ಧರ್ಮದ ಹುಡುಕಾಟ ಏಕಾಂತಕ್ಕೆ ಮಾತ್ರ ಸಾಧ್ಯ | ಜಿಡ್ಡು ಕಂಡ ಹಾಗೆ

ಏಕಾಂತ ಖಂಡಿತ ಒಂಟಿತನದ ಸ್ಥಿತಿಯಲ್ಲ, ಹಾಗೆಯೇ ಅದು ಅನನ್ಯವೂ ಅಲ್ಲ… | ಜಿಡ್ಡು ಕೃಷ್ಣಮೂರ್ತಿ; ಕನ್ನಡಕ್ಕೆ : ಚಿದಂಬರ ನರೇಂದ್ರ

ನಾವೆಲ್ಲ ಮಾನವರೇ ಆದರೂ ನಾವು ನಮ್ಮ ನಡುವೆ ರಾಷ್ಟ್ರೀಯತೆ, ಜನಾಂಗ, ಜಾತಿ, ಧರ್ಮ, ವರ್ಗ, ಲಿಂಗ ಮುಂತಾದವುಗಳ ಮೂಲಕ ಗೋಡೆಗಳನ್ನ ಕಟ್ಟಿಕೊಂಡಿದ್ದೇವೆ ಮತ್ತು ಈ ಗೋಡೆಗಳು ನಮ್ಮ ಒಂಟಿತನಕ್ಕೆ, ಪ್ರತ್ಯೇಕತೆಗೆ ಬಹುಮುಖ್ಯ ಕಾರಣಗಳಾಗಿವೆ.

ಈಗ ಇಂಥ ಪ್ರತ್ಯೇಕತಾ ಭಾವದಲ್ಲಿ , ಇಂಥ ಒಂಟಿತನದಲ್ಲಿ ಸಿಕ್ಕಿಹಾಕಿಕೊಂಡಿರುವ ಮನಸ್ಸು, ಧರ್ಮದ ಬಗ್ಗೆ ಎಂದೂ ಪೂರ್ಣವಾಗಿ ತಿಳಿದುಕೊಳ್ಳುವುದು ಸಾಧ್ಯವಿಲ್ಲ. ಈ ಮನಸ್ಸು ನಂಬಿಕೆಗಳನ್ನು ಇಟ್ಟುಕೊಳ್ಳಬಹುದು, ಕೆಲವು ಸಿದ್ಧಾಂತ, ರೀತಿ ರಿವಾಜು ನಿಯಮಗಳನ್ನು ಒಪ್ಪಬಹುದು, ತಾನು ದೇವರು ಎಂದುಕೊಂಡಿರುವುದರ ಜೊತೆಗೆ ತನ್ನನ್ನು ಗುರುತಿಸಿಕೊಳ್ಳಬಹುದು ; ಆದರೆ ನನಗೆ ಅನಿಸುವ ಪ್ರಕಾರ ಧರ್ಮಕ್ಕೂ ನಂಬಿಕೆಗಳಿಗೂ, ಪುರೋಹಿತರಿಗೂ, ಮಂದಿರ ಮಸಿದಿ, ಚರ್ಚುಗಳಿಗೂ, ಪವಿತ್ರ ಗ್ರಂಥಗಳಿಗೂ ಯಾವ ಸಂಬಂಧವಿಲ್ಲ. ಧಾರ್ಮಿಕ ಮನಸ್ಸಿನ ಸ್ಥಿತಿಯ ಬಗ್ಗೆ ನಮಗೆ ತಿಳುವಳಿಕೆ ಸಾಧ್ಯವಾಗುವುದು, ನಾವು ಚೆಲುವು ಎಂದರೇನು ಎಂಬುದನ್ನ ತಿಳಿದುಕೊಳ್ಳಲು ಆರಂಭ ಮಾಡಿದಾಗ ; ಹಾಗು ಚೆಲುವಿನ ಬಗೆಗಿನ ತಿಳುವಳಿಕೆಗೆ ನಾವು ಹತ್ತಿರವಾಗಬೇಕಾದದ್ದು ಪೂರ್ಣ ಏಕಾಂತದ ಮೂಲಕ. ಮನಸ್ಸು ಪೂರ್ಣ ಏಕಾಂತದಲ್ಲಿದ್ದಾಗ ಮಾತ್ರ ಚೆಲುವಿನ ಬಗ್ಗೆ ಅರಿವು ಸಾಧ್ಯವಾಗುವುದೇ ಹೊರತು ಬೇರೆ ಯಾವ ಸ್ಥಿತಿಯಲ್ಲೂ ಅಲ್ಲ.

ಏಕಾಂತ ಖಂಡಿತ ಒಂಟಿತನದ ಸ್ಥಿತಿಯಲ್ಲ, ಹಾಗೆಯೇ ಅದು ಅನನ್ಯವೂ ಅಲ್ಲ. ಅನನ್ಯವಾಗುವುದೆಂದರೆ ಯಾವುದೋ ಒಂದು ರೀತಿಯಲ್ಲಿ ಅಸಾಮಾನ್ಯವಾಗುವುದು, ಆದರೆ ಪೂರ್ಣವಾಗಿ ಏಕಾಂತ ಸಾಧ್ಯಮಾಡಿಕೊಳ್ಳುವುದಕ್ಕೆ ಅಪರೂಪದ ಸೂಕ್ಷ್ಮತೆ, ಬುದ್ಧಿಮತ್ತೆ ಮತ್ತು ತಿಳಿವು ಅವಶ್ಯಕ. ಪೂರ್ಣವಾಗಿ ಏಕಾಂತದಲ್ಲಿರುವುದೆಂದರೆ ಎಲ್ಲ ಪ್ರಕಾರದ ಪ್ರಭಾವಗಳಿಂದ ಮುಕ್ತರಾಗಿರುವುದು ಮತ್ತು ಆ ಮೂಲಕ ಸಮಾಜದ ಎಲ್ಲ ಕಲ್ಮಷಗಳಿಂದ ಹೊರತಾಗಿರುವುದು; ಧರ್ಮವನ್ನು ತಿಳಿದುಕೊಳ್ಳಲಿಕ್ಕೆ ಏಕಾಂತಕ್ಕೆ ಮಾತ್ರ ಸಾಧ್ಯ – ಹಾಗೆಂದರೆ ನಾವು ಕಾಲಕ್ಕೆ ಅತೀತವಾದ ಶಾಶ್ವತವೊಂದು ಇದೆಯೇ ಎನ್ನುವುದನ್ನ ಸ್ವತಃ ಹುಡುಕುವ ಪ್ರಯತ್ನ ಮಾಡಬೇಕು.

ಏಕಾಂತ ಮತ್ತು ಒಂಟಿತನವನ್ನ ಶಮ್ಸ್ ತಬ್ರೀಝಿ ಸುಂದರ ಪದ್ಯದ ಮೂಲಕ ವಿವರಿಸುತ್ತಾನೆ.

ಒಂಟಿತನ ಮತ್ತು ಏಕಾಂತ
ಎರಡೂ ಬೇರೆ ಬೇರೆ.

ಒಂಟಿತನ ಕಾಡುತ್ತಿರುವಾಗ,
ಸರಿಯಾದ ದಾರಿಯಲ್ಲಿದ್ದೇವೆಂದು
ನಮ್ಮನ್ನು ನಾವು ಮೋಸಗೊಳಿಸಿಕೊಳ್ಳುವುದು
ಬಹಳ ಸುಲಭ.

ಏಕಾಂತ ಒಳ್ಳೆಯದು.
ಇಲ್ಲಿಯೂ ಇರುವುದು ಕೇವಲ ನಾವು ಮಾತ್ರ,
ಆದರೆ ಒಂಟಿತನದ ಜಿಗುಪ್ಸೆ ಇಲ್ಲಿಲ್ಲ.

ಕನ್ನಡಿಯಂಥ ಸಂಗಾತಿಯನ್ನ ಹುಡುಕಿ.
ಆ ಇನ್ನೊಬ್ಬರ ಹೃದಯದಲ್ಲಿ ಮಾತ್ರ
ನೀವು ನಿಮ್ಮ ನಿಜವನ್ನು ಕಾಣುವಿರಿ
ಮತ್ತು
ನಿಮ್ಮೊಳಗಿನ ಭಗವಂತನನ್ನು ಕೂಡ.

1 Comment

  1. ಒಂಟಿತನ ಮತ್ತು ಏಕಾಂತ ಎರಡು ಬೇರೆ ಬೇರೆ ಎಂಬ ಮಾತು ಸತ್ಯ.

Leave a Reply