ಒಂದು ಒಳ್ಳೆಯ ಸಿದ್ಧಾಂತ, ಕೇವಲ ಅದು ಮಾನವೀಯವಾಗಿದೆ ಎನ್ನುವ ಕಾರಣಕ್ಕೆ ಸತ್ಯವಾಗಿರುವುದು ಸಾಧ್ಯವಿಲ್ಲ ಅಂಥ ಥಿಯರಿಗೆ ಮಿತಿಗಳು ಅಪಾರ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ
Reality is ……… far more than our logic ….. Reality is this great jungle of infinity – Osho
ಫ್ರೀಮನ್ ಡೈಸನ್ ಹೇಳಿದ್ದ ಒಂದು ಸತ್ಯ ಕಥೆ ಹೀಗಿದೆ…
ಕೆಲವು ತಿಂಗಳುಗಳ ಹಿಂದೆ, ವಾರ್ನರ್ ಹೈಸನ್ಬರ್ಗ್ ( Warner Heisenberg ) ಮತ್ತು ವೂಲ್ಫಗ್ಯಾಂಗ್ ಪೌಲಿ ( Wolfgang Pauli) ತಾವು, ಮೂಲಭೂತ ಕಣಗಳ ಬಗ್ಗೆ ಸಿದ್ಧಾಂತವೊಂದನ್ನು ರೂಪಿಸುವತ್ತ ಮಹತ್ವದ ಮತ್ತು ಅವಶ್ಯಕ ಹೆಜ್ಜೆಯನ್ನಿಟ್ಟಿರುವುದಾಗಿ ನಂಬಿದ್ದರು.
ಹೈಸನ್ಬರ್ಗ್ ಮತ್ತು ಪೌಲಿ ವಿಜ್ಞಾನ ಕ್ಷೇತ್ರದ ಎರಡು ಜಗತ್ಪ್ರಸಿದ್ಧ ಹೆಸರುಗಳು, ಎಲ್ಲ ಕಾಲದ ಎರಡು ಶ್ರೇಷ್ಠ ವೈಜ್ಞಾನಿಕ ಮನಸ್ಸುಗಳು. ಈ ಇಬ್ಬರು ಮಹನೀಯರಿಗೆ ತಾವಿಬ್ಬರೂ ಮೂಲಭೂತ ಕಣದ ( Fundamental Particle) ರಚನೆಯನ್ನು ವಿವರಿಸುವ ಸಿದ್ಧಾಂತವನ್ನು ರೂಪಿಸಿದ್ದೇವೆ ಎನ್ನುವ ಭಾವನೆ ತಲೆಯಲ್ಲಿ ಪಟ್ಟಾಗಿ ಕುಳಿತುಬಿಟ್ಟಿತು.
ಒಮ್ಮೆ ಪೌಲಿ ನ್ಯೂಯಾರ್ಕ್ ಶಹರದ ಪ್ರವಾಸ ಮಾಡುತ್ತಿರುವಾಗ ಮೂಲಭೂತ ಕಣದ ರಚನೆಯ ಬಗೆಗಿನ ತಮ್ಮ ತಿಳುವಳಿಕೆಯನ್ನು ಕುರಿತು ನ್ಯೂಯಾರ್ಕ್ ನ ವೈಜ್ಞಾನಿಕ ಸಮೂಹದ ಎದುರು ಉಪನ್ಯಾಸ ಮಾಡುವ ಪ್ರಸಂಗ ಎದುರಾಯಿತು. ಉಪನ್ಯಾಸ ಕೇಳಲು ಬಂದವರಲ್ಲಿ ಪ್ರಖ್ಯಾತ ವಿಜ್ಞಾನಿ ನೀಲ್ ಬ್ಹೋರ್ ( Neil Bohr) ಕೂಡ ಇದ್ದ. ಪೌಲಿ ಒಂದು ಗಂಟೆಯ ಕಾಲ ಸುದೀರ್ಘವಾಗಿ ತಮ್ಮ ಥಿಯರಿಯನ್ನು ಕುರಿತು ಮಾತನಾಡಿದ. ಆಮೇಲೆ ಪ್ರಶ್ನೋತ್ತರದ ಸಮಯದಲ್ಲಿ ನ್ಯೂಯಾರ್ಕ್ ನ ಯುವ ವಿಜ್ಞಾನಿಗಳು ಪೌಲಿ-ಹೈಸನ್ಬರ್ಗ್ ಥಿಯರಿಯನ್ನ ಕಟುವಾಗಿ ಟೀಕಿಸಿದರು.
ಕೊನೆಗೆ ವಿಜ್ಞಾನಿ ನೀಲ್ ಬ್ಹೋರ್ ನನ್ನು ಉಪನ್ಯಾಸದ ಎಲ್ಲ ಸಂಗತಿಗಳನ್ನು ಸಮ್ ಅಪ್ ಮಾಡಿ ಮಾತನಾಡಬೇಕೆಂದು ವೇದಿಕೆಯ ಮೇಲೆ ಆಹ್ವಾನಿಸಲಾಯಿತು. ನೀಲ್ ಎಲ್ಲ ವಿಷಯ ಕ್ರೂಢೀಕರಿಸಿ ಮಾತನಾಡಿದ,
“ ಮಿಸ್ಟರ್ ಪೌಲಿ, ನಮ್ಮಲ್ಲಿ ಒಂದು ವಿಷಯದ ಬಗ್ಗೆಯಂತೂ ಖಂಡಿತ ಒಪ್ಪಂದವಿದೆ. ನಮ್ಮ ಪ್ರಕಾರ ಖಂಡಿತ ನಿಮ್ಮ ಸಿದ್ಧಾಂತ ಕ್ರೇಝಿ. ಆದರೆ ನಮ್ಮ ನಡುವಿನ ಭಿನ್ನಾಭಿಪ್ರಾಯ ಏನೆಂದರೆ, ನಿಮ್ಮ ಸಿದ್ಧಾಂತ ಸತ್ಯಕ್ಕೆ ಹತ್ತಿರವಾಗುವಷ್ಟು ಕ್ರೇಝಿಯಾಗಿದೆಯಾ ಎನ್ನುವುದಷ್ಟೇ. ನನ್ನ ಪ್ರಕಾರ ನಿಮ್ಮ ಥಿಯರಿ ಸತ್ಯಕ್ಕೆ ಹತ್ತಿರವಾಗುವಷ್ಟು ಕ್ರೇಝಿ ಆಗಿಲ್ಲ”
ವಿಷಯಗಳಿರುವುದೇ ಹೀಗೆ. ಒಂದು ಒಳ್ಳೆಯ ಸಿದ್ಧಾಂತ, ಕೇವಲ ಅದು ಮಾನವೀಯವಾಗಿದೆ ಎನ್ನುವ ಕಾರಣಕ್ಕೆ ಸತ್ಯವಾಗಿರುವುದು ಸಾಧ್ಯವಿಲ್ಲ ಅಂಥ ಥಿಯರಿಗೆ ಮಿತಿಗಳು ಅಪಾರ. ಕೇವಲ ಕ್ರೇಝಿ ಸಿದ್ಧಾಂತಗಳಿಗೆ ಸತ್ಯಕ್ಕೆ ಹತ್ತಿರವಾಗುವ ಅವಕಾಶವುಂಟು. ಕ್ರೇಝಿ ಗೆ ಮಾನವ ಮಿತಿಗಳನ್ನು ಮೀರುವ ಸಾಧ್ಯತೆಗಳುಂಟು. ಕ್ರೇಝಿ ಎಂದರೆ ಅದನ್ನ ಮನುಷ್ಯ ತರ್ಕಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ, ಕ್ರೇಝಿ ಎಂದರೆ ನಿಮ್ಮ ತಿಳುವಳಿಕೆಯನ್ನು ಚಾಲೇಂಜ್ ಮಾಡುವಂಥದ್ದು.
ಹೌದು ನೀಲ್ ಹೇಳಿದ್ದು ನಿಜ, ಇನ್ನೊಮ್ಮೆ ಅವನ ಮಾತುಗಳನ್ನ ಕೇಳಿ,
“ ಮಿಸ್ಟರ್ ಪೌಲಿ, ನಮ್ಮಲ್ಲಿ ಒಂದು ವಿಷಯದ ಬಗ್ಗೆಯಂತೂ ಖಂಡಿತ ಒಪ್ಪಂದವಿದೆ. ನಮ್ಮ ಪ್ರಕಾರ ಖಂಡಿತ ನಿಮ್ಮ ಸಿದ್ಧಾಂತ ಕ್ರೇಝಿ. ಆದರೆ ನಮ್ಮ ನಡುವಿನ ಭಿನ್ನಾಭಿಪ್ರಾಯ ಏನೆಂದರೆ, ನಿಮ್ಮ ಸಿದ್ಧಾಂತ ಸತ್ಯಕ್ಕೆ ಹತ್ತಿರವಾಗುವಷ್ಟು ಕ್ರೇಝಿಯಾಗಿದೆಯಾ ಎನ್ನುವುದಷ್ಟೇ. ನನ್ನ ಪ್ರಕಾರ ನಿಮ್ಮ ಥಿಯರಿ ಸತ್ಯಕ್ಕೆ ಹತ್ತಿರವಾಗುವಷ್ಟು ಕ್ರೇಝಿ ಆಗಿಲ್ಲ.”
ನೀವು ನೂತನ ಭೌತ ವಿಜ್ಞಾನವನ್ನು ಗಮನಿಸುವಿರಾದರೆ, ನಿಮಗೆ ಆಶ್ಚರ್ಯವಾಗಬಹುದು. ಹಳೆಯ ಕಾಲದ ಖಡಾ ಖಂಡಿತ ವಿಜ್ಞಾನದ ಸಿದ್ಧಾಂತಗಳ ಯುಗ ಮುಗಿದುಹೋಯಿತು ; ಡಾರ್ವಿನ್, ನ್ಯೂಟನ್, ಎಡಿಸನ್ ಗಳ ಕಾಲ ಮುಗಿದು ಹೋಯಿತು. ಐನ್’ಸ್ಟೈನ್, ಹೈಸನ್ಬರ್ಗ್, ಪೌಲಿ, ನೀಲ್ ಬ್ಹೋರ್, ಪ್ಲ್ಯಾಂಕ್ ಮುಂತಾದವರಲ್ಲಿ ಸತ್ಯದ ಸ್ಫೋಟವಾಗಿದೆ. ಭೌತ ವಿಜ್ಞಾನ ಈಗ ಹೆಚ್ಚು ಹೆಚ್ಚು ಅನುಭಾವ (ಮೆಟಾ ಫಿಸಿಕ್ಸ್ ) ದ ಹಾದಿ ಹಿಡಿದಿದೆ, ಹೆಚ್ಚು ಹೆಚ್ಚು ಕಾವ್ಯಮಯವಾಗುತ್ತಿದೆ, ಗದ್ಯದ ಪ್ರಭಾವ ಕಡಿಮೆಯಾಗುತ್ತಿದೆ. ತರ್ಕದ ಅಪ್ರಸ್ತುತತೆಯ ಬಗ್ಗೆ ಈಗ ವಿಜ್ಞಾನಿಗಳು ಅರ್ಥಮಾಡಿಕೊಳ್ಳತೊಡಗಿದ್ದಾರೆ. ಸತ್ಯ ನಮ್ಮ ತರ್ಕದ ಹಿಡಿತದಿಂದ ಆಚೆ, reality is a great jungle of infinity.
ಆಕರ: Osho, The devine melody – Discourses on songs of Kabir, Ch 4, Q 4 (excerpt)
ಚಿತ್ರ: Participants at a conference in Copenhagen in 1937 ; Neil Bohr in the front row, far left, next to Warner Heisenberg and Wolfgang Pauli .