ಕೊಳಲು ನುಡಿಸುವ ಕಳ್ಳ; ಓಶೋ ಹೇಳಿದ ಕಥೆ

ನಿಮ್ಮೊಳಗೆ ಯಾವ ಭಾವನೆ ಇದ್ದರೂ ಮಧ್ಯ ಬಿಟ್ಟು ಕದಲ ಬೇಡಿ. ಆಗ ನಿಮಗೇ ಆಶ್ಚರ್ಯವಾಗುವಂತೆ ಎರಡು ವಿಪರೀತಗಳ ನಡುವಿನ ಒಂದು ಬಿಂದುವಿನಲ್ಲಿ ಎರಡೂ ಭಾವಗಳು ನಾಶವಾದಂತೆ ಒಂದಾಗುತ್ತವೆ ಆಗ ನೀವು ದ್ವೇಷಿಸುವುದೂ ಇಲ್ಲ ಪ್ರೀತಿಸುವುದೂ ಇಲ್ಲ… | ಓಶೋ ; ಕನ್ನಡಕ್ಕೆ: ಚಿದಂಬರ ನರೇಂದ್ರ

Difficult to choose, but try – and in everything…….. When you feel hate, try to move to middle. When you feel love, try to move to middle – OSHO

ನೀವು ತುಂಬ ಸುಲಭವಾಗಿ ಆಯ್ಕೆ ಮಾಡುತ್ತೀರಿ, ಖಂಡಿಸುತ್ತೀರಿ, ಹೊಗಳುತ್ತೀರಿ, ಒಪ್ಪಿಕೊಳ್ಳುತ್ತೀರಿ, ನಿರಾಕರಿಸುತ್ತೀರಿ. “ಇದು ಸರಿ, ಇದು ತಪ್ಪು” ಥಟ್ಟನೆ ನಿಮ್ಮ ನಿರ್ಧಾರ ಹೇಳುತ್ತೀರಿ, ಇದು ಸಾವಿರಾರು ವರ್ಷಗಳ ತರಬೇತಿ, ರೋಬೋಟ್ ಥರ ವ್ಯವಹಾರ.

ಒಂದು ಸಂಗತಿಯನ್ನು ಗಮನಿಸಿದಾಗ, ಯಾವ ಪೂರ್ಣ ತಿಳುವಳಿಕೆಯೂ ಇಲ್ಲದೆ ನೀವು ನಿಮ್ಮ ನ್ಯಾಯ ನಿರ್ಣಯ ಹೇಳುತ್ತೀರಿ. ನೀವು ಹೂವೊಂದನ್ನ ನೋಡಿದ ತಕ್ಷಣ ಉದ್ಗಾರ ಮಾಡುತ್ತೀರಿ, “ಎಷ್ಟು ಸುಂದರ” ಅಥವಾ “ ಎಷ್ಟು ಕಳಪೆ”. ನಿಮ್ಮ ತರಬೇತಿಗೆ ತಕ್ಕಂತೆ ನಿಮ್ಮ ಗ್ರಹಿಕೆ, ನಿಮ್ಮ ಗ್ರಹಿಕೆಗೆ ತಕ್ಕಂತೆ ನಿಮ್ಮ ನಿರ್ಣಯ. ಯಾವತ್ತೂ ನೀವು ಯಾವುದನ್ನೂ ಪಕ್ಷಪಾತವಿಲ್ಲದೇ ನೋಡುವುದು ಸಾಧ್ಯವಾಗುವುದೇ ಇಲ್ಲ.

ಒಂದು ದಿನ ಯಾರೋ ಒಬ್ಬ ಜುವಾಂಗ್ ತ್ಸು ನ ಹತ್ತಿರ ಬಂದು ಶಹರದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ವ್ಯಕ್ತಿಯ ಬಗ್ಗೆ ವಿಷಯ ತಿಳಿಸಿ ಅವನನ್ನು ಹಲವಾರು ಬಗೆಯಲ್ಲಿ ನಿಂದಿಸಿದ,
“ಅವನೊಬ್ಬ ಪಾಪಿ, ಬಹಳ ಕೆಟ್ಟ ಮನುಷ್ಯ, ದೊಡ್ಡ ಕಳ್ಳ”

ಎಲ್ಲವನ್ನು ಕೇಳಿಸಿಕೊಂಡ ಮೇಲೆ ಜುವಾಂಗ್ ತ್ಸು ಉತ್ತರಿಸಿದ, “ಅವ ಅದ್ಭುತವಾಗಿ ಕೊಳಲು ನುಡಿಸುತ್ತಾನೆ”

ಅಷ್ಟರಲ್ಲೇ ಇನ್ನೊಬ್ಬ ಮನುಷ್ಯ ಹೇಳಿದ, “ ಅವನು ಹಾಡು ಕೂಡ ಅದ್ಭುತವಾಗಿ ಹಾಡುತ್ತಾನೆ”

ಜುವಾಂಗ್ ತ್ಸು ತಕ್ಷಣ ಉತ್ತರಿಸಿದ, “ ಆದರೆ ಆ ಮನುಷ್ಯ ದರೋಡೆಕೋರ;

ಜುವಾಂಗ್ ತ್ಸು ನ ಪ್ರತಿಕ್ರಿಯೆ ಕೇಳಿ ಆ ಇಬ್ಬರೂ ಆಶ್ಚರ್ಯಚಕಿತರಾಗಿ ಕೇಳಿದರು “ ನೀನು ಏನನ್ನ ಹೇಳಲು ಬಯಸುತ್ತಿದ್ದೀಯ?”

“ನಾವು ಕೇವಲ ಸಮತೋಲನ ಸಾಧಿಸುವ ಪ್ರಯತ್ನ ಮಾಡುತ್ತಿದ್ದೇನೆ – ಅವನ ಬಗ್ಗೆ ತೀರ್ಮಾನ ಹೇಳಲು ನಾನು ಯಾರು ? ಅವನು ಕಳ್ಳನೂ ಹೌದು, ಅದ್ಭುತ ಕೊಳಲುವಾದಕನೂ ಹೌದು. ನನಗೆ ಅವನು ಸ್ವೀಕಾರಾರ್ಹನೂ ಅಲ್ಲ ನಿರಾಕರಿಸಲು ಯೋಗ್ಯನೂ ಅಲ್ಲ. ಅವನ ಬಗ್ಗೆ ನನಗೆ ಆಯ್ಕೆಗಳಿಲ್ಲ. ಅವನ ಬಗ್ಗೆ ವಿಪರೀತದ ತೀರ್ಮಾನಗಳನ್ನು ಹೇಳುವುದು ನನಗೆ ಅಸಾಧ್ಯ. ನನಗೆ ಅವನು ಒಳ್ಳೆಯವನೂ ಅಲ್ಲ, ಕೆಟ್ಚವನೂ ಅಲ್ಲ. ಅವನು, ಅವನ ಹಾಗಿದ್ದಾನೆ ಮತ್ತು ಅದು ಅವನ ವ್ಯವಹಾರ. ನೀವು ಕೇಳಿದಾಗ ನಾನು ಏನೋ ಹೇಳಬೇಕಿತ್ತು ಹಾಗಾಗಿ ನಾನು ಸಮತೋಲನ ಸಾಧಿಸುವ ಪ್ರಯತ್ನ ಮಾಡಿದೆ” ಜುವಾಂಗ್ ತ್ಸು ತನ್ನ ಪ್ರತಿಕ್ರಿಯೆಗೆ ಸಮಜಾಯಿಶಿ ನೀಡಿದ.

ಆಯ್ಕೆ ಮಾಡುವುದರಿಂದ ದೂರ ಉಳಿಯುವುದು ಕಷ್ಚ ನಿಜ, ಆದರೆ ಪ್ರಯತ್ನ ಮಾಡಿ ಪ್ರತಿಯೊಂದರಲ್ಲೂ – ನಿಮ್ಮೊಳಗೆ ದ್ವೇಷದ ಭಾವನೆ ಹುಟ್ಟಿದಾಗ ದೂರ ಸರಿದು ಮಧ್ಯಕ್ಕೆ ಬನ್ನಿ, ನಿಮ್ಮಲ್ಲಿ ಪ್ರೀತಿ ಹುಟ್ಟಿದಾಗ ಮತ್ತೆ ದೂರ ಸರಿದು ಮಧ್ಯಕ್ಕೆ ಬನ್ನಿ. ನಿಮ್ಮೊಳಗೆ ಯಾವ ಭಾವನೆ ಇದ್ದರೂ ಮಧ್ಯ ಬಿಟ್ಟು ಕದಲ ಬೇಡಿ. ಆಗ ನಿಮಗೇ ಆಶ್ಚರ್ಯವಾಗುವಂತೆ ಎರಡು ವಿಪರೀತಗಳ ನಡುವಿನ ಒಂದು ಬಿಂದುವಿನಲ್ಲಿ ಎರಡೂ ಭಾವಗಳು ನಾಶವಾದಂತೆ ಒಂದಾಗುತ್ತವೆ ಆಗ ನೀವು ದ್ವೇಷಿಸುವುದೂ ಇಲ್ಲ ಪ್ರೀತಿಸುವುದೂ ಇಲ್ಲ. ಇದನ್ನೇ ಬುದ್ಧ ‘ಉಪೇಕ್ಷಾ’ ಎಂದು ಗುರುತಿಸುತ್ತಾನೆ. ಇದೇ ಬೌದ್ಧರ ಅನಾಸಕ್ತಿ.

ಉಪೇಕ್ಷಾ ಎಂದರೆ ಮಧ್ಯಮ ಮಾರ್ಗ, ಅಲ್ಲಿ ನೀವು ಎರಡೂ ‘ಅತೀ’ ಗಳಿಂದ ಸಮಾನ ದೂರದಲ್ಲಿರುವವರು. ಆಗ ನೀವು “ನಾನು ಪ್ರೀತಿಸುತ್ತೇನೆ” ಅಥವಾ “ನಾನು ದ್ವೇಷಿಸುತ್ತೇನೆ” ಎಂದು ಹೇಳುವುದಿಲ್ಲ. ಸುಮ್ಮನೇ ನೀವು ಮಧ್ಯಮ ಬಿಂದುವಿನಲ್ಲಿ ಸ್ಥಿರವಾಗಿರುವಿರಿ. ಯಾವುದರ ಜೊತೆಗೂ ನೀವು ಗುರುತಿಸಿಕೊಳ್ಳುವುದಿಲ್ಲ. ಆಗ ಒಂದು “ ಮೀರುವಿಕೆ” ನಿಮಗೆ ಸಾಧ್ಯವಾಗುವುದು, ಈ ಮೀರುವಿಕೆ ಒಂದು ಅರಳುವಿಕೆ. ಈ ಪ್ರಬದ್ಧತೆಯನ್ನೇ ನಾವು ಸಾಧಿಸಬೇಕಾಗಿರುವುದು.

Osho, Hsin Hsin Ming : The Book of Nothing – Discourses on faith & mind of Sosan, Ch 2 (excerpt)

1 Comment

  1. ಉಪೇಕ್ಷಾ , ಮೀರುವಿಕೆ, ಅರಳುವಿಕೆ‌,ಅನಾಸಕ್ತಿ ಶ್ರೇಷ್ಠ ವಾದುದು. ಇದನ್ನು ನಮ್ಮ ನಡುಪಂಥೀಯ ಸಾಹಿತಿಗಳಿಗೆ ಅನ್ವಯಿಸಲಾಗದು. ಎಡ ಬಲ ಎರಡೂ ಕಡೆಯಿದ್ದು, ಲಾಭಪಂಥೀಯರಿಗೆ ಈ ಕತೆ ಹೇಳಿದರೆ, ಚೆಂದ ಬಳಸಕೋತವೆ…ಅಷ್ಟೇ

Leave a Reply