ಸತ್ಯ ಚಂದ್ರನಷ್ಟೇ ಪ್ರಖರ, ನೇರ

ಶಾಸ್ತ್ರಗಳ ಸಹಾಯದಿಂದ, ಪವಿತ್ರ ಗ್ರಂಥಗಳ ನೆರವಿನಿಂದ, ತತ್ವಜ್ಞಾನದ ಒರೆಗೆ ಹಚ್ಚಿ ಸತ್ಯವನ್ನು ಗ್ರಹಿಸಲು ಪ್ರಯತ್ನಿಸುವುದು ತಟ್ಟೆಯಲ್ಲಿ ಚಂದ್ರನನ್ನು ನೋಡಲು ಪ್ರಯತ್ನಿಸಿದಷ್ಟೇ ಹಾಸ್ಯಾಸ್ಪದ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

Seeking truth in scriptures, seeking truth in philosophies, is looking at the reflection- Osho

ಒಂದು ರಾತ್ರಿ ಇಸ್ಲಾಂ ನ ಪ್ರಖ್ಯಾತ ಕವಿ ಕರ್ಮಾನ್ ನ ಅವ್ಹಾದಿ, ತನ್ನ ಅಂಗಳದಲ್ಲಿ ಬಾಗಿ ಕುಳಿತುಕೊಂಡು ಒಂದು ಅಗಲವಾದ ಪಾತ್ರೆಯನ್ನು ದಿಟ್ಟಿಸುತ್ತಿದ್ದ.

ಆ ದಾರಿಯ ಮೂಲಕ ಹಾಯ್ದು ಹೋಗುತ್ತಿದ್ದ ಸೂಫಿ ಅನುಭಾವಿ ಶಮ್ಸ್ ತಬ್ರೀಝಿ, ಅಂಗಳದಲ್ಲಿ ಪಾತ್ರೆಯನ್ನು ದಿಟ್ಟಿಸುತ್ತ ಕುಳಿತಿದ್ದ ಕವಿಯನ್ನು ಮಾತನಾಡಿಸಿದ,

“ತಟ್ಟೆಯಲ್ಲಿ ಏನು ಹುಡುಕುತ್ತಿರುವಿರಿ ಕವಿಗಳೇ ?”

“ಈ ನೀರಿನ ಪಾತ್ರೆಯಲ್ಲಿ ಕಾಣಿಸುತ್ತಿರುವ ಚಂದ್ರನನ್ನು ಗ್ರಹಿಸಲು ಪ್ರಯತ್ನ ಮಾಡುತ್ತಿದ್ದೇನೆ ಶಮ್ಸ್” ಅವ್ಹಾದಿ ಉತ್ತರಿಸಿದ.

ಕವಿಯ ಮಾತು ಕೇಳುತ್ತಿದ್ದಂತೆಯೇ ಶಮ್ಸ್ ಗಹಗಹಿಸಿ ನಗಲು ಶುರು ಮಾಡಿದ. ಶಮ್ಸ್ ನ ನಗುವಿನ ಶಬ್ದ ಕೇಳಿ ಸುತ್ತ ಮುತ್ತಲಿನ ಜನ ಸೇರತೊಡಗಿದರು. ಶಮ್ಸ್ ನ ಈ ವಿಚಿತ್ರ ವರ್ತನೆಯಿಂದ ಅವ್ಹಾದಿ ಗೆ ಮುಜುಗರವಾಗತೊಡಗಿತು.

“ಇಷ್ಟು ಜೋರಾಗಿ ನಗುವಂಥದೇನಾಯಿತು ಶಮ್ಸ್ ಯಾಕೆ ನನ್ನ ಅವಮಾನ ಮಾಡುತ್ತಿದ್ದೀಯಾ ?” ಕವಿ ಅವ್ಹಾದಿ ಶಮ್ಸ್ ನನ್ನು ಪ್ರಶ್ನೆ ಮಾಡಿದ.

“ನಿನ್ನ ಕತ್ತಿನಲ್ಲಿ ತೊಂದರೆ ಇದ್ದರೆ ಅದು ಬೇರೆ ಮಾತು ಆದರೆ ಯಾಕೆ ನೀನು ನಿನ್ನ ತಲೆಯ ಮೇಲೆ ಪ್ರಕಾಶಿಸುತ್ತಿರುವ ಚಂದ್ರನನ್ನು ನೇರವಾಗಿ ನೋಡದೇ ಪಾತ್ರೆಯ ನೀರಿನಲ್ಲಿ ಚಂದ್ರನನ್ನು ಕಂಡು ಗ್ರಹಿಸಲು ಪ್ರಯತ್ನ ಮಾಡುತ್ತಿದ್ದೀ ?”

ಶಮ್ಸ್ ಮತ್ತೇ ಗಹಗಹಿಸಿ ನಗಲು ಶುರುಮಾಡಿದ.

ಶಾಸ್ತ್ರಗಳ ಸಹಾಯದಿಂದ, ಪವಿತ್ರ ಗ್ರಂಥಗಳ ನೆರವಿನಿಂದ, ತತ್ವಜ್ಞಾನದ ಒರೆಗೆ ಹಚ್ಚಿ ಸತ್ಯವನ್ನು ಗ್ರಹಿಸಲು ಪ್ರಯತ್ನಿಸುವುದು ತಟ್ಟೆಯಲ್ಲಿ ಚಂದ್ರನನ್ನು ನೋಡಲು ಪ್ರಯತ್ನಿಸಿದಷ್ಟೇ ಹಾಸ್ಯಾಸ್ಪದ.

ಬದುಕುವುದು ಹೇಗೆ ಎಂದು ನೀವು ಇನ್ನಾರನ್ನೋ ಕೇಳಿದರೆ, ಅಪಾಯವೊಂದನ್ನು ಆಹ್ವಾನಿಸುತ್ತಿದ್ದೀರಿ ನೀವು. ಏಕೆಂದರೆ ಆ ಮನುಷ್ಯ ತನ್ನ ಬದುಕಿನ ಬಗ್ಗೆ ಮಾತಾಡಬಲ್ಲನೇ ಹೊರತು ನಿಮಗೆ ಯಾವ ಸಹಾಯ ಮಾಡಬಲ್ಲ? ಮೇಲಾಗಿ ಯಾವ ಎರಡು ಬದುಕುಗಳೂ ಒಂದೇ ತೆರನಲ್ಲ ಮತ್ತು ಆ ಮನುಷ್ಯ ಸ್ವತಃ ಇನ್ನೊಬ್ಬರ ಸಲಹೆಯಂತೆ ಬದುಕುತ್ತಿರಬಹುದು. ಅವನು ನಿಮಗೆ ಕೊಡುವ ಸಲಹೆ ಪ್ರತಿಬಿಂಬದ ಪ್ರತಿಬಿಂಬದಂತೆ ಸವಕಲು.

ಶತಮಾನಗಳಿಂದ ಜನ ಪ್ರತಿಬಿಂಬದ ಪ್ರತಿಬಿಂಬವನ್ನು ಸತ್ಯವೆಂಬಂತೆ ಆರಾಧಿಸುತ್ತಿದ್ದರೆ ನಿಜದ ಚಂದ್ರ ಆಕಾಶದಲ್ಲಿ ಪ್ರಕಾಶಮಾನನಾಗಿ ಕಾಯುತ್ತಿದ್ದಾನೆ. ಅದು ನಿಮ್ಮ ಆಕಾಶ, ನಿಮ್ಮ ಚಂದ್ರ, ನೇರವಾಗಿ ನೋಡಿ. ಯಾಕೆ ಇನ್ನೊಬ್ಬರ ಕಣ್ಣುಗಳನ್ನು ಬಾಡಿಗೆ ಪಡೆಯುತ್ತೀರಿ? ನನ್ನ ತಿಳುವಳಿಕೆ ನನ್ನ ಮಟ್ಟಿಗೆ ನಿಜ ಇರಬಹುದು ಆದರೆ ಆ ತಿಳುವಳಿಕೆಯನ್ನ ನಾನು ನಿಮಗೆ ದಾಟಿಸಿದ ಕ್ಷಣದಲ್ಲಿ ಅದು ಕೇವಲ ಒಂದು ಸುದ್ದಿ.

ತಿಳುವಳಿಕೆ ಸ್ವಂತ ಅನುಭವದಿಂದ ಬಂದಾಗ ಮಾತ್ರ ಸತ್ಯ.

Osho, Talks on Hassidism, Ch 1

Leave a Reply