ಸೂರ್ಯನೆಂಬ ಜಗದ ಕಣ್ಣು : ವೇದ, ಜಾನಪದ, ಪುರಾಣ, ವಿವಿಧ ನಾಗರಿಕತೆಗಳಲ್ಲಿ ಸೂರ್ಯ

ವೇದಕಾಲೀನ ಸಂಸ್ಕೃತಿಯಲ್ಲಿ ಸೂರ್ಯ ಅಥವಾ ಪೂಷನ್‌ ಪ್ರಮುಖ ದೇವತೆಗಳಲ್ಲೊಬ್ಬ. ಪ್ರಕೃತಿ ಪೂಜಕರಾಗಿದ್ದ ಪ್ರಾಚೀನ ಭಾರತೀಯರು ಉಳಿದೆಲ್ಲ ದೇವತೆಗಳಿಗಿಂತ ಜಲದೇವತೆ ವರುಣ ಹಾಗೂ ದೃಗ್ಗೋಚರನಾದ ಸೂರ್ಯನಿಗೆ ಹೆಚ್ಚಿನ ಮನ್ನಣೆ ನೀಡಿದ್ದರು. ಅದರಲ್ಲಿಯೂ ನಿತ್ಯವೂ ಕಾಣುವ ಸುಲಭ ಲಭ್ಯನಾದ ಸೂರ್ಯನಿಗೆ ಪ್ರಥಮ ಆದ್ಯತೆ ನೀಡಿದ್ದು ಸಕಾರಣವಾಗಿಯೇ ಇತ್ತು. ವಿಶೇಷತಃ ಋಗ್ವೇದದಲ್ಲಿಸೂರ್ಯ ಸ್ತುತಿಗೆಂದು ಹಲವು ಶ್ಲೋಕಗಳು ಮೀಸಲಿರುವುದು ಇದೇ ಕಾರಣದಿಂದಲೇಗಾಯತ್ರೀ

ಸೂರ್ಯ ಜಗದ ಕಣ್ಣು ಮಾತ್ರವಲ್ಲ, ಕಣ್ಣಿಗೆ ಕಾಣುವ ದೇವರು ಕೂಡ. ಹಾಗನ್ನುತ್ತವೆ ಪಾರಂಪರಿಕ ನಂಬಿಕೆಗಳು. ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಸೂರ್ಯನ ಕುರಿತು ನೂರಾರು ಕಥೆಗಳಿವೆ. ಭಾರತ ಮಾತ್ರವಲ್ಲ ಜಗತ್ತಿನ ಹಲವೆಡೆ ಸೂರ್ಯನನ್ನು ದೇವರೆಂದು ಆರಾಧಿಸಲಾಗುತ್ತದೆ. ಈತನ ಕುರಿತಾದ ಪೌರಾಣಿಕ ಕಥೆಗಳು ಒಂದಕ್ಕಿಂತ ಒಂದು ಭಿನ್ನ, ಅಷ್ಟೇ ಸ್ವಾರಸ್ಯಕರ.

ಮಾನವರಿಗೆ ಬಹುಶಃ ಸೂರ್ಯವನಷ್ಟು ಆಪ್ತವಾದ ಶಕ್ತಿ ಮೂಲ ಮತ್ತೊಂದಿಲ್ಲ. ಏಕೆಂದರೆ ಆತನಿಲ್ಲದ ಅಸ್ತಿತ್ವವನ್ನೇ ನಾವು ಕಲ್ಪಿಸಿಕೊಳ್ಳಲಾರೆವು. ಕೇವಲ ಬೆಳಕು – ಶಾಖಗಳಿಗಲ್ಲ, ಸೂರ್ಯ ಇಡಿಯ ಗ್ರಹ ಮಂಡಲವನ್ನು ಹಿಡಿದಿಟ್ಟುಕೊಂಡಿರುವ ಕೇಂದ್ರಬಿಂದು. ತನ್ನ ಆಕರ್ಷಣೆಯ ಹಿಡಿತದಲ್ಲಿ ಗ್ರಹಗಳನ್ನು ಪೋಣಿಸಿಟ್ಟುಕೊಂಡು ಕಾಪಾಡುತ್ತಿದ್ದಾನೆ ಈ ಮಹಾ ನಕ್ಷತ್ರ. ಹೀಗೆ ಎಲ್ಲ ಜಡ ಚೇತನಗಳ ಸ್ವಾಸ್ಥ್ಯಕ್ಕೆ ಕಾರಣನಾಗಿರುವ ಸೂರ್ಯನನ್ನು ‘ದೇವ’ನೆಂದು ಕರೆದು ಪೂಜಿಸುವ ಪರಿಪಾಠ ಸಮಂಜಸವಾಗಿಯೇ ಇದೆ.

ವೇದ ಸಾಹಿತ್ಯದಲ್ಲಿ ಸೂರ್ಯ

ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ। ತತ್‌ ತ್ವಂ ಪೂಷನ್‌ ಆಪಾವೃಣು ಸತ್ಯಧರ್ಮಾಯ ದೃಷ್ಟಯೇ॥  ಋಗ್ವೇದದ ಈ ಮಂತ್ರವು ದಿವೃಜ್ಞಾನ ಪ್ರಾಪ್ತಿಗಾಗಿ ಸೂರ್ಯ ದೇವನ ಸಹಕಾರ ಬೇಡುತ್ತದೆ. “ಚಿನ್ನದ ಪಾತ್ರೆಯನ್ನು ಮುಚ್ಚಳದಿಂದ ಮುಚ್ಚುವಂತೆ, ನಿನ್ನ ಚಿನ್ನಯವಾದ ಆವರಣವು ಸತ್ಯದ ಬಾಗಿಲನ್ನು ಮುಚ್ಚಿದೆ. ಓ ಕರುಣಾಳು ಸೂರ್ಯ ದೇವನೇ, ಆ ಬಾಗಿಲನ್ನು ಸರಿಸಿ ದಿವ್ಯಜ್ಞಾನ ದರ್ಶನ ಮಾಡಲು ನಮಗೆ ಕೃಪೆ ತೋರು’ – ಎಂಬುದು ಇದರರ್ಥ.

ಸೂರ್ಯದೇವನು ಪರಮಗುಹ್ಯವಾದ ದಿವ್ಯಜ್ಞಾನವನ್ನುತನ್ನ ಪ್ರಖರ ತೇಜಸ್ಸಿನಿಂದ ಮರೆಮಾಚಿದ್ದಾನೆ. ತಾಪಸಿಗಳು, ಜಿಜ್ಞಾಸುಗಳು ತಮ್ಮ ತಪೋಬಲದಿಂದ ಸೂರ್ಯನ ಆವರಣದವರೆಗೂ ಸಾಗುತ್ತಾರೆ. ಆದರೆ ಆ ತೇಜಸ್ಸಿಗೆ ಕುರುಡಾಗಿ, ಬೆಳಕಿನಿಂದ ಉಂಟಾಗುವ ಭ್ರಮೆಯನ್ನೆ ಸತ್ಯವೆಂದು ಬಗೆದು ಮೋಸಹೋಗುತ್ತಾರೆ. ಆದ್ದರಿಂದ ಜ್ಞಾನದ ತಿರುಳನ್ನು ತಲುಪಲು ಸೂರ್ಯದೇವನ ಕಾರುಣ್ಯದ ಅಗತ್ಯವಿದೆ. ಆತ ತನ್ನಪ್ರಖರತೆಯನ್ನು ತಗ್ಗಿಸಿಕೊಂಡು ಒಳ ಸಾಗಲು ಅವಕಾಶ ಕೊಟ್ಟರಷ್ಟೆ ದಿವ್ಯಜ್ಞಾನದ ಪ್ರಾಪ್ತಿ ಸಾಧ್ಯ ಎನ್ನುವುದು ಋಷಿ ದ್ರಷ್ಟಾರ ಆಶಯ.

ವೇದಕಾಲೀನ ಸಂಸ್ಕೃತಿಯಲ್ಲಿ ಸೂರ್ಯ ಅಥವಾ ಪೂಷನ್‌ ಪ್ರಮುಖ ದೇವತೆಗಳಲ್ಲೊಬ್ಬ. ಪ್ರಕೃತಿ ಪೂಜಕರಾಗಿದ್ದ ಪ್ರಾಚೀನ ಭಾರತೀಯರು ಉಳಿದೆಲ್ಲ ದೇವತೆಗಳಿಗಿಂತ ಜಲದೇವತೆ ವರುಣ ಹಾಗೂ ದೃಗ್ಗೋಚರನಾದ ಸೂರ್ಯನಿಗೆ ಹೆಚ್ಚಿನ ಮನ್ನಣೆ ನೀಡಿದ್ದರು. ಅದರಲ್ಲಿಯೂ ನಿತ್ಯವೂ ಕಾಣುವ ಸುಲಭ ಲಭ್ಯನಾದ ಸೂರ್ಯನಿಗೆ ಪ್ರಥಮ ಆದ್ಯತೆ ನೀಡಿದ್ದು ಸಕಾರಣವಾಗಿಯೇ ಇತ್ತು. ವಿಶೇಷತಃ ಋಗ್ವೇದದಲ್ಲಿಸೂರ್ಯ ಸ್ತುತಿಗೆಂದು ಹಲವು ಶ್ಲೋಕಗಳು ಮೀಸಲಿರುವುದು ಇದೇ ಕಾರಣದಿಂದಲೇ.

ಸೂರ್ಯಚಂದ್ರರಿಬ್ಬರನ್ನು ಪರಬ್ರಹ್ಮನ ಕಣ್ಣುಗಳೆಂದು ಕರೆದಿದ್ದರೂ ಸೂರ್ಯನನ್ನು “ದೇವತೆಗಳ ದೇವತೆ ಎಂದು ಸ್ತುತಿಸಿರುವ ಋಗ್ವೇದ ಆತನಿಗೆ ಹೆಚ್ಚಿನ ಸ್ಥಾನಮಾನಗಳನ್ನು ನೀಡಿದೆ. ಸೌರಪಂಥೀಯ ವ್ಯಾಖ್ಯಾನದಂತೆ ಸೂರ್ಯ – ಸವಿತೃ ಪದಗಳು ಜ್ಞಾನಸೂಚಕಗಳು. ಋಗ್ವೇದದಲ್ಲಿ ಸೂರ್ಯ ಮತ್ತು ಸವಿತೃ ಎಂಬ ಇಬ್ಬರು ಸೂರ್ಯರ ಪ್ರಸ್ತಾಪವಿದೆ. ಒಬ್ಬನು ಭೌತಸೂರ್ಯ; ಮತ್ತೊಬ್ಬ ಸವಿತೃವು ಭೌತ ಸೂರ್ಯನಾಗಿರದೆ ಜ್ಞಾನ ಸಂಕೇತವಾಗಿದ್ದಾನೆ. ದೈವತ ಕಥೆಗಳಲ್ಲಿ ಸೂರ್ಯ- ಸವಿತೃ ಇಬ್ಬರನ್ನು ಪ್ರಕಾಶತತ್ತ್ವದ ಪ್ರತೀಕವಾಗಿಯೇ ಕಾಣಲಾಗಿದೆ.

ಪುರಾಣಗಳ ಪ್ರಕಾರ

ಭಾರತೀಯ ಪುರಾಣಗಳ ಪ್ರಕಾರ ಸೂರ್ಯ ಕಶ್ಯಪ – ಅದಿತಿ ದಂಪತಿಯ ಮಗ. ಸಂಧ್ಯಾ ಮತ್ತು ಛಾಯಾ ಅವನ ಪತ್ನಿಯರು. ಸೂರ್ಯನಿಗೆ ಸಂಧ್ಯೆಯಲ್ಲಿ ಮನು, ಯಮ ಮತ್ತು ಯಮಿ ಹಾಗೂ ಅಶ್ವಿನೀ ದೇವತೆಗಳು ಜನಿಸುತ್ತಾರೆ. ಛಾಯೆಯಲ್ಲಿ ಶನಿದೇವನು ಜನಿಸುತ್ತಾನೆ. ಯಮಿಯು ತನ್ನ ಅವಳಿ ಸಹೋದರ ಯಮನನ್ನೇ ಮೋಹಿಸಿದ ತಪ್ಪಿನ ಪ್ರಾಯಶ್ಚಿಶ್ಯಕ್ಕಾಗಿ ಕರಗಿ ನೀರಾಗಿ ಯಮುನಾ ನದಿಯಾಗಿ ಭೂಲೋಕದಲ್ಲಿ ಜನಿಸುತ್ತಾಳೆ. ತ್ರೇತಾಯುಗದ ಸುಗ್ರೀವ, ದ್ವಾಪರಯುಗದ ಕರ್ಣ ಸೂರ್ಯಾಂಶದಿಂದ ಜನಿಸಿದ ಮಕ್ಕಳು.

ಸೂರ್ಯವಪುತ್ರ ಮನುವಿನಿಂದ ಸ್ಥಾಪಿಸಲ್ಪಟ್ಟ ಅರಸು ವಂಶ “ಸೂರ್ಯವಂಶ’ ಎಂದೇ ಖ್ಯಾತವಾಗಿ ಭಾರತದ ಪ್ರಾಚೀನ ಇತಿಹಾಸಕ್ಕೆ ಮಹತ್ವದ ಕೊಡುಗೆ ನೀಡಿದೆ.

ವಿಷ್ಣು ಪುರಾಣ ಹೇಳುವಂತೆ ಸೂರ್ಯ ವಿಷ್ಣುವಿನ ಅಂಶಾವತಾರ. ಆದ್ದರಿಂದಲೇ ಆತನ ಹೆಸರು ಸೂರ್ಯನಾರಾಯಣ ಎಂದು.ಸೂರ್ಯದೇವನ ರೂಪವನ್ನೂ ಚತುರ್ಭುಜ ನಾರಾಯಣನಂತೆಯೇ ಚಿತ್ರಿಸಲಾಗಿದೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಆದಿತ್ಯರಲ್ಲಿ (ಅದಿತಿಯ ಹನ್ನೆರಡು ಮಕ್ಕಳಲ್ಲಿ ತಾನು ಸೂರ್ಯನೆಂದು ಹೇಳಿಕೊಂಡಿದ್ದಾನೆ. ಇದರಿಂದ ನಮ್ಮ ಪೂರ್ವಜರು ಸರ್ವಶಕ್ತನಾದ ಮಹಾವಿಷ್ಣುವಿಗೆ ನೀಡಿರುವಷ್ಟೇ ಮಹತ್ವವನ್ನು ಸೂರ್ಯದೇವನಿಗೆ ನೀಡಿದ್ದರೆಂಬುದು ಸ್ಪಷ್ಟವಾಗುತ್ತದೆ. ಸೂರ್ಯನನ್ನು ಮಹಾವಿಷ್ಣು ಮಾತ್ರವಲ್ಲ ತ್ರಿಮೂರ್ತಿಗಳ ಗುಣಾಂಶಗಳನ್ನು ಹೊಂದಿರುವನೆಂದೂ ಬಣ್ಣಿಸಲಾಗಿದೆ. ಈತನು ಬೆಳಿಗ್ಗೆ ಬ್ರಹ್ಮರೂಪಿಯಾಗಿ, ಮಧ್ಯಾಹ್ನ ವಿಷ್ಣುರೂಪಿಯಾಗಿ ಮತ್ತು ಸಂಜೆ ರುದ್ರರೂಪಿಯಾಗಿ ಗೋಚರಿಸುತ್ತಾನೆ ಎಂದು ವೇದ-ಪುರಾಣಗಳು ವರ್ಣಿಸುತ್ತವೆ.

ಜಾನಪದ ಸೂರ್ಯ

ಸೂರ್ಯ ಎಷ್ಟೊಂದು ಆಸಕ್ತಿಕರ ವಿಷಯವೆಂದರೆ, ಸೂರ್ಯನನ್ನು ಒಂದು ಉರಿಯುವ ಗೋಳ ಅಥವಾ ಆಕಾಶಕಾಯ ಎನ್ನುವುದಕ್ಕಿಂತ ಒಂದು ವ್ಯಕ್ತಿಯಾಗಿ, ದೇವತೆಯಾಗಿ ಪರಿಗಣಿಸಿರುವುದೇ ಹೆಚ್ಚು. ಭಾರತೀಯ ಭಾಷೆಗಳಲ್ಲಿ ಸೂರ್ಯ- ಚಂದ್ರರ ಬಗ್ಗೆ ಹೇಳುವಾಗ ಸಾಮಾನ್ಯವಾಗಿ ಜಡವಸ್ತುಗಳಿಗೆ ಆರೋಪಿಸುವ ನಂಪುಸಕಲಿಂಗವನ್ನು ಬಳಸುವ ಬದಲು

ಪುಲ್ಲಿಂಗವನ್ನು ಆರೋಪಿಸಲಾಗುತ್ತದೆ. ಚಂದ್ರನಾದರೂ ಕೆಲವು ಕತೆಗಳಲ್ಲಿ ಹೆಣ್ಣಾಗಿದ್ದಾನೆ, ಸೂರ್ಯ ಮಾತ್ರ ಸದಾ ಜವಾಬ್ದಾರಿಯುತ ಗಂಡಿನ ಪಾತ್ರವನ್ನೆ ವಹಿಸಿದ್ದಾನೆ. ಭಾರತೀಯ ಜಾನಪದ ಸಾಹಿತ್ಯದಲ್ಲಿ ಸೂರ್ಯ ಹೆಂಡತಿಗೆ ವಂಚಿಸಿ ಉರಿಯುವ ಶಾಪ ಪಡೆದ ಗಂಡಾಗಿ; ತನ್ನ ತಮ್ಮನಾದ ಚಂದ್ರನ ಮದುವೆ ಮಾಡಿಸುವ ಜವಾಬ್ದಾರಿ ಹೊತ್ತವನಾಗಿ; ಹೆಣ್ಣು ಚಂದ್ರನನ್ನು ಮದುವೆಯಾಗಿ ನಕ್ಷತ್ರಗಳ ತಂದೆಯಾಗಿ, ಅನಂತರ ಹೆಂಡತಿಯನ್ನು ಸಂಶಯದಿಂದ ಹೊರಗಟ್ಟುವವನಾಗಿ – ಹೀಗೆ ವೈವಿಧ್ಯಮಯ ಕತೆಗಳ ಹೆಣಿಗೆಯಲ್ಲಿ ಮೂಡಿ ಬಂದಿದ್ದಾನೆ.

ವಿವಿಧ ನಾಗರಿಕತೆಗಳಲ್ಲಿ…

ಈಜಿಪ್ತ್‌ ನಾಗರಿಕತೆಯಲ್ಲಿಸೂರ್ಯನು ‘ರಾ’ ಎಂಬ ಹೆಸರಿಂದ ಪೂಜೆಗೊಳ್ಳುತ್ತಾನೆ. ಈತ ಅಲ್ಲಿನ ಅತಿ ಮುಖ್ಯ ದೇವತೆ. ದಕ್ಷಿಣ ಅಮೆರಿಕಾದ ಪ್ರಾಚೀನ ನಾಗರಿಕತೆಗಳಾದ ಮಾಯಾ ಮತ್ತು ಅಜ್ಜೆಕ್‌ ಜನಾಂಗಗಳು ಸೂರ್ಯಾರಾಧನೆ ಮಾಡುತ್ತಿದ್ದವು. ಪುರಾತನ ಮಾಯನ್ನರು ಸೂರ್ಯನಿಗೆ ನರಬಲಿ ಕೊಟ್ಟು ತೃಪ್ತಿ ಪಡಿಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ.

ಗ್ರೀಕ್‌, ರೋಮನ್ನರ ಪುರಾಣಗಳು ಹೀಲಿಯೋಸ್‌ ಅಥವಾ ಅಪೋಲೋ ಆಗಿ ಸೂರ್ಯ ಕಾಣಿಸಿಕೊಂಡನೆಂದು ಹೇಳುತ್ತವೆ.ಅಪೋಲೋ ಆ ನಾಗರಿಕತೆಗಳಲ್ಲಿಆದರ್ಶ ನಾಯಕನಾಗಿ ಬಿಂಬಿಸಲ್ಪಟ್ಟಿದ್ದಾನೆ.

ಪರ್ಷಿಯನ್ನರು ಸೂರ್ಯನನ್ನು ‘ಮಿತ್ರ’ (ಮಿತ್ರಸ್‌) ಎಂದು ಕರೆದಿದ್ದಾರೆ. ಭಾರತವೂ ಸೇರಿದಂತೆ ಪೌರಸ್ತ ರಾಷ್ಟ್ರಗಳಲ್ಲಿ ಸೂರ್ಯೋಪಾಸನೆ ಸಾಮಾನ್ಯ ಅಂಶವಾಗಿದೆ.

Leave a Reply