ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ!

“ The best in art, the best in music, the best in literature, the best in philosophy, the best in religion- all are mysteries” | OSHO

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಒಂದು ದಿನ ಜಗತ್ಪ್ರಸಿದ್ಧ ಕಲಾವಿದ ಪಾಬ್ಲೋ ಪಿಕಾಸೋ ಸಮುದ್ರದ ದಂಡೆಯ ಮೇಲೆ ತದೇಕ ಚಿತ್ತದಿಂದ ಪೇಂಟ್ ಮಾಡುತ್ತ ಕುಳಿತಿದ್ದ. ಪಿಕಾಸೋ ಚಿತ್ರ ಬರೆಯುವುದನ್ನ ಕೊಂಚ ದೂರ ಕುಳಿತು ಗಮನಿಸುತ್ತಿದ್ದ ವ್ಯಕ್ತಿಯೊಬ್ಬ, ಎಷ್ಟು ಹೊತ್ತಾದರೂ ಪಿಕಾಸೋ ಬ್ರಶ್ ಕೆಳಗಿಡದೇ ಪೇಂಟ್ ಮಾಡುತ್ತಿರುವುದನ್ನ ನೋಡಿ ಗಾಬರಿಯಾಗಿ ಹತ್ತಿರ ಬಂದು ಪ್ರಶ್ನೆ ಮಾಡಿದ ;

“ ಪಾಬ್ಲೋ , ನಿನ್ನ ಏಕಾಗ್ರತೆಗೆ ಭಂಗ ತರುವ ಉದ್ದೇಶ ನನಗಿಲ್ಲ ಆದರೆ ನೀನು ಎರಡು ಗಂಟೆಯಾದರೂ ಪೇಂಟ್ ಮಾಡುವುದನ್ನ ನಿಲ್ಲಿಸಲಿಲ್ಲವಲ್ಲ ನನಗೆ ಕುತೂಹಲ. ನೀನು ಏನು ಪೇಂಟ್ ಮಾಡುತ್ತಿರುವೆ ? ನನಗೆ ಸ್ವಲ್ಪ ಕೂಡ ಅರ್ಥ ಆಗಲಿಲ್ಲ”

ಪಿಕಾಸೋ ಹಿಂತಿರುಗಿ ಆ ವ್ಯಕ್ತಿಯನ್ನ ನೋಡಿದ, “ಇದು ವಿಚಿತ್ರ ! ಯಾರೂ ಪ್ರಕೃತಿಯನ್ನ ಕೇಳುವುದಿಲ್ಲ, ಯಾಕೆ ಪರ್ವತಗಳನ್ನ ಹುಟ್ಟು ಹಾಕಿದ್ದೀಯ ? ಯಾಕೆ ಸಮುದ್ರವನ್ನ ನಿರ್ಮಿಸಿರುವೆ ? ಏನು ಈ ಸಮುದ್ರ ?
ಯಾಕಿಷ್ಟು ಪಕ್ಷಿಗಳು ಆಕಾಶದಲ್ಲಿ ಹಾರಾಡುತ್ತಿವೆ ? ಯಾಕಿಷ್ಟು ಬೇರೆ ಬೇರೆ ಥರದ ಹೂವುಗಳು, ಮನುಷ್ಯರು ? ಏನು ಇವೆಲ್ಲ ಅಂತ. ನಾನೊಬ್ಬ ಬಡ ಪೇಂಟರ್, ನನ್ನ ಪುಟ್ಟ ಕ್ಯಾನವಾಸಿನ ಮೇಲೆ ನನಗೆ ಇಷ್ಟ ಆದ ಏನನ್ನೋ ಪೇಂಟ್ ಮಾಡಿಕೊಳ್ಳುತ್ತಿದ್ದೇನೆ ಆದರೆ ಇಡೀ ಜಗತ್ತು ನನ್ನ ತಲೆಯ ಮೇಲೆ ಕುಳಿತು ಪ್ರಶ್ನೆ ಮಾಡುತ್ತಿದೆ, ‘ಏನು ಇದೆಲ್ಲ ? ಏನಿದರ ಅರ್ಥ’ ಎಂದೆಲ್ಲ ಯಾಕೆ ಎಲ್ಲದಕ್ಕೂ ಅರ್ಥ ಇರಬೇಕು ?”

“ನನಗೆ ನಿನನ್ನು ಸಿಟ್ಟಿಗೇಳಿಸುವ ಉದ್ದೇಶ ಇರಲಿಲ್ಲ” ಆ ಅಪರಿಚಿತ ವ್ಯಕ್ತಿ ತಡಬಡಾಯಿಸಿದ.

ಪಿಕಾಸೋ ಮುಂದುವರೆಸಿದ, “ಇಲ್ಲ ನನಗೇನೂ ಸಿಟ್ಟು ಬಂದಿಲ್ಲ ಆದರೆ ಯಾಕೋ ಜನರಿಗೆ ಎಲ್ಲದರಲ್ಲೂ ಅರ್ಥ ಇದೆ ಎನ್ನುವ ತಿಳುವಳಿಕೆ, ಎಲ್ಲದರಲ್ಲೂ ಅರ್ಥ ಹುಡುಕುವ ಹುಕಿ. ಜನರ ಈ ವ್ಯವಹಾರ ನನಗೆ ಅರ್ಥವೇ ಆಗುವುದಿಲ್ಲ. ನನಗೆ ಗೊತ್ತಿಲ್ಲ ಇದು ಏನು ಅಂತ ಆದರೆ ನನಗೆ ಪೇಂಟಿಂಗ್ ಇಷ್ಟ, ಈ ಪೇಂಟಿಂಗ್ ಮಾಡುತ್ತಿರುವಾಗ ನನಗೆ ಬಹಳ ಖುಶಿಯಾಗುತ್ತದೆ. ಎಷ್ಟೋ ದಿನಗಳಿಂದ ಈ ಚಿತ್ರ ನನ್ನೊಳಗಿತ್ತು; ಇಲ್ಲಿ ಬಳಸಿರುವ ಬಣ್ಣಗಳು ನನ್ನ ಮನಸ್ಸಿನಲ್ಲಿ ಮನೆ ಮಾಡಿದ್ದವು. ಯಾಕೆ ಅಂತ ಗೊತ್ತಿಲ್ಲ, ಹಾಗು ಗೊತ್ತುಮಾಡಿಕೊಳ್ಳುವುದರಲ್ಲಿಯೂ ನನಗೆ ಆಸಕ್ತಿಯಿಲ್ಲ.”

ಹೌದು ಪಿಕಾಸೋ ಹೇಳೋದು ನಿಜ. ಯಾಕೆ ನಮಗೆ ಪ್ರತಿಯೊಂದನ್ನ, ಪ್ರತಿಯೊಬ್ಬರನ್ನ ತಿಳಿದುಕೊಳ್ಳುವ ಬಗ್ಗೆ ಆಸಕ್ತಿ? ನಾನು ಯುನಿವರ್ಸಿಟಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಗ, ನಮ್ಮ ಕಾಲೇಜಿನಲ್ಲಿ ಪ್ರತೀ ವರ್ಷ ಎರಡು ಬಾರಿ ‘ Getting-to-know-you’ ಅಂತ ಕಾರ್ಯಕ್ರಮ ಮಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಸಹ ವಿದ್ಯಾರ್ಥಿಗಳನ್ನ ಪರಿಚಯ ಮಾಡಿಕೊಳ್ಳುವ ಅವಕಾಶ ಮಾಡಿಕೊಡಲಾಗುತ್ತಿತ್ತು. ನಾನು ಒಮ್ಮೆಯೂ ಈ ಪ್ರೊಗ್ರಾಂ ಗೆ ಹೋಗಲಿಲ್ಲ. ಒಮ್ಮೆ ನಮ್ಮ ವೈಸ್ ಚಾನ್ಸಲರ್ ಆಕ್ಷೇಪ ಮಾಡಿದಾಗ, ನಾನು ಅವರಿಗೆ ಹೇಳಿದ್ದೆ, “ ಯಾರನ್ನೂ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ, ಇದು ಒಂದು ಮೂರ್ಖ ಕಾರ್ಯಕ್ರಮ. ಇಲ್ಲಿ ಕಾಲಹರಣ ಮಾಡುವುದರ ಬದಲು ನಾನು ನದಿಯ ದಂಡೆಯಲ್ಲೋ, ಪರ್ವತದ ಮೇಲೋ ಸಮಯ ಕಳೆಯಲು ಇಷ್ಟಪಡುತ್ತೇನೆ.” ಏನಿದು ಇನ್ನೊಬ್ಬರನ್ನ ಪರಿಚಯ ಮಾಡಿಕೊಳ್ಳುವ ಅವಶ್ಯಕತೆ , ಏನೂಂತ ಇನ್ನೊಬ್ಬರನ್ನ ಅರ್ಥ ಮಾಡಿಕೊಳ್ಳೋದು ?

ಈ ವಿಷಯದಲ್ಲಿ ನನಗೆ ಕವಿಗಳ ಬಗ್ಗೆ, ಪೇಂಟರ್ ಗಳ ಬಗ್ಗೆ, ಸಂಗೀತಗಾರರು, ನೃತ್ಯಗಾರರ ಬಗ್ಗೆ ಅಪಾರ ಗೌರವ. ನೀನು ನೃತ್ಯಗಾರನನ್ನ ಕೇಳುವ ಹಾಗಿಲ್ಲ, “ನೀನು ಕುಣಿಯುವುದರ ಅರ್ಥ ಏನು” ಅಂತ. ನೀವು ಸುಮ್ಮನೇ ಅವರು ಕುಣಿಯುವುದನ್ನ ನೋಡಿ ಆನಂದಪಡಬಹುದು, ಅವರ ನೃತ್ಯವನ್ನ ಪ್ರೀತಿಸಬಹುದು, ಅವರ ಜೊತೆ ಹೆಜ್ಜೆ ಹಾಕಬಹುದು. ಆದರೆ ನೀವು ಅವರು ಕುಣಿಯುವುದರ ಅರ್ಥ ಕೇಳುವ ಹಾಗಿಲ್ಲ. ಅದು ನಿಗೂಢವಾಗಿಯೇ ಇರಬೇಕು.

ಕಲೆ, ಸಂಗೀತ, ಸಾಹಿತ್ಯ, ಫಿಲಾಸಫಿ, ಧರ್ಮ ಈ ಎಲ್ಲದರಲ್ಲಿ ಅತ್ಯುತ್ತಮವಾದದ್ದು ಯಾವಾಗಲೂ ನಿಗೂಢವಾಗಿಯೇ ಇರುತ್ತದೆ.

Osho, Light on the path – Talks given to the Rajneesh Mystery school in the Himalayan foothills of Kulu Manali, India, and Kathmandu, Nepal, Ch 4, W 3 (excerpt)

Leave a Reply