ನಿರಾಕರಿಸಲು, NO ಹೇಳಲು, ಖಂಡಿಸಲು ಯಾವ ಜ್ಞಾನವೂ ಬೇಕಿಲ್ಲ. ಜಿನೀಯಸ್ ಎಂದು ಕರೆಸಿಕೊಳ್ಳುವ ಇಚ್ಛೆ ನಿಮಗಿದ್ದರೆ ಖಂಡಿಸಿ, ನಿರಾಕರಿಸಿ. ಒಪ್ಪುವ, ಯಸ್ ಎನ್ನುವ ಗೋಜಿಗೆ ಹೋಗಬೇಡಿ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ
To say NO to anything is very easy ….. To be positive, to say yes, very difficult – Osho on Chekhov’s story
ಯಾವುದಕ್ಕಾದರೂ NO ಎನ್ನುವದು, ನಿರಾಕರಿಸುವುದು ಬಹಳ ಸುಲಭ. ಧನಾತ್ಮಕವಾಗಿ ಯೋಚಿಸುವುದು , YES ಎಂದು ಹೇಳುವುದು ಬಹಳ ಕಠಿಣ.
ಚೆಕಾವ್ ಒಂದು ಕಥೆ ಬರೆದಿದ್ದಾನೆ.
ಒಂದು ಹಳ್ಳಿಯಲ್ಲಿ ಒಬ್ಬ ಮನುಷ್ಯ ಮಹಾ ಮೂರ್ಖ, ಶತ ದಡ್ಡ, ಅವನ ಮೂರ್ಖತನದ ಬಗ್ಗೆ ಇಡೀ ಊರಿಗೇ ಗೊತ್ತಿತ್ತು. ದಿನಕಳೆದಂತೆ ಆ ಮನುಷ್ಯನಿಗೂ ತನ್ನ ಮೂರ್ಖತನದ ಬಗ್ಗೆ ನಿಕ್ಕಿಯಾಗತೊಡಗಿತು ಮತ್ತು ಈ ಕಾರಣವಾಗಿಯೇ ಅವನು ಒಂದು ಮಾತು ಆಡಲು ಕೂಡ ಹೆದರತೊಡಗಿದ. ಎಲ್ಲಿ ತಾನು ಬಾಯಿ ಬಿಟ್ಟರೆ ಜನ “ ಎಂಥ ಮೂರ್ಖ ಮಾತು ಮಾತಾಡುತ್ತಿದ್ದಾನೆ ಇವ” ಎಂದು ತನ್ನ ಹಂಗಿಸುತ್ತಾರೋ ಎಂದು ಗಾಬರಿಯಾದ.
ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನೇ ದಿನೇ ಮಾನಸಿಕವಾಗಿ ಕುಗ್ಗುತ್ತ ಹೋದ. ಅದೇ ಸಮಯಕ್ಕೆ ಆ ಊರಿಗೆ ಬಂದಿದ್ದ ಸಂತನನ್ನು ಭೇಟಿಯಾಗಿ ಅವನು ತನ್ನ ಸಮಸ್ಯೆಯನ್ನ ಸಂತನ ಎದುರು ನಿವೇದಿಸಿಕೊಂಡ, “ ನಾನು ಮೂರ್ಖ ಎಂದು ಊರಿನ ಜನ ಸಾಬೀತು ಮಾಡಿ ಬಿಟ್ಟಿದ್ದಾರೆ, ನಾನು ಬಾಯಿ ತೆರೆಯುವ ಮೊದಲೇ, ಜನ ನನ್ನ ಬಾಯಿ ಮುಚ್ಚಿಸುತ್ತಾರೆ. ಏನು ಮಾಡಲಿ ನಾನು ?”
ವಿಷಯದ ಗಂಭೀರತೆಯನ್ನ ಅರ್ಥಮಾಡಿಕೊಂಡ ಸಂತ ಉತ್ತರಿಸಿದ, “ ಒಂದು ಕೆಲಸ ಮಾಡು, ಯಾರು ಏನು ಹೇಳಿದರೂ ಅವರ ಮಾತು ಒಪ್ಪಬೇಡ. ನೀನು ನೋಡಿದ ಎಲ್ಲವನ್ನೂ ಖಂಡಿಸುತ್ತ ಹೋಗು”
“ ಆದರೆ ಅವರು ನನ್ನ ಮಾತನ್ನ ಗಣನೆಗೆ ತೆಗೆದುಕೊಳ್ಳುವುದಿಲ್ಲ” ಮೂರ್ಖ ಮನುಷ್ಯ ಸಂಶಯ ವ್ಯಕ್ತಪಡಿಸಿದ.
ಸಂತ ತನ್ನ ಮಾತು ಮುಂದುವರೆಸಿದ, “ ಆ ಬಗ್ಗೆ ನೀನು ಹೆಚ್ಚು ಚಿಂತೆ ಮಾಡಬೇಡ. ‘ ಇದು ಅದ್ಭುತ ಪೇಂಟಿಂಗ್’ ಎಂದು ಅವರು ಹೇಳಿದರೆ, ‘ ಇದಾ ಅದ್ಭುತ ಪೇಂಟಿಂಗ್? ಇಂಥ ಕಳಪೆ ಪೇಂಟಿಂಗ್ ನನ್ನ ಜನ್ಮದಲ್ಲಿಯೇ ನೋಡಿಲ್ಲ’ ಎಂದು ಉತ್ತರ ಕೊಡು, ‘ ಇದು ಓರಿಜಿನಲ್ ಕಾದಂಬರಿ’ ಎಂದು ಅವರು ಹೇಳಿದರೆ, ‘ ಇದರಲ್ಲಿರುವುದು ಬರೀ ರಿಪಿಟೇಶನ್, ಇಂಥ ನೂರಾರು ಕಥೆಗಳು ಬಂದು ಹೋಗಿವೆ’ ಎಂದು ಉತ್ತರ ಕೊಡು. ಯಾವುದನ್ನೂ ಸಾಬೀತು ಮಾಡುವ ಗೋಜಿಗೆ ಬೀಳ ಬೇಡ . ಎಲ್ಲವನ್ನೂ ಸುಮ್ಮನೇ ನಿರಾಕರಿಸುತ್ತ ಹೋಗು. ಇದನ್ನ ನಿನ್ನ ಬದುಕಿನ ಸಿದ್ಧಾಂತವಾಗಿಸಿಕೋ. ಯಾರಾದರೂ ‘ಎಂಥ ಸುಂದರ ರಾತ್ರಿ, ಎಷ್ಟು ಅದ್ಭತವಾಗಿದ್ದಾನೆ ಚಂದ್ರ’ ಎಂದರೆ ‘ ಇದನ್ನು ನೀವು ಸೌಂದರ್ಯ ಎನ್ನುತ್ತೀರಾ’ ಎಂದು ತಿರುಗಿ ಉತ್ತರ ಕೊಡು. ಅವರಿಗೆ ಏನನ್ನೂ ಸಾಬೀತು ಮಾಡುವುದು ಸಾಧ್ಯವಿಲ್ಲ. ನೆನಪಿಡು ಅವರಿಗೆ ನಿನ್ನ ತಪ್ಪು ಒಪ್ಪು ಸಾಬೀತು ಮಾಡಲು ಸಾಧ್ಯವೇ ಇಲ್ಲ !”
ಆ ಮನುಷ್ಯ ತನ್ನ ಹಳ್ಳಿಗೆ ವಾಪಸ್ ಹೋಗಿ, ಹಳ್ಳಿಯ ಜನ ಹೇಳಿದ ಎಲ್ಲವನ್ನೂ ನಿರಾಕರಿಸುತ್ತ, ಖಂಡಿಸುತ್ತ ಹೋದ. ಒಂದು ವಾರದಲ್ಲಿ ಹಳ್ಳಿಯಲ್ಲಿ ಗುಸುಗುಸು ಶುರುವಾಯಿತು. “ ನಾವು ಅವನನ್ನು ಮೂರ್ಖ ಎಂದು ತಿಳಿದುಕೊಂಡಿದ್ದು ತಪ್ಪು , ಅವ ಒಬ್ಬ ದೊಡ್ಡ ವಿಮರ್ಶಕ, ಮಹಾ ಮೇಧಾವಿ”.
ನಿರಾಕರಿಸಲು, NO ಹೇಳಲು, ಖಂಡಿಸಲು ಯಾವ ಜ್ಞಾನವೂ ಬೇಕಿಲ್ಲ. ಜಿನೀಯಸ್ ಎಂದು ಕರೆಸಿಕೊಳ್ಳುವ ಇಚ್ಛೆ ನಿಮಗಿದ್ದರೆ ಖಂಡಿಸಿ, ನಿರಾಕರಿಸಿ. ಒಪ್ಪುವ, ಯಸ್ ಎನ್ನುವ ಗೋಜಿಗೆ ಹೋಗಬೇಡಿ. ಯಾರು ಏನೇ ಹೇಳಿದರೂ ಸಾರಾಸಗಟಾಗಿ ನಿರಾಕರಿಸಿ. ನಿಮ್ಮನ್ನು ತಪ್ಪು ಎಂದು ಸಾಬೀತು ಮಾಡುವುದು ಬಹಳ ಕಷ್ಟ. ‘No’ is the simplest trick.
Osho, The Supreme Doctrine – Discourses on Kenopanishad, Ch 17, Q2 (excerpt)
ನಿತ್ಯ ಜೀವನದಲ್ಲಿ ಇಂತಹದ್ದನ್ನು ನಾವು ಬಹಳಷ್ಟು ಕಾಣುತ್ತೇವೆ. ಬೇರೆಯವರು ಹೇಳಿದ್ದನ್ನು ಸುಲಭವಾಗಿ ಒಪ್ಪುವವನನ್ನು ದಡ್ಡ ಅಂತಲೇ ಹೆಚ್ಚಿನ ಸಾರಿ ಸಮಾಜ ಗುರುತಿಸುತ್ತದೆ.