ನಮ್ಮಿಬ್ಬರ ಸ್ವಾತಂತ್ರ್ಯದ ನಡುವೆ ಪ್ರೇಮದ ವಿಸ್ತಾರ

“ಇದು ಸಾಧ್ಯವಾದರೆ – ಸಂಗಾತ ಮತ್ತು ನಡುವೆ ಮುಕ್ತ ಅವಕಾಶ, ಎರಡೂ ಒಟ್ಟಿಗೇ – ಆಗ ಸ್ವರ್ಗ ಸೀಮೆಯ ಗಾಳಿ ನಿಮ್ಮ ನಡುವೆ ಬೀಸುವುದು “ – ಓಶೋ | ಕನ್ನಡಕ್ಕೆ : ಚಿದಂಬರ ನರೇಂದ್ರ

ರವೀಂದ್ರನಾಥ ಠಾಕೂರರ ಆಖರೀ ಕವಿತಾ, “ The Last Poem “ ನನ್ನ ಅತ್ಯಂತ ಪ್ರೀತಿಯ ಪುಸ್ತಕಗಳಲ್ಲಿ ಒಂದು. ಇದು ಕವಿತೆಗಳ ಸಂಗ್ರಹ ಅಲ್ಲ, ಕಾದಂಬರಿ – ಬಹಳ ಅಪರೂಪದ, ವಿಲಕ್ಷಣ ಮತ್ತು ಅದ್ಭುತ ಒಳನೋಟಗಳ ಕಾದಂಬರಿ.

ಒಬ್ಬಳು ಹರೆಯದ ಹೆಣ್ಣು ಮತ್ತು ಗಂಡು ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಲು ಶುರು ಮಾಡುತ್ತಾರೆ ಮತ್ತು ಎಲ್ಲ ಹರೆಯದ ಜೋಡಿಯಂತೆ ತಕ್ಷಣ ಮದುವೆಯಾಗಲು ನಿರ್ಧರಿಸುತ್ತಾರೆ. “ಆದರೆ ಒಂದು ಶರತ್ತಿನ ಮೇಲೆ”. ಹೆಣ್ಣು ಮಗಳು ಮದುವೆಗೆ ಒಪ್ಪಿಗೆ ಸೂಚಿಸುವ ಮೊದಲು ತನ್ನ ಕರಾರಿನ ಬಗ್ಗೆ ಹೇಳುತ್ತಾಳೆ. ಆ ಹೆಣ್ಣು ಮಗಳು ದೊಡ್ಡ ಶ್ರೀಮಂತ ಕುಟುಂಬಕ್ಕೆ ಸೇರಿದವಳು, ಆಧುನಿಕ ವಿದ್ಯಾಭ್ಯಾಸಕ್ಕೆ ತೆರೆದುಕೊಂಡವಳು, ಸಾಹಿತ್ಯ, ಸಂಗೀತ, ಚಿತ್ರಕಲೆ ಮುಂತಾದವುಗಳಲ್ಲಿ ಅಪಾರ ಆಸಕ್ತಿ ಹೊಂದಿದವಳು.

“ಎಲ್ಲ ಶರತ್ತುಗಳಿಗೂ ನನ್ನ ಒಪ್ಪಿಗೆ ಇದೆ , ನಿನ್ನ ಬಿಟ್ಟು ನಾನು ಇರಲಾರೆ” ಕೂಡಲೇ ಗಂಡು ಅವಳ ಕರಾರಿಗೆ ತನ್ನ ಒಪ್ಪಿಗೆ ಸೂಚಿಸುತ್ತಾನೆ.

“ಮೊದಲು ನನ್ನ ಶರತ್ತುಗಳನ್ನ ಕೇಳಿಸಿಕೋ ; ನಂತರ ಪೂರ್ಣ ವಿಚಾರ ಮಾಡಿ ನಿನ್ನ ಸಮ್ಮತಿಯನ್ನ ತಿಳಿಸುವೆಯಂತೆ. ಇದು ಸಾಮಾನ್ಯ ಶರತ್ತು ಅಲ್ಲ. ಮದುವೆಯ ನಂತರ ನಾವಿಬ್ಬರೂ ಒಂದೇ ಮನೆಯಲ್ಲಿ ಇರುವ ಹಾಗಿಲ್ಲ. ಗಿಡ ಮರಗಳಿಂದ ಸುತ್ತುವರೆದಿರುವ ನನ್ನ ವಿಶಾಲ ಆಸ್ತಿಯ ನಡುವೆ ಒಂದು ಅದ್ಭುತ ಸರೋವರವಿದೆ. ಸರೋವರದ ದಂಡೆಯ ಮೇಲೆ ಸುಂದರ ಉದ್ಯಾನವನದ ನಡುವೆ ನಿನಗೊಂದು ಮನೆ ಕಟ್ಟಿಸಿಕೊಡುವೆ. ಸರೋವರದ ಆಚೆ ನಿನ್ನ ಮನೆಗೆ ವಿರುದ್ಧ ದಿಕ್ಕಿನಲ್ಲಿ ನನ್ನ ಮನೆಯಿರುವುದು”. ಆಕೆ ಅವನಿಗೆ ತನ್ನ ಶರತ್ತನ್ನು ಬಿಡಿಸಿ ಹೇಳಿದಳು.

“ಹಾಗಾದರೆ ಮದುವೆಯಾಗಿ ಏನು ಪ್ರಯೋಜನ” ಅವನು ಆಶ್ಚರ್ಯದಿಂದ ಪ್ರತಿಕ್ರಿಯಿಸಿದ.

“ ಆಗ ಮದುವೆ ನಮ್ಮನ್ನು ನಾಶ ಮಾಡುವುದಿಲ್ಲ. ನಾನು ನಮ್ಮಿಬ್ಬರಿಗೂ ನಮ್ಮ ನಮ್ಮ ಹಾಗೆ ಬದುಕಲು ಅವಕಾಶ ಮಾಡಿಕೊಡುತ್ತಿದ್ದೇನೆ. ಯಾವಾಗಲಾದರೂ ಗಾರ್ಡನ್ ನಲ್ಲಿ ವಾಕ್ ಮಾಡುವಾಗ, ಸರೋವರದಲ್ಲಿ ವಿಹಾರ ಮಾಡುವಾಗ ನಾವು ಅಚಾನಕ್ ಆಗಿ ಭೇಟಿ ಮಾಡಬಹುದು. ಅಥವಾ ಒಮ್ಮೊಮ್ಮೆ ಚಹಾ ಕುಡಿಯಲು ನಾನು ನಿನ್ನ ನನ್ನ ಮನೆಗೆ ಕರೆಯುತ್ತೇನೆ ಹಾಗೆಯೇ ನೀನೂ ನನ್ನ ಯಾವಗಾಲಾದರೂ ನಿನ್ನ ಮನೆಗೆ ಆಹ್ವಾನಿಸು”

“ಇಂಥ ತಿಳುವಳಿಕೆಯೇ ಅಸಂಗತ” ಅವನು ಕೂಡಲೇ ಅವಳ ಶರತ್ತಿಗೆ ತನ್ನ ಅಸಮ್ಮತಿಯನ್ನು ವ್ಯಕ್ತಮಾಡಿದ.

“ಹಾಗಾದರೆ ಮದುವೆಯ ವಿಷಯ ಮರೆತು ಬಿಡು. ಇದೊಂದೇ ನಮ್ಮ ನಡುವಿನ ಪ್ರೇಮವನ್ನು ಕಾಪಾಡುವ, ಬೆಳೆಸುವ, ಯಾವಾಗಲೂ ತಾಜಾ ಆಗಿ ಇಡುವ ವಿಧಾನ. ಆಗ ನಾವು ಇನ್ನೊಬ್ಬರನ್ನು ನಮ್ಮ ಹತೋಟಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ, ಅವರ ಖಾಸಾ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಇನ್ನೊಬ್ಬರ ನಿರ್ಧಾರಗಳಲ್ಲಿ ಮೂಗು ತೂರಿಸುವುದಿಲ್ಲ. ನನ್ನ ಆಮಂತ್ರಣವನ್ನು ವಿರೋಧಿಸಲು ನಿನಗೆ ಮತ್ತು ನಿನ್ನ ಕರೆಯನ್ನ ತಿರಸ್ಕರಿಸಲು ನನಗೆ ಪೂರ್ಣ ಅಧಿಕಾರ ಆಗ ಮಾತ್ರ ಸಾಧ್ಯವಾಗುತ್ತದೆ. ನಮ್ಮಿಬ್ಬರ ಈ ಸ್ವಾತಂತ್ರ್ಯದ ನಡುವೆ ನಮ್ಮ ಪ್ರೇಮ ಅದ್ಭುತವಾಗಿ ವಿಸ್ತಾರಗೊಳ್ಳುತ್ತದೆ.”

ಹೌದು ಆ ಮನುಷ್ಯನಿಗೆ ಅವಳ ತಿಳುವಳಿಕೆ ಅರ್ಥವಾಗಲಿಲ್ಲ, ಆತ ಮದುವೆಯನ್ನ ರದ್ದು ಮಾಡಿಕೊಂಡ. ಆದರೆ ರವೀಂದ್ರನಾಥರಿಗೆ ಪ್ರೇಮ ಮತ್ತು ದಾಂಪತ್ಯದ ಬಗ್ಗೆ ಖಲೀಲ್ ಜಿಬ್ರಾನ್ ಗಿದ್ದ ಒಳನೋಟಗಳೇ ಇದ್ದ ವಿಷಯ ಮಾತ್ರ ಕುತೂಹಲಕಾರಿ. ಇಬ್ಬರೂ ಬಹುತೇಕ ಒಂದೇ ಸಮಯದಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದರು.

ಕೂಡಿ ಹುಟ್ಟಿದವರು ನೀವು
ಕೂಡಿಯೇ ಬಾಳುವಿರಿ, ಕೊನೆಯ ತನಕ.

ಬಿಳೀ ರೆಕ್ಕೆಯ ಸಾವಿನ ಹಕ್ಕಿ
ನಿಮ್ಮ ಕಾಲವ ಕುಕ್ಕಿ
ಚೂರು ಚೂರು ಮಾಡುವಾಗಲೂ
ಕೈ ಹಿಡಿದುಕೊಂಡೇ ಇರುವಿರಿ ಕೊನೆಯ ತನಕ.

ಹೌದು,
ಭಗವಂತ ನೆನಪಿಸಿಕೊಳ್ಳಲೂ ನಿರಾಕರಿಸುವ ನೆನಪುಗಳಲ್ಲಿ
ನೀವು ಹತ್ತಿರ, ಒಬ್ಬರಿಗೊಬ್ಬರು.
ಆದರೆ ಈ ಕೂಡಿರುವಿಕೆಯ ನಡುವೆ ಇರಲಿ
ಕೊಂಚ ಬೆಳಕಿಗೆ ದಾರಿ.

ಕುಣಿಯಲಿ ಸಾಂಗವಾಗಿ ನಿಮ್ಮ ನಡುವೆ
ಸ್ವರ್ಗ ಸೀಮೆಯ ಗಾಳಿ.

ಪ್ರೇಮಿಸಿ ಮೈದುಂಬಿ, ಆದರೆ
ಕಟ್ಟಿ ಹಾಕದಿರಿ ಒಬ್ಬರನ್ನೊಬ್ಬರು.

ಆತ್ಮದ ತೀರಗಳ ನಡುವೆ ಹರಿಯಲಿ
ತೀರದ ಸಾಗರದಂತೆ ಪ್ರೇಮ.

ಒಬ್ಬರು ಇನ್ನೊಬ್ಬರ ಬಟ್ಟಲುಗಳನ್ನ ತುಂಬಿ
ಆದರೆ ಹಚ್ಚದಿರಿ ತುಟಿ ಮಾತ್ರ, ಒಂದೇ ಬಟ್ಟಲಿಗೆ.

ಹಂಚಿಕೊಳ್ಳಿ ನಿಮ್ಮ ನಿಮ್ಮ ರೊಟ್ಟಿಗಳ
ಆದರೆ ಕೈ ಹಾಕದಿರಿ ಮಾತ್ರ ಒಂದೇ
ರೊಟ್ಟಿಯ ತುಣುಕಿಗೆ.

ಕೂಡಿ ಹಾಡಿ, ಕೂಡಿ ಕುಣಿಯಿರಿ
ಕೂಡಿ ಖುಷಿಯ ಉತ್ತುಂಗವನ್ನು ಮುಟ್ಟಿ,
ಆದರೆ ಕದಲದಿರಿ ಮಾತ್ರ
ನಿಮ್ಮ ನಿಮ್ಮ ನೆಲವ ಬಿಟ್ಟು.
ಸ್ವರ ವಾದ್ಯದ ತಂತಿಗಳ ನಡುವೆ
ಅಂತರವಿರುವಾಗಲೂ ಅವು
ಹಾಡುವಂತೆ ಒಂದೇ ರಾಗ.

ಹಂಚಿಕೊಳ್ಳಿ ಹೃದಯಗಳನ್ನು ಪ್ರೀತಿಗೆ,
ಆದರೆ ಸುಪರ್ದಿಗಲ್ಲ.
ಬದುಕಿಗೆ ಮಾತ್ರ ಗೊತ್ತು
ನಿಮ್ಮ ಹೃದಯಗಳನ್ನು ಹಿಡಿದಿಡುವ ಗುಟ್ಟು.

ಹತ್ತಿರ ನಿಂತರೂ
ಒತ್ತಿಕೊಳ್ಳದಿರಿ ಒಬ್ಬರನ್ನೊಬ್ಬರು.
ನಿಲ್ಲಿ ದೇವಾಲಯದ ಕಂಬಗಳಂತೆ,
ನಡುವೆ ಇರಲಿ ಒಂದು ದಿವ್ಯ ಅವಕಾಶ.

ಮಹಾಮರಗಳು ಬೆಳೆಯುವುದಿಲ್ಲ
ಒಂದು ಇನ್ನೊಂದರ ನೆರಳಿನಲ್ಲಿ.

ಪ್ರವಾದಿ / ಖಲೀಲ್ ಜಿಬ್ರಾನ್

OSHO, The Messiah, Commentaries on Khalil Gibran’s “ The Prophet “, Volume 1, Chapter 8 (excerpt)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.