ಇಷ್ಕ್ ಮತ್ತು ಮೊಹೊಬ್ಬತ್ : ಓಶೋ ಹೇಳಿದ ಮಜನೂ ಕಥೆ

“ Almost every country has its love stories, but nothing compared to Layla & Majnun because it has a Sufi message in it “ – OSHO

ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

ನಾವು ಮಾಡುವ ಪ್ರೇಮ ಹೇಗಿರಬೇಕೆಂದರೆ, ಪ್ರೇಮದ ಸಲುವಾಗಿ ಎಲ್ಲವನ್ನೂ ಪಣಕ್ಕಿಡಲು ನಾವು ಸಿದ್ಧರಾಗಿರಬೇಕು. ಇಂಥ ಪ್ರೇಮವೇ ‘ಇಷ್ಕ್’.

ನಿಮಗೆಲ್ಲ ‘ಮೊಹೊಬ್ಬತ್’ ಎನ್ನುವ ಹೆಸರಿನ ಕೇವಲ ಉದ್ವೇಗ, ಭಾವಾತಿರೇಕ ದಂಥ ಮೇಲು ಮೇಲಿನ ಸಂಗತಿಗಳ ಲೇಪವುಳ್ಳ ಪ್ರೇಮದ ಬಗ್ಗೆ ಗೊತ್ತು. ಒಂದು ದಿನ ನೀವು ಮೊಹಬ್ಬೊತ್ತ್ ಗಾಗಿ ಪ್ರಾಣ ಬಿಡಲೂ ಸಿದ್ಧ ಮತ್ತು ಮಾರನೇಯ ದಿನ ಅದೇ ಮೊಹೊಬ್ಬತ್ ನ ಹೆಸರಲ್ಲಿ ನೀವು ಕೊಲ್ಲಲೂ ಹೇಸುವುದಿಲ್ಲ. ಒಂದು ಕ್ಷಣದಲ್ಲಿ ನೀವು ತುಂಬ ಆತ್ಮೀಯರು, ಪರಸ್ಪರರಿಗೆ ಅತೀ ಸುಂದರರು ಅದೇ ಇನ್ನೊಂದು ಗಳಿಗೆಯಲ್ಲಿ ಒಬ್ಬರ ಮುಖ ಕಂಡರೆ ಇನ್ನೊಬ್ಬರಿಗಾಗುವುದಿಲ್ಲ, ಒಬ್ಬರಿಗೊಬ್ಬರು ಅತ್ಯಂತ ಒರಟಾಗುತ್ತೀರಿ. ಇದು ಇಷ್ಕ್ ಅಲ್ಲ. ಇಷ್ಕ್ ತುಂಬ ಆಳವಾದದ್ದು. ಮೊಹೊಬ್ಬತ್ ಕೇವಲ ಮೇಲಿನ ಪದರದಲ್ಲಿ, ಇದು ಒಂದು ಮುಖವಾಡ ಮಾತ್ರ ; ಇದು ನಿಮ್ಮ ವ್ಯಕ್ತಿತ್ವದ ಭಾಗ.

ಇಷ್ಕ್, ಭಗವಂತನ ಬಗ್ಗೆ ಅತ್ಯಂತ ಉತ್ಕಟ ಪ್ರೇಮ, ಇದು ನಿಮ್ಮ ವ್ಯಕ್ತಿತ್ವದ ಭಾಗ ಅಲ್ಲ. ಇದು ನಿಮ್ಮ ತಿರುಳು, ನಿಮ್ಮ ಕೇಂದ್ರದಿಂದ ಹುಟ್ಟಿ ಬರುವಂಥದು ; ನಿಮ್ಮ ಅಸ್ತಿತ್ವದ ನೆಲೆಯಿಂದ ಹುಟ್ಟಿ ನಿಮ್ಮನ್ನ ಆವರಿಸಿಕೊಂಡಿರುವಂಥದು. ಇಷ್ಕ್, ನಿಮ್ಮ ಹತೋಟಿಯಲ್ಲಿಲ್ಲ ನೀವು ಇಷ್ಕ್ ನ ನಿಯಂತ್ರಣದಲ್ಲಿದ್ದೀರಿ. ಹೌದು ನೀವು ಮತ್ತರಾಗಿದ್ದೀರಿ ಮತ್ತು ಹುಚ್ಚರೂ.

ಸೂಫಿಗಳು ಇಷ್ಕ್ ನ್ನು ಹುಟ್ಟಿಸುವ, ಬೆಳೆಸುವ ದಾರಿಗಳನ್ನ, ವಿಧಾನಗಳನ್ನ ಗೊತ್ತು ಮಾಡಿಕೊಂಡಿದ್ದಾರೆ. ಇದೇ ಸೂಫಿಗಳ ಪೂರ್ಣ ರಸವಿದ್ಯೆ : ನಿಮ್ಮೊಳಗೆ ಇಷ್ಕ್ ನ್ನ ಹೇಗೆ ಹುಟ್ಟಿಸುವುದು, ಹೇಗೆ ನಿಮ್ಮಲ್ಲಿ ಆ ಉತ್ಕಟತೆಯನ್ನ ನಿರ್ಮಿಸಿ ಈ ಉತ್ಕಟತೆಯ ಅಲೆಗಳ ಸವಾರಿ ಮಾಡುತ್ತ ಆತ್ಯಂತಿಕ ವನ್ನು ಪಡೆಯುವುದು ಎನ್ನುವುದೇ ಈ ರಸವಿದ್ಯೆಯ ತಿಳುವಳಿಕೆ.

ಲೈಲಾ – ಮಜನೂ ರ ಕಥೆ ಒಂದು ಸೂಫಿ ಕಥೆ. ಬೇರೆ ಯಾವ ಪ್ರೇಮ ಕಥೆಗೂ ಈ ಕಥೆಯನ್ನ ಹೋಲಿಸಲಾಗುವುದಿಲ್ಲ. ಜಗತ್ತಿನಲ್ಲಿ ಹಲವಾರು ಪ್ರೇಮಕಥೆಗಳಿವೆ, ಪ್ರತೀ ದೇಶವೂ ತನ್ನ ಪ್ರೇಮ ಕಥೆಯನ್ನ ಕಟ್ಟಿಕೊಂಡಿದೆ ಆದರೆ ಯಾವ ಕಥೆಯೂ ಲೈಲಾ ಮಜನೂ ರ ಕಥೆಗೆ ಸಮವಲ್ಲ ಏಕೆಂದರೆ ಈ ಕಥೆಯಲ್ಲಿ ಸೂಫಿ ತಿಳುವಳಿಕೆಯಿದೆ. ಇದು ಸಾಧಾರಣ ಮೊಹೊಬ್ಬತ್ ನ ಕಥೆಯಲ್ಲ ಇದು ಅದಮ್ಯ ಇಷ್ಕ್ ನ ಪ್ರೇಮ ಗಾಥೆ.

ಒಂದು ದಿನ ಮಜನೂ ನಿರ್ಧರಿಸಿಬಿಟ್ಟ, ಅವನ ಕಣ್ಣುಗಳು ಒಮ್ಮೆ ಲೈಲಾ ಳನ್ನ ನೋಡಿದ ಮೇಲೆ, ಜಗತ್ತಿನಲ್ಲಿ ನೋಡಲು ಅರ್ಹವಾದ ಎಲ್ಲವನ್ನೂ ನೋಡಿದಂತೆಯೇ ಹಾಗಾಗಿ ಸುಮ್ಮನೇ ಕಣ್ಣು ತೆರೆದುಕೊಂಡಿರುವುದರಿಂದ ಏನು ಪ್ರಯೋಜನ ? ಲೈಲಾ ಎದುರಿಗಿದ್ದಾಗ ಮಾತ್ತ ಕಣ್ಣು ತೆರೆಯುತ್ತೇನೆ, ಉಳಿದ ಹೊತ್ತಿನಲ್ಲಿ ಕಣ್ಣು ಮುಚ್ಚಿಕೊಂಡು ಕುರುಡನಂತಿರುತ್ತೇನೆ, ಲೈಲಾಳನ್ನು ಬಿಟ್ಟರೆ ಈ ಜಗತ್ತಿನಲ್ಲಿ ನೋಡಲೇಬೇಕಾದದ್ದು ಬೇರೆ ಏನೂ ಇಲ್ಲ.

ಕಥೆಯ ಪ್ರಕಾರ, ಮಜನೂ ನ ಈ ನಿರ್ಧಾರ ಕೇಳಿ ಭಗವಂತನಿಗೆ ಅವನ ಮೇಲೆ ಅಪಾರ ಅಂತಃಕರಣ ಹುಟ್ಟಿತು. ಭಗವಂತ, ಮಜನೂ ನ ಎದುರು ಬಂದು ನಿಂತು ಬಿನ್ನವಿಸಿಕೊಂಡ, “ ಮಜನೂ , ನಿನ್ನ ಕಣ್ಣು ತೆರೆ. ನಾನು ಸಾಕ್ಷಾತ ಭಗವಂತ ನಿನ್ನೆದುರು ನಿಂತಿದ್ದೇನೆ. ನೀನು ಜಗತ್ತಿನಲ್ಲಿ ಎಲ್ಲ ನೋಡಿರಬಹುದು ಆದರೆ ನೀನು ನನ್ನ ಇನ್ನೂ ನೋಡಿಲ್ಲ, ಕಣ್ಣು ತೆರೆದು ನನ್ನ ಒಮ್ಮೆ ನೋಡು. “

“ ಹೋಗು ಇಲ್ಲಿಂದ, ನಾನು ಲೈಲಾ ಳನ್ನು ಬಿಟ್ಟರೆ ಇನ್ನಾರನ್ನೂ ನೋಡೆನು, ಇನ್ನೂವುದೂ ನೋಡಲಿಕ್ಕೆ ಅರ್ಹವೂ ಅಲ್ಲ. ನೀನು ಭಗವಂತನಿರಬಹುದು ಆದರೆ ಅದು ನನಗೆ ಸಂಬಂಧಿಸಿದ ವಿಷಯವಲ್ಲ, ಹೋಗು, ನನಗೆ ತೊಂದರೆ ಕೊಡಬೇಡ.” ಮಜನೂ ಕೋಪದಿಂದ ಭಗವಂತನನ್ನು ಕಣ್ಣು ತೆರೆದು ನೋಡಲು ಸುತರಾಂ ನಿರಾಕರಿಸಿದ.

ಮಜನೂ ನ ಮಾತು ಕೇಳಿ ಭಗವಂತನಿಗೆ ದಿಗ್ಭ್ರಮೆಯಾಯಿತು, “ ಮಜನೂ, ಏನು ನಿನ್ನ ಮಾತು ? ನಾನು ಸುಮ್ಮನೇ ಯಾರನ್ನೂ ಬೇಡಿಕೊಳ್ಳುವುದಿಲ್ಲ. ಸಾಧಕರು, ಸಂತರು ಅಪಾರ ಸಾಧನೆ ಮಾಡಿದರೂ ಅವರಿಗೆ ನನ್ನ ಸಾನಿಧ್ಯ ಸುಲಭವಾಗಿ ದಕ್ಕುವುದಿಲ್ಲ. ಆದರೆ ನಿನ್ನ ಇಷ್ಕ್ ಗೆ ಮನಸೋತು ನಿನ್ನ ಎದುರು ಬಂದು ನಿಂತಿದ್ದೇನೆ ಆದರೆ ನೀನು ನನ್ನ ನಿರಾಕರಿಸುತ್ತಿರುವೆಯಲ್ಲ. “

“ ಭಗವಂತ, ನಿನಗೆ ನಿಜವಾಗಿಯೂ ನನ್ನ ಕಣ್ಣುಗಳಿಂದ ನೋಡಿಸಿಕೊಳ್ಳುವ ಹುಕಿ ಇದ್ದರೆ ಲೈಲಾ ಳ ರೂಪದಲ್ಲಿ ಬಾ. ನಾನು ಇನ್ನಾರನ್ನೂ ಈ ಕಣ್ಣುಗಳಿಂದ ನೋಡೆನು. ನಾನು ಕಣ್ಣು ತೆರೆದರೂ ನನಗೆ ಲೈಲಾ ಳ ಹೊರತಾಗಿ ಬೇರೇನೂ ಕಾಣಿಸುವುದಿಲ್ಲ. ಗಿಡ, ಮರ, ಬೆಟ್ಟ, ನದಿ ನಕ್ಷತ್ರ ಎಲ್ಲದರಲ್ಲಿಯೂ ನನಗೆ ಲೈಲಾ ಕಾಣಿಸುತ್ತಾಳೆ. ಲೈಲಾ ನನ್ನ ಹೃದಯವನ್ನ ಆಕ್ರಮಿಸಿಕೊಂಡುಬಿಟ್ಚಿದ್ದಾಳೆ, ಬೇರೆ ಯಾವುದಕ್ಕೂ ನನ್ನ ಹೃದಯದಲ್ಲಿ ಜಾಗವಿಲ್ಲ. ನನ್ನ ಕ್ಷಮಿಸು, ಆದರೆ ದಯವಿಟ್ಟು ಹೋಗು ನನಗೆ ತೊಂದರೆ ಕೊಡಬೇಡ. “ ಮಜನೂ ಸ್ಪಷ್ಟವಾಗಿ ಭಗವಂತನನ್ನು ನೋಡಲು ನಿರಾಕರಿಸಿಬಿಟ್ಟ.

Osho, The Secret, Ch 2 (excerpt)

ಚಿತ್ರ ಕೃಪೆ: pintrest

2 Comments

  1. Loved it❤ What a divine concept of love! Nicely woven n a good rendition in Kannada.Hats off🙏🙏🙏

Leave a Reply