ನುಶಿರ್ವಾನನ ವಸೀಯತ್ತು : ರಮದಾನ್ ಕಾವ್ಯವ್ರತ#4 | Sufi Corner

ಸಾದಿ | ಕನ್ನಡಕ್ಕೆ: ಸುನೈಫ್
ಸಾವಿನ ದೂತ ಕದ ತಟ್ಟುವಾಗ
ನುಶಿರ್ವಾನ ಚಕ್ರವರ್ತಿ ತನ್ನ ಮಗ
ಹರ್ಮೂಸನ ಬಳಿ ಹೀಗೆಂದನಂತೆ:

"ಬಡವನೆದೆಯ ಕಾವಲಾಳಾಗು
ಸ್ವೇಚ್ಛಾಚಾರಕೆ ಬಲಿಯಾಗದಿರು.
ನಿನ್ನ ಕಾಲಡಿಯ ನೆಲ ಗಟ್ಟಿ ಇದ್ದರೆ
ಸಾಕೆಂದು ಸುಮ್ಮನೆ ಕೂರದಿರು,
ನಿನ್ನ ಜನರ ನೆಮ್ಮದಿ ಇರುವುದು
ನಿನ್ನ ತ್ಯಾಗ ಬಲಿದಾನದಲ್ಲಿ.

ತೋಳವೊಂದು ಕುರಿಮಂದೆಯೊಳಗೆ
ನುಸುಳಿಕೊಂಡು ಕೋಲಾಹಲವೆದ್ದಾಗ
ಸುಖ ನಿದ್ದೆಗೆ ಭಂಗ ತಾರದಿದ್ದರೆ
ಪ್ರಾಜ್ಞರು ಮನ್ನಿಸರು ನಿನ್ನನ್ನು
ಹೊಗೆ ಕಾಣದ ಒಲೆಗಳ ಹುಡುಕು,
ಉಳುವವನ ಕಿರೀಟವದು
ನಿನ್ನ ತಲೆಯಲ್ಲಿ ಇರುವುದು.

ರಾಜನೊಬ್ಬ ಮರವಿದ್ದಂತೆ,
ರೈತ ಅದರ ತಾಯಿಬೇರು;

ಮರವೇ,
ಓ ನನ್ನ ಮಗನೇ,
ನಿನ್ನ ಒಲವನ್ನು ಹೀರಿಕೋ ಬೇರಿನಿಂದ"

Leave a Reply