ಕವಿಯನ್ನ ತಿದ್ದುವುದು ವಿದ್ವಾಂಸರಿಗೆ, ಭಾಷಾ ಶಾಸ್ತ್ರಜ್ಞರಿಗೆ, ವ್ಯಾಕರಣ ನಿಪುಣರಿಗೆ ಸಾಧ್ಯವಾಗದ ಮಾತು, ಇನ್ನೊಬ್ಬ ಶ್ರೇಷ್ಠ ಕವಿಗೆ ಇದು ತಕ್ಷಣ ಗೊತ್ತಾಗಿ ಬಿಡುತ್ತದೆ! ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ
A poet can not be corrected by grammarian, by a linguist or by a scholar – Osho
ಬಹುತೇಕ ಮಹಾಕವಿಗಳಿಗೆ ತಮ್ಮ ಕಾವ್ಯವನ್ನು ವಿವರಿಸುವುದು, ಯಾಕೆ ತಾವು ಈ ಕವಿತೆಯನ್ನ ರಚಿಸಿದ್ದು ಎನ್ನುವುದನ್ನ ಜನರಿಗೆ ತಿಳಿಸುವುದು ಕಷ್ಟಕರ.
ರವೀಂದ್ರನಾಥ ಠಾಕೂರರ ಬದುಕಿನಲ್ಲಿ ಒಮ್ಮೆ ಹೀಗಾಯಿತು. ರವೀಂದ್ರರು ಬಂಗಾಲಿಯಲ್ಲಿ ರಚಿಸಿದ ತಮ್ಮ ಗೀತಾಂಜಲಿನ್ನ ತಾವೇ ಇಂಗ್ಲೀಷಿಗೆ ಅನುವಾದ ಮಾಡಿದ್ದರು.
ಇಂಗ್ಲೆಂಡಿನ ತಮ್ಮ ಕವಿ ಮಿತ್ರರಿಗೆ ಗೀತಾಂಜಲಿಯ ಇಂಗ್ಲೀಷ್ ಆವೃತ್ತಿಯನ್ನ ತೋರಿಸುವ ಮೊದಲು, ರವೀಂದ್ರರು ತಮ್ಮ ಇಂಗ್ಲೀಷ್ ಅನುವಾದ, ಮೂಲದ ಸೊಗಡನ್ನು ಹಿಡಿದಿಡಲು ಸಮರ್ಥವಾಗಿದೆಯೋ ಇಲ್ಲವೋ ಎನ್ನುವ ಸಂಶಯದಿಂದ ಹೆಸರಾಂತ ಕ್ರಿಶ್ಚಿಯನ್ ಮಿಷಿನರಿ, ಇಂಗ್ಲೀಷ್ ಭಾಷೆಯ ವಿದ್ವಾಂಸ C.F ಅಂಡ್ರ್ಯೂಸ್ ಅವರಿಗೆ ತಮ್ಮ ಅನುವಾದ ತೋರಿಸಿ ಭಾಷೆ, ವ್ಯಾಕರಣ ತಪ್ಪಾಗಿದ್ದರೆ ತಿದ್ದಲು ಕೇಳಿಕೊಂಡರು.
ವಿದ್ವಾಂಸ C.F ಅಂಡ್ರ್ಯೂಸ್ , ಗೀತಾಂಜಲಿಯ ಇಂಗ್ಲೀಷ್ ಅನುವಾದನ್ನ ಮೆಚ್ಚಿಕೊಂಡು ಇಂಗ್ಲೀಷ್ ಓದುಗರಿಗೆ ಅನುಕೂಲವಾಗಲೆಂದು ಹಾಗು ಭಾಷಾ ಶಾಸ್ತ್ರದ ಪ್ರಕಾರ ಅಷ್ಟು ಸರಿಯಾಗಿಲ್ಲವೆಂದು ಬೇರೆ ಬೇರೆ ಜಾಗಗಳಲ್ಲಿ ಕೇವಲ ನಾಲ್ಕು ಶಬ್ದಗಳನ್ನು ಬದಲಾಯಿಸಲು ಹೇಳಿದರು. C.F ಅಂಡ್ರ್ಯೂಸ್ ಕವಿಯಲ್ಲ, ಅವರು ಭಾಷಾ ತಜ್ಞರು ಹಾಗಾಗಿ ರವೀಂದ್ರರು ಅವರ ಸಲಹೆಯಂತೆ ನಾಲ್ಕು ಶಬ್ದಗಳನ್ನು ಬದಲಾಯಿಸಿ, ಗೀತಾಂಜಲಿಯ ಇಂಗ್ಲೀಷ್ ಅನುವಾದವನ್ನು ತಮ್ಮ ಕವಿಮಿತ್ರ W.B. ಯೇಟ್ಸ್ ಗೆ ಕಳುಹಿಸಿಕೊಟ್ಟರು.
ಗೀತಾಂಜಲಿಯ ಪದ್ಯಗಳನ್ನು ಅನುವಾದದ ಸಮಯದಲ್ಲೇ ಓದಿ ರೋಮಾಂಚಿತರಾಗಿದ್ದ ಯೇಟ್ಸ್ , ಈ ಪದ್ಯಗಳನ್ನು ಇಂಗ್ಲೆಂಡಿನ ಖ್ಯಾತ ಕವಿಗಳಿಗೆ ಕೇಳಿಸಬೇಕೆಂದು ಎಲ್ಲ ಪ್ರಮುಖ ಕವಿಗಳ ಒಂದು ಸಮಾವೇಶವನ್ನ ವ್ಯವಸ್ಥೆ ಮಾಡಿದರು. ಸಮಾವೇಶದಲ್ಲಿ ಕವಿತೆಗಳನ್ನು ಓದಿದ ಯೇಟ್ಸ್ ಸ್ವತಃ ಒಂದು ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದರು “ ಇಡೀ ಗೀತಾಂಜಲಿಯ ನಾಲ್ಕು ಜಾಗಗಳಲ್ಲಿ ಬೇರೆ ಯಾರೋ ಅನುವಾದದಲ್ಲಿ ಮೂಗು ತೋರಿಸಿದ್ದಾರೆ.” ಆಶ್ಚರ್ಯವೆಂದರೆ ಯೇಟ್ಸ್ ಗುರುತಿಸಿದ ಆ ನಾಲ್ಕು ಜಾಗಗಳು C.F ಅಂಡ್ರ್ಯೂಸ್ ಬದಲಾಯಿಸಲು ಹೇಳಿದ ಆ ನಾಲ್ಕು ಪದಗಳೇ ಆಗಿದ್ದವು.
ಯೇಟ್ಸ್ ಕವಿಯ ಮಾತು ಕೇಳಿ ರವೀಂದ್ರರಿಗೆ ಶಾಕ್ ಹೊಡೆದ ಹಾಗಾಯಿತು. “ ಈ ನಾಲ್ಕು ಪದಗಳನ್ನ C.F ಅಂಡ್ರ್ಯೂಸ್ ರ ಸಲಹೆಯ ಮೇರೆಗೆ ನಾನೇ ಬದಲಾಯಿಸಿದ್ದೆ” ರವೀಂದ್ರರು ಒಪ್ಪಿಕೊಂಡರು.
ಆ ನಾಲ್ಕು ಪದಗಳನ್ನ ತೆಗೆದು ಮೊದಲು ಬಳಸಿದ ನಾಲ್ಕು ಪದಗಳನ್ನ ಉಳಿಸಿಕೊಳ್ಳುವಂತೆ ಯೇಟ್ಸ್ ಸಲಹೆ ನೀಡಿದರು, “ ಹೌದು ಭಾಷಾ ಶಾಸ್ತ್ರದ ಪ್ರಕಾರ ಅಂಡ್ರ್ಯೂಸ್ ರ ಸಲಹೆ ಸೂಕ್ತ ಆದರೆ ಆ ನಾಲ್ಕು ಪದಗಳು ಕಾವ್ಯದ ಓಘಕ್ಕೆ, ಸಹಜತೆಗೆ ಧಕ್ಕೆ ತರುತ್ತಿವೆ.”
ರವೀಂದ್ರರು ತಮ್ಮ ಮೂಲದ ನಾಲ್ಕು ಪದಗಳನ್ನು ಉಳಿಸಿಕೊಂಡರು. “ ಭಾಷಾ ಶಾಸ್ತ್ರದ ಪ್ರಕಾರ ಇವು ಅಷ್ಟು ಸರಿ ಇಲ್ಲ ಆದರೆ ಕಾವ್ಯಾತ್ಮಕವಾಗಿ ಬಹಳ ಶ್ರೇಷ್ಠವಾದವು, ಯಾರ ಮಾತೂ ಕೇಳಬೇಡಿ, ನಿಮ್ಮ ಮೊದಲಿನ ನಾಲ್ಕು ಪದಗಳೇ ಇರಲಿ” ಯೇಟ್ಸ್ ಮತ್ತು ಇತರ ಕವಿಗಳು ರವೀಂದ್ರರಿಗೆ ಸಲಹೆ ನೀಡಿದರು.
ರವೀಂದ್ರರ ಈ ಅನುವಾದಕ್ಕೆ ಮುಂದೆ ನೋಬೆಲ್ ಪ್ರಶಸ್ತಿಯೂ ಬಂತು.
ಹೌದು, ಕವಿಯನ್ನ ತಿದ್ದುವುದು ವಿದ್ವಾಂಸರಿಗೆ, ಭಾಷಾ ಶಾಸ್ತ್ರಜ್ಞರಿಗೆ, ವ್ಯಾಕರಣ ನಿಪುಣರಿಗೆ ಸಾಧ್ಯವಾಗದ ಮಾತು, ಇನ್ನೊಬ್ಬ ಶ್ರೇಷ್ಠ ಕವಿಗೆ ಇದು ತಕ್ಷಣ ಗೊತ್ತಾಗಿ ಬಿಡುತ್ತದೆ.
Osho, The sword & the lotus – Talks in the Himalayas, Ch 15, Q1, (excerpt)