ಗೌರವ, ಘನತೆ ಎಲ್ಲ ಮಾದಕ ಪೇಯಗಳು : Hsin Hsin Ming | ಓಶೋ ವ್ಯಾಖ್ಯಾನ

ಅಹಂ ಇಲ್ಲದಾಗ, ನಿಮ್ಮನ್ನು ವಿಭಜಿಸುವ
ಬುದ್ಧಿ-ಮನಸ್ಸು ಕೂಡ ಗೈರು ಹಾಜರಾಗುತ್ತವೆ… | Hsin Hsin Ming, ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

All dreams must cease | ಅಧ್ಯಾಯ 7.5

ಪ್ರೇಮದ ಪರಿಸ್ಥಿತಿ ಏನೆಂಬುದನ್ನ
ಕೊನೆಯನ್ನ ನೋಡಿ ತಿಳಿದುಕೊಳ್ಳಬೇಕು
ಶುರುವಾತನ್ನಲ್ಲ.
ಶುರುವಾತಿನಲ್ಲಿ ಎಲ್ಲ ಪ್ರೇಮ ಸಂಬಂಧಗಳೂ
ಮಧುರ-ಸುಂದರ,
ಆದರೆ ಕೇವಲ ಶುರುವಾತಿನಲ್ಲಿ ಮಾತ್ರ.
ಶುರುವಿನಲ್ಲಿ ಇಬ್ಬರೂ ಡಿಪ್ಲೋಮ್ಯಾಟಿಕ್
ಇಬ್ಬರೂ ತಮ್ಮ ತಮ್ಮ ಚಹರೆಯ
ಸುಂದರ ಭಾಗಗಗಳನ್ನು ಮಾತ್ರ ಪ್ರದರ್ಶಿಸುತ್ತಿದ್ದಾರೆ,
ಒಮ್ಮೆ ವ್ಯಾಪಾರ ಕುದುರಿತೆಂದರೆ
ನಿಜದ ಚೆಹರೆಗಳು ತಮ್ಮ ಕುರೂಪದೊಂದಿಗೆ
ಎಲ್ಲ ತೀವ್ರ ಅಹಂನೊಂದಿಗೆ
ಢಾಳಾಗಿ ರಾರಾಜಿಸತೊಡಗುತ್ತವೆ.

ಯಾಕೆ ಒಬ್ಬ ವ್ಯಕ್ತಿ ನಿಮಗೆ ಇಷ್ಟವಾಗುತ್ತಾನೆ?
ವ್ಯಕ್ತಿಯನ್ನ ಬಿಡಿ
ಯಾಕೆ ಒಂದು ವಸ್ತು ನಿಮಗೆ ಇಷ್ಟವಾಗುತ್ತದೆ?
ವಸ್ತುಗಳೂ ಕೂಡ ನಿಮ್ಮ ಅಹಂ ನ ಪೋಷಿಸಲು
ಸಹಾಯ ಮಾಡುತ್ತವೆ.
ನಿಮ್ಮ ನೆರೆಮನೆಯವ ವಿಶಾಲವಾದ ಕಾರ್
ಖರೀದಿ ಮಾಡಿದರೆ
ನೀವು ಅದಕ್ಕಿಂತಲೂ ಹೆಚ್ಚಿನ ಬೆಲೆಯ
ವಿಶಾಲವಾದ ಕಾರ್ ಖರೀದಿಗೆ ಮುಂದಾಗುತ್ತೀರಿ.
ಪ್ರಶ್ನೆ ಕಾರ್ ದಲ್ಲ ಅಹಂ ನದು.
ಚಿಕ್ಕ ಕಾರ್, ಟ್ರಾಫಿಕ್ ಗೆ ಅನುಕೂಲವಾಗಿದ್ದರೂ
ಪ್ರವಾಸಕ್ಕೆ ಆರಾಮದಾಯಕವಾಗಿದ್ದರೂ
ನೀವು ಕೇವಲ ಅಹಂ ನ ಕಾರಣಕ್ಕೆ
ದೊಡ್ಡ ಕಾರ್ ಖರೀದಿ ಮಾಡುತ್ತೀರಿ.
ದೊಡ್ಡ ಕಾರಿನಲ್ಲಿ ನಿಮ್ಮ ಘನತೆ, ನಿಮ್ಮ ಪ್ರತಿಷ್ಠೆಯನ್ನ
ನೀವು ಕಾಣಬಯಸುತ್ತೀರಿ.

ಒಮ್ಮೆ ಹೀಗಾಯಿತು,

ಮುಲ್ಲಾ ನಸ್ರುದ್ದೀನ್ ನ ಬಾಸ್
ಅವನನ್ನು ತರಾಟೆಗೆ ತೆಗೆದುಕೊಂಡ.

“ ನಸ್ರುದ್ದೀನ್, ನಿನ್ನೆ ರಾತ್ರಿ
ಆಫೀಸಿನ ಪಾರ್ಟಿ ಮುಗಿದ ಮೇಲೆ
ನೀನು ಆಫೀಸಿನ ಓಪನ್ ಜೀಪ್ ನಲ್ಲಿ
ಊರಿನ ಮೇನ್ ರೋಡ್ ಲ್ಲಿ ಗದ್ದಲ ಹಾಕುತ್ತ
ಡ್ರೈವ್ ಮಾಡುತ್ತಿದ್ದೆಯಂತೆ.
ನಿನ್ನ ಈ ಅಸಭ್ಯ ವರ್ತನೆಯಿಂದ
ನಮ್ಮ ಕಂಪನಿಯ ಘನತೆಗೆ ಧಕ್ಕೆಯಾಗಿದೆ.

“ನಾನು ಆ ಬಗ್ಗೆ ಯೋಚಿಸಲೇ ಇಲ್ಲ ಬಾಸ್
ಕಂಪನಿಯ ಘನತೆಯ ಪ್ರತೀಕವಾಗಿರುವ ನೀವು
ನನ್ನ ಜೊತೆಯಲ್ಲಿದ್ದಿರಿ,
ಇಬ್ಬರೂ ಜಾಸ್ತಿ ಕುಡಿದಿದ್ದೆವು
ನೀವೇ ಓಪನ್ ಜೀಪಲ್ಲಿ ಕೇಕೆ ಹಾಕುವುದನ್ನ
ಜನ ತುಂಬ ಎಂಜಾಯ್ ಮಾಡುತ್ತಿದ್ದರು “

ನಸ್ರುದ್ದೀನ್, ಬಾಸ್ ನ ಸಮಾಧಾನ ಮಾಡಿದ.

ಹೌದು,
ನೀವು ಮತ್ತಿನಲ್ಲಿರುವಾಗ
ಘನತೆ ಗೌರವ ಎಲ್ಲ ಮರೆತು ಮೂರ್ಖರಂತೆ
ವರ್ತಿಸುತ್ತೀರಿ.
ಆದರೆ ಅರ್ಥಮಾಡಿಕೊಳ್ಳಲು ಇದು
ಒಂದು ಸುಂದರ ಉದಾಹರಣೆ.
ಗೌರವ, ಘನತೆ ಎಲ್ಲ ಮದ್ಯಪಾನದಂತೆ
ಮಾದಕ ಪೇಯಗಳು.
ಈ ಮಾದಕ ಪೇಯಗಳಿಂದ ನೀವು ಮತ್ತರಾಗಿರುವಾಗ
ದೊಡ್ಡ ಕಾರು ಕೊಳ್ಳುವ, ದೊಡ್ಡ ಮನೆ ಕಟ್ಟಿಸುವ
ಮೂರ್ಖ ಕೆಲಸಕ್ಕೆ ಕೈ ಹಾಕುತ್ತೀರಿ.
ಸೌಕರ್ಯ, ಆರಾಮ, ದುಡ್ಡು ಯಾವುದನ್ನೂ
ನೀವು ಗಣನೆಗೆ ತೆಗೆದುಕೊಳ್ಳುವುದಿಲ್ಲ.
ಯಾವುದು ನಿಮಗೆ ಘನತೆ ಗೌರವ
ತಂದುಕೊಡುತ್ತದೆಯೆಂದು ನೀವು ಭಾವಿಸುತ್ತಿದ್ದೀರೋ
ಅದೆಲ್ಲ ಮಾದಕ ಪೇಯ,
ಅದು ನಿಮ್ಮನ್ನು ಅಮಲಿನಲ್ಲಿ ಇಡುತ್ತದೆ,
ನೀವು ಬಲಶಾಲಿಗಳು ಎಂಬ ಭಾವನೆ
ನಿಮ್ಮನ್ನು ತುಂಬಿಕೊಳ್ಳುತ್ತದೆ.

ಯಾಕೆ ಈ ಅಧಿಕಾರದ ಬಗ್ಗೆ ಆಸೆ
ಯಾಕೆ ಅಧಿಕಾರದ ಹಿಂದೆ ನಮ್ಮ ಧಾವಂತ
ಅಧಿಕಾರದ ಹಿಂದೆ ಹೋದಾಗಲೆಲ್ಲ
ನಾವು ಸತ್ಯದಿಂದ ದೂರವಾಗುತ್ತಿದ್ದೇವೆ?

ನಿಮ್ಮ ಅಹಂ ಕಾರಣವಾಗಿ ನೀವು
ಇಷ್ಟಪಡುವ, ಇಷ್ಟಪಡದಿರುವ ಜಂಜಾಟದಲ್ಲಿ
ಸಿಕ್ಕಿಹಾಕಿಕೊಳ್ಳುತ್ತೀರಿ.
ಅಹಂ ಇಲ್ಲದಾದಾಗ ಎಲ್ಲಿ ಹೋಗುತ್ತವೆ
ಈ ಇಷ್ಟಪಡುವ ಮತ್ತು ಇಷ್ಟಪಡದಿರುವ ಭಾವಗಳು?
ಹೌದು ಅಹಂ ಇಲ್ಲದಾಗ ಇವಕ್ಕೆ
ಯಾವ ಜಾಗವೂ ಇಲ್ಲ.
ಅಹಂ ಇಲ್ಲದಾಗ, ನಿಮ್ಮನ್ನು ವಿಭಜಿಸುವ
ಬುದ್ಧಿ-ಮನಸ್ಸು ಕೂಡ ಗೈರು ಹಾಜರಾಗುತ್ತವೆ.

ಇನ್ನೊಬ್ಬರು ದೊಡ್ಡ ಕಾರು ಕೊಂಡರೆ ಏನು ಮಾಡುವುದು?
ಇನ್ನೊಬ್ಬನ ಹೆಂಡತಿ ಸುಂದರವಾಗಿದ್ದರೆ ಏನು ಮಾಡುವುದು?
ಇನ್ನೊಬ್ಬನ ಆರೋಗ್ಯ ಅಗ್ಭುಕವಾಗಿದ್ದರೆ ಏನು ಮಾಡುವುದು?
ಇನ್ನೊಬ್ಬ ಬುದ್ಧಿವಂತನಾಗಿದ್ದರೆ ಏನು ಮಾಡುವುದು?
ಇನ್ನೊಬ್ಬ ಶ್ರೀಮಂತನಾಗಿದ್ದರೆ ಏನು ಮಾಡುವುದು?
ನಿಮ್ಮ ಸುತ್ತ ಕೋಟ್ಯಾಂತರ ಜನರಿರುವಾಗ
ಎಷ್ಟು ಜನರ ಜೊತೆ ತಾನೆ ನೀವು ಸ್ಪರ್ಧೆ ಮಾಡುತ್ತೀರಿ?

ಒಮ್ಮೆ ಹೀಗಾಯಿತು,

ಗೋಡೆಯ ಮೇಲೆ ಡೊಂಕಾಗಿದ್ದ
ಫೋಟೋ ಫ್ರೇಮ್ ಒಂದನ್ನ ಸರಿ ಮಾಡಲು
ಅಲೆಕ್ಸಾಂಡರ್ ದಿ ಗ್ರೇಟ್ ತುಂಬ ಜಿಗಿದಾಡಿ
ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ.
5 ಅಡಿ 5 ಇಂಚು ಕುಳ್ಳಗಿದ್ದ ಅಲೆಕ್ಸಾಂಡರ್
ಫೋಟೋ ಫ್ರೇಮ್ ಸರಿ ಮಾಡಲು
ಪರದಾಡುತ್ತಿರುವುದನ್ನ ಗಮನಿಸಿದ
ಅವನ 7 ಅಡಿ ಎತ್ತರದ ಅಂಗರಕ್ಷಕ
ತಾನೇ ಮುಂದುವರೆದು ಫೋಟೋ ಫ್ರೇಮ್ ಸರಿಮಾಡಿದ.
“ ಒಡೆಯ ಇಂಥ ಕೆಲಸ ಎದುರಾದಾಗ
ನನ್ನ ನೆಪಿಸಿಕೊಳ್ಳಿ
ನಾನು ನಿಮಗಿಂತ ದೊಡ್ಡ ಮನುಷ್ಯ “
ಅಂಗರಕ್ಷಕ ತನ್ನ ಒಡೆಯನನ್ನು ಕೇಳಿಕೊಂಡ.
ಅಲೆಕ್ಸಾಂಡರ್ ದಿ ಗ್ರೇಟ್ ಗೆ ಅಂಗರಕ್ಷಕನ ಮಾತು ಕೇಳಿ
ಇರುಸುಮುರುಸಾಯ್ತು.

“ ದೊಡ್ಡ ಮನುಷ್ಯ ? ಖಂಡಿತ ಇಲ್ಲ
ಬೇಕಾದರೆ ಉದ್ದ ಮನುಷ್ಯ ಅನ್ನು;

ಅಲೆಕ್ಸಾಂಡರ್ ತನ್ನ ಅಂಗರಕ್ಷಕನಿಗೆ ತಿಳಿ ಹೇಳಿದ.

ಪ್ರತಿಬಾರಿ ಅಲೆಕ್ಸಾಂಡರ್ ನಿಗೆ ತನಗಿಂತ
ಎತ್ತರದ ಮನುಷ್ಯನನ್ನು ಕಂಡಾಗ ಅಸೂಯೆಯಾಗುತ್ತಿತ್ತು.

ನೀನು ಜಗತ್ತನ್ನೇ ಗೆದ್ದಿದ್ದರೂ ನಿನಗಿಂತ ಎತ್ತರದ
ಭಿಕ್ಷುಕನನ್ನು ಕಂಡಾಗ ನಿನಗೆ ಅಸೂಯೆ
ಜಗತ್ತನ್ನ ಗೆದ್ದದ್ದೂ ನಿರರ್ಥಕ ಅನಿಸುವ ಭಾವ.
ನೀನು ಜಗತ್ತಿನ ಚಕ್ರವರ್ತಿಯಾಗಿದ್ದರೂ
ನಿನಗಿಂತ ಅದ್ಭುತವಾಗಿ ಹಾಡುವ ಹಾಡುಗಾರನನ್ನು ಕಂಡಾಗ
ನಿನಗೆ ಅಸೂಯೆ.
ನೀನು ಏನನ್ನು ಗೆದ್ದರೂ ನಿನಗೆ ಸಮಾಧಾನವಿಲ್ಲ.
ಅಹಂ ಕಾರಣವಾಗಿ ಬುದ್ಧಿ-ಮನಸ್ಸು ಯಾವಾಗಲೂ
ಅತೃಪ್ತಿಯನ್ನ ಹೊರಹಾಕುತ್ತವೆ.

ತಾವೋ ಪಾಲಿಸುವ ಮನುಷ್ಯನಿಗೆ
ಯಾವುದೇ ಸ್ವಂತ ಆಯ್ಕೆಗಳಿಲ್ಲ.
ನದಿಯ ಹರಿವು ಕರೆದುಕೊಂಡು ಹೋದಲ್ಲಿ
ಅವನು ಹಿಂಬಾಲಿಸುತ್ತಾನೆ.
ಆತ ನದಿಯ ದಿಕ್ಕು ಬದಲಿಸುವ ಪ್ರಯತ್ನ ಮಾಡುವುದಿಲ್ಲ,
ನದಿಯೊಂದಿಗೆ ಯುದ್ಧಕ್ಕೆ ಇಳಿಯುವುದಿಲ್ಲ.
ಅವನಿಗೆ ಸ್ವಂತ ಆಯ್ಕೆಗಳಿಲ್ಲ
ಪ್ರೀತಿ ದ್ವೇಷಗಳಿಲ್ಲ
ಗುರಿಯಿಲ್ಲ, ಭವಿಷ್ಯವಿಲ್ಲ
ಅವನು ಪ್ರಕೃತಿಯೊಂದಿಗೆ ಹೆಜ್ಜೆಹಾಕುತ್ತಿದ್ದಾನೆ.

(ಮುಂದುವರೆಯುತ್ತದೆ ...........)


Leave a Reply