ಒಳ್ಳೆಯತನ, ಮೌಲ್ಯಗಳು ಮತ್ತು ದೇವರು

ಓಶೋ ಉಪನ್ಯಾಸದಿಂದ; ಕನ್ನಡಕ್ಕೆ : ಚಿದಂಬರ ನರೇಂದ್ರ

ಬ್ರಿಟಿಷ್ ಚಿಂತಕ ಎಡ್ಮಂಡ್ ಬರ್ಕ್ ಹುಟ್ಟಾ ನಾಸ್ತಿಕ ಆದರೂ ಪ್ರತೀ ರವಿವಾರ ತಪ್ಪದೇ ಚರ್ಚ್ ಗೆ ಭೇಟಿ ಕೊಡುತ್ತಿದ್ದ. ಚರ್ಚ್ ನಲ್ಲಿ ಉಪದೇಶ ಮಾಡುತ್ತಿದ್ದ ಪಾದ್ರಿಯ ಮಾತುಗಳು ಅವನಿಗೆ ಬಹಳ ಇಷ್ಟವಾಗುತ್ತಿದ್ದವು.

ಒಂದು ದಿನ ಯಾರೋ ಒಬ್ಬರು ಬರ್ಕ್ ನ ಪ್ರಶ್ನೆ ಮಾಡಿದರು, “ ನಿನಗೆ ದೇವರ ಅಸ್ತಿತ್ವದಲ್ಲಿ ನಂಬಿಕೆಯಿಲ್ಲ, ನೀನು ಧಾರ್ಮಿಕ ಮನುಷ್ಯನಲ್ಲ ಆದರೂ ನೀನು ನಿಯಮಿತವಾಗಿ ಪ್ರತೀ ರವಿವಾರ ಚರ್ಚ್ ಗೆ ಹೋಗುತ್ತೀಯಲ್ಲ, ಏನು ಕಾರಣ?”

“ ಆಗೊಮ್ಮೆ ಈಗೊಮ್ಮೆ, ನನಗೆ ಪೂರ್ಣವಾಗಿ ದೇವರನ್ನು ನಂಬುವ ಮನುಷ್ಯನನ್ನು ನೋಡುವ ಆಸೆಯಾಗುತ್ತದೆ. ಸಂಪೂರ್ಣವಾಗಿ ನಂಬಿಕೆಯಿರುವ ಮನುಷ್ಯನನ್ನು ನೋಡುವುದೇ ಒಂದು ಸುಂದರ ಅನುಭವ. ನನಗೆ ದೇವರಲ್ಲಿ ನಂಬಿಕೆ ಇಲ್ಲ ಆದರೆ ಈ ಪಾದ್ರಿ, ನಂಬಿಕೆಯ ಮನುಷ್ಯ. ಅವನ ನಂಬಿಕೆ ತಪ್ಪಿರಬಹುದು. ನನಗೆ ಖಂಡಿತ ಗೊತ್ತು ಅವನ ನಂಬಿಕೆಯಲ್ಲಿ ಯಾವ ಸತ್ಯವಿಲ್ಲವೆಂದು ಆದರೆ ತನ್ನ ನಂಬಿಕೆಯಲ್ಲಿ ಆತ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಂಡು ದೇವರನ್ನು ಸಾಧಿಸಿಕೊಂಡಿದ್ದಾನೆ, ಇದು ಅವನ ಭ್ರಮೆ ಇರಬಹುದು ಆದರೆ ಅದು ನನಗೆ ಅಷ್ಟು ಮುಖ್ಯವಲ್ಲ. ನಾನು ಸತತವಾಗಿ ಏನೋ ಸಾಧಿಸಬೇಕೆಂದು ತುಡಿಯುತ್ತಿದ್ದೇನೆ ಆದರೆ ಇವ ಸಾಧಿಸಿಕೊಂಡುಬಿಟ್ಟಿದ್ದಾನೆ. ಹಾಗಾಗಿ ಕೇವಲ ಅವನನ್ನು ನೋಡಲು, ಕೇಳಲು ನಾನು ಚರ್ಚ್ ಗೆ ಹೋಗುತ್ತೇನೆ” ಬರ್ಕ್ ತಾನು ಚರ್ಚ್ ಗೆ ಹೋಗುವ ಕಾರಣ ವಿವರಿಸಿದ.

ಒಂದು ದಿನ “ ಒಳ್ಳೆಯತನ, ಮೌಲ್ಯಗಳು ಮತ್ತು ದೇವರನ್ನು ನಂಬುವ ಜನರಿಗೆ ಸ್ವರ್ಗದಲ್ಲಿ ಜಾಗವಿದೆ” ಎಂದು ಉಪದೇಶ ಮಾಡುತ್ತಿದ್ದ ಪಾದ್ರಿಯನ್ನ , ಬರ್ಕ್ ಪ್ರಶ್ನೆ ಮಾಡಿದ, “ ಹಾಗಾದರೆ ಒಳ್ಳೆಯತನ ಮತ್ತು ಮೌಲ್ಯಗಳ ಮನುಷ್ಯ ಆದರೆ ದೇವರನ್ನು ನಂಬದವನಿಗೆ ಸ್ವರ್ಗದಲ್ಲಿ ಜಾಗವಿದೆಯೇ ?” ಅಂಥವರಿಗೂ ಸ್ವರ್ಗದಲ್ಲಿ ಜಾಗ ಇದೆ ಎಂದು ನೀನು ಹೇಳುವೆಯಾದರೆ ದೇವರ ಅವಶ್ಯಕತೆಯಿಲ್ಲ ಎಂದಾಯಿತು, ನಂಬಿಕೆಯ ಸಿದ್ಧಾಂತವೇ ಸುಳ್ಳು ಎಂದ ಹಾಗಾಯಿತು. ದೇವರನ್ನು ನಂಬದ ಆದರೆ ಒಳ್ಳೆಯತನ ಮತ್ತು ಮೌಲ್ಯಗಳ ಜನಕ್ಕೆ ಸ್ವರ್ಗದಲ್ಲಿ ಜಾಗ ಇಲ್ಲ ಎಂದು ನೀನು ಹೇಳುವೆಯಾದರೆ, ಒಳ್ಳೆಯತನ ಮತ್ತು ಮೌಲ್ಯಗಳಿಗೆ ಏನು ಮಹತ್ವ? ಕೇವಲ ದೇವರನ್ನು ನಂಬಿಕೊಂಡಿದ್ದರೆ ಸಾಕಲ್ಲವೆ?

ಬರ್ಕ್ ತರ್ಕದ ಮನುಷ್ಯ. ಬರ್ಕ್ ನ ಮಾತು ಕೇಳಿ ಪಾದ್ರಿಗೆ ದಿಗಿಲಾಯಿತು. ಅವನ ಬಳಿ ಬರ್ಕ್ ಗೆ ಹೇಳಲು ಸೂಕ್ತ ಉತ್ತರ ಇಲ್ಲದ ಕಾರಣ ಪಾದ್ರಿ ಕೆಲವು ದಿನಗಳ ಕಾಲಾವಕಾಶ ಕೇಳಿದ.

ಮುಂದಿನ ಏಳು ದಿನ ಪಾದ್ರಿ, ಬರ್ಕ್ ನ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾದ ಎಲ್ಲ ಪ್ರಯತ್ನ ಮಾಡಿದ. ಆದರೆ ಪ್ರಶ್ನೆ ಅವನಿಗೆ ಜಟಿಲವಾಗುತ್ತಲೇ ಹೋಯಿತು. ಏಳು ದಿನಗಳ ನಂತರ ಧರ್ಮೋಪನ್ಯಾಸಕ್ಕೆ ಒಂದು ಗಂಟೆ ಮುಂಚೆ ಚರ್ಚ್ ಗೆ ಬಂದ ಪಾದ್ರಿ, ಚರ್ಚ್ ನ ಟೆರೆಸ್ ಮೇಲೆ ಹೋಗಿ ಧ್ಯಾನ ಮಗ್ನನಾದ. ಏಳು ದಿನ ನಿದ್ದೆಯಿಲ್ಲದೇ ಬಳಲಿದ ಕಾರಣವಾಗಿ ಪಾದ್ರಿ ಯನ್ನು ನಿದ್ರೆ ತಕ್ಷಣ ಆವರಿಸಿಕೊಂಡು ಬಿಟ್ಟಿತು. ನಿದ್ದೆಯಲ್ಲಿ ಪಾದ್ರಿ ಒಂದು ಕನಸು ಕಂಡ.

ಕನಸಿನಲ್ಲಿ ಪಾದ್ರಿಗೆ ಒಂದು ಟ್ರೈನ್ ಕಾಣಿಸಿಕೊಂಡಿತು. ಆ ಟ್ರೈನ್ ಸ್ವರ್ಗಕ್ಕೆ ಹೊರಟಿತ್ತು. ಒಳ್ಳೆಯತನ ಮತ್ತು ಮೌಲ್ಯಗಳ ಜನ ಆದರೆ ದೇವರನ್ನು ನಂಬದವರು, ಉದಾಹರಣೆಗೆ ಸಾಕ್ರೆಟಿಸ್ ನಂಥ ಜನ ಎಲ್ಲಿಗೆ ಹೋಗುತ್ತಾರೆ ಎಂದು ಪರೀಕ್ಷೆ ಮಾಡಲು ಸ್ವರ್ಗಕ್ಕೆ ಹೋಗಿ ನೋಡಬೇಕೆಂದು ಪಾದ್ರಿ ಆ ಟ್ರೈನ್ ಹತ್ತಿ ಸ್ವರ್ಗಕ್ಕೆ ಬಂದಿಳಿದ.

ಸ್ವರ್ಗವನ್ನು ನೋಡಿ ಪಾದ್ರಿಗೆ ನಿರಾಶೆಯಾಯಿತು. ಎಲ್ಲಿ ನೋಡಿದಲ್ಲಿ ಹಾಳು ಭವನಗಳು, ಎಲ್ಲಿ ನೋಡಿದರೂ ಅವನಿಗೆ ಉತ್ಸಾಹ, ಸಂತೋಷ ಕಾಣಿಸಲಿಲ್ಲ. ಎಲ್ಲೆಲ್ಲೂ ನಿರವ ಮನೆ ಮಾಡಿತ್ತು. ಅಲ್ಲಿ ಒಂದು ಕ್ಷಣ ಇರಲು ಕೂಡ ಪಾದ್ರಿಗೆ ಸಾಧ್ಯವಾಗಲಿಲ್ಲ. ಪಾದ್ರಿ ನರಕಕ್ಕೆ ಹೋಗುವ ಟ್ರೈನ್ ಹತ್ತಿ ನರಕಕ್ಕೆ ಬಂದಿಳಿದ.

ನರಕವನ್ನು ನೋಡಿ ಪಾದ್ರಿಗೆ ತನ್ನ ಕಣ್ಣುಗಳನ್ನ ನಂಬಲಾಗಲಿಲ್ಲ. ಎಲ್ಲೆಲ್ಲೂ ಖುಶಿ ಮನೆ ಮಾಡಿತ್ತು. ಕಣ್ಣು ಹೊರಳಿಸಿದಲ್ಲೆಲ್ಲ ಹಸಿರು, ಹೂವುಗಳು, ಹಕ್ಕಿಗಳ ಚಿಲಿ ಪಿಲಿ ಸದ್ದು. ಪಾದ್ರಿ ಮನಸ್ಸಿನಲ್ಲಿಯೇ ಅಂದುಕೊಂಡ , “ ಏನೋ ತಪ್ಪಾಗಿದೆ. ಇದು ನನಗೆ ಸ್ವರ್ಗ ಅನಿಸುತ್ತಿದೆ.” ಪಾದ್ರಿ ಅಲ್ಲಿಯ ಜನರನ್ನು ವಿಚಾರಿಸಿದ, “ ಸಾಕ್ರೆಟಿಸ್ ಏನಾದರೂ ಇಲ್ಲಿದ್ದಾನಾ ?” ಹೌದು ಅವನು ಇರೋದು ಇಲ್ಲಿಯೇ, ಈ ಸಮಯದಲ್ಲಿ ಅವ ಹೊಲದಲ್ಲಿ ಕೆಲಸ ಮಾಡುತ್ತಿರುತ್ತಾನೆ” ಜನ ಉತ್ತರಿಸಿದರು.

ಪಾದ್ರಿ, ಹೊಲ ಇರುವ ಜಾಗಕ್ಕೆ ಹೋಗಿ ಸಾಕ್ರೆಟಿಸ್ ನನ್ನು ಭೇಟಿಯಾಗಿ ಪ್ರಶ್ನೆ ಮಾಡಿದ, “ ನೀನು ಮೌಲ್ಯಗಳನ್ನು ನಂಬಿದ ಒಳ್ಳೆಯ ಮನುಷ್ಯ ಆದರೆ ನಿನಗೆ ದೇವರಲ್ಲಿ ನಂಬಿಕೆಯಿರಲಿಲ್ಲ. ನಿನ್ನ ನರಕದಲ್ಲಿ ನೋಡಿ ನನಗೆ ಆಶ್ಚರ್ಯವಾಯಿತು.”

“ ನನಗೆ ಸ್ವರ್ಗ, ನರಕದಲ್ಲೆಲ್ಲ ನಂಬಿಕೆಯಿಲ್ಲ. ನಮ್ಮಂಥವರು ಇಲ್ಲಿ ಬಂದ ಮೇಲೆ ಈ ಜಾಗವನ್ನೇ ಸ್ವರ್ಗ ಮಾಡಿಕೊಂಡಿದ್ದೇವೆ.” ಸಾಕ್ರೆಟಿಸ್ ಪಾದ್ರಿಗೆ ಉತ್ತರಿಸಿದ.

ಸಾಕ್ರೆಟಿಸ್ ಮಾತು ಕೇಳಿ ಪಾದ್ರಿಗೆ ಶಾಕ್ ಆಗಿ ಅವನು ದಿಗಿಲಿನಿಂದ ಕಣ್ಣು ತೆರೆದ.

ಕೆಳಗೆ ಚರ್ಚನಲ್ಲಿ ಎಡ್ಮಂಡ್ ಬರ್ಕ್ ಪಾದ್ರಿಯ ಉತ್ತರಕ್ಕಾಗಿ ಕಾಯುತ್ತಿದ್ದ. ಕೆಳಗೆ ಇಳಿದು ಬಂದ ಪಾದ್ರಿ, ಬರ್ಕ್ ನ ಪ್ರಶ್ನೆಗೆ ಉತ್ತರಿಸಿದ,

“ ನನಗೆ ನಿಖರವಾಗಿ ಗೊತ್ತಿಲ್ಲ ಆದರೆ ಕನಸಿನಲ್ಲಿ ನಾನು ಕಂಡ ಸತ್ಯ ನಿನಗೆ ಹೇಳುತ್ತೇನೆ. ಒಳ್ಳೆಯತನ, ಮೌಲ್ಯಗಳನ್ನು ನಂಬುವ ಜನ, ದೇವರನ್ನ ನಂಬಲಿ, ನಂಬದಿರಲಿ ಯಾವ ಜಾಗಕ್ಕೆ ಹೋದರೂ ಆ ಜಾಗವನ್ನ ಸ್ವರ್ಗ ಮಾಡಿಕೊಳ್ಳುತ್ತಾರೆ ಮತ್ತು ಒಳ್ಳೆಯತನ, ಮೌಲ್ಯಗಳಲ್ಲಿ ವಿಶ್ವಾಸ ಇರದ ಜನ, ದೇವರನ್ನ ನಂಬಲಿ ನಂಬದಿರಲಿ, ಯಾವ ಜಾಗಕ್ಕೆ ಹೋದರೂ ಆ ಜಾಗವನ್ನ ನರಕ ಮಾಡುತ್ತಾರೆ. ಈ ತರಹದ ಉತ್ತರವೊಂದು ನನಗೆ ಕನಸಿನಲ್ಲಿ ಗೊಚರವಾಯಿತು.”

Osho, Tao, The three treasures / Tslks on fragments from Tao Te Ching by Lao Tzu, Vol.4, Ch1 (excerpt)

Leave a Reply