ರಮದಾನ್ ಕಾವ್ಯ ವ್ರತ #1 : Sufi Corner

ಶಮ್ಸ್‌ಗೊಂದು ಪ್ರೇಮಪತ್ರ | ಜಲಾಲುದ್ದಿನ್ ರೂಮಿ; ಕನ್ನಡಕ್ಕೆ: ಸುನೈಫ್

ಓ ಪ್ರಿಯನೇ,
ನಮ್ಮ ಕಿರುಭೇಟಿಯು
ಹುಟ್ಟಿಸಿದ ವಿರಹಕ್ಕೆ
ವರುಷಗಳ ಪ್ರಾಯವಿದೆ.

ಗಂಟುಕಟ್ಟಿ ನೀನು
ಒಂಟೆಯ ಬೆನ್ನೇರುವಾಗ
ನಿಂತುಬಿಟ್ಟೆ ಮೂಗನಂತೆ ನಾನು
ಸೂರ್ಯ ದೂರಾದರೆ
ಕವಿಯುವುದು ಇರುಳು
ಆ ಕತ್ತಲು ನುಂಗಿತು ನನ್ನನು

ನೀನು ಹೊರಟೇ ಬಿಟ್ಟೆ
ನಾನು ಕಲ್ಲಾಗಿ ನಿಂತೇ ಇದ್ದೆ
ಒಂದಾಗಿ ಕಳೆದ ಕಾಲವೆಲ್ಲ
ಸರಿಯುತಲಿತ್ತು ಕಾಲಡಿಯಿಂದ

ಆ ಕ್ಷಣ ಬೆಪ್ಪನಂತೆ ನಿಂತಿರದಿದ್ದರೆ,
ಅಷ್ಟೊಂದು ಗಲಿಬಿಲಿಯಾಗಿರದಿದ್ದರೆ
ಗಂಟಲು ಹರಿಯುವಂತೆ ಕೂಗುತ್ತಿದ್ದೆ,
ದಯೆ ತೋರೆಂದು ಅಂಗಲಾಚುತ್ತಿದ್ದೆ,
ನನ್ನದೆಂಬುದೆಲ್ಲವ ಮರೆತು
ನಿನಗಾಗಿ ನೂರು ಬಾರಿ
ಪ್ರಾಣ ಬಿಡುತ್ತಿದ್ದೆ,
ಕಗ್ಗತ್ತಲ ರಾತ್ರಿಯ ಕಾಡ್ಗಿಚ್ಚಿನಂತೆ
ಉರಿದು ಧಗಧಗಿಸುತ್ತಿದ್ದೆ,
ಅಂತ್ಯದಿನಕೂ ಉಳಿಯದಂತೆ
ಕಣ್ಣೀರು ಬತ್ತಿಸುತಿದ್ದೆ.

ಆದರೆ ಹಾಗಾಡಲಿಲ್ಲವಲ್ಲ!
ವಿರಹದ ನೋವಿಗೆ ಹೃದಯ
ತಯಾರಾಗಿರಲಿಲ್ಲವೇನೋ,
ಕಲ್ಲು ಕರಗುವ ವೇದನೆಗೆ
ಇದ್ದಕ್ಕಿದ್ದಂತೆ ಸಜ್ಜಾಗುವುದು
ಸಲೀಸಲ್ಲವಲ್ಲ.

ವಿರಹವು ಬೆನ್ನ ಬಾಣವನ್ನು
ಬಗ್ಗಿಸಿ ಬಿಲ್ಲಾಗಿಸುತ್ತದೆ.
ಕಣ್ಣು ಬತ್ತಿ ರಕ್ತ ಹರಿಯುವುದು,
ಎದೆಯಾಳ ಬೆತ್ತಲಾಗುವುದು.

ಓ ಗುರು ಶಂಸುದ್ದೀನ್,
ಬೆಳದಿಂಗಳಂತೆ ಬೆಳಗುವ
ಪರಿಶುದ್ಧ ಆತ್ಮವು ನಿನ್ನದು.
ಅದಕಾಗಿ ನೀನು
ನನ್ನ ಕನಸನು ನಂದಿಸದಿರು.

ಸಾಗರದಾಳದ ಮುತ್ತು ನಿನ್ನ ಮಾತು;
ಕಲ್ಲ ಕರಗಿಸಿ ಮಾಣಿಕ್ಯ ಅರಳಿಸುವುದು
ಮತ್ತು, ಕೇಳುಗರ ಮೈ ಮರೆಸುವುದು.

Leave a Reply