯ ದಿನ “ಸರಸ್ವತೀ ಪೂಜೆ” ನಡೆಸಲಾಗುತ್ತದೆ. ಈ ದಿನ ಸರಸ್ವತೀ ದೇವಿಯು ಬ್ರಹ್ಮನಿಂದ ಆವಿರ್ಭಾವಗೊಂಡಳೆಂದೂ, ಅವಳು ಆವಿರ್ಭಾವಗೊಂಡ ನಂತರ ಬ್ರಹ್ಮ ತಪಸ್ಸು ಆಚರಿಸಿ ಅಧ್ಯಾತ್ಮ ಜ್ಞಾನ ಪಡೆದನೆಂದೂ ನಂಬಿಕೆ ಇದೆ. ಆದ್ದರಿಂದಲೇ ಈ ದಿನ ಮಕ್ಕಳಿಗೆ “ಅಕ್ಷರಾಭ್ಯಾಸ” ಮಾಡಿಸುವ ರೂಢಿ ಹಲವು ಕಡೆ ಚಾಲ್ತಿಯಲ್ಲಿದೆ.

ಒಟ್ಟಾರೆ ವಸಂತ ಪಂಚಮಿ ಹೊಸತನ್ನು ಸಂಭ್ರಮಿಸುವ ಹಬ್ಬ. ಆದ್ದರಿಂದ ಈ ದಿನದಂದು ಮದುವೆ, ಗೃಹಪ್ರವೇಶ ಇತ್ಯಾದಿ ಶುಭಾರಂಭಗಳನ್ನು ಮಾಡುವ ರೂಢಿಯೂ ಇದೆ.

ತೆರೆದ ಮನಸ್ಸಿಗೆ ಪ್ರತಿ ದಿನವೂ ಹೊಸತೇ. ನೂರೆಂಟು ನೆವಗಳ ಕಿಟಕಿ ಮುಚ್ಚಿ ಕತ್ತಲಲ್ಲಿ ಕುಳಿತಿರುವ ನಮಗೆ ಕೊನೆಪಕ್ಷ ಪ್ರಕೃತಿಯ ಹೊಸತನವಾದರೂ ಬೆಳಕು ನೀಡಲಿ ಅನ್ನುವ ಆಶಯದಿಂದಲೇ ಹಬ್ಬಗಳನ್ನು ಆಚರಿಸುವುದು, ಸಂಭ್ರಮಿಸುವುದು. ವಸಂತ ಪಂಚಮಿ ನಮಗೆಲ್ಲ ಹೊಸ ಶುರುವಾತಿನ ಆ ಸಂಭ್ರಮ ಕರುಣಿಸಲಿ.

Leave a Reply